ಬಹುದೂರದ ಹೊಲದಲ್ಲಿ ಖಾರದ ಮೆಣಸಿನ ಕಾಯಿಗಳು ಒಂಟಿತನದಲ್ಲಿ ಕೆಂಪಾಗಿ ಬಾಡುತ್ತಿದ್ದವು. ಸಮುದ್ರ ಉಪ್ಪು ಹೆಪ್ಪು ಗಟ್ಟಿ ಉಪ್ಪಿನ ಹರಳಾಗಿ ದಡದಲ್ಲಿ ಸಂಗಾತಿಗಾಗಿ ಕಾಯುತಿತ್ತು. ಗಾಳಿ ಬೀಸಿದಾಗಲೆಲ್ಲಾ ಹುಣಸೆ ಕಾಯಿಗಳು ನೆಲದ ಮೇಲೆ ಬಿದ್ದು ನರಳುತ್ತಿದ್ದವು.
ಹುಣಸೆಕಾಯಿಗೆ ಸಿಹಿ ಸ್ವಪ್ನ ಬಿದ್ದಾಗಲೆಲ್ಲಾ ಮೆಣಸಿನಕಾಯಿ ಉಪ್ಪಿನ ಬಗ್ಗೆ ಕನಸು ಕಾಣುತ್ತಿತ್ತು. “ನಮ್ಮ ಅನ್ಯೋನ್ಯತೆಗೆ ಆಗ ಎಲ್ಲೆ ಎಲ್ಲಿ?” ಎಂದುಕೊಳ್ಳುತ್ತಿತ್ತು.
ಒಮ್ಮೆ ದೊಡ್ಡ ಪ್ರವಾಹ ಬಂತು. ಅದರಲ್ಲಿ ಮೆಣಸಿನ ಕಾಯಿ, ಹುಣಸೆಕಾಯಿ ತೇಲಿಕೊಂಡು ಬಂದು ಪರಸ್ಪರ ಸಂಧಿಸಿ ಅಪ್ಪಿಕೊಂಡು ಉಪ್ಪಿನ ಹರಳನ್ನು ಹುಡುಕಿ ಸಮುದ್ರ ದಡಕ್ಕೆ ಬಂದು ಉಪ್ಪನ್ನು ನೋಡಿ ಪ್ರಸನ್ನ ಗೊಂಡವು.
ನಾವೆಲ್ಲಾ ಸೇರಿ ಪಕ್ಕದ ಹಳ್ಳಿಯ ಗರತಿಯ ಒರಳಲ್ಲಿ ಒಟ್ಟಿಗೆ ಬಾಳೋಣ” ಎಂದು ನಿರ್ಧರಿಸಿ ಹಳ್ಳಿಯ ಒರಳಲ್ಲಿ ಒಂದು ಗೂಡಿದರು.
ಹಳ್ಳಿಯ ಗರತಿ ಒನಕೆಯಲ್ಲಿ ಎಲ್ಲವನ್ನು ಸೇರಿಸಿ ಕುಟ್ಟಿ ತೊಕ್ಕು ಮಾಡಿ ಗಡಿಗೆಯಲ್ಲಿ ಇಟ್ಟಳು. ಗರತಿ ಗಂಡನಿಗೆ ತೊಕ್ಕು ಹಾಕಿದಾಗ ಉಪ್ಪು, ಖಾರ, ಹುಳಿ ಜಾಸ್ತಿ ಎಂದು ಜಗಳವಾಡತೊಡಗಿದ.
ಗಡಿಗೆಯಲ್ಲಿ ಒಟ್ಟು ಸೇರಿ ಹೊಂದಿಕೊಂಡು ಕೂತಿದ್ದ ಮೆಣಸಿನ ಕಾಯಿ, ಉಪ್ಪು, ಹುಣಸೆಹಣ್ಣು ಗಂಡ ಹೆಂಡತಿಯರ ಜಗಳ ನೋಡಿ ನಗುತ್ತಿದ್ದವು.
*****


















