ಎನಿತುಕಾಲ ಹುದುಗಿ ಕೊಳೆವುದು
ಎನಿತುಕಾಲ ನೆಲದಲಡಗಿ,
ಕೊಳಚೆಯಾಗಿ ಕಳೆವುದು?
ಮಳೆಯ ಹನಿಯು ತಟ್ಟಿ ಕರೆದರೂ
ಬೆಳಕ ಕಿರಣ ಇಣಿಕಿ ನಡೆದರೂ
ಮನದ ಆಸೆ ಕೊನರದಿಹುದು
ಕೊಳೆಕೊಳೆವುದು ಕಸದಲಿ
ಹಿರಿಯ ಕನಸ ಕಂಡಿತಾದರೂ
ಚಿಗಿದು ಬೆಳೆಯ ಬಯಸಿತಾದರೂ
ಕಸದ ರಾಶಿ ರಾಶಿ ಬೆಳೆದಿದೆ
ಕೆಳಗೆ ಮನವು ಬಳಲಿದೆ
ನೆಲವ ಸೀಳಿ ಎದ್ದು ಬಾರೆನೆ
ಬಾನನೇರಿ ಚಿಗುರ ಹರಡೆನೆ
ದಿಶೆಯ ತುಂಬ ಹೂವ ತೂರಿ
ಬೆಳಕಿನಲ್ಲಿ ನಲಿಯೆನೆ?
ಆಸೆ ಬೆಳೆಸಿ ಕೊರೆಗುತಿರುವೆನು
ಜೀವರಸವ ಹೀರದಿರುವೆನು
ಎನಿತು ಕಾಲ ತಡೆಯಬೇಕು
ದಿವ್ಯ ಬಾಳ ಪಡೆಯಲು?
*****


















