Home / ಲೇಖನ / ಚಲನಚಿತ್ರ / ಧರ್ಮದೇವತೆ- ಕಾದಂಬರಿ ಚಿತ್ರಗಳಿಗೆ ಮುನ್ನುಡಿ

ಧರ್ಮದೇವತೆ- ಕಾದಂಬರಿ ಚಿತ್ರಗಳಿಗೆ ಮುನ್ನುಡಿ

ಅಧ್ಯಾಯ ಹದಿನಾಲ್ಕು
‘ಉತ್ತಮ ಕತೆ’ಯ ಕೊರತೆ ಎಲ್ಲ ಭಾಷೆಯ ಚಿತ್ರರಂಗವನ್ನು ಕಾಡಿದಂತೆ ಕನ್ನಡ ಚಿತ್ರರಂಗವನ್ನೂ ಕಾಡಿದೆ. ಚಿತ್ರಮಾಧ್ಯಮದಲ್ಲಿ ಕತೆಗಿಂತ ನಿರೂಪಣೆಗೆ ಹೆಚ್ಚು ಪ್ರಾಧಾನ್ಯವಿರಬೇಕು ಎಂದು ಹಲವರು ವಾದಿಸುತ್ತಾರೆ. ನಿರೂಪಣೆಯಲ್ಲಿ ನಾವಿನ್ಯ ಹಾಗೂ ಸೂಕ್ಷ್ಮತೆಯನ್ನು ತರಲು ಕತೆಯ ತಾಯಿಬೇರು ಇರುವುದು ಅನಿವಾರ್ಯ. ಹಾಗಾಗಿ ಕತೆಗಳಿಗಾಗಿ ವಿವಿಧ ಮೂಲಗಳನ್ನು ಅರಸುವುದು ಸಾಮಾನ್ಯ. (‘ಪರಶುರಾಮ’ ಚಿತ್ರದ ನಂತರ ರಾಜ್‌ರವರು ಕತೆಯ ಅಭಾವದಿಂದಾಗಿ ತಾನು ನಟಿಸುತ್ತಿಲ್ಲ ಎಂದು ಹೇಳಿದ ಮಾತು ಇಲ್ಲಿ ನೆನಪಾಗುತ್ತದೆ). ಕತೆಯ ಕೊರತೆಗಳಿಂದ ರೀಮೇಕುಗಳಿಗೆ ಮೊರೆಹೋಗುವ, ವಿದೇಶಿ ಚಿತ್ರಗಳ ಮೂಲವನ್ನು ಉಲ್ಲೇಖಿಸದೆಯೇ ಕದಿಯುವ, ಹಲವಾರು ಯಶಸ್ವಿ ಸಿನಿಮಾಗಳ ಎಳೆಗಳನ್ನು ನೇಯ್ದು ಹೊಸಚಿತ್ರದ ಹಗ್ಗವನ್ನು ಹೊಸೆಯುವ, ಹಲವಾರು ಕತೆಗಳನ್ನು ಮಿಶ್ರಣ ಮಾಡಿ ಭಟ್ಟಿ ಇಳಿಸುವ ಪ್ರಯತ್ನಗಳು ಚಿತ್ರೋದ್ಯಮದ ಆರಂಭದಿಂದಲೂ ನಡೆದೇ ಇವೆ. (ಈಗಂತೂ ಈ ’ಮಿಕ್ಸಿಂಗ್’ ಸಂಸ್ಕೃತಿ ಮತ್ತು ರೀಮೇಕ್ ವಿಧಾನಗಳು ಸೃಜನಶೀಲತೆಯ ಕೊರಳನ್ನೇ ಹಿಸುಕಿಹಾಕಿವೆ)

ಹಾಗೆಯೇ ಚಿತ್ರೋದ್ಯಮದ ಆರಂಭದ ದಿನದಿಂದಲೂ ಎಲ್ಲಾ ಸೃಜನಶೀಲ ಚಿತ್ರ ನಿರ್ದೇಶಕರನ್ನು ಸಾಹಿತ್ಯ ಕ್ಷೇತ್ರ ಆಕರ್ಷಿಸುತ್ತಾ ಬಂದಿದೆ. ಬೈಬಲ್ ಕತೆಯನ್ನು ಚಲನಚಿತ್ರವಾಗಿಸುವ ಪ್ರಯತ್ನದಿಂದ ಹಿಡಿದು ಷೇಕ್ಸ್‌ಪಿಯರ್, ಹೆಮಿಂಗ್ವೆ, ಚಾರ್ಲ್ಸ್ ಡಿಕನ್ಸ್, ಲಿಯೋ ಟಾಲ್‌ಸ್ಟಾಯ್, ದಾಸ್ತೋವ್‌ಸ್ಕಿ, ಬೋರಿಸ್ ಪ್ಯಾಸ್ಟರ್‌ನಾಕ್ ಇತ್ಯಾದಿ ಜಗತ್ಪ್ರಸಿದ್ಧ ಲೇಖಕರ ಕೃತಿಗಳನ್ನು ತೆರೆಗೆ ಒಗ್ಗಿಸುವ ಪ್ರಯತ್ನಗಳು ಹಾಲಿವುಡ್ ಮತ್ತು ಯುರೋಪ್‌ನಲ್ಲಿ ಬಹು ಹಿಂದೆಯೇ ಆರಂಭವಾದವು. ಭಾರತದಲ್ಲಿ ವಿಶೇಷವಾಗಿ ಬಂಗಾಳಿ ಭಾಷೆಯ ಸಾಹಿತ್ಯ ಕೃತಿಗಳನ್ನು ಆಧರಿಸಿ ಅನೇಕ ಚಲನಚಿತ್ರಗಳು ತಯಾರಾದವು. ಶರತ್‌ಚಂದ್ರ ಚಟರ್ಜಿ, ಬಿಮಲ್ ಮಿತ್ರ, ತಾರಾಶಂಕರ್ ಬಂಡೋಪಾಧ್ಯಾಯ, ರವೀಂದ್ರನಾಥ ಠ್ಯಾಗೂರ್‌ರವರ ಕೃತಿಗಳು ಚಿತ್ರಜಗತ್ತಿನಲ್ಲಿಯೂ ಅಮರ ಕೃತಿಗಳಾಗಿಯೇ ಉಳಿದಿವೆ. ಭಾರತದ ಸರ್ವಶ್ರೇಷ್ಠ ನಿರ್ದೇಶಕರಾದ ಸತ್ಯಜಿತ್ ರೇ ಅವರ ಪ್ರಥಮ ಚಿತ್ರ ‘ಪಥೇರ್ ಪಾಂಚಾಲಿ’ಯು ವಿಭೂತಿಭೂಷಣ ಬಂಡೋಪಾಧ್ಯಾಯ ಅವರ ಕಾದಂಬರಿಯನ್ನೇ ಆಧರಿಸಿತ್ತು. ಅನಂತರ ರೇ ಅವರು ಠ್ಯಾಗೂರ್ ಅವರ ಕೃತಿಗಳನ್ನು ಸೇರಿದಂತೆ (ಚಾರುಲತಾ, ತೀನ್ ಕನ್ಯಾ, ಘರೇ ಬೈರೆ) ಪ್ರೇಮಚಂದ್ರ, ಬಿಮಲ್ ಮಿತ್ರ, ರಾಜಶೇಖರ್ ಬೋಸ್, ತಾರಾಶಂಕರ ಬ್ಯಾನರ್ಜಿ, ಪ್ರಭಾತ್‌ಕುಮಾರ್ ಮುಖರ್ಜಿ, ನರೇಂದ್ರನಾಥ್ ಮಿತ್ರ, ಶಾರದೇಂದು ಬ್ಯಾನರ್ಜಿ, ಅವರಲ್ಲದೆ ಹೆನ್ರಿಕ್ ಇಬ್ಸನ್‌ನ ‘ಎನ್ ಎನಿಮಿ ಆಫ್ ದಿ ಪೀಪಲ್’ (ಗಣಶತ್ರು) ನಾಟಕವನ್ನು ತೆರೆಗೆ ತಂದಿದ್ದಾರೆ. ಜೊತೆಗೆ ತಮ್ಮ ಸಾಹಿತ್ಯ ಕೃತಿಗಳನ್ನೂ ತೆರೆಗೆ ಅಳವಡಿಸಿದ್ದಾರೆ. ಬಂಗಾಳಿ ಕಾದಂಬರಿಗಳ ಜನಪ್ರಿಯತೆ ಎಷ್ಟೆಂದರೆ ಇತರ ಭಾಷೆಯ ಚಿತ್ರ ತಯಾರಕರೂ ಅವುಗಳನ್ನು ತಮ್ಮ ಚಿತ್ರಗಳಿಗೆ ಅಳವಡಿಸಿಕೊಂಡು ಯಶಸ್ವಿಯಾದರು. (ಉದಾ: ತೆಲುಗಿನ ‘ದೇವದಾಸು’. ರವಿ ಅವರ ’ತೂಗುದೀಪ’ ಸಹ ಬಂಗಾಳಿ ಕಾದಂಬರಿಯನ್ನು ಆಧರಿಸಿತ್ತು.)

