Home / ಲೇಖನ / ಚಲನಚಿತ್ರ / ಕನ್ನಡದ ಜನನಾಯಕ

ಕನ್ನಡದ ಜನನಾಯಕ

ಅಧ್ಯಾಯ ಹತ್ತು
ವಿಷಯಕ್ಕೆ ನೇರವಾಗಿ ಬರುವ ಮುನ್ನ ಕೆಲವು ಉಪಕತೆಗಳನ್ನು ನಿರೂಪಿಸಿಬಿಡುತ್ತೇನೆ.

ಕನಕಪುರಕ್ಕೆ ಹತ್ತಿರದಲ್ಲೊಂದು ಹಳ್ಳಿ. ಅಲ್ಲೊಬ್ಬ ಇಪ್ಪತ್ತರ ಹರೆಯದ ತರುಣ. ಹೆಸರು ರಾಮ. ಊರಿನವರ ದೃಷ್ಟಿಯಲ್ಲಿ ದಡ್ಡ. ಅದಕ್ಕೆ ‘ಯಾಡ್ರಾಮ’ ಎಂಬ ಉಪನಾಮ. ರಾಮನಿಗಿದ್ದದ್ದು ಎರಡೇ ಗೀಳು. ಒಂದು ರುಚಿಗೆ ಮತ್ತ್ತೊಂದು ಅಭಿರುಚಿಗೆ ಸಂಬಂಧಪಟ್ಟ ಗೀಳುಗಳು. ಬೋಂಡಾ ತಿನ್ನುವುದು ರುಚಿಗೆ ಸಂಬಂಧಿಸಿದ ಗೀಳಾದರೆ, ಅಭಿರುಚಿಗೆ ಸಂಬಂಧಪಟ್ಟದ್ದು ರಾಜ್‌ಕುಮಾರ್ ಚಿತ್ರಗಳ ವೀಕ್ಷಣೆ. ರಾಮ ಇದ್ದದ್ದು ಸೋದರಮಾವನ ಆಶ್ರಯದಲ್ಲಿ. ತನ್ನ ಸೋದರಳಿಯ ವಿದ್ಯಾವಂತನಾಗಲಿ ಎಂಬ ಹಂಬಲದಿಂದ ಮಾವ ಕನಕಪುರದ ದೇಗುಲಮಠಕ್ಕೆ ಹೈಸ್ಕೂಲು ವಿದ್ಯಾಭ್ಯಾಸಕ್ಕೆ ಸೇರಿಸಿದ್ದರು. ಮಠದ ಸರಳ ಊಟ ನಾಲಗೆಗೆ ರುಚಿ ಕಾಣಲಿಲ್ಲ. ದಡ್ಡತನದಿಂದ ತಲೆಗೆ ಓದು ಹತ್ತಲಿಲ್ಲ. ಬೋಂಡಾ ಮತ್ತು ಸಿನಿಮಾ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ನೋಟುಬುಕ್ಕುಗಳನ್ನು ತೂಕಕ್ಕೆ ಹಾಕಿ ಬೋಂಡಾ ತಿಂದ. ಮಾವ ಕೊಡಿಸಿದ್ದ ಭಾರದ್ವಾಜ ನಿಘಂಟನ್ನು ಗೆಳೆಯರಿಗೆ ಮಾರಿ ಕದ್ದು ‘ವೀರ ಕೇಸರಿ’ ಸಿನಿಮಾ ನೋಡಿದ. ಬೇರೆ ವಿದ್ಯಾರ್ಥಿಗಳ ಪುಸ್ತಕಗಳನ್ನು ಕದ್ದು ಸಿಕ್ಕಿಕೊಂಡಾಗ ಓದಿಗೆ ತಿಲಾಂಜಲಿ ಇಟ್ಟ. ಮಾವ ತೋಟಕಾಯಲು ಹಾಕಿದ. ಆ ವೇಳೆಗೆ ರುಚಿ-ಅಭಿರುಚಿಗಳ ದಾಸನಾಗಿದ್ದ ಯಾಡ್ರಾಮ, ಕನಕಪುರಕ್ಕೆ ರಾಜ್‌ಕುಮಾರ್ ಸಿನಿಮಾ ಬಂದಿದೆ ಎಂದು ತಿಳಿದ ಕೂಡಲೇ ತಮ್ಮ ತೋಟದಲ್ಲೇ ತೆಂಗಿನಕಾಯಿ ‘ಕದ್ದು’ ರಾತ್ರಿ ವೇಳೆ ಕಳ್ಳಮಾಲು ಕೊಳ್ಳುವ ‘ನಂಬಿಕಸ್ಥರಿಗೆ’ ಮಾರಿ ಬಂದ ಹಣದಿಂದ ಬೋಂಡಾ, ಸಿನಿಮಾ ಯಜ್ಞ ಮುಂದುವರಿಸುತ್ತಿದ್ದ. ಕನಕಪುರದಲ್ಲಿ ರಾಜ್‌ಕುಮಾರ್ ಸಿನಿಮಾ ತೆರೆಕಾಣುವುದಕ್ಕೂ, ತೋಟದಲ್ಲಾಗುವ ಕಳ್ಳತನಕ್ಕೂ ಸಂಬಂಧ ಕಂಡು ಹಿಡಿಯಲು ಚಾಣಾಕ್ಷ ಮಾವನಿಗೆ ಹೆಚ್ಚು ಸಮಯ ಬೇಕಾಗಿರಲಿಲ್ಲ. ಸಿನಿಮಾ ನೋಡಿದ ಮಾರನೆಯ ದಿನ ಅವನನ್ನು ಹಿಡಿದು ಮರಕ್ಕೆ ಕಟ್ಟಿ ಬಡಿಯುತ್ತಿದ್ದ. ತೆಂಗಿನಕಾಯಿ ಮೇಲೆ ಕೈಯಿಟ್ಟು ಮತ್ತೊಮ್ಮೆ ಕದಿಯದಿರಲು ಆಣೆ ಮಾಡಿಸುತ್ತಿದ್ದ. ಆದರೆ ರಾಜ್‌ಕುಮಾರ್ ಸಿನಿಮಾ ಬರುವುದು ತಪ್ಪಲಿಲ್ಲ. ‘ತೆರೆದ ರಹಸ್ಯ’ದಂತಿದ್ದ ಕಳ್ಳತನ ನಿಲ್ಲಲಿಲ್ಲ. ಆ ತೋಟದ ಮರಗಳಿಗೆ ಬಾಯಿ ಬರುವಂತಿದ್ದರೆ ರಾಜ್‌ಕುಮಾರರ ಯಾವ ಸಿನಿಮಾ ನೋಡಲು ತಮ್ಮನ್ನು ಏರಿ ರಾಮ ಕಾಯಿ ಕದ್ದ ಎಂಬ ಕತೆಯನ್ನು ಹೇಳುತ್ತಿದ್ದವೇನೋ! ಈಗ ಮೂರು ಮಕ್ಕಳ ತಂದೆಯಾಗಿ ಒಂದು ಮೊಮ್ಮಗುವಿಗೆ ತಾತನಾಗಿರುವ ‘ಯಾಡ್ರಾಮಣ್ಣ’ ಉದಯ ಮೂವೀಸ್ ಚಾನಲ್‌ನಲ್ಲಿ ಹಳೆಯ ರಾಜ್‌ಕುಮಾರ್ ಚಿತ್ರ ಬಂತೆಂದರೆ ಬೆಳಗಿನ ಕೆಲಸಕ್ಕೆ ಎಳ್ಳುನೀರು ಬಿಟ್ಟು ದೃಶ್ಯಪೆಟ್ಟಿಗೆಯ ಮುಂದೆ ಕೂರುತ್ತಾನೆ!

ಇದು ಮತ್ತೊಂದು ಅಂಥದೇ ಹಳ್ಳಿ. ಹೆಸರು ಚಿಕ್ಕೀರಮ್ಮ. ಎಪ್ಪತ್ತರ ದಶಕದಲ್ಲಿ ಆಕೆಗೆ ಆಗಲೇ ಇಬ್ಬರು ಸೊಸೆಯಂದಿರು. ಗುರುವಾರ ಸಂತೆಗೆ ಹೋಗುವ ಚಿಕ್ಕೀರಮ್ಮನಿಗೆ ಪಟ್ಟಣದ ಟೆಂಟಿನಲ್ಲಿ ರಾಜ್‌ಕುಮಾರ್ ಸಿನಿಮಾ ಪ್ರದರ್ಶನಕ್ಕೆ ಬಂದಿದ್ದರೆ ಎಂಥದೋ ತಳಮಳ. ಎರಡು ಗಂಟೆಗೆಲ್ಲ ಬೆಣ್ಣೆ ಮಾರಿ ಬಂದ ಹಣದಲ್ಲಿ ಸಾಮಾನು ಕೊಂಡು ಗೂಡೆಯನ್ನಿಟ್ಟುಕೊಂಡೇ ಮ್ಯಾಟ್ನಿಗೆ ಹಾಜರಾಗುತ್ತಿದ್ದಳು. ಹೊಸದಾಗಿ ಮದುವೆಯಾದ ಸೊಸೆಯಂದಿರಿಗೂ ಸಿನಿಮಾ ಹುಚ್ಚು. ಗಂಡಂದಿರನ್ನು ಕಾಡಿಬೇಡಿ ಎರಡನೇ ಷೋಗೆ ಹೊರಡಿಸುತ್ತಿದ್ದರು. ಬೆಳಗ್ಗೆ ಸೊಸೆಯಂದಿರು ಏಳುವುದು ತಡವಾದರೆ ಚಿಕ್ಕೀರಮ್ಮನ ಭರ್ತ್ಸನೆ ಅಕ್ಕಪಕ್ಕದ ಮನೆಯವರಿಗೆ ಕೇಳುತ್ತಿತ್ತು. ‘ಗೊಂತಲ್ಲಿರೋ ಎಮ್ಮೆ ಕಟ್ಟಿಹಾಕಿ, ಕಸ ಯಾರ್…? ಯಾರು…? ಇವರಪ್ಪನ ಮನೆ ಆಳು ಬಂದು ಗುಡಿಸ್ತಾನಾ? ಆ ರಾಜ್‌ಕುಮಾರ್ ಏನಾದ್ರು ಬಂದ್ ಕರುದ್ರೆ ಅವನ ಹಿಂದೆ ಹೋಗೋಕ್ಯೂ ಹೇಸೋರಲ್ಲ ಈ ಕಳ್ಳ ಮುಂಡೇರು. ಅದೇನ್ ಕಂಡಿದ್ದಾರೋ ಅವನತ್ರ, ನಾ ಬೇರೆ ಕಾಣೆ’ ಎಂದು ಪುಂಖಾನುಪುಂಖವಾಗಿ ಸೊಸೆಯಂದಿರನ್ನು ತರಾಟೆ ತೆಗೆದುಕೊಳ್ಳುತ್ತಿದ್ದಳು. ಅದೇನು ಸೊಸೆಯರನ್ನು ನಿಂದಿಸುತ್ತಿದ್ದ ಪರಿಯೋ? ಅವಳ ಅಂತರಂಗದ ಅಭೀಪ್ಸೆಯೋ? ತನ್ನನ್ನೆ ತಾನು ವಿಶ್ಲೇಷಿಸಿಕೊಳ್ಳುತ್ತಿದ್ದ ರೀತಿಯೋ? ಅರ್ಥವಾಗುತ್ತಿರಲಿಲ್ಲ.

ಮತ್ತೊಂದು ಪ್ರಸಂಗ ಹೀಗಿದೆ. ತರೀಕೆರೆಗೆ ಸುಮಾರು ಹದಿನಾಲ್ಕು ಕಿಲೋಮೀಟರ್ ದೂರದಲ್ಲೊಂದು ಲಂಬಾಣಿ ತಾಂಡ. ಆ ಊರಿನ ಯುವಕ ರಾಮಾ ನಾಯಕ್. ತರೀಕೆರೆ ಟೆಂಟಿನಲ್ಲಿ ರಾಜ್‌ಕುಮಾರ್ ಸಿನಿಮಾ ಪ್ರದರ್ಶನ ಕಾಣುತ್ತಿದೆ ಎಂಬ ವಿಷಯ ತಿಳಿದ ತಕ್ಷಣ ಜೊತೆಯ ಹುಡುಗರನ್ನು ಸೇರಿಸಿಕೊಂಡು ಎರಡನೇ ಷೋಗೆ ರೆಡಿಯಾಗುತ್ತಿದ್ದ. ಕಾಳುಕಡಿ, ಮಾಗಿ ಒಣಗಿರುವ ರಾಗಿ ತೆನೆಗಳನ್ನು ಮುಸ್ಸಂಜೆಯ ಬೆಳಕಿನಲ್ಲಿ ಕತ್ತರಿಸಿ, ಅರೆಕಲ್ಲಿನ ಮೇಲೆ ಚಚ್ಚಿ ರಾಗಿ ಮಾಡಿ ತನ್ನ ತಾಯಿಗೇ ಮಾರಿ ಹಣ ಕೂಡಿಸಿಕೊಳ್ಳುತ್ತಿದ್ದ. ಹದಿನಾಲ್ಕು ಕಿ.ಮೀ. ದೂರ ಗೆಳೆಯರೊಡನೆ ನಡೆದು ಎರಡನೇ ಷೋ ನೋಡಿದ ನಂತರ ತಾವು ಹಿಂದಿರುಗಬೇಕಾದ ಹಾದಿಯ ದುರ್ಗಮ ಸ್ವರೂಪ ನೆನಪಾಗುತ್ತಿತ್ತು. ಮಲೆನಾಡಿನ ಅಂಚಿನ ಆ ದಾರಿಯಲ್ಲಿ ಎದುರಾಗಬಹುದಾದ ಹಂದಿ, ಹಾವು, ಚಿರತೆಗಳನ್ನು ನೆನೆದು ತರೀಕೆರೆಯ ಅಂಗಡಿ ಸಾಲಲ್ಲಿ ಎಲ್ಲೋ ಒಂದು ಕಡೆ ಮಲಗಿ ಮುಂಜಾನೆ ಎದ್ದು ಊರಿಗೆ ಹೊರಡುತ್ತಿದ್ದರು. ತಮ್ಮ ಮಕ್ಕಳ ಸಾಹಸವನ್ನು ಸರಿಯಾಗಿ ಊಹಿಸಿದ್ದ ಇತರ ಹುಡುಗರ ತಾಯಂದಿರು ಊರ ಬಾಗಿಲಲ್ಲೇ ಮಂಗಳಾರತಿ ಎತ್ತಿ ಒಳ ಬಿಡುತ್ತಿದ್ದರು. ತಾನೂ ಹಾಳಾಗುವುದಲ್ಲದೆ ತಮ್ಮ ಮಕ್ಕಳನ್ನು ಹಾಳುಗೆಡುವುತ್ತಿದ್ದಾನೆಂದು ರಾಮಾ ನಾಯಕ್ ಮನೆಯವರ ಹತ್ತಿರ ದೂರು ಹೇಳುತ್ತಿದ್ದರು. ಸ್ವಾಭಿಮಾನಿಯಾದ ತಂದೆಯಿಂದ ರಾಮಾ ನಾಯಕ್‌ಗೆ ಕಪಾಳಮೋಕ್ಷ. ಇನ್ನು ಮುಂದೆ ಹೀಗೆ ಮಾಡಬಾರದೆಂದು ಭಯಂಕರ ಪ್ರತಿಜ್ಞೆ ಮಾಡುತ್ತಿದ್ದ ನಾಯಕ್ ಮತ್ತೊಂದು ರಾಜ್ ಚಿತ್ರ ಬಿಡುಗಡೆಯಾಯಿತೆಂದರೆ ಹಳೆಯ ನೋವೆಲ್ಲ ಮರೆತು ಹೊಸ ಸಾಹಸಕ್ಕೆ ಸಿದ್ಧವಾಗುತ್ತಿದ್ದರು. ರಾಜ್ ಚಿತ್ರಗಳ ಮೋಹಕ್ಕೆ ಬಿದ್ದ ಆತ ಉದ್ಧಾರವಾಗುವ ಕೇಸಲ್ಲ ಎಂಬುದು ಊರವರ ನಂಬಿಕೆ. ಆದರೆ ಈಗ ಆತ ಕರ್ನಾಟಕ ಸರ್ಕಾರದಲ್ಲಿ ಅಧಿಕಾರಿ!
***

