ಯಾರ ದಾರಿಯ ಕಾಯುತಿರುವೆನು
ಯಾರ ಬರವಿಗೆ ನವೆಯುತಿಹೆನೊ? ||ಪ||
ಹೃದಯ ವೀಣೆಯು ಯಾವ ಕೊರಗಿನ
ಚಳಿಯ ಬೆರಳಿಗೆ ನಡುಗುತಿದೆಯೊ? ||ಅ.ಪ.||
ಬೆಳಕು ಬೆಳೆಯಲು ಎದೆಯನರಳಿಸಿ
ಅರುಣ ಕಿರಣದ ಮುದ್ದನಾಶಿಸಿ
ಪಕಳಿ ಮೊಗವನ್ನೆತ್ತಿ ನಿಂತಿಹ
ಹೂವ ಕಾಣಲು, ಯಾರನೋ ಎದೆ
ಬಗೆದು ಬಳಲಿದೆ…. ||೧||
ಕನಸ ದೋಣಿಯನೇರಿ ನಡೆದಿರೆ
ಬಾನ ಬಯಲೇ ಹಿಗ್ಗಿನಾ ತೆರೆ
ಆದರೊಮ್ಮೆಲೆ ಮೌನ ಮುರಿವುದು
ಭಾವ ಜೀವನ ಸೀಳಿ ನೆಗೆವುದು
ಯಾವ ಕರೆಯಿದು…. ||೨||
ಬಾಳ ಸೊಗಸಿನ ಸವಿಯ ಸವಿಯುವೆ
ಮನವ ತಣಿಸುವೆ, ನಲಿಸಲೆಳಸುವೆ
ಎದೆಯ ದುಗುಡವ ಕಳೆಯಬಯಸುವೆ
ಯಾರ ಕೆಳೆತನ ಬಯಸಿ ಬರಿದೆದೆ
ಕೊರಗುತಿಹುದೊ…. ||೩||
*****


















