Home / ಲೇಖನ / ಅರ್ಥಶಾಸ್ತ್ರ / ೨.೪ ಹಣ ಮುದ್ರಣ

೨.೪ ಹಣ ಮುದ್ರಣ

ಹಣದ ಮುದ್ರಣ ಅಥವಾ ನೋಟು ಬಿಡುಗಡೆಯು ವಿತ್ತೀಯ ಪ್ರಾಧಿಕಾರದ ಕಾರ್ಯವಾಗಿದ್ದು ಅದನ್ನು ಕೇಂದ್ರ ಬ್ಯಾಂಕು ನಿರ್‍ವಹಿಸುತ್ತದೆ. ಪ್ರತಿಯೊಂದು ದೇಶವು ಒಂದು ಕೇಂದ್ರ ಬ್ಯಾಂಕನ್ನು ಹೊಂದಿದ್ದು ಅದರ ಮುಖ್ಯಸ್ಥನನ್ನು ಗವರ್‍ನರ್ ಎಂದು ಕರೆಯಲಾಗುತ್ತದೆ. ದೇಶದ ವಿತ್ತ ಸಚಿವರ ನಿರ್‍ದೇಶನಕ್ಕನುಗುಣವಾಗಿ ಆತ ಕಾರ್‍ಯ ನಿರ್ವಹಿಸುತ್ತಾನೆ. ಹಣ ಮುದ್ರಣ ಮತ್ತು ನೋಟು ಬಿಡುಗಡೆ ಕಾರ್‍ಯ ವಿತ್ತ ಸಚಿವಾಲಯದ ನಿರ್ದೇಶನಕ್ಕನುಗುಣವಾಗಿ ಕೇಂದ್ರ ಬ್ಯಾಂಕಿನಿಂದ ನಡೆಯುತ್ತದೆ.

ಹಣ ಮುದ್ರಣದ ತತ್ತ್ವಗಳು

ಹಣವು ಮುದ್ರಣವು ನೋಟು ಬಿಡುಗಡೆಯು ಎರಡು ತತ್ತ್ವಗಳನ್ನು ಆಧರಿಸಿದೆ :

೧ ಕರೆನ್ಸಿ ತತ್ವ : ಕರೆನ್ಸಿ ತತ್ತ್ವದ (currency principle) ನೋಟುಗಳು ಲೋಹದ ಹಣಕ್ಕೆ ಪರ್‍ಯಾಯಗಳಾಗಿವೆ. ಹಾಗಾಗಿ ಬಿಡುಗಡೆಯಾಗುವ ನೋಟುಗಳ ಮೌಲ್ಯದಷ್ಟು ಚಿನ್ನವನ್ನು ವಿತ್ತೀಯ ಪ್ರಾಧಿಕಾರವು ಮೀಸಲಾಗಿ ಇರಿಸಬೇಕು. ಚಿನ್ನ ಮೀಸಲಿಡುವುದರಿಂದಾಗಿ ಹಣದ ಬಗ್ಗೆ ಜನರಲ್ಲಿ ಸುರಕ್ಷತೆ ಮತ್ತು ವಿಶ್ವಾಸದ ಭಾವನೆ ಮೂಡುವುದರಿಂದ ಈ ತತ್ತ್ವಕ್ಕೆ ಸುರಕ್ಷಾ ತತ್ವ (safety principle) ಎಂಬ ಹೆಸರು ಕೂಡಾ ಇದೆ.

