ಇರುಳು ಕಳೆಯಿತು, ಬೆಳಕು ಬೆಳೆಯಿತು,
ನೋಡು ಮೂಡಣ ದಿಕ್ಕಿಗೆ
ಮನದ ಕ್ಲೇಶದ ಲೇಶ ಕಳೆಯಿತು
ಮತ್ತೆ ಹೊಮ್ಮಿತು ನಂಬಿಗೆ!
ಚೆಲುವ ಬೆಳಕಿನ ಹವಳದುಟಿಯದೊ
ಬಾನಿನಂಚನು ತಟ್ಟಿತು
ಕೆಂಪು ಕೊನರಿತು ಚಿಮ್ಮಿ ಹರಿಯಿತು
ದಿಗ್ ದಿಗಂತವ ತುಂಬಿತು.
ನೂರು ನಾಲಗೆಯಿಂದ ಗಾಳಿಯು
ಪ್ರೀತಿ ಗೀತವ ಹಾಡಿತು.
ಹೂವಿನೆದೆಯನು ತೆರೆಯುತೊಲವಿನ
ಸವಿಯನದರಲಿ ಬಿತ್ತಿತು.
ಮಂಜು ಹರಿಯಿತು ಕಣ್ಣು ತಣಿಸುವ
ಬೆಳಕು ಎಲ್ಲೆಡೆ ತುಂಬಿತು
ಅಳಲು ಬತ್ತಿತು ಹರುಷವುಕ್ಕಿತು
ಮಮತೆ ಮನದಲಿ ಹೂತಿತು!
*****


