ಸೃಜನಶೀಲ ಸಾಹಿತ್ಯ ಕೃತಿಯೊಂದನ್ನು ಸಿನಿಮಾ ಮಾಧ್ಯಮಕ್ಕೆ ಅಳವಡಿಸುವ ಪ್ರಯೋಗವು ಸಹ ಕತೆಗಳ ಕೊರತೆಯನ್ನು ನೀಗಿಸಿಕೊಳ್ಳುವ ಪ್ರಯತ್ನದಂತೆ ಕಂಡರೂ ಅದು ನಮ್ಮ ಸಂಸ್ಕೃತಿಯ ಬೇರುಗಳ ಹುಡುಕಾಟವೂ ಆಗಿರುತ್ತದೆ. ಜೊತೆಗೆ ಮಹಾನ್ ಕೃತಿಯೊಂದರ ಆಶಯಗಳನ್ನು ದೃಶ್ಯಮಾಧ್ಯಮಕ್ಕೆ ಪರಿವರ್ತಿಸುವ ಮಹದಾಶಯವೂ ಆಗಿರುತ್ತದೆ. ಸಾಹಿತ್ಯ ಕೃತಿಯನ್ನು ಓದಲು ಸಾಧ್ಯವಾಗದ ಪ್ರೇಕ್ಷಕರಿಗೆ ತಲುಪಿಸಬಲ್ಲ ವಿಧಾನವೂ ಆಗಿರುತ್ತದೆ.

ಕನ್ನಡ ಚಿತ್ರರಂಗದ ಇತಿಹಾಸವನ್ನು ದಾಖಲಿಸಿರುವವರು ‘ಕರುಣೆಯೇ ಕುಟುಂಬದ ಕಣ್ಣು’ ಚಿತ್ರದ ಮೂಲಕ ಸಾಹಿತ್ಯ ಕೃತಿಯನ್ನು ಸಿನಿಮಾ ಮಾಧ್ಯಮಕ್ಕೆ ಅಳವಡಿಸುವ ಪ್ರಯತ್ನ ಆರಂಭವಾಯಿತೆಂದು ತಿಳಿಸಿದ್ದಾರೆ. ಅದಕ್ಕೂ ಹಿಂದೆ ಬಂದ ಸತಿ ಸುಲೋಚನಾ, ಸದಾರಮೆ, ಸಂಸಾರನೌಕ, ಬೇಡರಕಣ್ಣಪ್ಪ ಮುಂತಾದವು ಯಶಸ್ವಿ ನಾಟಕ ಪ್ರಯೋಗಗಳನ್ನು ಆಧರಿಸಿದ್ದವು. ಚಲನಚಿತ್ರಗಳಾಗುವ ಮುನ್ನವೇ ಬೆಳ್ಳಾವೆ ನರಹರಿ ಶಾಸ್ತ್ರಿಗಳು ತಮ್ಮ ಕೆಲವೊಂದು ನಾಟಕಗಳನ್ನು ಪ್ರಕಟಿಸಿಯೂ ಇದ್ದರು. ಅಲ್ಲದೆ ‘ಸಂಸ’ ಅವರ ಮೈಸೂರು ಸಂಸ್ಥಾನದ ರಾಜಕೀಯ ಬಿಕ್ಕಟ್ಟುಗಳನ್ನು ಕುರಿತ ಮೂರು ನಾಟಕಗಳನ್ನು ಆಧರಿಸಿ ‘ರಣಧೀರ ಕಂಠೀರವ’ ತಯಾರಾಗಿತ್ತು. ‘ಸ್ಕೂಲ್ ಮಾಸ್ಟರ್’ ಚಿತ್ರವು ಮರಾಠಿ ಕತೆ ‘ವೈಷ್ಣವಿ’ಯನ್ನು ಆಧರಿಸಿತ್ತು.

೧೯೬೨ರಲ್ಲಿ ಬಿಡುಗಡೆಯಾದ ‘ಕರುಣೆಯೇ ಕುಟುಂಬದ ಕಣ್ಣು’ ಕೃಷ್ಣಮೂರ್ತಿ ಪುರಾಣಿಕರ ಪ್ರಕಟಿತ ಕಾದಂಬರಿ ‘ಧರ್ಮದೇವತೆ’ಯನ್ನು ಆಧರಿಸಿತ್ತು. ಚಿತ್ರ ತಯಾರಿಕೆಯ ಕಾಲದಲ್ಲೇ ಆ ಬಗ್ಗೆ ವ್ಯಾಪಕ ಪ್ರಚಾರ ದೊರೆತಿತ್ತು. ಜಿ.ಕೆ. ವೆಂಕಟೇಶ್‌ರವರು ಚಿತ್ರದ ‘ನಿಜವೋ ಸುಳ್ಳೋ ನಿರ್ಧರಿಸಿ’ ಹಾಡಿನ ಸಂಯೋಜನೆಗೆ ದಾಖಲೆಯೆನಿಸಿದ್ದ ಎಂಬತ್ತು ವಾದ್ಯಗಾರರನ್ನು ಬಳಸಿಕೊಂಡಿದ್ದು ಸಹ ದೊಡ್ಡ ಸುದ್ದಿಯಾಗಿತ್ತು. ಈ ಚಿತ್ರವು ತೆರೆಗೆ ಬಂದು ಯಶಸ್ಸು ಕಂಡ ನಂತರವೇ ಕಾದಂಬರಿ, ಸಣ್ಣಕತೆ, ಪ್ರಕಟಿತ ನಾಟಕಗಳ ಕಡೆ ನಮ್ಮ ಚಿತ್ರ ನಿರ್ಮಾಪಕ-ನಿರ್ದೇಶಕರು ಗಮನ ಹರಿಸಿದ್ದು.

‘ಕರುಣೆಯೇ ಕುಟುಂಬದ ಕಣ್ಣು’ ಹೆಚ್ಚು ಕಡಿಮೆ ಮೂಲಕತೆಗೆ ನಿಷ್ಠವಾದ ಚಿತ್ರ. ಅಣ್ಣ ತಮ್ಮಂದಿರ ನಡುವಣ ಬಾಂಧವ್ಯ, ಮನೆಗೆ ಬಂದ ಸೊಸೆಯೊಬ್ಬಳಿಂದ ಅಣ್ಣ ತಮ್ಮಂದಿರ ನಡುವಣ ಬಿರುಕು, ಅತಿಯಾದ ಪ್ರೀತಿಯಿಂದ ಅಡ್ಡದಾರಿ ಹಿಡಿದು ಕೊನೆಗೆ ಕಣ್ಣು ಕಳೆದುಕೊಳ್ಳುವ ಮಗ, ಕುಟುಂಬವು ಛಿದ್ರವಾಗುವುದನ್ನು ತಡೆಯಲು ಯತ್ನಿಸುವ ಹೆಣ್ಣಮಕ್ಕಳು- ಹೀಗೆ, ಅಂದಿನ ಸಾಂಸಾರಿಕ ಚಿತ್ರವೊಂದರ ಆಕರ್ಷಣೆಗೆ ಅಗತ್ಯವಾದ ಎಲ್ಲ ಭಾವನಾತ್ಮಕ ಅಂಶಗಳು ಮತ್ತು ನಾಟಕೀಯ ತಿರುವುಗಳು ಈ ಚಿತ್ರದಲ್ಲಿವೆ. ಅಡ್ಡದಾರಿ ಹಿಡಿದ ಮಗ ಕುಮಾರ್ ಪಾತ್ರದಲ್ಲಿ ರಾಜ್‌ಕುಮಾರ್ ಅಭಿನಯ ಅವರ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿತ್ತು. ಸರಿಸುಮಾರು ರಾಜ್ ಜೊತೆಯಲ್ಲೇ ಚಿತ್ರರಂಗ ಪ್ರವೇಶಿಸಿದ ಉದಯಕುಮಾರ್ ಈ ಚಿತ್ರದಲ್ಲಿ ಅಪ್ಪನ ಪಾತ್ರವಹಿಸಿದ್ದಾರೆ. ಅಶ್ವಥ್‌ಗೆ ದೊಡ್ಡಪ್ಪನ ಪಾತ್ರ. ಅದಾಗಲೇ ತಾಯಿಯ ಪಾತ್ರಕ್ಕೆ ಸರಿದಿದ್ದ ಪಂಡರೀಬಾಯಿಯವರು ಅಶ್ವಥ್‌ರ ಜೋಡಿಯಾಗಿ ನಟಿಸಿದ್ದರು. ರಾಜಾಶಂಕರ್, ಹರಿಣಿ, ಲೀಲಾವತಿಯವರಿದ್ದ ಈ ಚಿತ್ರದ ಯಶಸ್ಸು ಮುಂದೆ ಕಾದಂಬರಿ ಆಧಾರಿತ ಚಿತ್ರಗಳಿಗೆ ಮುನ್ನುಡಿ ಬರೆಯಿತು. ಕಾಕತಾಳೀಯವೆಂಬಂತೆ ಈ ಚಿತ್ರದ ಬಿಡುಗಡೆಯ ನಂತರ ಕನ್ನಡ ಚಿತ್ರ ನಿರ್ಮಾಣ ಸಹ ಏರತೊಡಗಿತು.