ಕರೆನ್ಸಿ ಅಥವಾ ಸುರಕ್ಷಾ ತತ್ತ್ವವು ಅನೇಕ ಒಳಿತುಗಳನ್ನು ಹೊಂದಿದೆ :
(i) ಬಿಡುಗಡೆಯಾಗುವ ನೋಟುಗಳಿಗೆ ಚಿನ್ನದ ಮೀಸಲು (reserve) ಬೆಂಬಲವಿರುವುದರಿಂದ ಜನರಲ್ಲಿ ವಿಶ್ವಾಸ ಮತ್ತು ಭದ್ರತೆಯ ಭಾವ ಮೂಡುತ್ತದೆ.
(ii) ವಿತ್ತೀಯ ಪ್ರಾಧಿಕಾರವು ಸಿಕ್ಕಾಪಟ್ಟೆ ನೋಟುಗಳನ್ನು ಮುದ್ರಿಸಲು ಸಾಧ್ಯವಿಲ್ಲದ ಕಾರಣ, ಹಣದುಬ್ಬರವಾಗುವ ಸಾಧ್ಯತೆಗಳಿಲ್ಲ.
(iii) ಕರೆನ್ಸಿ ತತ್ತ್ವದ ಅನ್ವಯಿಕ ಕಾಲದಲ್ಲಿ ಲೋಹದ ನಾಣ್ಯಗಳ ಚಲಾವಣೆಯಿಲ್ಲದ ಕಾರಣ
ಚಿನ್ನದಂತಹ ಅಮೂಲ್ಯ ಲೋಹಗಳ ಉಳಿತಾಯವಾಗುತ್ತದೆ.
(iv) ಕರೆನ್ಸಿ ತತ್ತ್ವವು ಸ್ವಯಂ ನಿರ್ವಹಣೆಯ ಕಲ್ಪನೆಯನ್ನು ಮಾಡುತ್ತದೆ. ಹಣದ ಬಿಡುಗಡೆಗೆ ಚಿನ್ನವನ್ನು ಮೀಸಲು ಇಡಬೇಕಾಗಿರುವುದರಿಂದ ಹಣದ ಮೌಲ್ಯದಲ್ಲಿ ಸ್ಥಿರತೆ ಇರುತ್ತದೆ.

ಆದರೆ ಈ ತತ್ತ್ವವು ಸ್ಥಿತಿಸ್ಥಾಪಕತೆಯ ಗುಣವನ್ನು ಹೊಂದಿಲ್ಲ. ಏಕೆಂದರೆ ನೋಟು ಬಿಡುಗಡೆಗೆ ಚಿನ್ನದ ಮೀಸಲು ಇಡಬೇಕಾಗುತ್ತದೆ. ಯುದ್ಧ ಕಾಲದಲ್ಲಿ ಮತ್ತು ಅಭಿವೃದ್ಧಿ ಕಾರ್‍ಯಗಳಿಗೆ ಹಣದ ಅಗತ್ಯವಿರುವಾಗ ಈ ತತ್ವ ಅನುಷ್ಠಾನ ಯೋಗ್ಯವಲ್ಲ.

೨. ಬ್ಯಾಂಕಿಂಗ್ ತತ್ವ: ಈ ತತ್ವವು ಪ್ರಮಾಣಾನುಗುಣ ಮೀಸಲು (proportionate) ವ್ಯವಸ್ಥೆಯನ್ನು ಪ್ರತಿಪಾದಿಸುತ್ತದೆ. ಬ್ಯಾಂಕಿಂಗ್ ತತ್ವದ ಪ್ರಕಾರ ಕೇಂದ್ರ ಬ್ಯಾಂಕು ನಿರ್‍ಧಿಷ್ಟ ಪ್ರಮಾಣದ ಚಿನ್ನವನ್ನು ಮೀಸಲಾಗಿರಿಸಿ ನೋಟುಗಳನ್ನು ಮುದ್ರಿಸಬೇಕಾಗುತ್ತದೆ. ಎಷ್ಟು ಪ್ರಮಾಣದ ಚಿನ್ನವನ್ನು ಮೀಸಲಾಗಿರಿಸಬೇಕೆನ್ನುವುದು ಆಯಾ ಕೇಂದ್ರ ಬ್ಯಾಂಕುಗಳ ಇಚ್ಚೆಗೆ ಬಿಟ್ಟ ವಿಷಯವಾಗಿರುತ್ತದೆ.