ಕೆಮ್ಮಣ್ಣುಗುಂಡಿಯಲ್ಲಿ ಯಾವುದೋ ಒಂದು ಚಿತ್ರದ ಚಿತ್ರೀಕರಣ (ಬಹುಶಃ ‘ಪ್ರೇಮದ ಕಾಣಿಕೆ’ ಇರಬೇಕು). ರಾಜ್ ಅವರನ್ನು ನೋಡಲು ಜನ ತಂಡೋಪತಂಡವಾಗಿ ಬಂದಿದ್ದರು. ಅವರಲ್ಲಿ ಇತ್ತೀಚೆಗೆ ಮದುವೆಯಾದ ಒಂದು ಜೋಡಿ. ಚಿತ್ರೀಕರಣದ ವಿರಾಮದ ವೇಳೆಯಲ್ಲಿ ಆ ಜೋಡಿಯ ಗಂಡ ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್‌ರವರ ಬಳಿ ಒಂದು ಬೇಡಿಕೆಯಿಟ್ಟ. ‘ಅಮ್ಮಾವ್ರೆ, ನನ್ನ ಮದುವೆ ಇತ್ತೀಚೆಗೆ ತಾನೇ ಆಗಿದೆ. ನನ್ನ ಹೆಂಡತಿಗೆ ನಿನ್ನ ಬದುಕಿನಲ್ಲಿ ದೊಡ್ಡ ಆಸೆ ಏನು ಎಂದು ಕೇಳಿದೆ. ಪೂರೈಸುವುದಾದರೆ ಹೇಳುತ್ತೀನಿ ಅಂತಾ ಪ್ರಾಮಿಸ್ ತೆಗೆದುಕೊಂಡಳು. ಆಕೆಗೆ ಒಮ್ಮೆ ರಾಜ್‌ಕುಮಾರ್‌ರವರನ್ನು ಆಲಂಗಿಸಿಕೊಳ್ಳಬೇಕಂತೆ. ದಯಮಾಡಿ ಅವಕಾಶ ಮಾಡಿಕೊಡಿ’. ಇದು ಸ್ವತಃ ಶ್ರೀಮತಿ ಪಾರ್ವತಮ್ಮ ರಾಜ್‌ಕುಮಾರ್‌ರವರು ನೀಡಿದ ಉದಾಹರಣೆ.
***

ಆಗ ತಾನೆ ‘ಶಂಕರ್ ಗುರು’ ಚಿತ್ರ ಬಿಡುಗಡೆಯಾಗಿತ್ತು. ನಮ್ಮ ಗೆಳೆಯ ಚಂದ್ರೇಗೌಡನಿಗೂ ಮದುವೆಯಾಗಿತ್ತು. ‘ಫಸ್ಟ್ ನೈಟ್ ಹೇಗಿತ್ತು?’ ಎಂದು ಕಿಚಾಯಿಸಿದಾಗ ಆತ ಖಿನ್ನನಾದ. ನಮ್ಮ ಗೆಳೆಯ, ಸಹಪಾಟಿ ಚಂದ್ರ ಸ್ವಲ್ಪ ಐಲು. ವಿಚಿತ್ರಸಾಹಸಗಳಿಗೆ ಎತ್ತಿದ ಕೈ. ರಾಜ್ ಅಂದ್ರೆ ಪ್ರಾಣ. ಯಾಕೆಂದರೆ ತಾನು ಹುಟ್ಟಿದ ಊರಿನ ಅಳಿಯ ರಾಜ್ ಎಂದು ಅಪಾರ ಹೆಮ್ಮೆ. ಏನು ಅನಾಹುತ ಮಾಡಿಕೊಂಡನೋ ಎಂಬ ಆತಂಕ. ನಡೆದ ವಿಷಯ ಇಷ್ಟೆ. ಶೋಬನದ ರಾತ್ರಿ ಐಲು ಜಾಗೃತವಾಗಿತ್ತು. ಅಂದು ಸಜ್ಜೆ ಮನೆಗೆ ಹೆಂಡತಿ ಪ್ರವೇಶಿಸಿದ ತಕ್ಷಣ ಈತ ಮಂಚದ ಪಕ್ಕದಲ್ಲಿ ಹಣ್ಣು ತುಂಬಿದ ತಟ್ಟೆಯನ್ನು ಎತ್ತಿ ಜಾಡಿಸಿದನಂತೆ. ಹಣ್ಣೆಲ್ಲ ರೂಮಿನ ತುಂಬಾ ಹರಡಿದವು. ಹೆಂಡತಿಗೆ ಗಾಬರಿ. ತಕ್ಷಣವೇ ತಟ್ಟೆಯನ್ನು ಗುರಾಣಿಯಂತೆ ಹಿಡಿದು ‘ಶಂಕರ್‌ಗುರುನಲ್ಲಿ ಪದ್ಮಪ್ರಿಯ ಹಣ್ಣು ಹೊಡೀತಾಳಲ್ಲ, ಹಾಗೆ ಎಸಿ. ಶಂಕರ್‌ಗುರು ಆಟ ಆಡೋಣ’ ಎಂದನಂತೆ. ತನ್ನ ಗಂಡನ ತಿಕ್ಕಲು ಸಾಹಸಗಳು ಸ್ವಲ್ಪ ತಿಳಿದಿತ್ತೋ ಏನೋ? ಹುಚ್ಚು ಹಿಡಿದಿದೆ ಎಂದು ತಿಳಿದು ಆಕೆ ರಾತ್ರಿಪೂರ್ತಿ ಅತ್ತಳಂತೆ. ಗೆಳೆಯನಿಗೆ ತನಗಿರುವ ರಾಜ್‌ಕುಮಾರ್ ಹುಚ್ಚನ್ನು ಹೆಂಡತಿಗೆ ಮನವರಿಕೆ ಮಾಡಿಕೊಡುವಲ್ಲಿ ಸುಸ್ತಾಗಿದ್ದ!
ಇವು ಮುತ್ತುರಾಜ ಎಂಬ ಅಪ್ಪಟ ಹಳ್ಳಿಮೂಲದ ಮನುಷ್ಯ ರಾಜ್‌ಕುಮಾರ್ ಎಂಬ ಹಲಬಗೆಯ ವೇಷತೊಟ್ಟು ಕನ್ನಡ ಜನಮಾನಸವನ್ನು ಆಕರ್ಷಿಸಿದ ರೀತಿಗೆ, ಪ್ರಭಾವಿಸಿದ ಪರಿಗೆ ಕೆಲವು ಉದಾಹರಣೆಗಳು. ಸ್ಪಷ್ಟವಾಗಿ ಹೇಳಬೇಕೆಂದರೆ ಸ್ವಾತಂತ್ರ್ಯಾನಂತರ, ವಿಶೇಷವಾಗಿ ಕನ್ನಡದ ಏಕೀಕರಣದ ನಂತರ ಐದು ದಶಕಗಳ ಕಾಲ ಕನ್ನಡಿಗರ ಭಾವಕೋಶದಲ್ಲಿ ಡಾ.ರಾಜ್‌ಕುಮಾರ್ ಬೆಳೆದು ನೆಲೆಯಾದ ಬಗೆಗಿನ ಕೆಲವು ಪ್ರಾತಿನಿಧಿಕ ದೃಷ್ಟಾಂತಗಳು.

ಬಹುವೇಷಧಾರಿ ರಾಜ್‌ಕುಮಾರ್ ಎಂಬ ಕಿಂದರಿಜೋಗಿಯ ಮೋಡಿಗೆ ಸಿಲುಕಿದ ಈ ಮನಸ್ಸುಗಳು ಹಳ್ಳಿ-ನಗರಗಳಲ್ಲಿವೆ. ಜಾತಿಮತದ ಹಂಗನ್ನು ತೊರೆದಿವೆ. ಲಿಂಗಭೇದವನ್ನು ದಾಟಿವೆ. ವಯೋಮಾನದ ತರತಮವನ್ನು ಮೀರಿವೆ. ಕನ್ನಡ ಭಾಷೆಯ ಸಮಾನ ಅಂಶವೊಂದನ್ನು ಬಿಟ್ಟರೆ ಭಿನ್ನ ಭೌಗೋಳಿಕ ಪ್ರದೇಶ, ಹಲಬಗೆಯ ಹಿನ್ನೆಲೆಗಳ ಎಲ್ಲರನ್ನೂ ರಾಜ್ ತಲುಪಿದ್ದಾರೆ. ಅವರ ಬದುಕನ್ನು ತಟ್ಟುತ್ತಾ, ಅವರ ಅಂತರಂಗವನ್ನು ಪುಲಕಗೊಳಿಸುತ್ತಾ ಅನುಭವಗಳನ್ನು ವಿಸ್ತರಿಸಿದ್ದಾರೆ. ಜನರ ಜೀವನೋತ್ಸಾಹವನ್ನು ಬತ್ತದ ಸೆಲೆಯನ್ನಾಗಿಸಿದ್ದಾರೆ.

ಅಷ್ಟೇ ಅಲ್ಲ, ರಾಜ್‌ಕುಮಾರ್ ಅವರ ಬದುಕು ತಮ್ಮದೇ ಆಗಿದೆ, ಆಗಬೇಕು ಎಂದು ಜನಸಮುದಾಯ ಭ್ರಮಿಸಿತ್ತು. ಅವರ ಸಾಧನೆ, ಸಿದ್ಧಿಗಳು ತಮ್ಮವೇ ಎಂಬಷ್ಟು ಮಟ್ಟಿಗೆ ಪುಳಕಗೊಂಡು ವರ್ತಿಸಿತ್ತು. ಅಷ್ಟೇ ಏಕೆ ಅವರ ನಿಧನಾನಂತರ ಅವರ ಪಾರ್ಥೀವ ಶರೀರ ತಮ್ಮದು, ಅವರ ಅಂತ್ಯಸಂಸ್ಕಾರವೂ ಕನ್ನಡ ಜನತೆಗೇ ಸೇರಿದ್ದು ಎಂಬ ಮಟ್ಟಕ್ಕೆ ಅತಿರೇಕ ಪ್ರದರ್ಶಿಸಿತು.

ರಾಜ್‌ಕುಮಾರ್ ಅವರು ಕನ್ನಡ ಜನಮಾನಸದ ಮೇಲೆ ಬೀರಿದ ಈ ಪರಿಯ ಪ್ರಭಾವದ ಹಿಂದಿನ ಗುಟ್ಟೇನು? ಐದು ದಶಕಗಳ ಕಾಲ ಹೊಟ್ಟೆಪಾಡಿಗಾಗಿ ಜನರಂಜನೆಯನ್ನೆ ವೃತ್ತಿ ಬದುಕಾಗಿ ಸ್ವೀಕರಿಸಿದ ಅವರ ನಟನೆಯೇ? ತೆರೆಯಿಂದಾಚೆಗಿನ ವ್ಯಕ್ತಿತ್ವವೇ? ಅಥವಾ ಇನ್ನೇನು? ಅವರು ನಿಸ್ಸಂದೇಹವಾಗಿ ಕನ್ನಡಿಗರ ಜನನಾಯಕ ಎಂಬುದನ್ನು ತಡವಾಗಿಯಾದರೂ ಈಗ ಎಲ್ಲರೂ ಒಪ್ಪುವ ಸ್ಥಿತಿಗೆ ತಲುಪಿದ್ದಾರೆ. ಆದರೆ ರಾಜ್‌ಕುಮಾರ್ ಜನನಾಯಕರಾಗಲು ಇದ್ದ ಹಿನ್ನೆಲೆಯೇನು?

