ನೆಲದ ಮೇಲೆ ಈಸುವುದು,
ನೋಡಿದಿರಾ ಮೀನಾವತಾರ !
ಮನುಕುಲೋದ್ಧಾರಕ ನನ್ನ ಕುವರ !
ಬಯಲನ್ನೆಲ್ಲ ಬೆನ್ನಲಿ ಹೊತ್ತಿರುವುದು,
ನೋಡಿದಿರಾ ಕೂರ್ಮಾವತಾರ !
ವಂಶಾಧಾರಸ್ತಂಭ ನನ್ನ ಕುವರ !
ಮುಗಿಲನ್ನೆ ಮೊಗದಿಂದೆತ್ತಲು ಹವಣಿಸುವದು.
ನೋಡಿದಿರಾ ವರಾಹಸ್ವಾಮಿ !
ಹೂಂಕರಿಸುವ ನನ್ನ ಕುವರ !
ತನ್ನ ತಾಯ ಬಸಿರನ್ನೆ ಬಗೆದು ಅವಳ ಕರುಳಮಾಲೆಯನ್ನು
ಧರಿಸುವ ವಿಚಿತ್ರ ನೃಸಿಂಹಸ್ವಾಮಿ !
ನೋಡಿದಿರಾ ಬಾಲ ಪ್ರಲ್ಹಾದ ನನ್ನ ಕುವರ !
ತಾಯಿಯ ಮೇಲೆ ಕೈಯೆತಲು ಬಂದ
ದಿಟ್ಟ ಪರಶುರಾಮನ ಕಂಡಿರಾ!
ಶಾಪಚಾಪ ಸವ್ಯಸಾಚಿ ನನ್ನ ಕುವರ !
ಬೈರಾಗಿಗಳಲ್ಲಿ ರಾಗ ಹುಟ್ಟಿಸುವ !
ಭೋಗಿಗಳಿಗೆ ತ್ಯಾಗ ಬೋಧಿಸುವ!
ಕಂಡಿರಾ ನವೋನವ ಸುಂದರ ನನ್ನ ಕುವರ!
ತಾಯಿತಂದೆಗಳ ಸೆರೆ ಬಿಡಿಸಿ ಗೀತೆಯ ಹಾಡುವ
ಶ್ರೀಕೃಷ್ಣನ ಕಂಡಿರಾ !
ಲೀಲಾವತಾರಿ ನನ್ನ ಕುವರ !
ಕಂಡಿರಾ ದಿಗಂಬರ ಮೂರ್ತಿ ! ಬಾಲಬುದ್ಧದೇವ !
ಕೋಲಕುದುರೆಯನೇರುವ ಕಲ್ಕಿ !
ಮ್ಲೇಂಛ ಮೋಹವ ಕೊಂದು ಪ್ರೇಮಧರ್ಮವ
ಪ್ರತಿಷ್ಠಾಪಿಸುವ ನನ್ನ ಕುವರ.
*****


