ಬ್ಯಾಂಕಿಂಗ್ ತತ್ತ್ವದ ಒಳಿತುಗಳಿವು :
(i) ಇದು ಅಧಿಕ ಸ್ಥಿತಿಸ್ಥಾಪಕತೆಯನ್ನು ಹೊಂದಿದೆ. ಸ್ವಲ್ಪವೇ ಚಿನ್ನವನ್ನು ಮೀಸಲಾಗಿರಿಸಿ, ಕೇಂದ್ರ ಬ್ಯಾಂಕು ತನಗಿಷ್ಟ ಬಂದಷ್ಟು ನೋಟುಗಳನ್ನು ಮುದ್ರಿಸುವ ಅಧಿಕಾರ ಹೊಂದಿರುವುದು ಇದಕ್ಕೆ ಕಾರಣ.

(ii) ಬಿಡುಗಡೆಯಾಗುವ ನೋಟುಗಳಿಗೆ ಶೇಕಡಾ ನೂರರ ಖಾತರಿ ಇಲ್ಲದಿದ್ದರೂ ಪರಿವರ್‍ತನೀಯತೆ ಇರುತ್ತದೆ. ಹಾಗಾಗಿ ಜನರಿಗೆ ಬ್ಯಾಂಕಿಂಗ್ ತತ್ವಾಧರಿತ ನೋಟುಗಳಲ್ಲಿ ವಿಶ್ವಾಸ ಇರುತ್ತದೆ.
(iii) ಕಡಿಮೆ ಚಿನ್ನದ ಪ್ರಮಾಣವನ್ನು ಮೀಸಲಿರಿಸಿ ನೋಟು ಮುದ್ರಿಸಲು ಸಾಧ್ಯವಿರುವುದರಿಂದ ಈ ತತ್ತ್ವದ ಅನುಷ್ಠಾನವು ಚಿನ್ನದ ಮಿತವ್ಯಯಕ್ಕೆ ಕಾರಣವಾಗುತ್ತದೆ. (iv) ದೇಶ ತುರ್‍ತುಪರಿಸ್ಥಿತಿಗಳಲ್ಲಿ ಸಿಲುಕಿಕೊಂಡಾಗ ಬೇಕಾದಷ್ಟು ನೋಟುಗಳನ್ನು ಮುದ್ರಿಸಲು ಸಾಧ್ಯವಿದೆ.

ಆದರೆ ಬ್ಯಾಂಕಿಂಗ್ ತತ್ವ ಎರಡು ದೋಷಗಳಿಂದ ಬಳಲುತ್ತದೆ.
(i) ವಿತ್ತೀಯ ಪ್ರಾಧಿಕಾರವು ಅಧಿಕ ಹಣವನ್ನು ಬಿಡುಗಡೆ ಮಾಡಿದರೆ ಹಣದುಬ್ಬರ ಉಂಟಾಗುತ್ತದೆ.
(ii) ತುರ್ತುಸ್ಥಿತಿಗಳಲ್ಲಿ ಹಣದ ಪರಿವರ್ತನೀಯತೆ ಮಾಯವಾಗಿ ಬಿಡುವ ಸಾಧ್ಯತೆಗಳಿವೆ. ಆದರೂ ಬ್ಯಾಂಕಿಂಗ್ ತತ್ವವು ಕರೆನ್ಸಿ ತತ್ವಕ್ಕಿಂತ ಉತ್ತಮವಾದುದು. ಹಾಗಾಗಿ ವಿಶ್ವದ ಎಲ್ಲಾ ರಾಷ್ಟ್ರಗಳು ನೋಟು ಬಿಡುಗಡೆಗೆ ಬ್ಯಾಂಕಿಂಗು ತತ್ವವನ್ನೇ ಅನುಸರಿಸುತ್ತವೆ.