ಕನ್ನಡದಲ್ಲಿ ಸಾಹಿತ್ಯ ಕೃತಿಯನ್ನಾಧರಿಸಿದ ಚಿತ್ರಗಳ ತಯಾರಿಕೆ ತುಸು ತಡವಾಗಿ ಆರಂಭವಾದರೂ, ನಂತರ ಗಳಿಸಿಕೊಂಡ ವೇಗ ಕುತೂಹಲಕಾರಿಯಾದದ್ದು. ಆರಂಭದಲ್ಲಿ ಕಾದಂಬರಿಗಳನ್ನು ತೆರೆಗೆ ಅಳವಡಿಸಲು ಚಿತ್ರ ತಯಾರಕರು ಸ್ವಲ್ಪ ಹಿಂಜರಿಕೆ ತೋರಿರುವುದು ಕಂಡುಬರುತ್ತದೆ. ೧೯೬೩ರಲ್ಲಿ ಸಿಂಗ್ ಠಾಕೂರ್‌ರವರು ಕೃಷ್ಣಮೂರ್ತಿ ಪುರಾಣಿಕರ ಮತ್ತೊಂದು ಕೃತಿ ‘ಕುಲವಧು’ ತೆರೆಗೆ ತರುವವರೆಗೆ ಬೇರೆ ಯಾರೂ ಆ ನಿಟ್ಟಿನಲ್ಲಿ ಪ್ರಯತ್ನಿಸಲಿಲ್ಲ. ಮತ್ತೆ ೧೯೬೪ರಲ್ಲಿ ತರಾಸು ಅವರ ‘ಚಂದವಳ್ಳಿಯ ತೋಟ’ವನ್ನು ತೆರೆಗೆ ತರಲು ಸಿಂಗ್ ಠಾಕೂರ್‌ರವರೇ ಪ್ರಯತ್ನಪಡಬೇಕಾಯಿತು. ಇದು ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಒಂದು ಮೈಲುಗಲ್ಲೆನಿಸಿತು. ‘ಚಂದವಳ್ಳಿಯ ತೋಟ’ ಚಿತ್ರವು ಅನೇಕ ಪಾತ್ರಗಳನ್ನು ಆವರಿಸಿಕೊಂಡು ಸಾಂದ್ರವಾಗಿ ಕಥೆಯನ್ನು ಹೇಳಿದ ಮೊದಲ ಪ್ರಯತ್ನವಾಗಿ ಗಮನ ಸೆಳೆಯುತ್ತದೆ (’ಇಂದಿಗೂ ಸುಂದರ ಚಂದವಳ್ಳಿಯ ತೋಟ’ ಲೇಖನವನ್ನೂ ನೋಡಿ). ಗ್ರಾಮೀಣ ಬದುಕಿನ ಪಲ್ಲಟ, ಸಾಮಾಜಿಕ ಸಮಸ್ಯೆಗಳು, ಕೌಟುಂಬಿಕ ವಿಘಟನೆ, ವಿರಸ, ದ್ವೇಷ ತಲುಪುವ ದುರಂತ- ಹೀಗೆ ಅನೇಕ ಎಳೆಗಳನ್ನು ನೇಯ್ದು ಹುರಿಗೊಂಡ ಚಿತ್ರವಾಗಿತ್ತು. ಚಿತ್ರದ ಒಂದೊಂದು ಎಳೆಯೇ ಒಂದು ಪ್ರತ್ಯೇಕ ಚಿತ್ರವಾಗುವಷ್ಟು ಸಮರ್ಥವಾಗಿದ್ದು ಮುಂದೆ ಇದೇ ಆಧಾರದಲ್ಲಿ ಅನೇಕ ಚಿತ್ರಗಳು ತಯಾರಾದವು.

೧೯೬೬ರವರೆಗೆ ಕಾದಂಬರಿ ಆಧಾರಿತ ಚಿತ್ರಗಳ ಶೂನ್ಯತೆ ಕಾಡಿದರೂ ಎಂ.ವಿ. ಕೃಷ್ಣಸ್ವಾಮಿಯವರು ಮೊಲಿಯೇರ್‌ನ ಕೃತಿಯನ್ನು ರೂಪಾಂತರಿಸಿದ್ದ ಎ.ಎನ್.ಮೂರ್ತಿರಾಯರ ‘ಆಷಾಢಭೂತಿ’ಯನ್ನು ಆಧರಿಸಿ ‘ಸುಬ್ಬಾಶಾಸ್ತ್ರಿ’ ಚಿತ್ರ ನಿರ್ಮಿಸಿದರು. ಅದೇ ವರ್ಷ ಅನಕೃ ಅವರ ಕೃತಿಯನ್ನಾಧರಿಸಿದ ‘ಸಂಧ್ಯಾರಾಗ’ ಬಿಡುಗಡೆಯಾಯಿತು. ಅಂದರೆ ಐದು ವರ್ಷಗಳ ಅವಧಿಯಲ್ಲಿ ತಯಾರಾದ ನೂರಾ ಹನ್ನೊಂದು ಚಿತ್ರಗಳಲ್ಲಿ ಸಾಹಿತ್ಯ ಕೃತಿಯನ್ನು ಆಧರಿಸಿ ತಯಾರಾದ ಚಿತ್ರಗಳು ಐದು ಮಾತ್ರ!

ಕನ್ನಡ ಕಾದಂಬರಿಗಳಿಗೆ ಚಲನಚಿತ್ರವಾಗುವ ಅದೃಷ್ಟದ ಬಾಗಿಲನ್ನು ದೊಡ್ಡದಾಗಿ ತೆರೆದ ಶ್ರೇಯಸ್ಸು ಎಸ್.ಆರ್. ಪುಟ್ಟಣ್ಣ ಕಣಗಾಲ್‌ರವರಿಗೆ ಸಲ್ಲುತ್ತದೆ. ೧೯೬೮ರಲ್ಲಿ ಬಿಡುಗಡೆಯಾದ ಕಪ್ಪು-ಬಿಳುಪಿನ ದೃಶ್ಯಕಾವ್ಯ ‘ಬೆಳ್ಳಿ ಮೋಡ’ ತ್ರಿವೇಣಿಯವರ ಕಾದಂಬರಿಯನ್ನಾಧರಿಸಿದ ಚಿತ್ರ. ಒಂದು ಸಾಹಿತ್ಯಕೃತಿಗೆ ದೃಶ್ಯ ಮಾಧ್ಯಮದ ಸ್ಪರ್ಶವನ್ನು ಕೊಡುವ ವಿಧಾನವು ‘ಚಂದವಳ್ಳಿಯ ತೋಟ’ದಲ್ಲಿ ಆರಂಭವಾಗಿದ್ದರೂ ‘ಬೆಳ್ಳಿ ಮೋಡ’ ಆ ಸಾಧ್ಯತೆಗಳನ್ನು ವಿಸ್ತರಿಸಿತು. ಕತೆಯ ಆಶಯಗಳನ್ನೆ ಕೇಂದ್ರವಾಗಿಟ್ಟುಕೊಂಡು ತಮ್ಮದೇ ರೀತಿಯಲ್ಲಿ ನಿರ್ದೇಶಕ ಕಟ್ಟುವ ಸಾಧ್ಯತೆಗಳನ್ನು ಮೊದಲನೆಯ ಚಿತ್ರದಲ್ಲಿ ಅವರು ಎಳೆ‌ಎಳೆಯಾಗಿ ಬಿಡಿಸಿಟ್ಟಿದ್ದರು. ಈ ಚಿತ್ರ ಬಿಡುಗಡೆಯಾದ ನಂತರವೂ ಕಾದಂಬರಿ ಆಧರಿಸಿದ ಚಿತ್ರಗಳಲ್ಲಿ ಹೆಚ್ಚಳ ಕಾಣದಿದ್ದರೂ, ಚಲನಚಿತ್ರಗಳಿಗೆ ಕಾದಂಬರಿಗಳನ್ನು ಆರಿಸಿಕೊಳ್ಳುವಾಗ ಮಾತ್ರ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಿರುವುದು ಕಾಣುತ್ತದೆ. ‘ಬೆಳ್ಳಿ ಮೋಡ’ದ ನಂತರ ಬಂದ ಚಕ್ರತೀರ್ಥ (ತರಾಸು), ಚದುರಂಗರವರು ತಮ್ಮದೇ ಕಾದಂಬರಿ ಆಧರಿಸಿ ನಿರ್ದೇಶಿಸಿದ್ದ ‘ಸರ್ವಮಂಗಳಾ’ (೧೯೬೮), ಎಂ.ಆರ್. ವಿಠಲ್ ನಿರ್ದೇಶನದ ‘ಹಣ್ಣೆಲೆ ಚಿಗುರಿದಾಗ’ (ತ್ರಿವೇಣಿ-೧೯೬೮), ೧೯೬೯ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲರವರ ‘ಮಲ್ಲಮ್ಮನ ಪವಾಡ’ (ಬಿ.ಪುಟ್ಟಸ್ವಾಮಯ್ಯ) ಮತ್ತು ‘ಕಪ್ಪು-ಬಿಳುಪು’ (ಆರ್‍ಯಾಂಬ ಪಟ್ಟಾಭಿ), ಎಂ.ಆರ್.ವಿಠಲ್‌ರವರ ‘ಎರಡುಮುಖ’ (ಆರ್‍ಯಾಂಬ ಪಟ್ಟಾಭಿ), ಎನ್ನೆಲ್‌ರವರ ‘ಉಯ್ಯಾಲೆ’ (ಚದುರಂಗ) ಚಿತ್ರಗಳನ್ನು ಗಮನಿಸಿದಾಗ ನಿರ್ದೇಶಕರು ವಸ್ತುವೈವಿಧ್ಯಕ್ಕೆ ನೀಡುತ್ತಿದ್ದ ಮಹತ್ತ್ವ ಗೋಚರಿಸುತ್ತದೆ. ೧೯೭೦ರ ದಶಕದಿಂದಾಚೆಗೆ ಕಾದಂಬರಿ, ನಾಟಕ, ಸಣ್ಣ ಕತೆಗಳನ್ನಾಧರಿಸಿದ ಚಿತ್ರಗಳ ಪರಂಪರೆಯೊಂದು ವೇಗವನ್ನು ಕಂಡುಕೊಂಡಿತು. ಹಲವಾರು ಹೊಸ ಮೈಲಿಗಲ್ಲುಗಳನ್ನು ದಾಟಿಬರಲು ಕಾದಂಬರಿಗಳು ಸ್ಫೂರ್ತಿಯಾದವು.

