ಅಧ್ಯಾಯ ಆರು
ಕನ್ನಡದ ನಾಟಕಗಳ ಕಂಪನ್ನು ದಕ್ಷಿಣ ಭಾರತದಾದ್ಯಂತ ಮತ್ತು ದೂರದ ಮುಂಬೈವರೆಗೆ ಹರಡಿದ ಕೀರ್ತಿ ಗುಬ್ಬಿ ಕಂಪನಿಗೆ ಸಲ್ಲಬೇಕು. ಕನ್ನಡದ ಮನರಂಜನಾ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ಸಂಸ್ಥೆಗಳಲ್ಲಿ ಗುಬ್ಬಿ ಕಂಪನಿಗೆ ಅಗ್ರಸ್ಥಾನ ಸಲ್ಲಲೇಬೇಕು. ರಂಗಭೂಮಿ ಮತ್ತು ಚಲನಚಿತ್ರರಂಗ ಪರಸ್ಪರ ಪೂರಕವಾಗಿ ಬೆಳೆಯಬೇಕಾದ ಚಾರಿತ್ರಿಕ ಅನಿವಾರ್ಯವನ್ನು ಗುಬ್ಬಿ ಕಂಪನಿಯನ್ನು ಮುನ್ನಡೆಸಿದ ವೀರಣ್ಣನವರು ಮನಗಂಡಿದ್ದರು. ಕನ್ನಡ ಚಿತ್ರರಂಗ ಬೆಳೆಯಲು ಗುಬ್ಬಿ ಕಂಪನಿ ಸಲ್ಲಿಸಿರುವ ಕಾಣಿಕೆ ಅಲ್ಪವೇನಲ್ಲ. ಗುಬ್ಬಿ ಕಂಪನಿಯ ಇತಿಹಾಸದೊಡನೆ ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಇತಿಹಾಸವೂ ಬೆರೆತುಹೋಗಿದೆ. ಚಿತ್ರ ನಿರ್ಮಾಣ ಮತ್ತು ಪ್ರದರ್ಶನದಲ್ಲಿ ಗುಬ್ಬಿ ಕಂಪನಿ ನಡೆಸಿದ ಸಾಹಸ ಇಂದಿಗೂ ಸ್ಮರಣಯೋಗ್ಯ. ಆದರೆ ಗುಬ್ಬಿ ಕಂಪನಿಯು ನೀಡಿದ ಅಮೋಘ ಕಾಣಿಕೆಯೆಂದರೆ ಅದು ನೀಡಿರುವ ಕಲಾವಿದರು ಮತ್ತು ತಂತ್ರಜ್ಞರು. ಇವರೆಲ್ಲರು ಕೂಡಿಯೇ ಕನ್ನಡ ಚಿತ್ರರಂಗದ ಇತಿಹಾಸವನ್ನು ರೂಪಿಸಿದ್ದಾರೆ.
೧೮೮೪ರಲ್ಲಿ ಆರಂಭವಾದ “ಶ್ರೀ ಗುಬ್ಬಿ ಚನ್ನಬಸವೇಶ್ವರ ಕೃಪಾಪೋಷಿತ ನಾಟಕ ಸಂಘ ನೂರು ವರ್ಷಗಳನ್ನು ಆಚರಿಸಿಕೊಂಡ ಜಗತ್ತಿನ ಏಕೈಕ ವೃತ್ತಿನಿರತ ರಂಗಸಂಸ್ಥೆ. ಜನಮಾನಸದಲ್ಲಿ ‘ಗುಬ್ಬಿ ನಾಟಕ ಕಂಪನಿ ಅಥವಾ ‘ಗುಬ್ಬಿ ಕಂಪನಿ ಎಂದೇ ಚಿರಸ್ಥಾಯಿಯಾಗಿದೆ. ಇದನ್ನು ಸ್ಥಾಪಿಸಿದವರು ಚಂದಣ್ಣ, ನೀಲಕಂಠಪ್ಪ ಮತ್ತು ಅಬ್ದುಲ್ ಅಜೀಜ್ ಎಂಬ ರಂಗಾಸಕ್ತರು. ಕಂಪನಿ ನಾಟಕಗಳನ್ನು ಹೆಚ್ಚು ಸೋಪಜ್ಞತೆಯಿಂದ ಪ್ರದರ್ಶಿಸಬೇಕೆಂಬ ಬಯಕೆ ಅವರಲ್ಲಿತ್ತು. ಕ್ರಮೇಣ ಜನಪ್ರಿಯತೆ ಕಂಡುಕೊಂಡ ಈ ಸಂಸ್ಥೆಗೆ ೧೮೯೬ರಲ್ಲಿ ಆರು ವರ್ಷದ ಬಾಲಕ ಜಿ.ಎಚ್.