ಹಣ ಮುದ್ರಣದ ವಿಧಾನಗಳು
ಹಣ ಮುದ್ರಣದ ಅಥವಾ ನೋಟು ಬಿಡುಗಡೆಯ ನಾಲ್ಕು ಪ್ರಮುಖ ವಿಧಾನಗಳು ಇವು :
1.ಸ್ಥಿರ ನ್ಯಾಸ (ಮೀಸಲು) ವ್ಯವಸ್ಥೆ : ಒಂದು ನಿರ್‍ದಿಷ್ಟ ಪ್ರಮಾಣದವರೆಗೆ ಹಣ ಬಿಡುಗಡೆ ಮಾಡಲು ಲೋಹದ ಮೀಸಲು ಅಗತ್ಯವಿಲ್ಲದೆ ಇದ್ದರೆ ಅದನ್ನು ಸ್ಥಿರ ನ್ಯಾಸ ವ್ಯವಸ್ಥೆ, (fixed fiduciary system) ಎಂದು ಕರೆಯಲಾಗುತ್ತದೆ. ಆದರೆ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಹಣ ಬಿಡುಗಡೆ ಮಾಡಬೇಕಿದ್ದರೆ ಅದಕ್ಕೆ ನೂರು ಶೇಕಡಾ ಲೋಹ ಸುರಕ್ಷೆ (metalic security) ನೀಡಬೇಕಾಗುತ್ತದೆ. ಇದು ಇಂಗ್ಲೆಂಡಿನಲ್ಲಿ ೧೮೪೪ರಲ್ಲಿ ಮತ್ತು ಭಾರತದಲ್ಲಿ ೧೮೬೦ರಲ್ಲಿ ಅನುಷ್ಠಾನಕ್ಕೆ ಬಂತು, ಯಾವುದೇ ದೇಶಕ್ಕೆ ನ್ಯಾಸ ಅಥವಾ ಮೀಸಲು ಮಿತಿಯನ್ನು ಸದಾಕಾಲ ಸ್ಥಿರವಾಗಿಟ್ಟುಕೊಳ್ಳಲು ಸಾಧ್ಯವಾಗಲಿಲ್ಲ. ವ್ಯಾಪಾರ ಮತ್ತು ವಾಣಿಜ್ಯ ಅಭಿವೃದ್ಧಿಯಾದಾಗ ನ್ಯಾಸ ಅಥವಾ ಮೀಸಲು ಪ್ರಮಾಣ ಮಿತಿಯನ್ನು ಅನಿವಾರ್‍ಯವಾಗಿ ಹೆಚ್ಚಿಸಬೇಕಾಗುತ್ತಿತ್ತು.

ಸ್ಥಿರ ಮೀಸಲು ವ್ಯವಸ್ಥೆಯ ಒಳಿತುಗಳಿವು :
(i) ಅದು ತುಂಬಾ ಸುರಕ್ಷಿತ ವಿಧಾನವಾಗಿದೆ.
(ii) ಅದು ಜನರಲ್ಲಿ ವಿಶ್ವಾಸವನ್ನು ಮೂಡಿಸುತ್ತದೆ.
(iii) ಅದು ಹಣದ ದುರುಪಯೋಗವಾಗುವುದನ್ನು ತಡೆಯುತ್ತದೆ.
(iv) ಅದು ಹಣದುಬ್ಬರಕ್ಕೆ ಅವಕಾಶ ಕಲ್ಪಿಸುವುದಿಲ್ಲ.

