ಬತ್ತಿದಾ ಎದೆಯೊಲವ ವಿಷಮ ವಿಷಸಮ ಬಾಳ
ನಾಳಿನಲಿ ಕಣ್ಣಿಟ್ಟು ನೂಕುತಿದ್ದೆ.
ಹಗಲಿರುಳು ಬೆಳೆಯುತಿಹ ಕೆಳೆಯ ಚಿಗುರಾಸೆಯಲಿ
ಬರಿದೆದೆಯ ಶೂಲಗಳ ಮರೆಸುತಿದ್ದೆ.
ಕನಸಿನಲಿ ಕುಣಿಯುತಿಹ ಚಪಲ ಬಂಧುರರೂಪ
ಕಣ್ಣ ಹಿಡಿಕೆಗೆ ಆಂದು ನಿಲುಕದಾಯ್ತು
ವನದಿ ಮನೆ ಮಾಡಿಯೂ ಮೈಯ ಬಯಕೆಗೆ ಬರದೆ
ಬರಿಯ ಊಹೆಯ ವಿರಲ ಲಹರಿಯಾಯ್ತು
ಸ್ವಪ್ನ ಮನದಿ ಸತ್ಯ ಜನಿಸಿತೇನು?
ಮನದ ಮಮತೆಯ ಮೂರ್ತಿ, ನಲ್ಲೆ, ನೀನು
ಎನ್ನೊಳಗೆ ನೀ, ಗೆಳತಿ, ಬೆರೆತೆ ಇಂದು
ಹಾಳೆದೆಗೆ ಮಂಗಲದ ಬೆಳೆಯ ತಂದು.
*****



