ಒಂದೆಡೆ ಪುಟ್ಟಣ್ಣನವರು ಗೆಜ್ಜೆಪೂಜೆ, ಶರಪಂಜರ, ನಾಗರಹಾವು, ಎಡಕಲ್ಲು ಗುಡ್ಡದ ಮೇಲೆ, ಕಥಾಸಂಗಮ, ರಂಗನಾಯಕಿ ಮೂಲಕ ಅತ್ಯುತ್ತಮ ಕಲಾಕೃತಿಗಳನ್ನೂ ಕಡೆಯುತ್ತಿದ್ದರೆ, ಸಿದ್ಧಲಿಂಗಯ್ಯ ಅವರು ‘ಬಂಗಾರದ ಮನುಷ್ಯ’, ‘ಬೂತಯ್ಯನ ಮಗ ಅಯ್ಯು’ ಮತ್ತು ‘ಹೇಮಾವತಿ’ ಚಿತ್ರಗಳ ಮೂಲಕ ಯಶಸ್ಸು ಮತ್ತು ಪ್ರಯೋಗಶೀಲತೆಯನ್ನು ಕಂಡುಕೊಂಡರು. ‘ಸಂಸ್ಕಾರ’ ಚಿತ್ರವು ಹೊಸ ಅಲೆಯ ಚಿತ್ರ ಪರಂಪರೆಗೆ ನಾಂದಿಯಾಡಿತು. ಬೇಂದ್ರೆ ಮತ್ತು ಗೋಕಾಕರನ್ನು ಹೊರತುಪಡಿಸಿ ಉಳಿದೆಲ್ಲ ಜ್ಞಾನಪೀಠ ಪ್ರಶಸ್ತಿ ವಿಜೇತರ ಹಲವಾರು ಕೃತಿಗಳು ಚಲನಚಿತ್ರ ರೂಪ ಪಡೆದವು. ಎಚ್.ಕೆ. ಅನಂತರಾವ್‌ರವರ ‘ಅಂತ’ ರಾಜಕೀಯ-ಭೂಗತ ಜಗತ್ತಿನ ಸಂಬಂಧಗಳನ್ನು ಅನಾವರಣಗೊಳಿಸಿ ಹೊಸ ಪರಂಪರೆಯೊಂದನ್ನು ಸೃಷ್ಟಿಸಿತು. ಕಾದಂಬರಿಗಳಾಗಿ ಅಷ್ಟೇನೂ ಮಹತ್ತ್ವದ ಕೃತಿಗಳೆನಿಸದ, ವಿಶೇಷವಾಗಿ ಮಹಿಳೆಯರ ಕಾದಂಬರಿಗಳು ಚಲನಚಿತ್ರರೂಪಕ್ಕೆ ಬಂದಾಗ ಹೆಚ್ಚು ಸೂಕ್ಷ್ಮ ಆಯಾಮಗಳನ್ನು ಪಡೆದುಕೊಂಡವು. ಉದಾ: ಉಷಾ ನವರತ್ನರಾಂರವರ ‘ಹೊಂಬಿಸಿಲು’, ವಾಣಿ ಅವರ ‘ಎರಡು ಕನಸು’, ‘ಶುಭಮಂಗಳ’, ಪತ್ರಕರ್ತ ಆನಂದರವರ ಸಣ್ಣಕತೆ ‘ನಾನೂ ನೀನೂ ಜೋಡಿ’ ಆಧರಿಸಿದ ‘ನಾ ನಿನ್ನ ಮರೆಯಲಾರೆ’, ರೇಖಾ ಕಾಖಂಡಕಿ ಅವರ ‘ಅರುಣರಾಗ’, ದೇವಕಿಮೂರ್ತಿ ಅವರ ‘ಉಪಾಸನೆ’, ಟಿ.ಕೆ. ರಾಮರಾವ್ ಅವರ ‘ಬಂಗಾರದ ಮನುಷ್ಯ’ ಇತ್ಯಾದಿ ಚಿತ್ರಗಳು ಈ ಸಾಲಿಗೆ ಸೇರುತ್ತವೆ. ಕನ್ನಡ ಚಲನಚಿತ್ರರಂಗ ಮತ್ತು ಸಾಹಿತ್ಯದ ನಂಟನ್ನು ನೋಡಿದಾಗ ಕನ್ನಡದ ಬಹುಪಾಲು ಎಲ್ಲ ಆಧುನಿಕ ಸೃಜನಶೀಲ ಸಾಹಿತಿಗಳ ಒಂದಲ್ಲ ಒಂದು ಕೃತಿ ತೆರೆಯ ಮೇಲೆ ಬಂದಿರುವುದು ಕಾಣುತ್ತದೆ. ಇತರ ಭಾಷೆಗಳಲ್ಲೂ ಸಾಹಿತ್ಯ ಕೃತಿಗಳನ್ನಾಧರಿಸಿ ಚಿತ್ರಗಳು ರೂಪುಗೊಳ್ಳುತ್ತಿರುವುದನ್ನು ಕೇಳಿದ್ದೇವೆ. ಆದರೆ ಯಾವುದೇ ಒಂದು ಭಾಷೆಯಲ್ಲಿ ಕನ್ನಡದಲ್ಲಿ ಬಂದಿರುವಷ್ಟು ಹೆಸರಾಂತ ಸಾಹಿತಿಗಳ ಕೃತಿಗಳು ದೃಶ್ಯ ಮಾಧ್ಯಮಕ್ಕೆ ಅಳವಡಿಕೆಯಾಗಿರುವುದು ಅನುಮಾನ. ನಮ್ಮ ಅಗ್ರಗಣ್ಯ ಸಾಹಿತಿಗಳಾದ ಕುವೆಂಪು (ಬೆರಳ್‌ಗೆ ಕೊರಳ್, ಕಾನೂರು ಹೆಗ್ಗಡಿತಿ), ಶಿವರಾಮ ಕಾರಂತ (ಚೋಮನದುಡಿ, ಮಲೆಯ ಮಕ್ಕಳು, ಚಿಗುರಿದ ಕನಸು), ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಕಾಕನ ಕೋಟೆ), ಯು.ಆರ್.ಅನಂತಮೂರ್ತಿ (ಘಟಶ್ರಾದ್ಧ, ಅವಸ್ಥೆ, ಬರ, ಸಂಸ್ಕಾರ), ತ್ರಿವೇಣಿ (ಬೆಳ್ಳಿ ಮೋಡ, ಶರಪಂಜರ, ಹೂವು-ಹಣ್ಣು, ಹಣ್ಣೆಲೆ ಚಿಗುರಿದಾಗ), ಎಂ.ಕೆ. ಇಂದಿರಾ (ಗೆಜ್ಜೆಪೂಜೆ, ಫಣಿಯಮ್ಮ ಇತ್ಯಾದಿ), ಅನಕೃ (ಸಂಧ್ಯಾರಾಗ), ತರಾಸು (ಚಂದವಳ್ಳಿಯ ತೋಟ, ಚಕ್ರತೀರ್ಥ, ಬೆಂಕಿಯ ಬಲೆ, ಬಿಡುಗಡೆಯ ಬೇಡಿ, ಹಂಸಗೀತೆ, ಚಂದನದ ಗೊಂಬೆ, ಗಾಳಿಮಾತು, ಆಕಸ್ಮಿಕ, ನಾಗರಹಾವು ಇತ್ಯಾದಿ), ಪೂರ್ಣಚಂದ್ರ ತೇಜಸ್ವಿ (ಅಬಚೂರಿನ ಪೋಸ್ಟಾಫೀಸು, ತಬರನ ಕತೆ, ಕುಬಿ ಮತ್ತು ಇಯಾಲ), ಪಿ.ಲಂಕೇಶ್ (ಅಕ್ಕ ಮತ್ತು ಮುಸ್ಸಂಜೆಯ ಕಥಾಪ್ರಸಂಗ), ದೇವುಡು (ಮಯೂರ), ಭಾರತೀಸುತ (ಗಿರಿಕನ್ಯೆ, ಹುಲಿಯ ಹಾಲಿನ ಮೇವು, ಎಡಕಲ್ಲು ಗುಡ್ಡದ ಮೇಲೆ), ಗೊರೂರು (ಬೂತಯ್ಯನ ಮಗ ಅಯ್ಯು, ಹೇಮಾವತಿ, ಊರ್ವಶಿ), ಎಸ್.ಎಲ್. ಭೈರಪ್ಪ (ವಂಶವೃಕ್ಷ, ಮತದಾನ, ತಬ್ಬಲಿಯು ನೀನಾದೆ ಮಗನೆ, ನಾಯಿನೆರಳು), ಶ್ರೀಕೃಷ್ಣ ಆಲನಹಳ್ಳಿ (ಕಾಡು, ಭುಜಂಗಯ್ಯನ ದಶಾವತಾರಗಳು, ಪರಸಂಗದ ಗೆಂಡೆತಿಮ್ಮ, ಫೀನಿಕ್ಸ್, ಕುರುಬರ ಲಕ್ಕನೂ ಎಲಿಜಬೆತ್ ರಾಣಿಯೂ), ಚದುರಂಗ (ಉಯ್ಯಾಲೆ, ಸರ್ವಮಂಗಳ), ಗಿರೀಶ್ ಕಾರ್ನಾಡ್ (ನಾಗಮಂಡಲ), ದೇವನೂರ ಮಹಾದೇವ (ಅಮಾಸ), ಅಶ್ವತ್ಥ್ (ರಂಗನಾಯಕಿ, ಧರ್ಮಕೊಂಡ), ಕೃಷ್ಣಮೂರ್ತಿ ಪುರಾಣಿಕ (ಕರುಣೆಯೇ ಕುಟುಂಬದ ಕಣ್ಣು, ಮಣ್ಣಿನ ಮಗಳು, ಕುಲವಧು, ಸನಾದಿ ಅಪ್ಪಣ್ಣ), ಚಂದ್ರಶೇಖರ ಕಂಬಾರ (ಸಂಗೀತ, ಹರಕೆಯ ಕುರಿ), ಬರಗೂರು ರಾಮಚಂದ್ರಪ್ಪ (ಒಂದು ಊರಿನ ಕತೆ), ಕುಂ. ವೀರಭದ್ರಪ್ಪ (ಕೊಟ್ರೇಶಿ ಕನಸು, ಮನಮೆಚ್ಚಿದ ಹುಡುಗಿ, ಕೆಂಡದ ಮಳೆ), ಬಿ.ವಿ. ವೈಕುಂಠರಾಜು (ಉದ್ಭವ) -ಹೀಗೆ ಪಟ್ಟಿಯನ್ನು ಮುಂದುವರಿಸಬಹುದು.

