‘ಹೊಸ ಚಿಗುರು ಹಳೆ ಬೇರು ಕೂಡಿರಲು ಮರ ಸೊಬಗು’ ಎಂದಿದ್ದಾರೆ ಡಿವಿಜಿ. ಆದರೆ ಇವತ್ತು ಹಳೆ ಬೇರು ಹೊಸ ಚಿಗುರಿಗೆ ಬೇಡ ಎನ್ನುವುದಕ್ಕೆ ಪೂರಕವಾಗಿ ಒಂದು ಉದಾಹರಣೆ. ಯಾರೋ ಒಬ್ಬ ಹುಡುಗ ಹೆಣ್ಣು ನೋಡಲು ಹೋಗಿದ್ದ ಸಂದರ್‍ಭದಲ್ಲಿ ಆ ಹುಡುಗಿ ಹೇಳಿದ್ದಂತೆ ‘ನಿಮಗೆ ನಿಮ್ಮ ಅಪ್ಪ, ಅಮ್ಮನ ಮೇಲೆ ಪ್ರೀತಿ ಇದ್ದರೆ ನನ್ನ ತಕರಾರಿಲ್ಲ. ಆದರೆ ಅವರ ಫೋಟೋಗೆ ಮಾಲೆ ಹಾಕಿರಬೇಕು.’ ಒಂದು ಕ್ಷಣ ತಬ್ಬಿಬ್ಬು ಮತ್ತು ಆಘಾತ ಉಂಟು ಮಾಡುವ ಮಾತು. ಹಿರಿಯರ ಮೇಲೆ ಕಿರಿಯರಿಗಿರುವ ಪ್ರೀತಿ ಅಭಿಮಾನ ಮಾಯವಾಗುತ್ತಿರುವುದಕ್ಕೆ ಇದಕ್ಕಿಂತ ಹೆಚ್ಚಿನ ಉದಾಹರಣೆ ಬೇಕಿಲ್ಲ. ಇದು ನೋವು ಕೊಡುವ ಸಂಗತಿಯಾದರೂ ಇವತ್ತಿನ ವಾಸ್ತವ.
ಬಾಲ್ಯದಲ್ಲಿ ತಂದೆ-ತಾಯಿಯ ಕೈಬೆರಳು ಹಿಡಿದು ಮಕ್ಕಳು ನಡುಗೆ ಕಲಿಯುತ್ತಾರೆ. ಬೆಳೆದು ದೊಡ್ಡವರಾಗುತ್ತಾ ತಮ್ಮ ಜೀವನದ ದಾರಿಯನ್ನು ಕಂಡುಕೊಂಡು ಹೆತ್ತವರ ಬೆಚ್ಚಗಿನ ಗೂಡಿನಿಂದ ದೂರ ಹಾರಿ ಹೋಗುತ್ತಾರೆ. ಹೀಗಿರುವಾಗ ಮಕ್ಕಳು ವೃದ್ಧಾಪ್ಯದ ಊರುಗೋಲು ಆಗಬೇಕು, ಕೊನೆಯ ಕಾಲದಲ್ಲಿ ಹತ್ತಿರವಿರಬೇಕು ಎನ್ನುವ ಒತ್ತಾಯ ಹೇರಿದರೆ ಕಿರಿಯರ ಸ್ವಾತಂತ್ರ್ಯವನ್ನು ಕಿತ್ತುಕೊಂಡಂತಾಗುತ್ತದೆ. ಈ ಸತ್ಯವನ್ನು ಒಪ್ಪಿಕೊಳ್ಳಲೇಬೇಕಾದ ಕಾಲ, ಪರಿಸರ ಇಂದು ನಿರ್‍ಮಾಣವಾಗಿದೆ. ಮಕ್ಕಳು ಹತ್ತಿರದಲ್ಲಿಲ್ಲ ಎನ್ನುವ ಕಹಿ ಭಾವನೆಯಿಂದ ಹಿರಿಯರು ಮುಕ್ತರಾಗಲೇಬೇಕು.
ಮುಪ್ಪಿನ ಕಾಲಕ್ಕೆ ಬೇಕಾದ ಆರ್‍ಥಿಕ ಭದ್ರತೆಯನ್ನು ಮಾಡಿಕೊಂಡು ಸ್ವತಂತ್ರವಾಗಿ ಜೀವನ ಸಾಗಿಸುವ ಆತ್ಮವಿಶ್ವಾಸವನ್ನು ಇವತ್ತಿನ ಹಿರಿಯರು ಬೆಳೆಸಿಕೊಂಡಿರುವುದರಿಂದ ಹಿಂದಿನಂತೆ ಮುಪ್ಪಿನಲ್ಲಿ ಮಕ್ಕಳಿಗೆ ಭಾರವಾಗಿರಲು ಇಷ್ಟಪಡುವುದಿಲ್ಲ. ಇದೊಂದು ಆರೋಗ್ಯಕರ ಬೆಳವಣಿಗೆ ಮಕ್ಕಳ ಮೇಲಿನ ಪ್ರೀತಿ ಅವರನ್ನು ಸೆಳೆಯುತ್ತಿದ್ದರೂ ಮಕ್ಕಳು ಎಲ್ಲಾದರೂ ಚೆನ್ನಾಗಿರಲಿ ಎನ್ನುವುದಷ್ಟೇ ಅವರ ಆಶಯವಾಗಿರುತ್ತದೆ.