ಸ್ಥಿರ ಮೀಸಲು ವ್ಯವಸ್ಥೆಯ ದೋಷಗಳಿವು :
(i) ಅದು ಸ್ಥಿತಿಸ್ಥಾಪಕತೆಯನ್ನು ಹೊಂದಿಲ್ಲ. ಹೆಚ್ಚು ಹಣ ಬೇಕಾದಾಗ ಶೇಕಡಾ ನೂರರಷ್ಟು ಚಿನ್ನ ಖಾತರಿ ನೀಡಬೇಕಿರುವುದು ಇದಕ್ಕೆ ಕಾರಣ.
(ii) ಅದು ಅನಾನುಕೂಲಕರ ವ್ಯವಸ್ಥೆಯಾಗಿದೆ. ಏಕೆಂದರೆ ಚಿನ್ನದ ಮೀಸಲು ಪ್ರಮಾಣ ಕಡಿಮೆಯಾಗಿಬಿಟ್ಟರೆ ಚಲಾವಣೆಯಲ್ಲಿರುವ ಹಣವನ್ನು ಕೇಂದ್ರ ಬ್ಯಾಂಕು ಹಿಂದಕ್ಕೆ ಪಡೆಯಬೇಕಾಗುತ್ತದೆ.
(iii) ಚಿನ್ನದ ಮೀಸಲು ಕೇಂದ್ರ ಬ್ಯಾಂಕಿನಲ್ಲಿ ಉಪಯೋಗರಹಿತವಾಗಿ ಬಿದ್ದುಕೊಳ್ಳುವುದರಿಂದ ಅದು ಮಿತವ್ಯಯಕಾರಿಯಲ್ಲದ ವ್ಯವಸ್ಥೆಯಾಗಿದೆ.

ಈ ದೋಷಗಳಿಂದಾಗಿ ಸ್ಥಿರ ಮೀಸಲು ವ್ಯವಸ್ಥೆಯನ್ನು ಪ್ರಥಮ ವಿಶ್ವ ಸಮರದ ಬಳಿಕ ಕೈ ಬಿಡಲಾಯಿತು.

೨. ಗರಿಷ್ಠ ಮೀಸಲು ವ್ಯವಸ್ಥೆ : ಒಂದು ಗರಿಷ್ಠ ಮಿತಿಯವರೆಗೆ ಹಣ ಬಿಡುಗಡೆ ಮಾಡಲು ಅವಕಾಶವಿರುವ ಪದ್ಧತಿಯನ್ನು ಗರಿಷ್ಠ ಮೀಸಲು ವ್ಯವಸ್ಥೆ (maximum reserve system) ಎಂದು ಕರೆಯಲಾಗುತ್ತದೆ. ಗರಿಷ್ಠ ಮಿತಿಯ ಬಳಿಕ ಹಣ ಬಿಡುಗಡೆ ಮಾಡಲು ಶೇಕಡಾ ನೂರರಷ್ಟು ಚಿನ್ನ ಖಾತರಿ ಇರಬೇಕಾಗುತ್ತದೆ. ಗರಿಷ್ಠ ಮಿತಿಯನ್ನು ಏರಿಸುವ ಅಥವಾ ಇಳಿಸುವ ಮತ್ತು ಚಿನ್ನದ ಮೀಸಲು ಪ್ರಮಾಣವನ್ನು ನಿಗಧಿಗೊಳಿಸುವ ಸ್ವಾತಂತ್ರ್ಯವನ್ನು ಕೇಂದ್ರ ಬ್ಯಾಂಕು ಹೊಂದಿರುತ್ತದೆ.

ಗರಿಷ್ಠ ಮೀಸಲು ವ್ಯವಸ್ಥೆಯ ಒಳಿತುಗಳಿವು :
(i) ಇದೊಂದು ಬದಲಾವಣೆಗೆ ಸಾಕಷ್ಟು ಅವಕಾಶವೊದಗಿಸುವ ಸುಲಭಶೀಲತೆಯ ವಿಧಾನವಾಗಿದೆ.
(ii) ಚಿನ್ನದ ಮೀಸಲು ಪ್ರಮಾಣವನ್ನು ನಿರ್ಧರಿಸುವ ಅಧಿಕಾರ ಕೇಂದ್ರ ಬ್ಯಾಂಕಿಗಿರುವುದರಿಂದ ಇದೊಂದು ಮಿತವ್ಯಯಕಾರಿ ವಿಧಾನವಾಗಿದೆ.
(iii) ಇದು ಬೆಲೆಯ ಮತ್ತು ವಿದೇಶೀ ವಿನಿಮಯ ದರದ ಸ್ಥಿರತೆ ಕಾಯ್ದುಕೊಳ್ಳುತ್ತದೆ.

