ಬಾ ಬಾರೆ ರಾಧಿಕೆ
ಶೂನ್ಯವಾದ, ದೀನವಾದ ನನ್ನ ಹೃದಯಕೆ!

ಗರುವದ ಶಿಲೆ ಕತ್ತರಿಸಿದೆ
ವಿನಯದ ಶೆಲೆ ಹೊರ ಹೊಮ್ಮಿದೆ
ಬಾರೆಲೆ ತಡವೇಕೆ
ಬಾ ಬಾರೆ ರಾಧಿಕೆ!

ವನವನದಲಿ ಸಂಚರಿಸಿದೆ
ನಿನ್ನ ಹೆಸರನುಚ್ಚರಿಸಿದೆ
ಕರೆದೆ ಸಖಿಯೆ ಸನಿಹಕೆ
ಬಾ ಬಾರೆ ರಾಧಿಕೆ!

ಬೇರೆ ಯೊಲವ ಕಂಡು ಬಲ್ಲೆ
ಅವುಗಳೆಲ್ಲ ಗರಳ ಬಾಲೆ
ನೀ ಹೃದಯದ ಕೃತ್ತಿಕೆ
ಬಾ ಬಾರೆ ರಾಧಿಕೆ

ಮೋಡದ ಉನ್ಮತ್ತ ಮಾಲೆ
ಮನದಾಗಸ ತುಂಬಿ ನಿಲೆ
ಮಿಂಚಿನ ಕೋಲ್‌ ಬಾಲಿಕೆ
ಬಾ ಬಾರೆ ರಾಧಿಕೆ!

ನಾನುರಿಯುವ ಬಂಜೆ ನೆಲ
ನೀ ವಸಂತ ವೈಭವ ವಲ
ಅರಳು ಬಾರೆ ಚೆಲವಿಕೆ
ಬಾ ಬಾರೆ ರಾಧಿಕೆ!

ನೀ ವಿಶ್ವದ ದಿವ್ಯ ಚೆಲುವು
ನಾನು ಹಸಿದ ಹೃದಯ ದೊಲವು
ತಣಿವ ತಾರೆ ಜೀವಕೆ
ಬಾ ಬಾರೆ ರಾಧಿಕೆ!

ತುಟಿಗೆ ಬಾರೆ ನೀನು ಮುರಲಿ
ಎದೆಗೆ ಇಳಿಯೆ ಭಾವ ಕೆರಳಿ
ಹೊಮ್ಮಿ ಬರಲಿ ಗೀತಿಕೆ
ಬಾ ಬಾರೆ ರಾಧಿಕೆ!

ನೀ ಪ್ರೀತಿಯ ನಿಜ ದೇವತಿ
ನನ್ನ ಹರಣ ಪಂಚಾರತಿ
ಗೈವೆ ಬಾರೆ ಹೃದಯಕೆ
ಬಾ ಬಾರೆ ರಾಧಿಕೆ
*****