ಅಹಾ ನನ್ನ ಚೆಂದದ! ಚಂದಿರೆಯೆ!
ಕುಂದದ ಕುಡಿಮಲರೆ!
ಅಹಾ! ನಾನು ಕೈಕೊಂಡ ಜಿದ್ದೇ!
ನನ್ನ ಮೈಗೊಂಡ ಮುದ್ದೆ!
ಅಧರದಲ್ಲಿ ಮುದ್ದಾಗಿ ಉದರದಲ್ಲಿ ಮುತ್ತಾಗಿ
ಇದಿರು ಮೂರ್‍ತಿಗೊಂಡು ನಿಂತ ಜೀವದ ಹೂವೇ!
ಬ್ರಹ್ಮಾಂಡವನೊಳಗೊಂಡ,
ನಾನು ಹೊತ್ತು ಹೆತ್ತ-ಪಿಂಡವೆ!
ನನ್ನ ಬಸಿರಿನ ತಾವರೆಯಲ್ಲಿ ಬಳೆದ ಬಾಲಬ್ರಹ್ಮಾ!
ಹೆಸರಿನ ಅಪ್ಪಿಗೆಗೆ ಒಪ್ಪದ ಆನಂದಕಂದಾ!
ಏನೆಂದು ಕರೆಯಲಿ, ಏನೆಂದು ಕರೆಯದಿರಲಿ ನಿನ್ನ?
ಅನಂತನ ಅನಂತನಾಮದಲ್ಲಿಯಾದರೂ ಇಂಬುಂಟೇ?
*****

