ಸಿನಿಮಾ ಮಾಧ್ಯಮವು ಮೂಲ ಸಾಹಿತ್ಯ ಕೃತಿಗೆ ಎಷ್ಟು ನಿಷ್ಠವಾಗಿರುತ್ತದೆ ಎಂಬುದು ಚರ್ಚೆಗೆ ಅರ್ಹವಾದ ವಿಷಯ. ಒಬ್ಬ ಮಹಾನ್ ಸಾಹಿತಿಯ ಶ್ರೇಷ್ಠ ಕತೆಯನ್ನು ಸಿನಿಮಾಗೆ ಅಳವಡಿಸುವಾಗ ಅದು ಲೇಖಕನ ಮೂಲ ಆಶಯಗಳನ್ನೆ ಪ್ರತಿಬಿಂಬಿಸುತ್ತದೆ ಎಂದು ಹೇಳುವುದು ಕಷ್ಟ. ಅದು ಲೇಖಕನ ಆಶಯಗಳನ್ನು ಮೀರಿ ವಿಸ್ತರಿಸಬಹುದು (ಉದಾ: ಬೂತಯ್ಯನ ಮಗ ಅಯ್ಯು), ಇಲ್ಲವೆ ಕುಗ್ಗಿಸಬಹುದು (ಉದಾ: ಕಾನೂರು ಹೆಗ್ಗಡಿತಿ) ಅಥವಾ ಮೂಲ ಕೃತಿಯ ಎಳೆಯನ್ನು ಮಾತ್ರ ತೆಗೆದುಕೊಂಡು ತನ್ನದೇ ಆದ ದೃಷ್ಟಿಕೋನದ ಮೂಲಕ ಹೊಸ ಕೃತಿಯನ್ನು ಕಟ್ಟಬಹುದು (ಉದಾ: ನಾಯಿನೆರಳು). ಮೂಲ ಕೃತಿಯನ್ನೆ ಇಡಿಯಾಗಿ ಅಳವಡಿಸುವುದು, ಅದರ ಆಶಯಗಳನ್ನೆ ಬಿಂಬಿಸುವುದು ಸಾಧ್ಯವಾಗದ ಕಾರ್ಯ. ಲೇಖಕ ತನ್ನ ಕೃತಿಯ ಸಿನಿಮಾರೂಪದ ಬಗ್ಗೆ ಬೇಸರ ವ್ಯಕ್ತಪಡಿಸುವುದು ಸಾಮಾನ್ಯ. ಪುಟ್ಟಣ್ಣನವರು ಕಾದಂಬರಿಗಳನ್ನು ಆಧರಿಸಿ ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿದರೂ ಮೂಲಲೇಖಕರಿಂದ ಪ್ರತಿಭಟನೆ ಎದುರಿಸಿದ್ದಾರೆ. ಅಪಾರ ಯಶಸ್ಸು ಕಂಡ ಚಿತ್ರವಾದರೂ ತರಾಸು ಅವರು ನಾಗರಹಾವು ಚಿತ್ರವನ್ನು ‘ಕೇರೆ ಹಾವು’ ಎಂದು ಕರೆದದ್ದನ್ನು ಇಲ್ಲಿ ನೆನೆಯಬಹುದು. ’ಎಡಕಲ್ಲು ಗುಡ…’ ಚಿತ್ರಕ್ಕೆ ಸಂಬಂಧಿಸಿದಂತೆ ‘ಅದು ಅಮಿತಭೋಗದ ಆಕಾಂಕ್ಷೆಯ ಸಂಕೇತ. ಜನಸಾಮಾನ್ಯರ ದೃಷ್ಟಿಯಲ್ಲಿ ಚಿತ್ರ ಯಶಸ್ವಿಯಾಗಿದೆ. ಆದರೆ ಸಾಹಿತಿಯ ದೃಷ್ಟಿಯಿಂದ ಮೂಲದ ಎತ್ತರಕ್ಕೆ ಏರಿಲ್ಲ. ಚಿತ್ರನಿರ್ಮಾಪಕರು ಕಾದಂಬರಿಕಾರನ ಅನುಮತಿಯನ್ನು ಪಡೆದ ಮೇಲೆ ಅವನ ಹಂಗೇನು? ಎಂಬಂತೆ ವರ್ತಿಸುವುದು ನನಗಾದ ಅನುಭವ’ ಎಂದು ಲೇಖಕ ಭಾರತೀಸುತ ನೊಂದು ನುಡಿದದ್ದರು.

ಆದರೆ ಪುಟ್ಟಣ್ಣನವರ ಸಮರ್ಥನೆಯೆ ಬೇರೆಯದಿತ್ತು. ’ನಿರ್ದೇಶಕನಿಗೆ ಒಪ್ಪಿತವಾಗುವ ಯಾವುದೋ ಒಂದು ಎಳೆಯನ್ನು ಆಧರಿಸಿ ನಿರ್ದೇಶಕನೊಳಗಿನ ಕತೆಗಾರ ಸಿನೆಮಾ ಸ್ಕ್ರಿಪ್ಟ್ ರಚಿಸುತ್ತಾನೆ. ಕಾದಂಬರಿಯಲ್ಲಿ ಬರುವ ಅನೇಕ ವಿವರಗಳು ದೃಶ್ಯ ಮಾಧ್ಯಮಕ್ಕೆ ಹೊಂದುವುದಿಲ್ಲ. ಹಾಗಾಗಿ ತಾನು ಒಪ್ಪಿದ ಕಥೆಯ ಎಳೆಗೆ ತನ್ನದೇ ಕಲ್ಪನೆಯನ್ನು ಜೋಡಿಸಿ ಚಿತ್ರ ನಿರ್ಮಿಸುವುದು ಅನಿವಾರ್ಯ’ ಎಂದು ಪುಟ್ಟಣ್ಣ ಸಮರ್ಥಿಸಿಕೊಂಡಿದ್ದರು.