ಆದರೆ ಕೇಂದ್ರ ಬ್ಯಾಂಕು ಗರಿಷ್ಠ ಮಿತಿಯನ್ನು ತುಂಬಾ ಏರಿಸಿದರೆ ಅಧಿಕ ಹಣ ಬಿಡುಗಡೆಯಾಗಿ ಹಣದುಬ್ಬರ ಉಂಟಾಗುವ ಅಪಾಯವಿದೆ. ಈ ವ್ಯವಸ್ಥೆ ಇಂಗ್ಲೆಂಡು, ಫ್ರಾನ್ಸು, ಫಿನ್ಲೆಂಡ್, ನಾರ್‍ವೆ, ರಶಿಯಾ ಮತ್ತು ಜಪಾನ್‌ಗಳಲ್ಲಿ ಸ್ವಲ್ಪ ಕಾಲ ಅಸ್ತಿತ್ವದಲ್ಲಿತ್ತು.

೩. ಪ್ರಮಾಣಾನುಗುಣ ವ್ಯವಸ್ಥೆ : ಒಂದು ನಿರ್‍ಧಿಷ್ಟ ಪ್ರಮಾಣದ ಹಣಕ್ಕೆ ಚಿನ್ನ ಅಥವಾ ಬೆಳ್ಳಿ ಮೀಸಲು ಮತ್ತು ಉಳಿದ ಹಣಕ್ಕೆ ಭದ್ರತಾ ಪತ್ರಗಳ ಮೀಸಲು ಸುರಕ್ಷೆ ಒದಗಿಸುವ ವಿಧಾನಕ್ಕೆ ಪ್ರಮಾಣಾನುಗುಣ ಮೀಸಲು ವ್ಯವಸ್ಥೆ (proportional reserve system) ಎಂದು ಹೆಸರು. ಮೀಸಲು ಪ್ರಮಾಣವು ಸಾಧಾರಣವಾಗಿ ಶೇಕಡಾ ೨೫ ರಿಂದ ಶೇ. ೪೦ರ ವರೆಗಿರುತ್ತದೆ.

ಪ್ರಮಾಣಾನುಗುಣ ವ್ಯವಸ್ಥೆಯ ಒಳಿತುಗಳಿವು :

(i) ಇದೊಂದು ಅತಿ ಸರಳ ಮತ್ತು ಸ್ಥಿತಿಸ್ಥಾಪಕ ಗುಣವಿರುವ ವ್ಯವಸ್ಥೆಯಾಗಿದೆ.
(ii) ಬೇಕೆಂದಾಗ ಚಿನ್ನದ ಮೀಸಲು ಪ್ರಮಾಣವನ್ನು ಬದಲಾಯಿಸಿ ಹಣದ ಪ್ರಮಾಣವನ್ನು ಬದಲಾಯಿಸಲು ಸಾಧ್ಯವಿದೆ.
(iii) ಈ ವಿಧಾನದಲ್ಲಿ ಹಣಕ್ಕೆ ಸುರಕ್ಷತೆ ಇರುತ್ತದೆ.

