ಒಂದಂಕಿ ಗೊಳಗೊಳಕಿ ಯಾಡಂಕಿ ಮುಳಗಳಿಕಿ
ಮೂರಂಕಿ ಮುತ್ತೈದಿ ಕೇಳು ಗುರುವೆ
ನಾಕ೦ಕಿ ನೆಲ್ಲಕ್ಕಿ ಐದ೦ಕಿ ಪಲ್ಲಕ್ಕಿ
ಪಂಚಲಿಂಗದ ಪಾದಾ ತೋರು ಗುರುವೆ
ಸರದಾರ ದೊರಿಸಾಮಿ ಮುಕ್ಕಣ್ಣ ಗುರುಸಾಮಿ
ಎಲ್ಲಿ ಬಿಟ್ಟೆಲ್ಲೀಗೆ ಪಾರೋತಿನಾ
ಚಿನ್ನಿ ಸಕ್ಕರಿ ಚಲುವಿ ಚದುರ೦ಗ ಚಿಕಿಸೀರಿ
ಎಲ್ಲಿ ಬಿಟ್ಟೆಲ್ಲೀಗೆ ಚಾಮುಂಡಿನಾ
ಕೆನಿಮಸರು ಕಡದಾಕಿ ಕೆನಿಬೆಲ್ಲಾ ಕೊಟ್ಟಾಕಿ
ನಮ್ಮವ್ವ ನೆಲ್ಕೊಟ್ಟಿ ಗೌರವ್ವನಾ
ಅಳ್ಳಿಟ್ಟು೦ಡೀ ತುಪ್ಪ ಹೆಪ್ಪಿಟ್ಟ ಶೀಗವ್ವ
ಭೂಮಿ ತೂಕದ ತಾಯಿ ನಮ್ಮವ್ವನಾ
ತಾಯಿ ಇದ್ದರ ತಂಪು ತಾಯಿ ಭೂಮಿಯ ಕಂಪು
ನಾದ ಬಿಂದೂ ಕಲೆಯ ತಾಯಿ ಕ೦ಡೆ
ಆದಿ ಶೂನ್ಯದ ಲಿಂಗ ಮುರಿದು ಮೂರಾದಾಗ
ಲಿಂಗತತ್ವದ ಬಾಲ ಲೀಲೆ ಕ೦ಡೆ
*****


