ಈ ಮಾತಿಗೆ ರಾಜ್‌ಕುಮಾರ್‌ರವರಿಗೆ ಪದ್ಮಭೂಷಣ ಪ್ರಶಸ್ತಿ ದೊರಕಿದ ಸಮಯದಲ್ಲಿ ಪ್ರಸಿದ್ಧ ಭಾಷಾತಜ್ಞ ಮತ್ತು ವಿಮರ್ಶಕ ಡಾ. ಕೆ.ವಿ.ನಾರಾಯಣ ಅವರು ರಾಜ್‌ರವರನ್ನು ಕುರಿತು ಬರೆದ ಲೇಖನ ನೆನಪಾಗುತ್ತದೆ. ಯಾರು ಒಪ್ಪಲಿ, ಬಿಡಲಿ ಸಮುದಾಯಗಳಿಗೆ ನಾಯಕರು ಬೇಕು… ಆದರೆ ಈ ನಾಯಕರು ಹೇಗೆ ರೂಪುಗೊಳ್ಳುತ್ತಾರೆ ಅಥವಾ ಸಮುದಾಯ ನಾಯಕನನ್ನು ಹೇಗೆ ಗುರುತಿಸಿಕೊಳ್ಳುತ್ತದೆ ಎಂಬುದು ಸರಳ ವ್ಯಾಖ್ಯೆಗೆ, ಸುಲಭ ಗ್ರಹಿಕೆಗೆ ನಿಲುಕುವಂಥದ್ದಲ್ಲ… ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಭುತ್ವ ತನ್ನ ನಾಯಕನನ್ನು ಚುನಾವಣೆ ಮೂಲಕ ಆರಿಸಿಕೊಳ್ಳುತ್ತದೆ. ಈ ನಾಯಕರಲ್ಲಿ ಅಧಿಕಾರ ಕೇಂದ್ರೀಕರಣಗೊಳ್ಳುವುದನ್ನು ತಡೆಯಲೋ ಎಂಬಂತೆ ಅಧಿಕಾರ ಕೇಂದ್ರದಿಂದ ದೂರವಾದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಮೂಹ ತನ್ನದೇ ಆದ ರೀತಿಯಲ್ಲಿ ನಾಯಕನನ್ನು ಗುರುತಿಸಿ ಅಪ್ಪಿಕೊಳ್ಳುತ್ತದೆ… (ಹಾಗಾಗಿ) ಸಾಹಿತ್ಯ, ಕಲೆ, ಕ್ರೀಡೆ, ಸಂಸ್ಕೃತಿಯ ಇತರ ಕ್ಷೇತ್ರಗಳಲ್ಲಿ ನಾಯಕರು ಮೈದಳೆಯುವಂತೆ ಮಾಡುತ್ತದೆ” ಎಂದು ರಾಜ್‌ರವರು ಜನನಾಯಕರಾದ ವಿಧಾನವನ್ನು ಗುರುತಿಸಿದ್ದರು.

ಈ ವ್ಯಾಖ್ಯಾನವನ್ನು ರಾಜ್‌ರವರ ವೈಯಕ್ತಿಕ ಮತ್ತು ವೃತ್ತಿ ಬದುಕಿನ ಹಿನ್ನೆಲೆಯಲ್ಲಿ ನೋಡಿದಾಗ ಸರ್ವಸಮ್ಮತವೆಂಬಂತೆ ಕಾಣುತ್ತದೆ. ಸಾಮಾಜಿಕ ವ್ಯವಸ್ಥೆಯೊಂದನ್ನು ರಚಿಸಿಕೊಳ್ಳುವ ಎಲ್ಲ ಸಮುದಾಯಗಳು ತಮ್ಮ ವ್ಯವಸ್ಥೆಯ ನಿಯಂತ್ರಣಕ್ಕೆ ನಾಯಕನನ್ನು ಆರಿಸಿಕೊಳ್ಳುತ್ತವೆ. ಮನುಷ್ಯ ಸಮಾಜದ ಘಟಕಗಳಾದ ಕುಟುಂಬ, ರಾಜ್ಯವ್ಯವಸ್ಥೆ ಸಹ ನಾಯಕನನ್ನು ಅವಲಂಬಿಸಿರುತ್ತದೆ. ವಿಚಿತ್ರವೆಂದರೆ ಆ ನಾಯಕನ ಹುಟ್ಟಿನಲ್ಲಿಯೇ ಅದನ್ನು ವಿರೋಧಿಸುವ ಎದುರಾಳಿ ಇಲ್ಲವೇ ಪ್ರತಿನಾಯಕನ ಸೃಷ್ಟಿಯೂ ಇರುತ್ತದೆ. ಪ್ರಜಾತಂತ್ರ ವ್ಯವಸ್ಥೆ ನಿಂತಿರುವುದೇ ಆಡಳಿತ-ವಿರೋಧ ಪಕ್ಷಗಳ ನೆಲೆಯಲ್ಲಿ. ಹಾಗೆ ಒಂದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಮುದಾಯ ತನ್ನ ಆಶೋತ್ತರಗಳಿಗೆ ಮಿಡಿವ ಪ್ರತಿನಿಧಿಯನ್ನು ಸೀಮಿತ ಅವಧಿಗೆ ಆಯ್ದು ಕಳುಹಿಸಿಕೊಡುತ್ತದೆ. ಸೀಮಿತ ಅವಧಿಯಾದರೂ, ಜನಬೆಂಬಲ, ಅಧಿಕಾರ ಮತ್ತು ಪ್ರಭುತ್ವ ನೀಡುವ ಅಪಾರ ಶಕ್ತಿಯಿಂದ ಈ ನಾಯಕರ ನಿಯಂತ್ರಣ ಕಷ್ಟ ಸಾಧ್ಯ. ಅಂತಹ ನಿರಂಕುಶ ಅಧಿಕಾರ ಕೇಂದ್ರವನ್ನು ತಡೆಯಲು ಜನಸಮೂಹ ತನ್ನದೇ ಸಾಂಸ್ಕೃತಿಕ ನಾಯಕನನ್ನು ಆರಿಸಿಕೊಳ್ಳುವ ಅನಿವಾರ್ಯ ಸಹಜ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದು ಸ್ವಾಭಾವಿಕ ಕ್ರಿಯೆ. ಜೊತೆಗೆ ಅದು ಸಮುದಾಯದ ಮಾನಸಿಕ ಅಭೀಪ್ಸೆಗೆ ಮೂರ್ತ ರೂಪಕೊಡುವ ಕ್ರಿಯೆಯೂ ಆಗಿರುತ್ತದೆ. ಹೀಗೆ ಪಕ್ಷ ಪ್ರಣಾಳಿಕೆ ಜಾತಿ-ಮತಗಳನ್ನು ಮೀರಿದ ಸಮುದಾಯದ ಅಂತರಂಗದ ಅಭೀಪ್ಸೆಯ ನಾಯಕರನ್ನು ಜನಸಮೂಹ ಅಪ್ರಜ್ಞಾಪೂರ್ವಕವಾಗಿ ಆರಿಸಿಕೊಳ್ಳುತ್ತದೆ. ಜೊತೆಗೆ ಅದು ಇತಿಹಾಸದ ತುರ್ತು ಸಹ ಆಗಿರುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಚುನಾವಣೆಯ ನಾಯಕರ ಆಯುಷ್ಯ ತೀರಾ ಅಲ್ಪವಾದರೆ, ಸಾಂಸ್ಕೃತಿಕ ನಾಯಕರು ನಿತ್ಯಸಚಿವರಾಗಿ ಕಂಗೊಳಿಸುತ್ತಾರೆ. ಅಧಿಕಾರ ಕೇಂದ್ರದಿಂದ ಹೊರಗುಳಿದರೂ ಈ ನಾಯಕರು ಹಲವು ವಿಧಗಳಲ್ಲಿ ಜನಮಾನಸವನ್ನು ಪ್ರಭಾವಿಸುವ ಅತುಳ ಸಾಮರ್ಥ್ಯ ಹೊಂದಿರುತ್ತಾರೆ. ಕುವೆಂಪು, ಕಾರಂತ, ಬೇಂದ್ರೆ, ಗಂಗೂಬಾಯಿ, ಮಲ್ಲಿಕಾರ್ಜುನ ಮನ್ಸೂರ್ ಮುಂತಾದವರು ‘ನಿತ್ಯ ಸಚಿವ’ ಮಂಡಲದ ಕೆಲವು ಉದಾಹರಣೆಗಳು.

ಕನ್ನಡಿಗರ ಜನನಾಯಕ ರಾಜ್‌ಕುಮಾರ್ ಅವರು ಹೇಗೆ ಚಾರಿತ್ರಿಕ ಒತ್ತಡಗಳಿಂದ ಸಮುದಾಯದ ನಾಯಕರಾದರು ಎಂಬ ವಿಶ್ಲೇಷಣೆ ಬಹಳ ಕುತೂಹಲಕಾರಿಯಾದದ್ದು. ಏಕೆಂದರೆ ರಾಜ್‌ಕುಮಾರ್ ಅವರು ಚಿತ್ರರಂಗಕ್ಕೆ ಕಾಲಿರಿಸಿದ ವೇಳೆಯಲ್ಲೇ ದಕ್ಷಿಣ ಭಾರತದ- ತೆಲುಗು ಮತ್ತು ತಮಿಳು- ಚಿತ್ರರಂಗದಲ್ಲಿ ಅದಾಗಲೇ ಸೂಪರ್‌ಸ್ಟಾರ್‌ಗಳು ವಿಜೃಂಭಿಸುತ್ತಿದ್ದರು. ಅಲ್ಲಿನ ಮಾರುಕಟ್ಟೆಯೂ ವಿಸ್ತಾರವಾದುದಾಗಿತ್ತು. ಚಿತ್ರೋದ್ಯಮವೂ ಬೇರೂರಿತ್ತು. ಕನ್ನಡಕ್ಕೆ ಅಂಥ ಅವಕಾಶವಿದ್ದಿರಲಿಲ್ಲ. ಕನ್ನಡ ಪ್ರೇಕ್ಷಕ ವರ್ಗವೂ ತಮಿಳು, ತೆಲುಗು ಚಿತ್ರಗಳ ಜೊತೆಯಲ್ಲೇ ಬೆಳೆದವರು. ಇಂಥ ಸನ್ನಿವೇಶದಲ್ಲಿ ರಾಜ್‌ಕುಮಾರ್ ಅವರು ೧೯೫೪ರಲ್ಲಿ ‘ಬೇಡರ ಕಣ್ಣಪ್ಪ’ ಮೂಲಕ ನಾಯಕನಾಗಿ ತೆರೆಗೆ ಬಂದರು.

ಹೆಚ್ಚು ಕಡಿಮೆ ಕರ್ನಾಟಕ ಏಕೀಕರಣ ಚಳುವಳಿ ಕಾವೇರಿದ್ದಾಗಲೇ ಡಾ. ರಾಜ್ ಚಲನಚಿತ್ರರಂಗ ಪ್ರವೇಶಿಸಿದ್ದೂ ಒಂದು ವಿಶಿಷ್ಟ ಚಾರಿತ್ರಿಕ ಘಟನೆ. ಹರಿದು ಹಂಚಿಹೋಗಿದ್ದ ನಾಡನ್ನು ಒಂದುಗೂಡಿಸಬೇಕೆಂಬ ಏಕೀಕರಣದ ಕನಸನ್ನು ಬಿತ್ತಿದವರೂ ಸಾಂಸ್ಕೃತಿಕ ನಾಯಕರೇ. ಆದರೆ ಕನ್ನಡ ಜನಸಮೂಹವನ್ನು ಏಕಕಾಲಕ್ಕೆ ತಲುಪಬಲ್ಲ ಅಪೂರ್ವ ಸಂವಹನ ಮಾಧ್ಯಮವಾದ ಸಿನಿಮಾ ಸಹ ಕನ್ನಡಿಗರನ್ನು ಒಂದು ಬಗೆಯಲ್ಲಿ ಒಗ್ಗೂಡಿಸಿತು ಎಂದರೆ ತಪ್ಪಾಗಲಾರದು. ಅಲ್ಲದೆ ಸಂತರ ಪರಂಪರೆಯನ್ನು ಪೋಷಿಸಿದ ಕರ್ನಾಟಕದಲ್ಲಿ ಮೊದಲ ಬಾರಿಗೆ ಬೇಡರ ಕಣ್ಣಪ್ಪನ ತಾಜಾ ಅಭಿನಯವನ್ನು ಕಂಡ ಕನ್ನಡ ಜನಮಾನಸ ಅಪ್ರಜ್ಞಾಪೂರ್ವಕವಾಗಿ ರಾಜ್ ಅವರನ್ನು ನಾಯಕನನ್ನಾಗಿ ಆರಿಸಿಕೊಂಡಿತ್ತು ಎಂಬುದಕ್ಕೆ ಮುಂದೆ ಹಲವಾರು ದೃಷ್ಟಾಂತಗಳು ಸಿಗುತ್ತವೆ. ರಾಜ್ ಅವರು ಕನ್ನಡ ಜನಮಾನಸದ ಪ್ರಾತಿನಿಧಿಕ ಮೂರ್ತರೂಪವಾಗಿದ್ದರು. ಸದೃಢವಾದ ಶರೀರ, ಸುಂದರವಾದ ಮುಖ, ಕನ್ನಡಭಾಷೆಯ ಮೇಲಿನ ಅಪೂರ್ವ ಹಿಡಿತ, ತೆರೆಯಾಚೆಗಿನ ಸೌಜನ್ಯಪೂರ್ಣ ವರ್ತನೆಯಲ್ಲಿ ಕನ್ನಡ ಜನತೆ ತನ್ನ ನಾಯಕನನ್ನು ಕಂಡುಕೊಂಡಿತು. ಅವರು ಕನ್ನಡದ ಪೌರಾಣಿಕ ಮತ್ತು ಚಾರಿತ್ರಿಕ ಚಿತ್ರಗಳ ಪಾತ್ರಗಳಲ್ಲಿ ರಾಜ್ ಅವರನ್ನೇ ಕಾಣುತ್ತಾಹೋದರು.

