ಮನೆಯ ತೊರೆದು ಹೊರಗೆ ಬಾರೆ
ಹುಣ್ಣಿಮೆಯನು ನೋಡಲು
ಇರುಳಿನೆದೆಯು ಹೂತು ಹರಿದ
ಹಾಲಿನಲ್ಲಿ ಮೀಯಲು.
ಹುಣ್ಣಿಮೆಯಿದು ಬಾನ ಬಾಳ
ಪೂರ್ಣಿಮೆಯೇ ಅಲ್ಲವೇ?
ಬುವಿಯ ಬಯಕೆ ಬಾಯಾರಿಕೆ
ಕಳೆವ ಗಂಗೆಯಲ್ಲವೆ?
ನಂದನಕ್ಕೆ ನೀರೆರೆಯುವ
ಸಂಜೀವಕ ವಾಹಿನಿ!
ದಿಕ್ತಟಗಳ ದಾಟಿ ಹರಿದ
ಅನುಪಮ ಸಂಮೋಹಿನಿ!
ಬಾಂದೇವಿಯ ಶೃಂಗಾರಕೆ
ಹೂತ ವತ್ಸಲತೆಯಿದು.
ಭೂದೇವಿಯ ಶೃಂಗಸ್ತನ
ತೊರೆದ ಒಲವು ಹಾಲಿದು,
ಬಾಂಗಡಲಿನ ನೀಲಿಮೆಯಲಿ
ಜನಿಸಿ ನೆಗೆದ ಸುರಭಿಯು
ಮದವೇರದ ಮುದಬೀರುವ
ಅತಿ ಮಾನವ ಪೇಯವು.
ಇಂಗಡಲಿದು ಉಡುಲೋಕವ
ಮುಳುಗಿಸುತ್ತ ಬೆಳೆದಿದೆ
ಮೂಲೋಕದ ಮೂಲೆ ಮೂಲೆ
ಯನ್ನು ಮುಟ್ಟಿ ಹರಿದಿದೆ.
ಮಣ್ಣಿನಲ್ಲಿ ಸುರಿದು ಅದಕೆ
ಮಲರ ಮಾಯೆ ಬೀರಿದೆ.
ಕೊಳೆಯೆಲ್ಲವ ಸುತ್ತಿ ಮುತ್ತಿ
ಚೆಲುವನಲ್ಲಿ ಬಿತ್ತಿದೆ.
ಶುಭ ಮಂಗಲ ಪಾವನತೆಯು
ಆಣುರೇಣುವಿಗಿಳಿದಿದೆ
ಪ್ರತಿ ಜೀವದಿ ನವ ಸ್ವಪ್ನದ
ಸಂಗೀತವು ತುಂಬಿದೆ.
ಅಂಗಳದಲಿ ರಂಗೋಲಿಯ
ಮಂಗಲವನು ಬರೆದಿದೆ.
ಹೊಸ್ತಿಲದಲಿ ಸ್ವಸ್ತಿಕವನು
ಬರೆದು ಶುಭವ ಕೋರಿದೆ!
ಅರೆಯಿಲ್ಲದ ತೆರೆಯಿಲ್ಲದ
ನಿಶ್ಚಲ ಚಿರ ಶಾಂತಿಯು
ಮಧು ಮಧುರವು ಅತಿ ಮೃದುಲವು
ಇದರೆ ದಿವ್ಯ ಕಾಂತಿಯು.
ಇಲ್ಲಿ ಬಾರೆ ಬೆಳುದಿಂಗಳ
ಈ ಮಂಗಲ ಜಲಧಿಗೆ
ಮೆಯನೊಡ್ಡು ಬೆಳಕಿಗಿದರ
ತೆರೆಯದನು ಶಾಂತಿಗೆ
ಹರಿದೋಡುತ ಹೊರಳಾಡುತ
ಮುಳುಗೇಳುತ ಎಲ್ಲೆಡೆ
ತೆರೆತೆರೆಗಳು ಸೆಳೆದಲ್ಲಿಗೆ
ಕರೆಕರೆಯುತ ಎಳೆದೆಡೆ.
ಈಸಾಡಲು ಮೀನವಾಗಿ
ಹಕ್ಕಿಯಾಗಿ ಹಾರಲು
ಜೊನ್ನ ಕುಡಿದು ಜ್ಯೋತಿಯಾಗಿ
ಬಾನಿನಲ್ಲಿ ಬೆರೆಯಲು.
ಬಾ ಗೆಳತಿಯೆ ಹುಣ್ಣಿಮೆಯಲಿ
ಪೂಣ್ದಾಶಿಷ ಪಡೆಯಲು
ಮನೆಯ ತೊರೆದು ಚಿಂತೆ ಜರೆದು
ಪ್ರೀತಿಗೀತ ಹಾಡಲು
ದೇವರನ್ನು ಕುಣಿಸಿದಂಥ
ಚೆಲುವು ಚಂದ್ರನಮೃತ
ದೀನರನ್ನು ತಣಿಸದಿಹುದೆ
ಬೆಳಕು ಬೆಳದ ಈ ಹಿತ.
*****



