ಮೂಲ ಲೇಖಕರಿಗೆ ನಿಷ್ಠರಾಗಿಯೂ ಅನೇಕ ವೇಳೆ ಟೀಕೆಗಳು ಎದುರಾಗುತ್ತವೆ. ಶಿವರಾಮ ಕಾರಂತರು ’ಚೋಮನ ದುಡಿ’ಯನ್ನು ಬಿ.ವಿ. ಕಾರಂತರು ಚಿತ್ರ ಮಾಡಿದರೆ ಮಾತ್ರ ಕೊಡುವುದಾಗಿ ಶರತ್ತು ಹಾಕಿದ್ದರು. ಬಿ.ವಿ.ಕಾರಂತರ ’ಚೋಮ…’ ಬಿಡುಗಡೆಯಾದ ಬಳಿಕ ಚೋಮ ಚಿತ್ರದಲ್ಲಿ ದುಡಿ ಮೆಟ್ಟುವ ವಿಧಾನವನ್ನು ಕಟುವಾಗಿ ಟೀಕಿಸಿದ್ದರು. ’ಇದು ಎದೆಯ ದುಡಿ… ಕೈಯಲ್ಲಿ ಬಾರಿಸುವ ದುಡಿಯಲ್ಲ’ ಎಂಬರ್ಥದ ಮಾತುಗಳನ್ನು ಆಡಿದ್ದರು. ಮಲಯಾಳಂ ಕೃತಿಯನ್ನು ಆಧರಿಸಿದ್ದ ಅಡೂರು ಗೋಪಾಲಕೃಷ್ಣನ್‌ರವರ ‘ವಿಧೇಯನ್’ ಮತ್ತು ಒರಿಯಾ ಕೃತಿಯನ್ನು ಆಧರಿಸಿದ್ದ ಮೃಣಾಲ್ ಸೇನ್‌ರವರ ‘ಮತಿರಾ ಮನುಷ್ಯ’ ಮೂಲ ಕತೆಗಿಂತ ಭಿನ್ನವಾಗಿದ್ದವೆಂಬ ಕಾರಣಕ್ಕೆ ವಿಮರ್ಶಕರ ಆಕ್ರೋಶವನ್ನು ಎದುರಿಸಿದವು.

ಅದೇನೆ ಇರಲಿ, ಕತೆಗಳಿಗಾಗಿ ಸಾಹಿತ್ಯ ಕೃತಿಗಳತ್ತ ನೋಟ ಬೀರುತ್ತಿದ್ದ ನಿರ್ದೇಶಕರ ಸಂಖ್ಯೆ ಈಗ ಕಡಿಮೆಯಾಗುತ್ತಿದೆ. ಎಪ್ಪತ್ತು ಮತ್ತು ಎಂಬತ್ತರ ದಶಕದ ಆರಂಭದಲ್ಲಿ ಮಹಿಳೆಯರ ಕಾದಂಬರಿಗಳು ಮತ್ತು ಜನಪ್ರಿಯ ಪತ್ರಿಕೆಗಳಲ್ಲಿ ಪ್ರಕಟವಾಗುತ್ತಿದ್ದ ಧಾರಾವಾಹಿಗಳಿಗೆ ನಿರ್ದೇಶಕರು ಹೆಚ್ಚು ಒಲಿಯುತ್ತಿದ್ದರು. ಕಾದಂಬರಿ ಮತ್ತು ಧಾರಾವಾಹಿಯಾಗಿ ಒಂದು ಓದುವ ವರ್ಗವನ್ನು ಈಗಾಗಲೇ ತಲುಪಿರುವ ಕೃತಿಯೊಂದನ್ನು ಚಲನಚಿತ್ರವಾಗಿಸಿದರೆ ಕುತೂಹಲದಿಂದಲಾದರೂ ಪ್ರೇಕ್ಷಕ ವರ್ಗ ಹೆಚ್ಚಬಹುದೆಂಬ ವಾಣಿಜ್ಯ ದೃಷ್ಟಿಯು ಕಾದಂಬರಿಯನ್ನು ಸೆಲ್ಯುಲಾಯ್ಡ್‌ಗೆ ಅಳವಡಿಸಲು ಪ್ರೇರಣೆ ನೀಡಿರಬಹುದು. ಆದರೆ ತೊಂಬತ್ತರ ದಶಕದ ನಂತರ ಟಿವಿ ವೀಕ್ಷಣೆ ಹೆಚ್ಚಾಯಿತು. ಮೆಗಾ ಧಾರಾವಾಹಿ, ರಿಯಾಲ್ಟಿ ಷೋ, ನೇರಪ್ರಸಾರ ಮೊದಲಾದ ಕಾರ್ಯಕ್ರಮಗಳು ಓದುವ ವರ್ಗವನ್ನು ತಿಂದುಹಾಕಿದವು. ಜೊತೆಯಲ್ಲಿ ಚಿತ್ರವೊಂದರ ಕತೆಯ ಅಂಶಕ್ಕಿಂತ ರಂಜನೆಯ ಅಂಶಗಳೇ ಚಿತ್ರದ ಯಶಸ್ಸನ್ನು ನಿರ್ಧರಿಸತೊಡಗಿದವು. ಹೀಗಾಗಿ ಕತೆ, ಕಾದಂಬರಿಗಳು ಭಿನ್ನ ಪ್ರಯತ್ನ ಮಾಡುವ ನಿರ್ದೇಶಕರಿಗಷ್ಟೇ ಸೀಮಿತವಾದವು. ಅಲ್ಲದೆ, ಬೇರೆ ಭಾಷೆಗಳ ಚಿತ್ರಗಳಿಂದ ಯಶಸ್ವಿ ಸೂತ್ರಗಳನ್ನು ಹುಡುಕುವ ಮತ್ತು ಸಿನಿಮಾಗಳಿಗಾಗಿಯೇ ಕತೆ ರಚಿಸುವ ಕತೆಗಾರರ ಸಂಖ್ಯೆ ವೃದ್ಧಿಸಿತು. ಈ ಎಲ್ಲ ಕಾರಣಗಳಿಂದಾಗಿ ಸಾಹಿತ್ಯ ಕೃತಿಗಳನ್ನು ಅಳವಡಿಸುವ ಕಾರ್ಯ ಹಿನ್ನಡೆ ಕಂಡಿದೆ.

ಚಲನಚಿತ್ರವು ನಿರ್ದೇಶಕನ ಮಾಧ್ಯಮ ಎನ್ನುವುದು ಸ್ವೀಕೃತ ಅಭಿಪ್ರಾಯ. ಬಹುತೇಕ ಎಲ್ಲ ವಿಮರ್ಶಕರೂ ಈ ನಿಲುವನ್ನು ಒಪ್ಪುತ್ತಾರೆ. ಒಂದು ಚಲನಚಿತ್ರವು ನಿರ್ದೇಶಕನ ಚಿಂತನೆ ಮತ್ತು ದೃಷ್ಟಿಕೋನವನ್ನು ಅಭಿವ್ಯಕ್ತಿಸುವ ಕೃತಿ. ಸಾಹಿತ್ಯ ಕೃತಿಯೊಂದನ್ನು ಓದಿದ ನಂತರ ನಿರ್ದೇಶಕ ತಾನು ಗ್ರಹಿಸಿಕೊಂಡ ರೀತಿಯಲ್ಲಿ ಅದನ್ನು ಪಡಿಮೂಡಿಸಲು ಯತ್ನಿಸುತ್ತಾನೆ. ಗೊಡಾರ್ಡ್ ಮತ್ತು ಮೃಣಾಲ್ ಸೇನ್‌ರವರಂಥ ನಿರ್ದೇಶಕರು ಸಾಹಿತ್ಯ ಕೃತಿಯನ್ನು ಸೆಲ್ಯುಲಾಯ್ಡ್‌ಗೆ ತರುವ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಅಭಿಜಾತ ಕೃತಿಯೊಂದಕ್ಕೆ ನಿಷ್ಠವಾಗಬೇಕಾದ ಕಟ್ಟುಪಾಡು ನಿರ್ದೇಶಕನ ಸ್ವಾತಂತ್ರ್ಯ, ಚಿಂತನೆ ಮತ್ತು ವ್ಯಾಖ್ಯಾನಕ್ಕೆ ಅವಕಾಶ ನಿರಾಕರಿಸುತ್ತದೆಂಬುದು ಅವರ ವಿರೋಧಕ್ಕೆ ಕಾರಣ. ಆದರೂ ಭಾರತದ ಅನೇಕ ಪ್ರಸಿದ್ಧರ ಕೃತಿಗಳು ಶ್ರೇಷ್ಠ ಚಿತ್ರಗಳಾಗಿ ತೆರೆಯ ಮೇಲೆ ಬಂದಿವೆ. ದೇವದಾಸು, ಕಾಬೂಲಿವಾಲ, ಚಾರುಲತಾ, ಚೋಮನದುಡಿ, ಚೆಮ್ಮೀನ್, ಬೂತಯ್ಯನ ಮಗ ಅಯ್ಯು, ಪಥೇರ್ ಪಾಂಚಾಲಿ, ಘಟಶ್ರಾದ್ಧ, ಉಯ್ಯಾಲೆ, ಸರ್ವಮಂಗಳ ಮುಂತಾದವು ಮೂಲಕ್ಕೆ ನಿಷ್ಠವಾಗಿರುವ ಜೊತೆಗೆ ನಿರ್ದೇಶಕರ ಕೌಶಲ್ಯವನ್ನೂ ನಿಕಷಕ್ಕೆ ಒಡ್ಡಿದ ಪ್ರಯತ್ನಗಳೆಂದೇ ಹೇಳಬಹುದು.