ಈ ಪ್ರಭಾವ ಎಷ್ಟರಮಟ್ಟಿಗಿದೆಯೆಂದರೆ, ಈಗಲೂ ಕೃಷ್ಣದೇವರಾಯ, ಕನಕದಾಸ, ಸಂಗೊಳ್ಳಿ ರಾಯಣ್ಣ, ಮಂತ್ರಾಲಯದ ರಾಘವೇಂದ್ರ ಸ್ವಾಮಿ, ಕೆಂಪೇಗೌಡ, ಕಂಠೀರವ, ಪುರಂದರದಾಸರಂಥ ಚಾರಿತ್ರಿಕ ವ್ಯಕ್ತಿಗಳ ಚಿತ್ರಗಳನ್ನು ಬರೆಯುವ ಕಲಾವಿದರು ರಾಜ್ ಅವರನ್ನೇ ಅಪ್ರಜ್ಞಾಪೂರ್ವಕವಾಗಿ ರೂಪದರ್ಶಿಯನ್ನಾಗಿ ಮಾಡಿಕೊಂಡಿದ್ದಾರೆನಿಸುತ್ತದೆ.

ಎರಡನೆಯ ಚಾರಿತ್ರಿಕ ಒತ್ತಡ ಸೃಷ್ಟಿಯಾದದ್ದು ೧೯೬೧ರಲ್ಲಿ. ವಿಶಾಲ ಕರ್ನಾಟಕ ಭೀಕರ ಪ್ರವಾಹಕ್ಕೆ ತುತ್ತಾಗಿದ್ದ ಕಾಲ. ನೆರೆ ಸಂತ್ರಸ್ತರ ಬದುಕು ಮೂರಾಬಟ್ಟೆಯಾಗಿತ್ತು. ಅಂತಹ ಜನರ ನೆರವಿಗೆ ಕನ್ನಡ ಚಿತ್ರೋದ್ಯಮವೇ ಧಾವಿಸಿತು. ನಾಡಿನಾದ್ಯಂತ ರಸಮಂಜರಿ ಕಾರ್ಯಕ್ರಮ ನೀಡಿ ಹಣ ಸಂಗ್ರಹಿಸಿತು. ಕಲಾವಿದರು ಬೀದಿಬೀದಿಯಲ್ಲಿ ಓಡಾಡಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿದರು. ಗುಬ್ಬಿ ವೀರಣ್ಣನವರಿಂದ ಹಿಡಿದು ರಾಜ್, ಉದಯ್, ಕಲ್ಯಾಣ್, ಪಂತುಲು, ಪಂಡರೀಬಾಯಿ, ಹರಿಣಿ, ಸಂಧ್ಯಾ, ಲೀಲಾವತಿ- ಹೀಗೆ ಇಡೀ ಚಿತ್ರ ಕಲಾವಿದರೆಲ್ಲರೂ ಈ ಕಾರ್ಯದಲ್ಲಿ ತೊಡಗಿಸಿಕೊಂಡರು. ಕಲಾವಿದರ ಬಗ್ಗೆ ಜನರಲ್ಲಿ ವಿಚಿತ್ರವಾದ ವಿಶ್ವಾಸ, ಪ್ರೀತಿ, ಒಲವು ಬೆಳೆಯಿತು. ಪರಿಣಾಮ, ಕನ್ನಡ ಚಿತ್ರಗಳಿಗೆ ಪ್ರೇಕ್ಷಕರ ಸಂಖ್ಯೆ ಹೆಚ್ಚಾಯಿತು. ಚಿತ್ರೋದ್ಯಮದ ಚಟುವಟಿಕೆಗಳೂ ಹೆಚ್ಚಾದವು. ಆದರೆ ಈ ಹೆಚ್ಚಿದ ಚಟುವಟಿಕೆಗಳನ್ನು ವಿಶ್ಲೇಷಿಸಿದರೆ, ಜನ ರಾಜ್‌ರವರನ್ನು ಹೆಚ್ಚು ಅಂಗೀಕರಿಸಿದ್ದು ಹಾಗೂ ತಮ್ಮ ಸಾಂಸ್ಕೃತಿಕ ನಾಯಕನೆಂದು ಗುರುತಿಸಿಕೊಂಡಿದ್ದು ಸ್ಪಷ್ಟವಾಗಿತ್ತು. ಏಕೆಂದರೆ ೧೯೬೧ರ ಅಂತ್ಯದವರೆಗೆ ತೆರೆಕಂಡ ಕನ್ನಡ ಚಿತ್ರಗಳ ಒಟ್ಟು ಸಂಖ್ಯೆ ೧೧೩ ಮಾತ್ರ. ಅದರ ಮುಂದಿನ ಹತ್ತು ವರ್ಷಗಳಲ್ಲಿ ಆ ಸಂಖ್ಯೆ ೩೭೦ಕ್ಕೇರಿತು. ೧೯೬೧ರ ಅಂತ್ಯಕ್ಕೆ ರಾಜ್‌ರವರು ಏಳು ವರ್ಷಗಳಲ್ಲಿ ಹದಿನೇಳು ಚಿತ್ರಗಳಲ್ಲಿ ಮಾತ್ರ ಅಭಿನಯಿಸಿದ್ದರು. ಮುಂದಿನ ಹತ್ತು ವರ್ಷಗಳಲ್ಲಿ ನೂರ ಇಪ್ಪತ್ತೊಂದು ಚಿತ್ರಗಳಲ್ಲಿ ಅಭಿನಯಿಸಿದ್ದರು. ೧೯೬೧ರಿಂದ ೧೯೭೦ರ ಅವಧಿಯಲ್ಲಿ ಬಿಡುಗಡೆಯಾದ ಪ್ರತಿ ಎರಡು ಚಿತ್ರಗಳಲ್ಲಿ ಒಂದು ರಾಜ್ ಅಭಿನಯದ ಚಿತ್ರವೇ ಆಗಿತ್ತು. ೧೯೬೮ರಲ್ಲಿ ಒಂದೇ ವರ್ಷದಲ್ಲಿ ರಾಜ್ ನಾಯಕರಾಗಿದ್ದ ಹದಿನಾರು ಚಿತ್ರಗಳು ತೆರೆಕಂಡಿದ್ದವು. ಈ ಅವಧಿಯಲ್ಲಿ ಎಲ್ಲಾ ಬಗೆಯ ಪಾತ್ರಗಳಲ್ಲೂ ಅಭಿನಯಿಸಿದ್ದ ರಾಜ್ ಕನ್ನಡಿಗರ ಮನಸ್ಸಿನಲ್ಲಿ ಭದ್ರ ಸೌಧವನ್ನು ಕಟ್ಟಿಬಿಟ್ಟಿದ್ದರು. ಈ ಹಿನ್ನೆಲೆಯಲ್ಲಿ ನೋಡಿದಾಗ ಜನತೆ ರಾಜ್‌ರವರನ್ನು ತಮ್ಮ ಸಾಂಸ್ಕೃತಿಕ ನಾಯಕ ಎಂದು ಅಂಗೀಕರಿಸಿದ್ದು ಕಂಡುಬರುತ್ತದೆ. ಅದೇ ರೀತಿ ರಾಜ್‌ರವರು ಚಿತ್ರರಂಗಕ್ಕೆ ಒಂದು ಒಳಬಲವನ್ನೂ ನೀಡಿ ಮಾರುಕಟ್ಟೆಯನ್ನು ವಿಸ್ತರಿಸಿದ್ದು ಇದೇ ಅವಧಿಯಲ್ಲಿ.

ಮೂರನೆಯ ಸನ್ನಿವೇಶ ಸೃಷ್ಟಿಯಾದದ್ದು ೧೯೮೨ರ ಗೋಕಾಕ್ ಚಳುವಳಿಯಲ್ಲಿ. ಶಿಕ್ಷಣದಲ್ಲಿ ಪ್ರೌಢಶಾಲಾ ವ್ಯಾಸಂಗದವರೆಗೆ ಕನ್ನಡವೇ ಪ್ರಥಮ ಭಾಷೆಯಾಗಿರಬೇಕೆಂದು ಪ್ರೊ: ವಿ.ಕೆ. ಗೋಕಾಕ್ ಅವರ ನೇತೃತ್ವದಲ್ಲಿ ರಚಿತವಾದ ಸಮಿತಿಯು ನೀಡಿದ ವರದಿಯನ್ನು ಜಾರಿಗೊಳಿಸಬೇಕೆಂದು ಆರಂಭವಾದ ಚಳುವಳಿ ಕರ್ನಾಟಕಕ್ಕೆ ವಿಸ್ತರಿಸಿದ್ದು ರಾಜ್‌ರವರು ಹೋರಾಟದ ಕಣಕ್ಕೆ ಧುಮುಕಿದ ನಂತರ. ಅಲ್ಲಿಯವರೆಗೂ ಮಧ್ಯಮ ವರ್ಗದ ಅಷ್ಟೇನೂ ‘ಸುಶಿಕ್ಷಿತ’ ವರ್ಗಕ್ಕೆ ಸೇರದ ಜನ ಸಮುದಾಯಕ್ಕೆ ಮಾತ್ರ ಸೀಮಿತವಾಗಿದ್ದ ರಾಜ್ ವ್ಯಕ್ತಿತ್ವ ಕನ್ನಡದ ಬುದ್ಧಿಜೀವಿ ವರ್ಗಕ್ಕೂ ಪರಿಚಯವಾಗಿದ್ದು ಈ ಅವಧಿಯಲ್ಲಿ. ಅದುವರೆಗೂ ಕುರುಡಾಗಿದ್ದ ಈ ಸುಶಿಕ್ಷಿತ ವರ್ಗ ರಾಜ್ ಜನಪ್ರಿಯತೆಯನ್ನು ಕಂಡು ದಂಗುಬಡಿದು ಹೋಯಿತು. ಜೊತೆಗೆ ರಾಜ್‌ರವರ ಜನಪ್ರಿಯತೆಯೂ ನವೀಕರಣಗೊಂಡ ಕಾಲಘಟ್ಟವದು. ಗೋಕಾಕ್ ಚಳವಳಿ ಮುಗಿದ ನಂತರ ಊಟಿಯಲ್ಲಿ ನಡೆಯುತ್ತಿದ್ದ ಚಿತ್ರೀಕರಣದಲ್ಲಿ ರಾಜ್‌ರವರ ಮೇಲೆ ಕೆಲವು ಕಿಡಿಗೇಡಿಗಳಿಂದ ಹಲ್ಲೆಯಾಯಿತು. ಅದನ್ನು ಕನ್ನಡದ ಬಗ್ಗೆ ರಾಜ್‌ರವರು ತೋರಿದ ಕಡುನಿಷ್ಠೆಯ ವಿರುದ್ಧದ ಪ್ರತಿಕ್ರಿಯೆ ಎಂದು ಕನ್ನಡ ಜನತೆ ಭಾವಿಸಿತು. ಇದೇ ಘಟನೆ ರಾಜ್‌ರವರು ಮದರಾಸನ್ನು
ವೈವಿಧ್ಯಮಯ ಪಾತ್ರಗಳಲ್ಲಿ- ಗೋವಾದಲ್ಲಿ ಸಿ‌ಐಡಿ ೯೯೯ (ಪತ್ತೇದಾರಿ ಪ್ರಕಾಶ್), ಸತಿಶಕ್ತಿ (ರಕ್ತಾಕ್ಷ), ಸನಾದಿ ಅಪ್ಪಣ್ಣ (ಅಪ್ಪಣ್ಣ) ತೊರೆದು ಕನ್ನಡ ನಾಡಿನಲ್ಲೇ ಪೂರ್ಣ ಪ್ರಮಾಣದಲ್ಲಿ ನೆಲೆಯಾಗಲು ಕಾರಣವಾಯಿತು.