ಪ್ರಮಾಣಾನುಗುಣ ವ್ಯವಸ್ಥೆಯ ದೋಷಗಳಿವು :
(i) ಈ ವ್ಯವಸ್ಥೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಚಿನ್ನವನ್ನು ಮೀಸಲಾಗಿರಿಸಬೇಕಾಗುವುದರಿಂದ ಇದು ಮಿತವ್ಯಯಕಾರಿಯಲ್ಲ.
(ii) ಚಿನ್ನದ ಮೀಸಲು ಅಧಿಕವಾದಾಗ ಹೆಚ್ಚು ಹಣ ಚಲಾವಣೆಗೆ ಬರುವುದರಿಂದ ಹಣ ದುಬ್ಬರ ಉಂಟಾಗುತ್ತದೆ.
(iii) ಚಿನ್ನದ ಮೀಸಲು ಕಡಿಮೆಯಾದಾಗ ಹಣ ಚಲಾವಣೆ ಕಡಿಮೆಯಾಗಿ ಹಣದಿಳಿತ ಉಂಟಾಗುತ್ತದೆ.

ಹಿಲ್ಟನ್ ಯಂಗ್ ಆಯೋಗದ ಶಿಫಾರಸ್ಸಿನನ್ವಯ ಈ ವ್ಯವಸ್ಥೆಯನ್ನು ಭಾರತದಲ್ಲಿ ೧೯೨೭ ರಲ್ಲಿ ಜಾರಿಗೆ ತರಲಾಯಿತು. ೧೯೫೬ರಲ್ಲಿ ಇದನ್ನು ಕೈ ಬಿಟ್ಟು ಕನಿಷ್ಠ ಮೀಸಲು ವ್ಯವಸ್ಥೆಯನ್ನು ಅನುಷ್ಠಾನಗೊಳಿಸಲಾಯಿತು.

೪. ಕನಿಷ್ಠ ಮೀಸಲು ವ್ಯವಸ್ಥೆ : ಶಾಸನಾತ್ಮಕವಾಗಿ ಕನಿಷ್ಠ ಪ್ರಮಾಣದ ಚಿನ್ನ ಮತ್ತು ವಿದೇಶೀ ಭದ್ರತಾ ಪತ್ರಗಳನ್ನು ಮೀಸಲಾಗಿರಿಸಿ ಎಷ್ಟು ಬೇಕಾದರೂ ಹಣವನ್ನು ಮುದ್ರಿಸಲು ಕೇಂದ್ರ ಬ್ಯಾಂಕಿಗೆ ಅಧಿಕಾರ ಕಲ್ಪಿಸುವ ವ್ಯವಸ್ಥೆಗೆ ಕನಿಷ್ಠ ಮೀಸಲು ವ್ಯವಸ್ಥೆ (minimum reserve system) ಎಂದು ಹೆಸರು. ಭಾರತವು ೧೯೫೬ರಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತಂದಿತು. ಈ ವ್ಯವಸ್ಥೆಯ ಪ್ರಕಾರ ಭಾರತದ ರಿಸರ್‍ವ್ ಬ್ಯಾಂಕು ರೂ. ೨೦೦ ಕೋಟಿ ಕನಿಷ್ಠ ಮೀಸಲು ಇರಿಸಿ ತನಗಿಚ್ಚೆ ಬಂದಷ್ಟು ನೋಟುಗಳನ್ನು ಮುದ್ರಿಸುವ ಅಧಿಕಾರ ಹೊಂದಿದೆ. ಈ ಮೀಸಲು ಪ್ರಮಾಣ ದಲ್ಲಿ ರೂ. ೧೧೫ ಕೋಟಿ ಚಿನ್ನದ ರೂಪದಲ್ಲಿ ಮತ್ತು ರೂ. ೮೫ ಕೋಟಿ ವಿದೇಶೀ ಭದ್ರತಾ ಪತ್ರಗಳ ರೂಪದಲ್ಲಿ ಇರಬೇಕು ಎಂಬ ನಿಯಮವಿದೆ.