ಕನ್ನಡದ ಮಟ್ಟಿಗೆ ಇತ್ತೀಚೆಗಿನ ರಿಮೇಕ್ ಹಾವಳಿಯ ನಡುವೆಯೂ ‘ಚಿಗುರಿದ ಕನಸು’, ‘ಮೌನಿ’, ‘ಅವ್ವ’, ‘ಮುನ್ನುಡಿ’, ‘ಹಸೀನಾ’, ‘ಕಾನೂರು ಹೆಗ್ಗಡಿತಿ’, ‘ದಾದಾಗಿರಿಯ ದಿನಗಳು’, ‘ಜನುಮದ ಜೋಡಿ’ಯಂಥ ಸಾಹಿತ್ಯ ಕೃತಿಯನ್ನು ತೆರೆಗೆ ತಂದ ಪ್ರಯೋಗಗಳು ‘ಧರ್ಮದೇವತೆ’ ಆರಂಭಿಸಿದ ಪರಂಪರೆಯನ್ನು ಜೀವಂತವಾಗಿಡುವ ಪ್ರಯತ್ನಗಳೇ ಆಗಿವೆ. ಒಂದು ಕಾಲದಲ್ಲಿ ತೆರೆಗೆ ಅಳವಡಿಸಲು ಪ್ರೇಕ್ಷಕರನ್ನು ಸೆಳೆಯುವಂಥ ನವಿರು ಪ್ರೇಮ, ಕೌಟುಂಬಿಕ ಸಾರಸ್ಯ, ಕುಟುಂಬದ-ಸಮಾಜದ ಕಟ್ಟುಪಾಡುಗಳಲ್ಲಿ ನಲುಗುವ ಹೆಣ್ಣು, ದುರಂತ ಪ್ರೇಮ, ಗಂಡು ಹೆಣ್ಣಿನ ವಿವಿಧ ಸಂಬಂಧಗಳು ಇತ್ಯಾದಿ ಭಾವನಾತ್ಮಕ ನೆಲೆಯಲ್ಲಿ ನಡೆಯುವ ಜೀವನ ವ್ಯಾಪಾರದ ವಸ್ತುವನ್ನು ಆಧರಿಸಿದ್ದ ಕತೆ ಕಾದಂಬರಿಗಳು ಹೆಚ್ಚು ಪ್ರಕಟವಾಗಿ ಸಿನೆಮಾರೂಪ ಪಡೆಯುತ್ತಿದ್ದವು. ಆದರೆ ಈಗ ಅಂಥ ಸರಳ ವ್ಯಾಖ್ಯೆಯ ಕಾದಂಬರಿಗಳನ್ನು ನಿರ್ದೇಶಕ ಕಣ್ಣೆತ್ತಿ ಕೂಡ ನೋಡುತ್ತಿಲ್ಲ. ಗಟ್ಟಿ ಕಥೆಯ, ಸಾಹಿತ್ಯಕವಾಗಿ ಚರ್ಚೆಗೊಳಗಾದ ಕೃತಿಗಳನ್ನು ಮಾತ್ರ ತೆರೆಗೆ ತರುವ ಪ್ರಯತ್ನ ಈಗ ಕಾಣುತ್ತಿದೆ. ಆದ್ದರಿಂದ ಕುವೆಂಪು, ಕಾರಂತ, ಪುಣೇಕರ, ಶ್ರೀಕೃಷ್ಣ ಆಲನಹಳ್ಳಿ, ಕಾರ್ನಾಡ್, ಭೈರಪ್ಪ, ಬೋಳುವಾರು, ಲಂಕೇಶ್, ತೇಜಸ್ವಿ, ಅನಂತ ಮೂರ್ತಿ, ರಂಶಾ, ಅಮರೇಶ ನುಗಡೋಣಿ, ವೈದೇಹಿ, ಬೆಸಗರಹಳ್ಳಿ ರಾಮಣ್ಣ, ಅಗ್ನಿ ಶ್ರೀಧರ ಮುಂತಾದವರ ಕೃತಿಗಳು ತೊಂಬತ್ತರ ಉತ್ತರಾರ್ಧದಿಂದ ತೆರೆಗೆ ಬರುತ್ತಿವೆ.

ಸೈಡ್ ರೀಲ್

– ಪುರಾಣ, ಇತಿಹಾಸ, ನಾಟಕ, ಜಾನಪದ ಕತೆಗಳನ್ನೇ ಆಧರಿಸಿ ಆರಂಭಕಾಲದಲ್ಲಿ ಚಲನಚಿತ್ರಗಳನ್ನು ತಯಾರಿಸುತ್ತಿದ್ದರೂ, ಪ್ರತಿ ಸಿನಿಮಾ ಕಂಪನಿಯಲ್ಲಿ ಒಂದು ಚಿತ್ರಕತೆ ರಚನೆಯ ತಂಡವೇ ಇರುತ್ತಿತ್ತು. ಜೆಮಿನಿ, ಎ.ವಿ.ಎಂ. ಕಂಪನಿಗಳಲ್ಲಿ ಚಿತ್ರರಚನೆಕಾರರು ಕುಳಿತು ಕತೆಯನ್ನು ಸಿದ್ಧಪಡಿಸಿ ಒಪ್ಪಿತವಾದ ನಂತರ ಸಂಭಾಷಣೆ ರಚಿಸಿ ಕೊಡುವ ಕ್ರಮವಿತ್ತು. ಪದ್ಮಿನಿ ಪಿಕ್ಚರ್ಸ್ ಸಂಸ್ಥೆಯಲ್ಲೂ ಬಿ.ಆರ್. ಪಂತುಲುರವರು ಕಥಾ ವಿಭಾಗವನ್ನಿಟ್ಟುಕೊಂಡಿದ್ದರು. ಜೊತೆಗೆ ಆ ಕಾಲದಲ್ಲಿ ಸಿನಿಮಾಗೆಂದೇ ಕತೆ ರಚಿಸುವ ಪ್ರತ್ಯೇಕ ಕರ್ತೃಗಳೂ ಇದ್ದರು. ತಮಿಳಿನ ಜಿ.ಬಾಲಸುಬ್ರಮಣ್ಯಂ, ಬಾಲಮುರುಗನ್ ಎ.ಕೆ. ವೇಲನ್, ಮುಂತಾದವರು ಬಹುಬೇಡಿಕೆಯ ಕತೆಗಾರರಾಗಿದ್ದರು. ಎಪ್ಪತ್ತರ ದಶಕದ ಆರಂಭದಲ್ಲಿ ಅನೇಕ ಕನ್ನಡ ಚಿತ್ರಗಳಿಗೆ ಅವರ ಕಮ್ಮಟದಿಂದಲೇ ಕತೆಗಳು ತಯಾರಾಗುತ್ತಿದ್ದವು. ’ಮೇಯರ್ ಮುತ್ತಣ್ಣ’, ’ಬಾಳು ಬೆಳಗಿತು’, ’ಕಸ್ತೂರಿ ನಿವಾಸ’ ಮುಂತಾದ ಯಶಸ್ವೀ ಚಿತ್ರಗಳಿಗೆ ಅವರ ಕತೆಯೂ ಕಾರಣ. ಕನ್ನಡ ಚಿತ್ರ ತಯಾರಕರು ಅವರ ಕತೆಗೆ ಮುಗಿಬೀಳುತ್ತಿದ್ದ ಮನೋಧರ್ಮವನ್ನು ಪತ್ರಿಕೆಗಳು ಕಟುಟೀಕೆಗೊಳಪಡಿಸಿದ್ದವು.

– ಎಂಬತ್ತರ ದಶಕದಲ್ಲಿ ಮದರಾಸಿನ ಎಂ.ಡಿ. ಸುಂದರ್ ಬೇಡಿಕೆಯ ಕತೆಗಾರರಾಗಿ ಬಂದರು. ಚಿ. ಉದಯಶಂಕರ್‌ರವರ ಜೊತೆ ಸೇರಿ ಶಂಕರ್-ಸುಂದರ್ ಜೋಡಿ ಹೆಸರಿನಲ್ಲಿ ಅವರು ಅನೇಕ ಕತೆಗಳನ್ನು ಹೊಸೆದರು. ಹಿಂದಿ ಭಾಷೆಯ ಸಲೀಂ-ಜಾವೇದ್ ಜೋಡಿ ‘ಶೋಲೆ’, ‘ದೀವಾರ್’ಗಳ ನಂತರ ಅಪಾರ ಬೇಡಿಕೆಯ ಕತೆಗಾರ ಜೋಡಿಯಾಗಿತ್ತು. ಅನಂತರ ಜೋಡಿ ಒಡೆಯಿತು. ಇಬ್ಬರೂ ಪ್ರತ್ಯೇಕ ಹಾದಿ ಹಿಡಿದರು. ಈ ಜೋಡಿ ಒಡೆಯುವ ಮುನ್ನ ಅಬ್ಬಾಯಿ ನಾಯಿಡುರವರು ದೊಡ್ಡ ಮೊತ್ತ ತೆತ್ತು ‘ರಾಜಾ ನನ್ನ ರಾಜಾ’ ಚಿತ್ರಕ್ಕೆ ಕತೆಯನ್ನು ಬರೆಸಿ ತಂದಿದ್ದರು. ಅದಕ್ಕೂ ಮುನ್ನ ವಿ. ಸೋಮಶೇಖರ್‌ರವರ ಚೊಚ್ಚಲ ನಿರ್ದೇಶನದ ‘ಪ್ರೇಮದ ಕಾಣಿಕೆ’ ಚಿತ್ರವೂ ಸಲೀಂ-ಜಾವೇದ್ ಜೋಡಿ ನೀಡಿದ ಕತೆಯನ್ನೆ ಆಧರಿಸಿತ್ತು. ಆದರೆ ಆ ಚಿತ್ರವು ೧೯೭೨ರಲ್ಲಿ ಬಿಡುಗಡೆಯಾಗಿದ್ದ ತಮಿಳು ಚಿತ್ರ ‘ಜಸ್ಟೀಸ್ ವಿಶ್ವನಾದನ್’ನ ಕತೆಯನ್ನೆ ಹೋಲುತ್ತಿತ್ತು. ಈಗ ಕತೆಗಳಿಗಾಗಿ ತಮಿಳು, ತೆಲುಗು ಕಡೆಗೆ ಹೋಗುವವರು ಕಡಿಮೆ. ಅಲ್ಲಿನ ಚಿತ್ರಗಳನ್ನೇ ಯಥಾವತ್ತಾಗಿ ಭಟ್ಟಿ ಇಳಿಸುವುದರಿಂದ ಕತೆಯ ಬಗ್ಗೆ ತಲೆಕೆಡಿಸಿಕೊಳ್ಳುವವರೇ ಇಲ್ಲದಂತಾಗಿದೆ.

