ಒಂದು ಮಾವಿನ ತೋಪು, ಮಾವಿನ ಮರದಲ್ಲಿ ಚೂತ ಚಿಗುರಿನೊಂದಿಗೆ ಅನೇಕ ಕೋಗಿಲೆಗಳು ವಾಸವಾಗಿದ್ದವು. ಒಮ್ಮೆ ತೊಪಿನ ಕೋಗಿಲೆಗಳೆಲ್ಲ ಸೇರಿ ಒಂದು ನಿರ್ಧಾರಕ್ಕೆ ಬಂದವು. ವಸಂತ ಆಗಮನವನ್ನು ಸಾರಿ ನಾವು ಕುಹೂ ಕುಹೂ ಎಂದು ಕೂಗಿ ವಸಂತಮಾಸ ಪೂರ ನಾವು ಹಾಡುತ್ತಿರುತ್ತೇವೆ. ನಮ್ಮ ಕೊರಳು ಒಣಗಿದರು ಯಾರೂ ಕೇಳುವವರಿಲ್ಲ. ನಮ್ಮ ಹಾಡನ್ನು ಕೇಳಿ ಆನಂದಿಸುವವರಾರೂ ನಮ್ಮನ್ನು ಸನ್ಮಾನಿಸಿಲ್ಲ. ಅಲ್ಲದೆ ಒಮ್ಮೊಮ್ಮೆ ಕೋಗಿಲೆ ಕಪ್ಪು ಎಂದು ವಿಮರ್ಶ ಬೇರೆಮಾಡುತ್ತಾರೆ.
ನಮ್ಮ ಸಿರಿ ಕಂಠ ಒಮ್ಮೆ ಹಾಡುವುದಕ್ಕೆ ಮುಷ್ಕರ ಹೂಡಿದರೆ ಆಗ ರಾಜ ವಸಂತನ ಆಗಮನ ತಿಳಿಯದೆ ಈ ಜನಗಳು ಪರಿತಪಿಸುತ್ತಾರೆ. ಆಗ ತಿಳಿಯುತ್ತದೆ ಅವರಿಗೆ ನಮ್ಮ ಬೆಲೆ, ಎಂದು ಕೋಗಿಲೆಗಳೆಲ್ಲವೂ ಮೌನ ತಾಳಿದವು. ಎಂದಿನಂತೆ ಚೈತ್ರ ಮಾಸ ಹುಟ್ಟಿತು. ಚಿಗುರು ಚೂತ, ಹಕ್ಕಿ ಚಿಲಿಪಿಲಿ, ಹೂವಿನ ಪರಿಮಳ ಎಲ್ಲೆಲ್ಲೂ ತುಂಬಿತು. ಆದರೆ ವಸಂತನ ಆಗಮನದ ಕೋಗಿಲೆ ಹಾಡು ಮಾತ್ರ ಯಾರಿಗೂ ಕೇಳಿಸಲಿಲ್ಲ. ಎಲ್ಲರೂ ಪೆಚ್ಚು ಮೋರೆಯೊಡನೆ ಚೈತ್ರ ಕಳೆದು ತಮ್ಮ ಕೆಲಸದಲ್ಲಿ ತೊಡಗಿದರು. ಚೈತ್ರ ವೈಶಾಖ ಮುಗಿದೊಡನೆ ಕೋಗಿಲೆಗಳೆಲ್ಲವೂ ಹಾಡಲು ತೊಡಗಿದವು. ಯಾರೂ ಹಾಡಿಗೆ ಗಮನ ಕೊಡಲಿಲ್ಲ. ವಸಂತ ಮುಗಿದ ಮೇಲೆ ಅದೆಲ್ಲಿಯ ಕೋಗಿಲೆಯ ಹಾಡು? ಎಂದು ನಿರ್ಲಕ್ಷ್ಯ ತೋರಿದರು. ಕೋಗಿಲೆಗಳು ಅಕಾಲದಲ್ಲಿ ಹಾಡಿಹಾಡಿ ಕೊರಲು ಮಾತ್ರ ಒಣಗಿತು.
“ಕೊರಳಲ್ಲಿ ಕಾಲವನ್ನು ಕಟ್ಟಿಹಾಕಲು ಉಂಟೇ? ಕಾಲಕ್ಕೆ ಬೆಲೆ ಕೊರಳಿಗಲ್ಲ” ಎಂದು ಮನಗಂಡವು.
*****

