ವೀರಣ್ಣ ಕೂಲಿಮಠ ವಿದ್ಯಾಭ್ಯಾಸ ಬಿಟ್ಟು ಕಲಾವಿದರಾಗಿ ಸೇರಿಕೊಂಡರು. ಆರಂಭದಲ್ಲಿ ಹಾಸ್ಯ ಪಾತ್ರಗಳಲ್ಲಿ ನಟಿಸುತ್ತಿದ್ದ ವೀರಣ್ಣನವರು ೨೭ನೇ ವಯಸ್ಸಿನಲ್ಲಿ ಕಂಪನಿಯ ಒಡೆತನ ವಹಿಸಿಕೊಂಡರು. ಕನ್ನಡ ರಂಗಭೂಮಿಯಲ್ಲಿ ಅನೇಕ ಪ್ರಯೋಗಗಳನ್ನು ಕೈಗೊಂಡು ಯಶಸ್ಸು ಕಂಡರು. ಅಪ್ರತಿಮ ವ್ಯವಹಾರ ಕೌಶಲ್ಯವಿದ್ದ ವೀರಣ್ಣನವರು ಕಂಪನಿಯನ್ನು ತುಂಬಾ ದಕ್ಷತೆಯಿಂದ ಮುನ್ನಡೆಸಿದರು. ಯುದ್ಧದ ಸನ್ನಿವೇಶನಗಳಲ್ಲಿ ನಿಜವಾದ ಆನೆ. ಕುದುರೆಗಳನ್ನು ರಂಗಭೂಮಿಯ ಮೇಲೆ ತಂದು ಪ್ರೇಕ್ಷಕರನ್ನು ಬೆರಗುಗೊಳಿಸಿದರು. ರಂಗಭೂಮಿಯ ಮೇಲೆ ಮಾತು ಮತ್ತು ನಿರ್ಜೀವ ಪರದೆಗಳ ಆವರಣದಿಂದಾಚೆಗೆ ಸಹಜ ವಾತಾವರಣವನ್ನು ಮೂಡಿಸುವ ಪ್ರಯತ್ನದಲ್ಲಿ ಯಶಸ್ಸು ಕಂಡರು. ಈ ಮಾತಿನಿಂದಾಚೆಗಿನ ಮೋಡಿಯೇ ಅವರ ನಾಟಕಗಳು ಬೇರೆ ಭಾಷೆಯನ್ನಾಡುವ ಪ್ರಾಂತ್ಯಗಳಲ್ಲಿ ಯಶಸ್ವಿಯಾಗಲು ಕಾರಣವಾಯಿತು. ಅಷ್ಟೇ ಅಲ್ಲ, ಅವರು ಅನೇಕ ಸಾಹಿತಿಗಳಿಗೆ ಆಶ್ರಯ ನೀಡಿ ನಾಟಕ ಬರೆಸಿದರು. ಕಲಾವಿದರಿಗೆ ರಂಗತರಬೇತಿ ನೀಡುವ ಕೇಂದ್ರವಾಗಿ ಗುಬ್ಬಿ ಕಂಪನಿಯನ್ನು ರೂಪಿಸಿದರು. ಕಂಠೀರವ ಸ್ಟುಡಿಯೋಸ್ ಸ್ಥಾಪನೆಗೆ ಕಾರಣರಾದವರಲ್ಲಿ ಪ್ರಮುಖರು. ಗುಬ್ಬಿ ಕಂಪನಿ ಹುಟ್ಟು ಹಾಕಿದ ಪರಂಪರೆಯೊಂದು ಇಂದಿಗೂ ಮುಂದುವರೆದಿದೆ. ಕನ್ನಡ ಚಲನಚಿತ್ರರಂಗ ಮತ್ತು ಟಿವಿ ರಂಗಕ್ಕೆ ಈಗಲೂ ರಂಗಭೂಮಿಯಲ್ಲಿ ತರಬೇತಿ ಪಡೆದು ಅಭಿನಯದ ಅನುಭವ ಪಡೆದವರ ವಲಸೆ ಸಾಗಿದೆ. ಇದಕ್ಕೆ ವ್ಯಕ್ತಿಗಿಂತ ಸಂಸ್ಥೆ ದೊಡ್ಡದು ಎಂದು ವೀರಣ್ಣನವರು ಮನಗಂಡಿದ್ದೇ ಮುಖ್ಯ ಕಾರಣ. ವರದಾಚಾರ್ಯರು, ಸುಬ್ಬಯ್ಯನಾಯ್ಡುರವರು, ಪೀರ್ ಸಾಹೇಬರು ಕಟ್ಟಿದ ಸಂಸ್ಥೆಗಳು ಆಯಾ ವ್ಯಕ್ತಿಯ ಅಭಿನಯ ಸಾಮರ್ಥ್ಯವನ್ನು ಆಧರಿಸಿ ಉಳಿದಿದ್ದವು. ಆದರೆ ಗುಬ್ಬಿ ಕಂಪನಿಯು ಈಗ ಸುಪರಿಚಿತವಾದ ಆದರೆ ಆಕಾಲಕ್ಕೆ ಯಾರಿಗೂ ಪರಿಚಯವಿರದ ಮ್ಯಾನೇಜ್‌ಮೆಂಟ್ ಪರಿಕಲ್ಪನೆಯನ್ನು ಆಧರಿಸಿತ್ತು. ಹಾಗಾಗಿ ವ್ಯಕ್ತಿ ಕೇಂದ್ರಿತ ಸಂಸ್ಥೆಗಳು ಆಯಾ ನಟರು ಕಾಲವಶರಾದ ನಂತರ ನಿಂತು ಹೋದರೆ ಗುಬ್ಬಿ ಕಂಪನಿ ತನ್ನ ಮ್ಯಾನೇಜ್‌ಮೆಂಟ್ ಪರಿಕಲ್ಪನೆಯಿಂದ ಶತಮಾನಗಳ ಕಾಲ ಉಳಿಯಲು ಸಾಧ್ಯವಾಯಿತು.