ಈ ಚಾರಿತ್ರಿಕ ಒತ್ತಡಗಳಲ್ಲದೆ, ಡಾ.ರಾಜ್ ವಹಿಸಿದ ಸಾಮಾಜಿಕ ಪಾತ್ರಗಳ ಪ್ರಭಾವವೂ ಅವರು ಸಮುದಾಯದ ನಾಯಕನಾಗಲು ಕಾರಣವಾಗಿರುವುದನ್ನು ತಳ್ಳಿ ಹಾಕುವಂತಿಲ್ಲ. ಮತ್ತೆ ಡಾ.ಕೆ.ವಿ.ನಾರಾಯಣ ಅವರ ಮಾತಿನಲ್ಲಿ ಹೇಳುವುದಾದರೆ, “ಕರ್ನಾಟಕ ಸಮಾಜದಲ್ಲಿ ನಡೆದ ಸಂಚಲನೆಗಳ ಫಲಿತಗಳನ್ನು ರಾಜ್‌ಕುಮಾರ್ ನಟಿಸುತ್ತಾ ಬಂದಿರುವ ನಾಯಕ ಪಾತ್ರಗಳು ಒಂದಲ್ಲ ಒಂದು ಬಗೆಯಲ್ಲಿ ಪ್ರತಿಬಿಂಬಿಸುತ್ತಾ ಬಂದಿವೆ”. ಅವರು ನಟಿಸಿದ ಪಾತ್ರಗಳು ಕರುನಾಡ ಸಮಾಜದ ಕನ್ನಡಿಗನ ವಿವಿಧ ಪ್ರತಿರೂಪಗಳಾಗಿರುವುದು ಕಾಕತಾಳೀಯವಾಗಿರಬಹುದು. ಆದರೆ ಸಮುದಾಯ ಅರ್ಥೈಸಿಕೊಂಡ ಜನಪ್ರಿಯ ಬಿಂಬವೊಂದನ್ನು ರಾಜ್ ಅಭಿವ್ಯಕ್ತಿಸಿದ್ದು ಅವರನ್ನು ನಾಯಕರನ್ನಾಗಿ ಅಂಗೀಕರಿಸಲು ಕಾರಣವಾಯಿತು ಎಂಬುದು ಸ್ಪಷ್ಟವಾಗಿದೆ. ಅವರು ಪಾತ್ರಗಳಲ್ಲಿ ತೋರುವ ಅಥವಾ ಬಿಂಬಿಸುವ ವಿಶಿಷ್ಟ ಮಾದರಿಗಳನ್ನು ನೋಡಿ! ತಾಯಿಯನ್ನು ಆರಾಧಿಸುವ ವಾತ್ಸಲ್ಯಮಯಿ ಮಗ, ಸ್ತ್ರೀ ಸಮುದಾಯ ಇಷ್ಟಪಡುವ ಪ್ರೀತಿಯ ಗಂಡ, ಜನಸಮುದಾಯ ಮೆಚ್ಚುವ ಸಾಹಸ, ತ್ಯಾಗ, ನಿಷ್ಠೆಯ ನಾಯಕ, ‘ದೇವರು ಕೊಟ್ಟ ತಂಗಿ’ಯ ಒಲವಿನ ಅಣ್ಣ, ‘ಸಂಪತ್ತಿಗೆ ಸವಾಲ್’ನಂಥ ತುಂಟತನ ಮತ್ತು ನಿಷ್ಠೆಯ ಮೈದುನ, ಜೊತೆಗೆ ಕಾಲ-ದೇಶ ಬದ್ಧವಲ್ಲದ ಸಾರ್ವತ್ರಿಕ ಮೌಲ್ಯಗಳ ಪ್ರತಿರೂಪಗಳಲ್ಲಿ ಅವರು ಹತ್ತು ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದು, ಅವರು ಕನ್ನಡ ಭಾವಕೋಶದಲ್ಲಿ ಪ್ರವೇಶಿಸುವುದಕ್ಕೆ ಸಾಧ್ಯವಾಯಿತು. ಆ ಪಾತ್ರಗಳ ಪ್ರಭಾವ ಎಷ್ಟರ ಮಟ್ಟಿಗಿದೆಯೆಂದರೆ ‘ಬಂಗಾರದ ಮನುಷ್ಯ’ ನೋಡಿದ ಅನೇಕ ನತದೃಷ್ಟ ಸೋದರಿಯರು ತಮ್ಮ ಸೋದರರಲ್ಲಿ ರಾಜೀವನನ್ನು ಕಾಣಲು ಯತ್ನಿಸಿದ್ದಾರೆ. ‘ನಮ್ಮ ಸಂಸಾರ’, ‘ಚಂದವಳ್ಳಿಯ ತೋಟ’ ನೋಡಿದ ಹಲವಾರು ಜನರು ಕುಟುಂಬದ ವಿಘಟನೆಯನ್ನು ತಡೆದಿದ್ದಾರೆ. ‘ಕರುಳಿನ ಕರೆ’ ಚಿತ್ರ ನೋಡಿ ತಾನೂ ಕಾರ್ಮಿಕ ನಾಯಕನಾಗಬೇಕೆಂದು ಹಂಬಲಿಸಿ ಸೋತ ವ್ಯಕ್ತಿಗಳಿದ್ದಾರೆ. ‘ಜೀವನ ಚೈತ್ರ’ ಚಿತ್ರ ಹಲವಾರು ಹೆಂಡದಂಗಡಿಗಳಿಗೆ ಬೀಗಮುದ್ರೆ ಹಾಕಿಸಿದೆ. ‘ಭಕ್ತ ಕುಂಬಾರ’ ನೋಡಿ ಬಂದ ಅನೇಕರು ಫಂಡರಾಪುರಕ್ಕೆ ಹೋಗಿ ಬಂದಿದ್ದಾರೆ. ರಾಜ್‌ರವರು ‘ಮಂತ್ರಾಲಯ ಮಹಾತ್ಮೆ’ಯಲ್ಲಿ ಅಭಿನಯಿಸಿದ ನಂತರ ಹಾಗೂ ಅವರಿಗೆ ರಾಘವೇಂದ್ರಸ್ವಾಮಿ ಬಗ್ಗೆ ಇರುವ ಅಚಲ ಭಕ್ತಿ ಪ್ರಕಟವಾದ ನಂತರ ಅನೇಕ ಶೂದ್ರರು ಮಂತ್ರಾಲಯದ ಭಕ್ತರಾಗಿದ್ದಾರೆ. ಗುರುವಾರ ಮಾಂಸದೂಟವನ್ನು ವರ್ಜ್ಯ ಮಾಡಿದ್ದಾರೆ.

ಇವೆಲ್ಲ ವ್ಯಕ್ತ ರೂಪಗಳು. ಅವ್ಯಕ್ತ ಭಾವಕೋಶದಲ್ಲಿ ರಾಜ್‌ರವರನ್ನು ಮುಂದಿಟ್ಟುಕೊಂಡು ಸಂತನಾಗಲು, ದುಷ್ಟಶಿಕ್ಷೆಗೆ ಶಿಷ್ಟರಕ್ಷಣೆಗೆ ಮುಂದಾಗಲು ಬಯಸಿದ್ದ ಕೋಟಿಕೋಟಿ ಹೃದಯಗಳಿದ್ದವು. ಈ ಹಿನ್ನೆಲೆಗಳೆಲ್ಲವನ್ನೂ ಕಂಡಾಗ ರಾಜ್‌ಕುಮಾರ್ ಏಕೆ ಸಮುದಾಯದ ನಾಯಕರಾದರು ಎಂಬುದು ಅರ್ಥವಾಗುತ್ತದೆ.

ರಾಜ್‌ರವರು ಚಾರಿತ್ರಿಕ ಒತ್ತಡಗಳಿಂದ, ಸಮುದಾಯದ ಅಭೀಪ್ಸೆಯಿಂದ ನಾಯಕರಾದರು, ಕನ್ನಡ ಚಿತ್ರರಂಗಕ್ಕೆ ಒಳಬಲವಾದರು ಎಂದ ಮಾತ್ರಕ್ಕೆ ಅವರು ಅಪ್ರತಿಮ ಕಲಾವಿದರಲ್ಲ ಎಂದು ಅರ್ಥವಲ್ಲ. ಅವರೊಬ್ಬ ಅಭಿಜಾತ ಕಲಾವಿದರಷ್ಟೇ ಅಲ್ಲ, ಅಧ್ಯಯನಯೋಗ್ಯ ಕಲಾವಿದರು ಸಹ.

ಆರಂಭದಲ್ಲಿ ಭಕ್ತಿ, ಪೌರಾಣಿಕ ಪಾತ್ರಗಳಲ್ಲಿ ತಲ್ಲೀನರಾಗಿ ಅಭಿನಯಿಸುತ್ತಿದ್ದ ರಾಜ್ ಕ್ರಮೇಣ ಆ ಎರಕದಿಂದ ಹೊರಬಂದರು. ಎಲ್ಲ ಬಗೆಯ ವಸ್ತು-ವೈವಿಧ್ಯ ಪಾತ್ರಗಳಲ್ಲಿ ಅಭಿನಯಿಸಿದರು. ಕಾಲಾನಂತರದಲ್ಲಿ ಆದರೆ ಬಹುಬೇಗ ಅವರು ಅಭಿನಯದಲ್ಲಿ ಶೈಲಿಯೊಂದನ್ನು ರೂಢಿಸಿಕೊಂಡದ್ದು ಚಲನಚಿತ್ರಗಳ ಯಾವುದೇ ಗಂಭೀರ ವಿದ್ಯಾರ್ಥಿಗೆ ಸ್ಪಷ್ಟವಾಗಿ ಎದ್ದು ಕಾಣುತ್ತದೆ. ಅದು ಅವರದೇ ಆದ ಒರಿಜಿನಲ್ ಶೈಲಿ. ಏಕೆಂದರೆ ಅವರು ಜನಪ್ರಿಯತೆಯ ಮೆಟ್ಟಿಲನ್ನು ಏರುವಾಗ ಅಭಿನಯಕ್ಕೆ ಆದರ್ಶವೆಂಬಂತೆ ಶಿವಾಜಿ ಗಣೇಶನ್‌ರವರನ್ನು ಬಿಂಬಿಸಲಾಗುತ್ತಿತ್ತು. ಪೌರಾಣಿಕ ಪಾತ್ರಗಳಲ್ಲಿ ಎನ್‌ಟಿ‌ಆರ್‌ರವರನ್ನು ಮೀರಿಸುವ ಕಲಾವಿದರಿಲ್ಲ ಎಂಬ ಭಾವನೆ ಗಟ್ಟಿಯಾಗಿತ್ತು. ದಕ್ಷಿಣ ಭಾರತದ ಎಲ್ಲ ನಟರ ಮೇಲೂ ಒಂದಲ್ಲ ಒಂದು ರೀತಿಯಲ್ಲಿ ಶಿವಾಜಿಯವರ ಪ್ರಭಾವವಿರುವುದನ್ನು ಕಾಣಬಹುದು. ಪುಟಗಟ್ಟಲೇ ಸಂಭಾಷಣೆ, ಮುಖಸ್ನಾಯುಗಳ ವಿಲಕ್ಷಣ ಚಲನೆ, ಧ್ವನಿಯ ಅಪಾರ ಏರಿಳಿತ, ಅತಿರೇಕವೆನ್ನಬಹುದಾದ ಭಾವಾಭಿವ್ಯಕ್ತಿ ಇತ್ಯಾದಿ ಲಕ್ಷಣಗಳು ಶಿವಾಜಿಯವರ ಅಭಿನಯದ ವಿಶಿಷ್ಟತೆ. ಇತರ ಭಾಷೆಯ ನಟರೂ ಅವರ ಅನುಕರಣೆಯಲ್ಲಿ ಸ್ಪರ್ಧೆ ಹೂಡಿದ್ದರು. ಆ ಸಮಯದಲ್ಲಿ ರಾಜ್ ಅಂಥ ಶೈಲಿಯಿಂದ ವಿಮುಖರಾದರು. ಪಾತ್ರಗಳನ್ನು uಟಿಜeಡಿಠಿಟಚಿಥಿ ಮಾಡುವ ಸಿನಿಮಾ ವ್ಯಾಕರಣ ಅಪ್ರಜ್ಞಾಪೂರ್ವಕವಾಗಿ ಅವರಿಗೆ ಸಿದ್ಧಿಸಿತ್ತು. ಹಾಗಾಗಿ ಕನ್ನಡದ ಪರಿಸರಕ್ಕೆ ಸೂಕ್ತವಾದ, ಕನ್ನಡಿಗರಿಗೇ ಸಹಜವಾದ ಒಂದು ವಿಶಿಷ್ಟವಾದ ಅಭಿನಯ ಶೈಲಿಯನ್ನು ಅವರು ರೂಢಿಗೆ ತಂದರು. ಶಿವಾಜಿಗಣೇಶನ್ ಅವರ ಅಭಿನಯದ ‘ಪಾಸಮಲರ್’ ಚಿತ್ರವನ್ನು ಕನ್ನಡಕ್ಕೆ ‘ವಾತ್ಸಲ್ಯ’ ಹೆಸರಿನಲ್ಲಿ ರೀಮೇಕ್ ಮಾಡಲಾಯಿತು. ಒರಿಜಿನಲ್ ಚಿತ್ರದ ಶಿವಾಜಿಯವರ ಅಭಿನಯವನ್ನು ರಾಜ್‌ರವರೊಡನೆ ಹೋಲಿಸಿ ನೋಡಿದಾಗ ಈ ಶೈಲಿ ಅರ್ಥವಾಗುತ್ತದೆ. ಜೊತೆಗೆ ಡಾ. ಕೆ.ವಿ.ನಾರಾಯಣ ಅವರು ಅಭಿಪ್ರಾಯಪಡುವಂತೆ “ಕನ್ನಡದ ಪ್ರಮಾಣೀಕೃತ ಉಚ್ಚಾರಣೆಗೆ ಒಂದು ಮಾದರಿ ಎಂಬಂತೆ ಅವರ ವಾಚಿಕಾಭಿನಯ ಬೆಳೆದು ಬಂದಿದೆ”. ಜೊತೆಗೆ ರಾಜ್‌ರವರು ವಹಿಸುತ್ತಿದ್ದ ಪಾತ್ರಗಳಲ್ಲಿ ನಿರ್ಜೀವ ವಸ್ತುಗಳಿಗೆ, ಪರಿಸರಕ್ಕೆ ಒಂದು ಜೀವಂತಿಕೆ ಮೈದುಂಬುತ್ತಿತ್ತು. ಅವರು ತೊಡುವ ವಸ್ತ್ರ, ಹಿಡಿವ ವಸ್ತುಗಳು ಪಾತ್ರದ ಅವಿಭಾಜ್ಯ ಅಂಗಗಳಾಗಿರುತ್ತಿದ್ದವು. ಅವರು ಸನಾದಿಯನ್ನು ನುಡಿಸಲಿ, ವೀಣೆ, ಕೊಳಲು ಯಾವುದನ್ನೇ ನುಡಿಸಲಿ, ಸಹಜವಾಗಿ ಅವರೇ ನುಡಿಸುತ್ತಿರಬಹುದೆನ್ನುವ ರೀತಿಯಲ್ಲಿ ಅಭಿನಯ ಗರಿಗಟ್ಟಿಕೊಳ್ಳುತ್ತಿತ್ತು. ನೇಗಿಲು ಹಿಡಿಯಲಿ, ಚಪ್ಪಲಿ ಹೊಲಿಯಲಿ, ಆ ಕಸುಬಿನಲ್ಲಿ ನಿಷ್ಣಾತರೆನಿಸುವಷ್ಟು ಸಹಜತೆ ಕಾಣುತ್ತಿತ್ತು. ನಡುವಿಗೆ ಟವೆಲ್ ಕಟ್ಟಲಿ, ಬಾರುಕೋಲು ಹಿಡಿಯಲಿ ಪಾತ್ರದೊಡನೆ ಅವು ಲೀನವಾಗುತ್ತಿದ್ದ ಪರಿ ನೋಡಿಯೇ ಆನಂದಿಸಬೇಕು.