ಮುಪ್ಪಿನಲ್ಲಿ ಹಿರಿಯರಿಗೆ ಮುಖ್ಯವಾಗಿ ಬೇಕಾಗಿರುವುದು ಸಮಾಧಾನ ಹಾಗೂ ಮಾನಸಿಕ ನೆಮ್ಮದಿ. ಮಕ್ಕಳು ದೂರದಲ್ಲಿದ್ದರೂ ಮಾನಸಿಕ ಸಾಮೀಪ್ಯವನ್ನು ಬೆಳೆಸಿಕೊಂಡಿದ್ದರೆ ಅದರಲ್ಲೇ ಹೆತ್ತವರಿಗೆ ಸಮಾಧಾನ ಸಿಗುತ್ತದೆ. ಆದರೆ ಇಂದಿನ ಕ್ಲಿಷ್ಟಕರ ಜೀವನದಲ್ಲಿ ಹಿರಿಯರಿಗೆ ಅದೇ ಸಿಗುತ್ತಿಲ್ಲ. ಇದು ದುರ್‍ದೈವ.
ಹಿರಿಯರು, ಕಿರಿಯರು ಎಲ್ಲರೂ ಒಟ್ಟಾಗಿ ಒಂದೇ ಸೂರಿನಡಿಯಲ್ಲಿ ಜೀವಿಸುತ್ತಿದ್ದ ಕಾಲದಲ್ಲಿ ಹಿರಿಯರಿಗೂ, ಕಿರಿಯರಿಗೂ ಜೀವನ ಸುಲಭವಾಗಿತ್ತು. ಹಿರಿಯರು ಮುಪ್ಪಿಗೆ ಜಾರಿದಾಗ ಕಿರಿಯರು ಅವರನ್ನು ಹೆಚ್ಚಿನ ಪ್ರೀತಿಯಿಂದ, ಮುತುವರ್‍ಜಿಯಿಂದ ನೋಡಿಕೊಳ್ಳುತ್ತಿದ್ದರು. ಆದರೆ ಆಧುನಿಕ ಜಗತ್ತಿನ ಬದಲಾಗುತ್ತಿರುವ ಮೌಲ್ಯಗಳನ್ನು ಒಪ್ಪಿಕೊಂಡು ಬದುಕುತ್ತಿರುವ ಹೆಚ್ಚಿನ ಮಕ್ಕಳಿಗೆ ಹಿರಿಯರು ತಮ್ಮೊಂದಿಗಿರುವುದು ಇಷ್ಟವಿಲ್ಲ. ಮಕ್ಕಳಿಂದ ದೂರವಾಗಿ ಒಬ್ಬಂಟಿಗರಾಗಿಯೋ, ವೃದ್ಧಾಶ್ರಮದಲ್ಲೋ ಇರುವ ಬಹುಪಾಲು ಹಿರಿಯರಿಗೆ ಮುಪ್ಪು ಒಂದು ಶಾಪ ವಾಗುತ್ತಿರುವುದನ್ನು ಸುತ್ತಲೂ ನೋಡುತ್ತೇವೆ. ಇದನ್ನು ಮೀರಿ ಮುಪ್ಪಿನ ಜತೆಗೆ ಬದುಕಲು ಕಲಿತಾಗ ಮಕ್ಕಳೇ ಆಧಾರ ಎನ್ನುವ ಭಾವದಿಂದ ಮುಕ್ತರಾಗಿ ಸಮಾಧಾನದಿಂದ ಜೀವಿಸಬಹುದು.
ಜಗವಿಡೀ ಹಬ್ಬಿರುವ ಇವತ್ತಿನ ಮಕ್ಕಳಿಗೆ ಹಿರಿಯರು ಹೊರೆಯಾಗುತ್ತಿರುವ ಪರಿಸರದಲ್ಲಿ ವಿಶ್ವ ಹಿರಿಯರ ದಿನವನ್ನು ಆಚರಿಸುವ ಸಂದರ್‍ಭದಲ್ಲಿ ಹಿರಿಯರು ಇದನ್ನು ಅರಿತುಕೊಂಡು ಕಿರಿಯರಿಗೆ ಭಾರವಾಗದೆ ಜೀವಿಸಬಲ್ಲೆವು ನಮಗೆ ನಿಮ್ಮ ಪ್ರೀತಿ ಮಾತ್ರ ಸಾಕು ಎನ್ನುವ ಅರಿವುಂಟುಮಾಡುವುದು ಹೆಚ್ಚು ಸೂಕ್ತ.
*****



