ಕನಿಷ್ಠ ಮೀಸಲು ವ್ಯವಸ್ಥೆಯ ಒಳಿತುಗಳಿವು :
(i) ಹಿಂದುಳಿದ ರಾಷ್ಟ್ರಗಳಲ್ಲಿ ಇದು ತುಂಬಾ ಅನುಕೂಲಕರ ವ್ಯವಸ್ಥೆಯಾಗಿದ್ದು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಾಕಷ್ಟು ಹಣವನ್ನು ಒದಗಿಸುತ್ತದೆ.
(ii) ಇದೊಂದು ಅತ್ಯಂತ ಸ್ಥಿತಿಸ್ಥಾಪಕತೆಯುಳ್ಳ ವ್ಯವಸ್ಥೆಯಾಗಿದ್ದು ಬೇಕೆಂದಾಗ ಹಣದ ಪ್ರಮಾಣವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.
(iii) ಮೀಸಲು ಪ್ರಮಾಣವು ಕನಿಷ್ಠವಾಗಿರುವುದರಿಂದ ಇದೊಂದು ಮಿತವ್ಯಯಕಾರಿಯಾದ ವ್ಯವಸ್ಥೆಯಾಗಿದೆ.

ಕನಿಷ್ಠ ಮೀಸಲು ವ್ಯವಸ್ಥೆಯ ಕೆಡುಕುಗಳಿವು :

(i) ಭ್ರಷ್ಟ ವಿತ್ತೀಯ ಪ್ರಾಧಿಕಾರ ಅತ್ಯಧಿಕ ಹಣ ಮುದ್ರಿಸಿ ಹಣದುಬ್ಬರ ಉಂಟು ಮಾಡಲು ಈ ವ್ಯವಸ್ಥೆ ಅವಕಾಶ ಕಲ್ಪಿಸಿಕೊಡುತ್ತದೆ.
(ii) ಈ ವ್ಯವಸ್ಥೆಯಲ್ಲಿ ಅತ್ಯಧಿಕ ಹಣ ಮುದ್ರಣಕ್ಕೆ ಅವಕಾಶವಿರುವುದರಿಂದ ಜನರು ಹಣದಲ್ಲಿ ವಿಶ್ವಾಸ ಕಳೆದುಕೊಳ್ಳುತ್ತಾರೆ.
(iii) ಕನಿಷ್ಠ ಮೀಸಲು ವ್ಯವಸ್ಥೆಯಲ್ಲಿ ಹಣದ ಕೊಳ್ಳುವ ಶಕ್ತಿ (purchasing power) ಕುಸಿಯುವ ಸಂಭವವಿದೆ.

ನೋಟು ಬಿಡುಗಡೆಯ ವಿವಿಧ ವಿಧಾನಗಳಿಗೆ ಅವುಗಳದೇ ಆದ ಒಳಿತು ಮತ್ತು ಕಡುಕು ಗಳಿವೆ. ಸ್ಥಿತಿಸ್ಥಾಪಕತೆ, ಮಿತವ್ಯಯ, ಸ್ಥಿರತೆ, ಅನುಕೂಲತೆ ಮತ್ತು ಸುರಕ್ಷತೆ – ಇವು ಆದರ್‍ಶಮಯ ನೋಟು ಬಿಡುಗಡೆ ವಿಧಾನವೊಂದರ ಲಕ್ಷಣಗಳೆಂದು ಪರಿಗಣಿಸಲ್ಪಟ್ಟಿವೆ. ಈ ಮಾನದಂಡಗಳಿಂದ ನೋಡಿದಾಗ ಉಳಿದೆಲ್ಲಾ ವಿಧಾನಗಳಿಗಿಂತ ಕನಿಷ್ಠ ಮೀಸಲು ವಿಧಾನ ಶ್ರೇಷ್ಠವಾದುದೆಂದು ಕಂಡು ಬರುತ್ತದೆ.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಕೀಲಿಕರಣ: ಕಿಶೋರ್ ಚಂದ್ರ