ಆದರೂ ಒಬ್ಬ ನಟ ಅಷ್ಟೊಂದು ದೀರ್ಘಕಾಲ ತನ್ನ ಜನಪ್ರಿಯತೆಯನ್ನು ಉಳಿಸಿಕೊಳ್ಳಲು ಸೂಕ್ತ ಸನ್ನಿವೇಶಗಳನ್ನು ಒದಗಿಸಿಕೊಟ್ಟ ಚಾರಿತ್ರಿಕ ಒತ್ತಡಗಳನ್ನು ಕಡೆಗಣಿಸುವಂತಿಲ್ಲ. ತಮ್ಮ ವೃತ್ತಿಬದುಕಿನ ಪೂರ್ವಾರ್ಧದಲ್ಲೇ ಎಲ್ಲ ಬಗೆಯ ಚಿತ್ರಗಳಲ್ಲಿ ಅಭಿನಯಿಸಿ ಜನಪ್ರಿಯರಾಗಿದ್ದ ರಾಜ್‌ರವರ ಚಿತ್ರಗಳು ಉತ್ತರಾರ್ಧದಲ್ಲಿ ಯಶಸ್ಸು ಕಾಣಲು ಅವರ ಹಿಂದಿನ ಯಶಸ್ಸೊಂದೇ ಆಧಾರವಲ್ಲ. ರಾಜ್‌ರವರ ಅಭಿನಯದ ಉತ್ತರಾರ್ಧದ ಕಾಲಘಟ್ಟ ಸಮಾಜದ ಸ್ಥಿತ್ಯಂತರ ಕಾಲವೂ ಹೌದು. ಹಳ್ಳಿಯಿಂದ ನಗರಕ್ಕೆ ಬಂದು ನೆಲೆಯಾದ ಕುಟುಂಬಗಳು ಅತಂತ್ರ ಬದುಕನ್ನು ಎದುರಿಸುತ್ತಿದ್ದ ಕಾಲ. ನಗರೀಕರಣ ಹಾಗೂ ಇತರ ಒತ್ತಡಗಳಿಂದ ಕೌಟುಂಬಿಕ ಸಂಬಂಧಗಳಲ್ಲಿ ಬಿರುಕು ಮತ್ತು ಮತ್ತೆ ಮೂಲವನ್ನು ಹುಡುಕುವ ಹಪಾಹಪಿ ಆರಂಭವಾದ ಕಾಲ. ಹಳ್ಳಿಯ ಸಮಸ್ಯೆಗಳು ದೊಡ್ಡದಾಗಿ ಚರ್ಚಿತವಾಗುತ್ತಿದ್ದ ಕಾಲ. ಅಂಥ ಸಮಯದಲ್ಲಿ ಚಿತ್ರರಂಗದಲ್ಲಿ ಉತ್ಪಾದನೆಯಾಗುತ್ತಿದ್ದ ಚಿತ್ರಗಳು ಭ್ರಮಾಲೋಕವನ್ನು ಸೃಷ್ಟಿಸುತ್ತಿರುವಾಗ, ರಾಜ್‌ರವರು ಮತ್ತೆ ಕೌಟುಂಬಿಕ ಹಾಗೂ ಪೌರಾಣಿಕ, ಜಾನಪದ (ಭಕ್ತಪ್ರಹ್ಲಾದ, ಕವಿರತ್ನ ಕಾಳಿದಾಸ, ಯಾರಿವನು, ಜೀವನ ಚೈತ್ರ, ಆಕಸ್ಮಿಕ) ಚಿತ್ರಗಳಲ್ಲಿ ಅಭಿನಯಿಸಿದರು. ಹಾಗಾಗಿ ಪ್ರೇಕ್ಷಕ ವರ್ಗ ಮತ್ತೆ ರಾಜ್ ಚಿತ್ರಗಳು ಸಮಕಾಲೀನ ಸಂದರ್ಭದಲ್ಲಿ ಪಡೆದುಕೊಂಡ ಸಾಂಗತ್ಯವನ್ನು ಗುರುತಿಸಿತು.

ಇಂಥ ಅಪ್ರತಿಮ ಕಲಾವಿದ ಮತ್ತು ಸಾಂಸ್ಕೃತಿಕ ನಾಯಕ ಸಹ ಸಮುದಾಯ ಹೇರಿದ ಮಿತಿಯಲ್ಲಿ ಬಂಧಿಯಾಗಬೇಕಾಯಿತು. ಇದು ಜನಪ್ರಿಯತೆ ತರುವ ನಶೆಯನ್ನು ಮೀರಲಾಗದ ದೌರ್ಬಲ್ಯವು ಹೇರುವ ಮಿತಿ. ಆರಂಭದಲ್ಲಿ ಪಾತ್ರಗಳ ವ್ಯಾಪ್ತಿಯಲ್ಲೇ ರಾಜ್‌ರವರ ಅಭಿನಯ ಅರಳುತ್ತಿತ್ತು. ಹಾಗಾಗಿ ಅವರ ಎಲ್ಲ ಬಗೆಯ ಪಾತ್ರಗಳಲ್ಲೂ ಅವರ ಅಭಿನಯದ ಪಲಕುಗಳನ್ನು ಕಾಣಬಹುದಿತ್ತು. ಆದರೆ ಕ್ರಮೇಣ ಅವರ ಜನಪ್ರಿಯತೆಯೇ ಪಾತ್ರವನ್ನು ನಿರ್ಧರಿಸುವಂತಾಯಿತು. ಇದು ಎಷ್ಟರಮಟ್ಟಿಗೆ ಹೋಯಿತೆಂದರೆ ‘ದಾರಿ ತಪ್ಪಿದ ಮಗ’ ಚಿತ್ರದಲ್ಲಿನ ದುಷ್ಟ ಸೋದರನ ಪಾತ್ರವು ‘ಹೆಣ್ಣನ್ನು ಅನುಭವಿಸಿದ ನಂತರ ಬಟ್ಟೆಯ ಮೇಲಿನ ಧೂಳನ್ನು ಕೊಡವುವಂತೆ ಕೊಡವಬೇಕು’ ಎಂದು ಹೇಳುವ ಸಂಭಾಷಣೆಗೆ ಒಂದು ವರ್ಗದಿಂದ ವಿರೋಧ ವ್ಯಕ್ತವಾಯಿತು. ಅಂದಿನಿಂದ ರಾಜ್‌ರವರ ಪಾತ್ರಗಳು ಒಂದು ಬಗೆಯಲ್ಲಿ ಅವರಿಗೆ ಸೃಷ್ಟಿಯಾದ ಇಮೇಜಿಗೇ ಅಧೀನವಾಗತೊಡಗಿದವು. ಎಷ್ಟರಮಟ್ಟಿಗೆಂದರೆ ‘ಮಯೂರ’ ಚಿತ್ರ ಒಂದು ಇತಿಹಾಸದ ಚಿತ್ರವಾಗದೇ ರಾಜ್‌ರವರ ಇಮೇಜಿಗೆ ಎರಕ ಹೊಯ್ದ ಚಿತ್ರವಾಯಿತು. ಇದು ರೂಪುಗೊಂಡಿದ್ದು ರಾಜ್ ತಮ್ಮ ವೃತ್ತಿ ಬದುಕನ್ನು ಸವೆಸಿದ ಬಹಳ ಕಾಲದ ನಂತರ. ಇಲ್ಲದಿದ್ದಲ್ಲಿ ಗೆಳೆಯನ ಹೆಂಡತಿಯನ್ನೆ ಮೋಹಿಸುವ ಕೃಷ್ಣೇಗೌಡನ ಪಾತ್ರದಲ್ಲಾಗಲೀ (ಉಯ್ಯಾಲೆ), ತಮ್ಮನಿಂದ ನೋಯಲ್ಪಡುವ ರಘು (ನನ್ನ ತಮ್ಮ), ಸರ್ವಸ್ವವನ್ನೂ ತ್ಯಾಗಮಾಡಿ ಸಾವನಪ್ಪುವ ರವಿ(ಕಸ್ತೂರಿ ನಿವಾಸ)ಯನ್ನಾಗಲೀ, ಪ್ರೇಮಿಸಿದ ಮಂಗಳೆಯು ಬೇರೊಬ್ಬನ ಪತ್ನಿಯಾದಾಗ ವ್ಯಗ್ರಗೊಂಡು ಕಟ್ಟಿಕೊಂಡ ಹೆಂಡತಿಗೆ ಬಡಿಯುವ ಅಸಹಾಯಕ ನಟರಾಜ(ಸರ್ವಮಂಗಳಾ)ನನ್ನಾಗಲೀ ನೋಡುವ ಸೌಭಾಗ್ಯ ಸಿಗುತ್ತಿರಲಿಲ್ಲವೇನೋ?! ಇದನ್ನೆಲ್ಲ ಗಮನಿಸಿದಾಗ ರಾಜ್‌ರವರಿಗೆ ಜಪಾನಿ ನಟ ತೊಷಿರೋ ಮಿಫ್ಯೂನೆಗೆ ಸಿಕ್ಕಿದಂಥ ಅಕಿರ ಕುರಸೊವ ಅಥವಾ ಬಂಗಾಳಿ ನಟ ಸೌಮಿತ್ರ ಚಟರ್ಜಿಗೆ ದಕ್ಕಿದಂಥ ಸತ್ಯಜಿತ್ ರಾಯ್ ಅಂಥ ನಿರ್ದೇಶಕರು ಸಿಕ್ಕಿದರೆ ಎಷ್ಟು ಚೆಂದಿರುತ್ತಿತ್ತು ಎನಿಸದಿರದು. ಆದರೆ ಜನಸಮುದಾಯವು ನಟನೊಬ್ಬನ ಪ್ರತಿಭೆಗೆ ಲಕ್ಷ್ಮಣರೇಖೆ ಎಳೆಯುವ ಮುನ್ನವೇ ರಾಜ್ ಎಲ್ಲ ಬಗೆಯ ಪಾತ್ರಗಳಲ್ಲೂ ಮಿಂಚಿ ತಮ್ಮ ನಟನೆಯ ವಿಶ್ವರೂಪ ದರ್ಶನ ಮಾಡಿಸಿಬಿಟ್ಟಿದ್ದರು ಎಂಬುದೇ ಸಮಾಧಾನದ ಸಂಗತಿ.

ತೆರೆಯಿಂದಾಚೆಗೆ ರಾಜ್‌ರವರು ತಮ್ಮ ನಿಜಬದುಕಿನಲ್ಲಿ ರೂಢಿಸಿಕೊಂಡ ಸರಳತೆ, ಸಜ್ಜನಿಕೆ ಮತ್ತು ಸಾಮಾಜಿಕ ಮೌಲ್ಯಗಳು ಸಹ ಅವರ ಜನಪ್ರಿಯತೆಗೆ ಪೂರಕವಾದವು. ಬಣ್ಣ ಹಚ್ಚಿದ ಕೂಡಲೇ ಪಾತ್ರದಲ್ಲಿ ತಲ್ಲೀನರಾಗುತ್ತಿದ್ದ ರಾಜ್ ಬಣ್ಣ ಕಳಚಿದ ಕೂಡಲೇ ಸರಳ ಮನುಷ್ಯರಾಗಿ ಬಿಡುತ್ತಿದ್ದರು. ಅವರ ಸಜ್ಜನಿಕೆ, ವಿನಯವಂತೂ ನಂಬಲಸಾಧ್ಯವೆನಿಸುವ ಮಟ್ಟದಲ್ಲಿತ್ತು. ಹಾಗಾಗಿ ರಾಜ್ ಅವರ ತೆರೆಯ ಮೇಲಿನ ಅಭಿನಯ ಮನುಷ್ಯ ಸಹಜವಾಗಿ ಕಂಡರೆ ನಿಜಜೀವನದ ಮುತ್ತುರಾಜ್ ವರ್ತನೆ ‘ಕೃತಕ’ವೆಂಬಂತೆ ಕಾಣುತ್ತಿತ್ತು.

ಹಾಗೆ ನೋಡಿದರೆ ರಾಜ್ ಅವರ ಬದುಕು ಅದ್ಭುತ ವೈಪರೀತ್ಯಗಳ ಸರಮಾಲೆ. ಅಪಾರ ಜನಪ್ರಿಯತೆ ಪಡೆದರೂ ಅಂತರಂಗದಲ್ಲಿ ಸಂಕೋಚದಿಂದ ಮುದ್ದೆಯಾದವರು. ಜನಪ್ರೀತಿಯ ಹಿಂದಿನ ಗುಟ್ಟು ಅವರಿಗೂ ಅರ್ಥವಾದಂತಿರಲಿಲ್ಲ. ಅದು ರಾಜ್‌ಕುಮಾರ್‌ಗೆ, ಆ ಮೂಲಕ ಜನರಿಗೆ ಸಂದದ್ದು ಎಂದು ನಿರ್ಲಿಪ್ತವಾಗಿ ಹಿಂದಿರುಗಿಸಿ ಮುತ್ತುರಾಜ್ ಆಗಿಯೇ ಉಳಿದರು. ಪ್ರಾಥಮಿಕ ಶಾಲಾಶಿಕ್ಷಣವನ್ನು ಮುಗಿಸದ ಅವರು ಮುಂದೆ ಪ್ರತಿಷ್ಠಿತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ನಾಡೋಜ ಪದವಿ ಪಡೆದರು. ವ್ಯಾಕರಣಶುದ್ಧವಾಗಿ ಒಂದು ಸಾಲನ್ನೂ ಬರೆಯಲಾಗದೆ ಏಟು ತಿಂದ ಬಾಲಕ ಮುಂದೆ ಪಂಡಿತ-ಪಾಮರರನ್ನು ಮೆಚ್ಚಿಸುವ ನಟನಾಗಿ ಬೆಳೆದರು. ರಾಜ್ ಅವರ ಮಾತಿನಲ್ಲಿ ಹೇಳುವುದಾದರೆ ಅವರು ನಟನಾವೃತ್ತಿ ಕೈಗೊಂಡಿದ್ದು ಹೊಟ್ಟೆಪಾಡಿಗಾಗಿ. ಆದರೆ ಅವರೇ ಉದ್ಯಮವಾಗಿ ಬೆಳೆದರು. ರಾಜ್ಯದ ಮೂಲೆಯೊಂದರ ಹಳ್ಳಿಯಲ್ಲಿ ಬೆಳೆದ ವಿದ್ಯಾವಂಚಿತ ಬಡಹುಡುಗನೊಬ್ಬ ಸೀಮಿತ ಮಾರುಕಟ್ಟೆಯ ಕನ್ನಡ ಚಿತ್ರರಂಗದ ಭೌಗೋಳಿಕ ಮತ್ತು ಆರ್ಥಿಕ ಮಿತಿಯನ್ನು ಮೀರಿ ಇತಿಹಾಸ ಪುರುಷನಾಗಿ ಬೆಳೆದ ಕತೆ ಕನ್ನಡಿಗರ ಪಾಲಿಗೆ ನಿರಂತರ ರೋಮಾಂಚನ ತರುವಂಥದ್ದು.

