ಮೋಹಿನಿಯ ಕೈಯೊಳಗಿನ ಮೊಹಪಾತ್ರ-
ಈ ನನ್ನ ಮಗನ ಮೊಗ
ಅಂಗಾಂಗದೊಳಗಿನ ದೇವದೇವತೆಗಳು
ತಣಿದರು-ಇದರೊಳಗಿನ ರಸವ ಸವಿದು.
ನಕ್ಕು ನಕ್ಕು ನಲಿವಾಗ ಬಿಕ್ಕಿ ಬಿಕ್ಕಿ ಅಳುವಾಗ
ಮಿಗುವ ಸೊಲ್ಲು ಒಗುವ ಜೊಲ್ಲು
ವಾತ್ಸಲ್ಯದ ಸೆಲೆಯ ನೆಲೆದೋರಿತು
ನಿದ್ದೆಯೊಳಗಿಂದ ಎಚ್ಚರಿಸಿತ್ತು-
ಬಂಜೆಗೆ ತೊರೆಗರೆಯಿಸಿತ್ತು-ಈ ಮುಖರಸ.
ಮೊಳೆವಲ್ಲ ಮಿಂಚಿನೊಡನೆ
ಚೀರುತೊದಲ ಗುಡುಗಿನೊಡನೆ
ಸೋನೆಗರೆವ ಹಿಗ್ಗಿನ ಮುಖರಸವು,
ಮೆಯ್ಯಹೊಲದಲ್ಲಿ ರಸಪುಲಕದ ಬೆಳೆ ತಂದಿತು.
ಒಕ್ಕಲಿಗನಾದ ಜೀವರಾಯನಿಗೆ ಅದೆ ಹಬ್ಬ!
*****

















