ಹಂಗ ಹಿಂಗಿಸಲು ಬಂದೆಯೊ?
ಭವವ ಭಂಗಿಸಲು ಬಂದೆಯೊ?
ಜಗದಿ ಏತಕ್ಕೆ ಬಂದೆನ್ನ ರಂಗನಾಥಾ!
ಮಂಗಲಕೆ ಮಂಗಲವೆ!
ತಂಗಲು ಬಂದೆಯೊ-ನನ್ನ ತೊಡೆಯ ಮೇಲೆ?
ನನ್ನುಡಿಯ ತೊಟ್ಟಿಲಲ್ಲಿ ಕಾಲಿಟ್ಟ ಕಾರಣವೇನು?
ನನ್ನ ಕನಸಿನ ನನೆಯೇ!
ನನ್ನ ಕನಸಿನ ಕೆನೆಯೆ!
ಹಣ್ಣಾಗುವೆಯಾ-ಬಳಗದ ಬನದಲ್ಲಿ?
ಬೆಣ್ಣೆಯಾಗುವೆಯಾ-ಜಗದ ಹುಳಿತಿಳಿಯಲ್ಲಿ?
ಸಂಸಾರವೆಂಬ ಕಡಲ ಉಕ್ಕಿನ
ತೆರೆಗಳ ತಕ್ಕೆಯಲ್ಲಿ ಕೂಡಿಬಂದ
ಮರದ ತುಂಡುಗಳಂತಿರಬಹುದೇ-
ನೀನು ನನ್ನ ಪಡೆದುದು, ನಾನು ನಿನ್ನ ಹಡೆದುದು?
*****


