ರಾಜ್ ಸಂಸ್ಕೃತಿಯ ಅಂತರಂಗದ ಕದ ತೆರೆದು ಹಾಡಿದ ರಸಿಕ. ನಮ್ಮೆಲ್ಲರ ಬದುಕನ್ನು ಚೇತೋಹಾರಿಯಾಗಿಟ್ಟವರು. ದೇವನೂರ ಮಹಾದೇವ ಅವರು ಹೇಳಿದಂತೆ “ಹಲಬಗೆಯ ವೇಷಗಳನ್ನು ಹಾಕುತ್ತಿದ್ದ ರಾಜ್‌ಕುಮಾರ್ ಪಾರ್ಟುಧಾರಿಯಾದ ಮುತ್ತುರಾಜ್ ಅಗಲಿದ್ದಾರೆ. ನಮ್ಮ ಕನ್ನಡದ ‘ರಾಜ್ಕುಮಾರ್’ ಅಮರವಾಗಿ ಉಳಿದಿದ್ದಾರೆ.”

ಹೌದು, ಅವರು ಉಳಿದಿದ್ದಾರೆ, ಕನ್ನಡಿಗರ ಬತ್ತದ ಭಾವಸೆಲೆಯಲ್ಲಿ ತುಂಗೆ, ಕಾವೇರಿಯಾಗಿ, ಜೀವನದಿಯಾಗಿ.
***

ರಾಜ್‌ರವರ ಬಗೆಗಿನ ಈ ಲೇಖನ ಓದಿದವರಿಗೆ ಅವರ ಸಿದ್ಧಿ ಸಾಧನೆಗಳು, ಪಡೆದ ಜನಪ್ರಿಯತೆಯೆಲ್ಲ ಒಂದು ಜಾನಪದ ರಮ್ಯ ಕಥಾನಕದಂತೆ ಕಾಣಬಹುದು. ದೈವಕೃಪೆಯಿಂದಾದ ಪವಾಡದಂತೆ ಗೋಚರಿಸಬಹುದು. ಆದರೆ ಹಾಗೆ ನಂಬಿದರೆ ರಾಜ್‌ರವರ ದುಡಿಮೆ, ಪ್ರತಿಭೆ ಮತ್ತು ಅವರು ಮೈಗೂಡಿಸಿಕೊಂಡಿದ್ದ ಅಪರೂಪದ ಸಜ್ಜನಿಕೆ ಮತ್ತು ಸಂತನೊಬ್ಬನ ನಿರ್ಲಿಪ್ತ ಗುಣಗಳನ್ನು ಅಲ್ಲಗಳೆದಂತಾಗುತ್ತದೆ.

ಆರಂಭದಲ್ಲಿ ರಾಜ್‌ರವರು ತಲುಪಿದ್ದು ಮಧ್ಯಮ ಹಾಗೂ ತಳ ಸಮುದಾಯಗಳ ಪ್ರೇಕ್ಷಕವರ್ಗವನ್ನು. ನಗರದಲ್ಲಿಯೂ ಸಹ ಈ ಸಮುದಾಯದವರೇ ಅವರಿಗೆ ಶಾಶ್ವತ ಪ್ರೇಕ್ಷಕರಾಗಿದ್ದರು. ಆಗ ನಗರವಾಸಿ ಬೌದ್ಧಿಕ ಮತ್ತು ಶ್ರೀಮಂತ ವರ್ಗದ ಜನರು ರಾಜ್‌ಕುಮಾರ್‌ರವರ ಸಿನಿಮಾ ಇರಲಿ, ಕನ್ನಡ ಚಿತ್ರಗಳನ್ನೇ ಕಡೆಗಣ್ಣಿನಿಂದ ನೋಡುತ್ತಿದ್ದರು; ಇತರ ಭಾಷೆಯ ಚಿತ್ರಗಳ ಅಭಿಮಾನಿಗಳೂ ಆಗಿದ್ದರು. ಇದೊಂದು ಬೀಸು ಹೇಳಿಕೆಯಲ್ಲ. ಅರವತ್ತರ ದಶಕದ ಅಂತ್ಯದಿಂದ ನಗರವಾಸಿಯಾಗಿರುವ ನನ್ನ ಅನುಭವದ ಹಿನ್ನೆಲೆಯಿಂದ ಹೇಳುತ್ತಿರುವ ಮಾತುಗಳಿವು.

ರಾಜ್‌ರವರು ಕನ್ನಡದ ಪ್ರಜ್ಞೆಯಾಗಿ ಬೆಳೆದಿರುವ ಸಂಗತಿಯನ್ನು ಗುರುತಿಸಲು ಎಂಬತ್ತರ ದಶಕದ ಅಂತ್ಯದವರೆಗೂ ಕಾಯಬೇಕಾಯಿತು. ಇದಕ್ಕೆ ಉದಾಹರಣೆಯೆಂದರೆ ಮೈಸೂರು ವಿಶ್ವವಿದ್ಯಾಲಯ ಪ್ರಕಟಿಸಿರುವ ವಿಶ್ವಕೋಶದ ‘ಚಿತ್ರೋದ್ಯಮ’ ವಿಷಯದಡಿಯಲ್ಲಿ ರಾಜ್‌ರವರಿಗಿಂತ ಕಿರಿಯರಾದ ಪರಭಾಷಾ ನಟರಾದ ಶತ್ರುಘ್ನ ಸಿನ್ಹಾ, ರಾಜೇಶ್ ಖನ್ನಾ, ಖಳನಟ ಪ್ರಾಣ್, ಸಂಜೀವ್‌ಕುಮಾರ್ ಜೊತೆಗೆ ಶಿವಾಜಿ ಗಣೇಶನ್ ಭಾವಚಿತ್ರಗಳಿರುವ ಚಿತ್ರಗಳ ಸಂಪುಟವನ್ನು ಪ್ರಕಟಿಸಿದ್ದಾರೆ. ಅದರಲ್ಲಿ ಹಿರಿಯ ನಟ ನಮ್ಮ ರಾಜ್ ಚಿತ್ರಕ್ಕೆ ಸ್ಥಾನವಿಲ್ಲ್ಲ!

ನಮ್ಮ ಸಮೂಹ ಮಾಧ್ಯಮಗಳು ಸಹ ಕನ್ನಡ ಚಿತ್ರರಂಗ ಹಾಗೂ ರಾಜ್‌ರವರನ್ನು ತೀರಾ ಅವಜ್ಞೆಯಿಂದಲೇ ಕಂಡಿದ್ದವು. ಇದಕ್ಕೆ ಬೇಕಾದಷ್ಟು ಉದಾಹರಣೆಗಳನ್ನು ನೋಡಬಹುದು. ಆದರೆ ಸಮೂಹ ಮಾಧ್ಯಮ ಪ್ರತಿನಿಧಿಗಳಲ್ಲಿ ರಾಜ್‌ರವರನ್ನು ಬೆಂಬಲಿಸುತ್ತಿದ್ದವರು ಯಾರೂ ಇರಲಿಲ್ಲವೆಂದಲ್ಲ. ೧೯೭೦ರಲ್ಲಿಯೇ ಹಿರಿಯ ಪತ್ರಕರ್ತ ಪಿ.ಜಿ.ಶ್ರೀನಿವಾಸಮೂರ್ತಿ ಅವರು ‘ಪ್ರಜಾವಾಣಿ’ಯಲ್ಲಿ ಅವರ ಆತ್ಮಕಥಾ ಧಾರಾವಾಹಿಯನ್ನು ನಿರೂಪಿಸಿದ್ದರು. ‘ವಿಜಯಚಿತ್ರ’ ಪತ್ರಿಕೆಯೂ ’ಕಥಾನಾಯಕನ ಕತೆ’ ಎಂಬ ಅತ್ಮಕತೆಯ ನಿರೂಪಣೆಯನ್ನು ಪ್ರಕಟಿಸಿತು. ಆದರೂ ರಾಜ್‌ರನ್ನು ಗೇಲಿಮಾಡುವ, ಇತರರನ್ನು ಎತ್ತಿಕಟ್ಟುವ ಹೂಟಗಳು ಸಾಕಷ್ಟು ನಡೆದೇ ಇದ್ದವು. ನಮ್ಮ ವಿಮರ್ಶೆಯಂತೂ ತೀರಾ ಸಿದ್ಧ ಮಾದರಿಯಲ್ಲೇ ಸಾಗಿತ್ತೇ ಹೊರತು ಕನ್ನಡ ಚಿತ್ರರಂಗವನ್ನು ಸಾಮಾಜಿಕ ಮತ್ತು ಸಮಕಾಲೀನ ಚರಿತ್ರೆಯ ಹಿನ್ನೆಲೆಯಲ್ಲಿ ನೋಡುವ ಪರಿಪಾಠ ಬೆಳೆದು ಬಂದಿರಲಿಲ್ಲ. ಹಾಗಾಗಿ ಇದ್ದಕ್ಕಿದ್ದಂತೆ ಯಾರ್‍ಯಾರೋ ವಿಜೃಂಭಿಸುತ್ತಿದ್ದರು. ಬಹುಕಾಲ ರಾಜ್ ಅವರು ಸಮೂಹ ಮಾಧ್ಯಮಗಳಲ್ಲಿ ನೇಪಥ್ಯಕ್ಕೆ ಸರಿಸಲ್ಪಟ್ಟಿದ್ದರು.

ಆದರೆ ಪ್ರೇಕ್ಷಕವರ್ಗ ರಾಜ್‌ರವರ ಅಭಿನಯವನ್ನು ಸ್ವೀಕರಿಸಿದ್ದರಿಂದ, ಅವರು ಕನ್ನಡದ ಮೊದಲ ‘ಸ್ಟಾರ್’ ಎನಿಸಿಕೊಂಡರು. ಕೊನೆಯವರೆವಿಗೂ ಆ ‘ಸ್ಟಾರ್’ ಪಟ್ಟಕ್ಕೆ ಕುಂದುಂಟಾಗಲಿಲ್ಲ. ಆದರೂ ಅವರ ಕಾಲೆಳೆಯುವ ಪ್ರವೃತ್ತಿ ನಿಯತವಾಗಿ ಪ್ರಕಟವಾಗುತ್ತಲೇ ಇತ್ತು. ೧೯೭೦ರಲ್ಲಿ ರಾಜ್ಯ ಚಲನಚಿತ್ರ ಪ್ರಶಸ್ತಿ ಘೋಷಣೆಯಾಯಿತು. ಅತ್ಯುತ್ತಮ ನಟ ಪ್ರಶಸ್ತಿಯನ್ನು ‘ಶ್ರೀಕೃಷ್ಣದೇವರಾಯ’ ಚಿತ್ರದ ಪೋಷಕ ಪಾತ್ರದಲ್ಲಿ ನಟಿಸಿದ ಬಿ.ಆರ್.ಪಂತುಲು ಅವರಿಗೆ ನೀಡಲಾಗಿತ್ತು. ಅದು ನಾಯಕನಟನಾಗಿ ಅಭಿನಯಿಸಿದ್ದ ರಾಜಕುಮಾರ್‌ರವರಿಗೆ ಸಲ್ಲಬೇಕೇ ಹೊರತು ತನಗಲ್ಲ ಎಂದು ನಯವಾಗಿ ಪಂತುಲು ಅವರು ಪ್ರಶಸ್ತಿಯನ್ನು ನಿರಾಕರಿಸಿದರು. ಇದರಿಂದ ಅನಗತ್ಯ ಮುಜುಗರ ಸೃಷ್ಟಿಸಲಾಯಿತು. ಇದಕ್ಕೆ ರಾಜ್‌ರವರೇ ಕಾರಣರೇನೋ ಎಂಬ ವರಸೆಯಲ್ಲಿ ಅನೇಕ ಅಭಿಪ್ರಾಯಗಳು ತೇಲಿಬಂದವು. ಅನಂತರ ನಿರಂತರವಾಗಿ ರಾಜ್‌ರವರನ್ನು ಕೆಣಕುವ ‘ಸಿನಿ-ಹನಿ’ ಲೇಖನಗಳು ಪ್ರಕಟವಾಗುತ್ತಲೇ ಇದ್ದವು. ಕೊನೆಗೂ ರಾಜ್‌ರವರು ತಮ್ಮ ನೂರೈವತ್ತನೇ ಚಿತ್ರದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಾ ಸ್ಫೋಟಿಸಿದರು. ಅದೇ ಸಂದರ್ಭದಲ್ಲಿ ದಿವಂಗತ ವಜ್ರಮುನಿಯವರು ಪತ್ರಕರ್ತರ ವಿರುದ್ಧ ಪ್ರಚಂಡ ರಾವಣನಂತೆ ಅಬ್ಬರಿಸಿ ‘ಮೂರುಕಾಸಿನ ಜನ’ ಎಂದು ಜರೆದರು. ಆಗ ಜನಪ್ರಿಯವಾಗಿದ್ದ ‘ಸುಧಾ’ ವಾರಪತ್ರಿಕೆಯು ‘ರಸಿಕರಾಜನ ಗುಡುಗು’ ಎಂಬ ಶೀರ್ಷಿಕೆಯಡಿ ಅದನ್ನು ಛೇಡಿಸಿ ಬರೆದಿತ್ತು. ವಜ್ರಮುನಿಯವರ ವ್ಯಗ್ರ ಅಭಿವ್ಯಕ್ತಿಗೆ ರಾಜ್ ಕುಮ್ಮಕ್ಕು ನೀಡಿರಬಹುದು ಎಂದು ತರ್ಕಿಸಿತ್ತು. ಅಷ್ಟೇ ಅಲ್ಲ ‘ಹುಲಿಯ ಹಾಲಿನ ಮೇವು’ ಚಿತ್ರೀಕರಣದ ಸಮಯದಲ್ಲಿ ನಡೆದ ಆನೆಗಳ ಸಾವಿನ ದುರಂತಕ್ಕೆ ರಾಜ್‌ರವರೇ ಹೊಣೆಗಾರನ್ನಾಗಿಸಿದ ಲೇಖನವೊಂದನ್ನು ಓದಿದ ನೆನಪು. ಆದರೆ ಆ ಚಿತ್ರದ ನಿರ್ಮಾಪಕರು ರಾಜ್ ಸಂಸ್ಥೆಯವರಲ್ಲ. ಅಸಲಿಗೆ ದುರಂತ ನಡೆದಾಗ ರಾಜ್ ಚಿತ್ರೀಕರಣದಲ್ಲೂ ಭಾಗವಹಿಸಿರಲಿಲ್ಲ. ಇದೇ ಸಂದರ್ಭದಲ್ಲಿ ಮತ್ತೊಂದು ಘಟನೆ ನೆನಪಾಗುತ್ತದೆ, ‘ಎರಡು ಕನಸು’ ಚಿತ್ರ ಬಿಡುಗಡೆಯಾಗಿ ಯಶಸ್ವಿಯಾಗಿ ಓಡುತ್ತಿದ್ದ ಕಾಲ. ಆಗ ಇದ್ದಕ್ಕಿದ್ದಂತೆ ಕನ್ನಡ ಸಿನಿಮಾ ವಾರಪತ್ರಿಕೆಯೊಂದು ನಾಯಕಿ ಮಂಜುಳಾರವರ ತಂದೆ ತುಂಬಾ ಜಿಪುಣನಾಗಿರುವಾಗ ಮಗಳು ಶಾಂತಲಾ ಸಿಲ್ಕ್ಸ್‌ನ ಸೀರೆಗಳನ್ನು ಉಡುವುದು ಹೇಗೆ ಸಾಧ್ಯ ಎಂದು ಆಶ್ಚರ್ಯ ವ್ಯಕ್ತಪಡಿಸಿತ್ತು! ಅಲ್ಲದೆ ಅನೇಕ ವಾರ ಆ ವಿವಾದವನ್ನು ಓದುಗರ ಪತ್ರಗಳ ಮೂಲಕ ಜೀವಂತವಾಗಿಟ್ಟಿತ್ತು. ನಮ್ಮ ಕನ್ನಡ ಚಿತ್ರವಿಮರ್ಶೆ ಅಷ್ಟು ತೀಕ್ಷ್ಣವಾಗಿತ್ತು, ಆಗ!