– ನಮ್ಮ ಅನೇಕ ಕಾದಂಬರಿಕಾರರು ಬೇರೊಂದು ಭಾಷೆಯ ಚಿತ್ರದ ಕಥೆಯನ್ನು ಆಧರಿಸಿ ಕೃತಿಕಟ್ಟುವ ’ಸೃಜನಶೀಲ’ ಕ್ರಿಯೆ ಚಿತ್ರರೂಪ ಪಡೆದಾಗಲೇ ಬಯಲಿಗೆ ಬರುತ್ತದೆ. ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ಎಸ್.ವಿ. ರಾಜೇಂದ್ರ ಸಿಂಗ್ ಅವರ ’ಮುಂಗಾರಿನ ಮಿಂಚು’ ಚಿತ್ರವು ಉಷಾ ನವರತ್ನರಾಮ್ ಅವರ ಕತೆಯನ್ನು ಆಧರಿಸಿದೆಯೆಂದು ಚಿತ್ರದ ಶೀರ್ಷಿಕೆಯಲ್ಲಿ ತೋರಿಸಿದೆ. ಆದರೆ ಅದು ಹಾಲಿವುಡ್ ನಟ ಕಿಯಾನೋ ರೀವ್ಸ್ ಮತ್ತು ನಟಿ ಐತನಾ ಸ್ಯಾಂಚಿ ಗಿಯಾನೋ ಜೋಡಿಯ ಆಲ್ಫಾನ್ಸೋ ಆರ್ ನಿರ್ದೇಶನದ ’ಎ ವಾಕ್ ಇನ್ ದಿ ಕ್ಲೌಡ್’ ಚಿತ್ರವನ್ನೇ ಹೋಲುವ ಚಿತ್ರ. ಮೂಲ ಚಿತ್ರದಲ್ಲಿ ಸೇನೆಯಿಂದ ವಾಪಸ್ಸು ಬರುವ ನಾಯಕ ಹೆಂಡತಿಯ ಅಕ್ರಮ ಸಂಬಂಧ ಕಂಡು ಅವಳಿಂದ ಬಿಡುಗಡೆಯಾಗಿ ಚಾಕೊಲೆಟ್ ಮಾರುವ ಏಜೆಂಟಾಗಿ ಬೇರೊಂದು ಊರಿಗೆ ಹೋಗುವ ದಾರಿಯಲ್ಲಿ ಅಸಹಾಯಕ ಹೆಣ್ಣೊಬ್ಬಳಿಗೆ ಗಂಡನಾಗಿ ನಟಿಸಲು ಒಪ್ಪಿಕೊಳ್ಳುತ್ತಾನೆ. ’ಮುಂಗಾರಿನ ಮಿಂಚು’ ಚಿತ್ರದಲ್ಲಿ ನಾಯಕ ಅವಿವಾಹಿತ. ಒಬ್ಬಳ ಜೊತೆಯಲ್ಲಿ ಪ್ರಣಯವಿರುತ್ತದೆ. (ಆಕೆ ಅಪಘಾತದಲ್ಲಿ ನಂತರ ಸಾಯುತ್ತಾಳೆ). ಅದು ಬಿಟ್ಟರೆ ಉಳಿದೆಲ್ಲವೂ ಮೂಲ ಕತೆಯಲ್ಲಿರುವುದೇ ಭಟ್ಟಿಯಿಳಿದಿದೆ. ‘ಎ ವಾಕ್ ಇನ್ ದಿ ಕ್ಲೌಡ್’ನಲ್ಲಿ ನಾಯಕಿಯ ಅಪ್ಪ ಕಡುಕೋಪಿಷ್ಠ. ‘ಮುಂಗಾರಿನ ಮಿಂಚು’ವಿನಲ್ಲಿಯೂ ಅಂಥವನೇ (ಶ್ರೀನಿವಾಸಮೂರ್ತಿ). ಮೂಲ ಚಿತ್ರದ ತಾತ ಕುಡುಕ, ಬದುಕನ್ನು ಹಗುರವಾಗಿ ತೆಗೆದುಕೊಂಡವನು (ಆಂಟನಿ ಕ್ವಿನ್). ನಟ ಲೋಕೇಶ್ ಕನ್ನಡದಲ್ಲಿ ಆ ಪಾತ್ರದ ಪ್ರತಿರೂಪವೇ ಆಗಿದ್ದಾರೆ. ‘… ಕ್ಲೌಡ್’ ಚಿತ್ರದಲ್ಲಿ ದ್ರಾಕ್ಷಿ ತೋಟಕ್ಕೆ ಬೆಂಕಿಬಿದ್ದರೆ ಇಲ್ಲಿ ಅಡಕೆ ತೋಟಕ್ಕೆ ಬೆಂಕಿ ಬೀಳುತ್ತದೆ. ಬೆಂಕಿ ನಂದಿಸಿದ ನಾಯಕನ ಬಗ್ಗೆ ಕೋಪಿಷ್ಠ ಅಪ್ಪನ ಭಾವನೆ ಬದಲಾಗುವುದು ಎರಡೂ ಚಿತ್ರಗಳಲ್ಲಿದೆ.

– ಆದರೆ ಮೂಲ ಇಂಗ್ಲಿಷ್ ಚಿತ್ರವೂ ೧೯೪೨ರಲ್ಲಿ ತಯಾರಾಗಿದ್ದ ‘Quatta passi fra le nuvole’’ (ಮೋಡದಲ್ಲಿ ನಾಲ್ಕು ಹೆಜ್ಜೆಗಳು) ಎಂಬ ಇಟಲಿ ಚಿತ್ರವನ್ನು ಆಧರಿಸಿತ್ತು. ಅದನ್ನು ‘ಎ ವಾಕ್ ಇನ್ ದಿ ಕ್ಲೌಡ್’ ಚಿತ್ರದ ಶೀರ್ಷಿಕೆಯಲ್ಲಿ ಸ್ಮರಿಸಲಾಗಿದೆ. ನಮ್ಮಲ್ಲಿ ಮೂಲವನ್ನು ಸ್ಮರಿಸುವ ಪರಂಪರೆ ಮೊದಲಿನಿಂದಲೂ ಇಲ್ಲ. ಹಾಗಾಗಿ ‘ಮುಂಗಾರಿನ ಮಿಂಚು’ ಸ್ವತಂತ್ರ ಕೃತಿಯಾಗಿಯೇ ಬಿಂಬಿತವಾಗಿದೆ. ರಾಷ್ಟ್ರ ಪ್ರಶಸ್ತಿಯನ್ನೂ ಗಳಿಸಿದೆ.

– ಅದೇ ರೀತಿ ಭಾರ್‍ಗವ ಅವರು ನಿರ್ದೇಶಿಸಿದ ’ಪ್ರೀತಿ ವಾತ್ಸಲ್ಯ’ (೧೯೮೪) ಮಲಯಾಳಂ ಭಾಷೆಯ ’ಮಾರ್ಚುರಿ’ ಚಿತ್ರವನ್ನು ಆಧರಿಸಿತ್ತು. ಆದರೆ ಅದರ ಕತೆ, ಚಿತ್ರಕತೆಯ ಕ್ರೆಡಿಟ್ ಕಾದಂಬರಿಕಾರ ಬಿ.ಎಲ್. ವೇಣು ಅವರ ಖಾತೆಗೆ ಜಮಾ ಆಯಿತು. ಅಷ್ಟೇ ಅಲ್ಲ ಅದು ವೇಣು ಅವರ ಸ್ವಂತ ರಚನೆಯೆಂಬಂತೆ ಧಾರಾವಾಹಿಯಾಗಿ ಪತ್ರಿಕೆಯೊಂದರಲ್ಲಿ ಪ್ರಕಟವೂ ಆಯಿತೆಂಬುದು ನೆನಪು.
*****

Tagged:

Leave a Reply

Your email address will not be published. Required fields are marked *

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....