ಆದರೆ ಕ್ರಮೇಣ ರಾಜ್‌ರವರು ಗಳಿಸಿದ್ದ ಅಪಾರ ಜನಪ್ರೀತಿಯನ್ನು ಎದುರಿಸಲಾಗದೆ ಓಲೈಸುವ ರೀತಿಯಲ್ಲಿ ಪತ್ರಿಕೆಗಳು ವರ್ತಿಸಲಾರಂಭಿಸಿದವು. ರಾಜ್‌ರವರ ವಿರುದ್ಧ ಹರಿಹಾಯುತ್ತಿದ್ದವರೆಲ್ಲ ಒಂದೊಂದು ಬಗೆಯ ಶ್ಲಾಘನೆಗೆ ಇಳಿದರು. ಇದರಿಂದ ರಾಜ್‌ರವರಿಗೆ ಮತ್ತೊಂದು ಬಗೆಯಲ್ಲಿ ಅನ್ಯಾಯವಾಯಿತು.

ಅಂದರೆ ರಾಜ್‌ರವರಿಗೆ ಯಾವಾಗ ಬೆಂಬಲ ನೀಡಿ ಬೆಳೆಸಬೇಕಿತ್ತೋ ಆಗ ಮಾಧ್ಯಮಗಳು ಅವರಿಗೆ ವಿಮುಖವಾಗಿದ್ದವು. ಯಾವಾಗ ಅದರ ಅಗತ್ಯವಿರಲಿಲ್ಲವೋ ಅಥವಾ ಕ್ರಿಟಿಕಲ್ ಆಗಿರಬೇಕಿತ್ತೋ ಆಗ ಓಲೈಕೆ ರಾಜಕಾರಣದಲ್ಲಿ ನಿರತವಾಗಿದ್ದವು. ಆದರೂ ಒಂದು ವರ್ಗದ ಅಂತರಂಗದಲ್ಲಿದ್ದ ಅವ್ಯಕ್ತ ಅಸಹನೆ ಈಗಲೂ ಪ್ರಕಟವಾಗುತ್ತಿರುತ್ತದೆ. ತೀರಾ ಇತ್ತೀಚಿನ ಉದಾಹರಣೆಯೆಂದರೆ, ರಾಜ್‌ರವರ ನಿಧನಾನಂತರ ಅವರ ಬಗ್ಗೆ ವಿವಿಧ ಲೇಖಕರು ಬರೆದ ಸಂಕಲನವನ್ನು ಸಾಹಿತ್ಯ ಪತ್ರಿಕೆಯೊಂದು ಪ್ರಕಟಿಸಿತು. ಸಿನಿಮಾ ಪತ್ರಿಕೋದ್ಯಮವನ್ನೆ ವೃತ್ತಿಯನ್ನಾಗಿಸಿಕೊಂಡಿದ್ದ ಪತ್ರಕರ್ತರೊಬ್ಬರು ತಮಗೆ ರಾಜ್‌ರವರ ಬಗ್ಗೆ ಅಂಥ ಅಭಿಮಾನವಿಲ್ಲವೆಂದು ಲೇಖನದಲ್ಲಿ ಪರೋಕ್ಷ ಸೂಚನೆಯನ್ನು ನೀಡುತ್ತಾರೆ. ಮುಂದುವರೆದು ಅಚಾನಕವಾಗಿ ತಾವು ನೋಡಿದ ‘ದೇವರು ಕೊಟ್ಟ ವರ’ ಚಿತ್ರದ ನಾಯಕನ ಅಭಿನಯ ಸ್ವಲ್ಪ ಮೆಚ್ಚುಗೆಯಾಯಿತೆಂದೂ, ಅನಂತರ ಅದು ರಾಜ್‌ಕುಮಾರ್ ಎಂದು ತಿಳಿಯಿತೆಂದು ಬರೆಯುತ್ತಾರೆ. ಅಂಥ ಶೀರ್ಷಿಕೆಯ ಹೆಸರಿನ ಚಿತ್ರದಲ್ಲಿ ರಾಜ್ ನಟಿಸಿಲ್ಲ. ‘ದೇವರು ಕೊಟ್ಟ ತಂಗಿ’ ಇರಬಹುದು ಎಂದುಕೊಂಡರೂ ಅದು ಬಿಡುಗಡೆಯಾಗುವ ವೇಳೆಗೆ ರಾಜ್ ಚಿತ್ರರಂಗ ಪ್ರವೇಶಿಸಿ ೨೫ ವರ್ಷ ತುಂಬಿತ್ತು. ನೂರನಲವತ್ತೆರಡು ಚಿತ್ರಗಳಲ್ಲಿ ನಾಯಕರಾಗಿದ್ದರು. ಅಂದರೆ ಈ ಪತ್ರಕರ್ತರು ಅಲ್ಲಿಯವರೆಗೂ ರಾಜ್‌ರವರನ್ನು ಭಿತ್ತಿಪತ್ರಗಳಲ್ಲೂ ಸಹ ನೋಡಿರಲಿಲ್ಲ! ಹೋಗಲಿ, ಅವರು ನೋಡಿದ ಚಿತ್ರ ’ದೇವರ ಗೆದ್ದ ಮಾನವ’ ಇರಬಹುದೆಂದು ಊಹಿಸೋಣ. ನಾಲ್ಕೈದು ದಶಕಗಳ ಕಾಲ ಸಿನಿಮಾ ಪತ್ರಿಕೋದ್ಯಮವನ್ನೇ ಉಸಿರಾಡಿದ ಆ ಪತ್ರಕರ್ತರಿಗೆ ತಾವು ಬರೆಯುತ್ತಿರುವ ಶೀರ್ಷಿಕೆ ಸರಿಯಾಗಿದೆಯೋ ಇಲ್ಲವೋ ಎಂದು ತಾಳೆ ನೋಡುವಷ್ಟು ತಾಳ್ಮೆಯಿಲ್ಲ. ಅಂದ ಮೇಲೆ ಅಂಥವರಿಂದ ರಾಜ್‌ಕುಮಾರ್ ಬಗ್ಗೆ ವಸ್ತುನಿಷ್ಠ ಲೇಖನವನ್ನು ನಿರೀಕ್ಷಿಸಲು ಸಾಧ್ಯವೇ?
***

ಸೈಡ್ ರೀಲ್

* ರಾಜ್‌ಕುಮಾರ್ ಅವರು ಮೂಲತ: ರಂಗಕಲಾವಿದರು. ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಸಹ ಪ್ರಸಿದ್ಧ ರಂಗಕಲಾವಿದರು; ರಾಜ್‌ರವರ ವೃತ್ತಿ ಬಗ್ಗೆ ಅಪಾರ ಭರವಸೆ ತಾಳಿದ್ದವರು; ಮುಂದೆ ತಮ್ಮ ಮಗ ಬಹುದೊಡ್ಡ ಕಲಾವಿದನಾಗುತ್ತಾನೆಂಬ ಕನಸನ್ನು ಕಂಡವರು. ಆದರೆ ಅವರ ಕನಸು ನನಸಾಗುವವರೆಗೆ ಅವರು ಬದುಕಿರಲಿಲ್ಲ. ತಂದೆಯ ಸಾವು ರಾಜ್‌ರವರನ್ನು ನಿರಂತರವಾಗಿ ಕಾಡುತ್ತಿತ್ತು. ಹಾಗೂ ಅವರ ಸ್ಮರಣೆ ಜಾಗೃತವಾಗಿರುತ್ತಿತ್ತು.

* ನಾಟಕ ಕಂಪನಿಗಳಲ್ಲಿ ತಮಗಿಂತಲೂ ತಮ್ಮ ತಂಗಿ ಶಾರದಮ್ಮ ಹಾಗೂ ತಮ್ಮ ವರದಪ್ಪನಿಗೆ ಆರಂಭದಲ್ಲಿ ಹೆಚ್ಚು ಅವಕಾಶಗಳು ದೊರೆಯುತ್ತಿದ್ದುದನ್ನು ಅನೇಕ ಬಾರಿ ನೆನಪಿಸಿಕೊಂಡಿರುವ ರಾಜ್ ತಂಗಿಯ ಅಕಾಲ ಮರಣದಿಂದ ನೊಂದವರು. ತಮ್ಮ ವೃತ್ತಿ ಬದುಕಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ತಮ್ಮ ವರದರಾಜ್‌ರವರ ಸಾವಿನಿಂದ ಖಿನ್ನತೆ ಅನುಭವಿಸಿದರು.

* ೧೯೯೨ರಲ್ಲಿ ಆರಂಭಿಸಿದ ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು ಮೊದಲಬಾರಿಗೆ ರಾಜ್‌ರವರಿಗೆ ನೀಡಲಾಯಿತು. ಮರುವರ್ಷದಿಂದ ಅದನ್ನು ರಂಗಕಲಾವಿದರಿಗೆ ಮಾತ್ರ ನೀಡುವ ಸಂಪ್ರದಾಯವನ್ನು ಪಾಲಿಸಲಾಯಿತು. ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ಗುಬ್ಬಿ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ ಸುಬ್ಬಯ್ಯ ನಾಯ್ಡು ಅವರ ಪುತ್ರ ಲೋಕೇಶ್ ಅವರ ಸೂಚನೆಯ ಮೇರೆಗೆ ನಾಟಕದಲ್ಲಿ ತಾವು ವಹಿಸುತ್ತಿದ್ದ ಆಂಜನೇಯನ ಪಾತ್ರದ ಕಂದ ಪದ್ಯವೊಂದನ್ನು ಹಾಡಿದರು. ಸೀತೆಯನ್ನು ಕಳೆದುಕೊಂಡು ಪರಿತಪಿಸುತ್ತಾ ಬರುತ್ತಿದ್ದ ರಾಮ ಲಕ್ಷ್ಮಣರನ್ನು ಕಂಡು ತನ್ನ ತಾಯಿಯು ಮುಂದೊಂದು ದಿನ ಸಿಗುವ ಅವನ ದೇವರ ಲಕ್ಷಣಗಳನ್ನು ವಿವರಿಸಿದ್ದನ್ನು ನೆನೆದು ಹಾಡುವ ಕಂದ ಪದ್ಯ, ಅದು. ಅನೇಕ ದಶಕಗಳ ಹಿಂದೆ ಸುಬ್ಬಯ್ಯ ನಾಯ್ಡು ಅವರ ಕಂಪನಿಯಲ್ಲಿ ಕಲಿತಿದ್ದ ಹಾಡನ್ನು ಕೇವಲ ನೆನಪಿನಿಂದಲೆ ತಪ್ಪಿಲ್ಲದಂತೆ ಹಾಡಿದ ರಾಜ್ ಪ್ರತಿಭೆಗೆ ಮೂಕವಾದ ಪ್ರೇಕ್ಷಕರಲ್ಲಿ ನಾನೂ ಒಬ್ಬ.
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...