ರಂಗಭೂಮಿ ಮತ್ತು ಚಲನಚಿತ್ರರಂಗ ಪರಸ್ಪರ ಪೂರಕವಾಗಿ ಬೆಳೆಯಬೇಕೆಂಬ ಆಶಯ ಚಲನಚಿತ್ರರಂಗ ಆರಂಭವಾದ ಕಾಲದಲ್ಲೇ ಅಂಕುರಿಸಿತ್ತು. ಬಹುತೇಕ ರಂಗಭೂಮಿಯಲ್ಲಿ ತೊಡಗಿಸಿಕೊಂಡಿದ್ದವರೇ ಸಿನಿಮಾರಂಗವನ್ನು ಮುನ್ನಡೆಸಿದ್ದು ಇದಕ್ಕೆ ಕಾರಣವಿರಬಹುದು. ಆದರೆ ಎರಡೂ ಕ್ಷೇತ್ರಗಳನ್ನು ಸರಿದೂಗಿಸಿಕೊಂಡು ಹೋದವರು ವಿರಳರಲ್ಲಿ ವಿರಳ. ಅಂಥ ವಿರಳರಲ್ಲಿ ಗುಬ್ಬಿ ವೀರಣ್ಣನವರು ಒಬ್ಬರು. ಮಾತಿನ ಚಿತ್ರಗಳು ಆರಂಭವಾಗುವ ಮುನ್ನವೇ ಚಿತ್ರದ ಮಹತ್ತ್ವವನ್ನು ವೀರಣ್ಣನವರು ಮನಗಂಡಿದ್ದರು. ಹಾಗಾಗಿ ಅವರು ಎರಡೂ ಕ್ಷೇತ್ರಗಳಲ್ಲಿ ನಡೆಸಿದ ಪ್ರಯೋಗಗಳು ಅವರ ಸಾಹಸ ಮತ್ತು ಸೃಜನಶೀಲತೆಗೆ ಇಂದಿಗೂ ಸಾಕ್ಷಿಯಾಗಿವೆ.

ಚಲನಚಿತ್ರರಂಗದ ಅನಂತ ಸಾಧ್ಯತೆಗಳನ್ನು ಮನಗಂಡಿದ್ದ ಖ್ಯಾತ ಸಾಹಿತಿ ದೇವುಡು ನರಸಿಂಹಶಾಸ್ತ್ರಿ ಮತ್ತು ಅವರ ಗೆಳೆಯ ಓರಿಯಂಟಲ್ ಬ್ಯಾಂಕಿನ ಅಧಿಕಾರಿ ಶ್ರೀನಿವಾಸಮೂರ್ತಿ ಅವರು ರಾಜ್ಯದಲ್ಲಿ ಚಿತ್ರಗಳನ್ನು ನಿರ್ಮಿಸುವ ಸ್ಟುಡಿಯೋ ನಿರ್ಮಾಣದ ಸಲಹೆಯನ್ನು ಮುಂದಿಟ್ಟಾಗ ವೀರಣ್ಣನವರು ಅದನ್ನು ಅಂಗೀಕರಿಸಿದರು. ೧೯೨೮ರ ವೇಳೆಗೆ ಭಕ್ತ ಕಬೀರ್ ನಾಟಕವನ್ನು ಚಿತ್ರೀಕರಿಸಲು ವಿಫಲ ಪ್ರಯತ್ನ ನಡೆಸಿದ್ದ ವೀರಣ್ಣನವರಿಗೆ ಈ ಯೋಜನೆ ಇಷ್ಟವಾಯಿತೆಂದು ಕಾಣುತ್ತದೆ. ದೇವುಡು, ಶ್ರೀನಿವಾಸಮೂರ್ತಿ ಅವರೊಡನೆ ಮತ್ತೆ ಅನೇಕರನ್ನು ಕಟ್ಟಿಕೊಂಡು ಕರ್ನಾಟಕ ಪಿಕ್ಚರ್ಸ್ (ಕೆಲವರು ಕರ್ನಾಟಕ ಫಿಲ್ಮ್ ಎಂದೂ ಬರೆದಿದ್ದಾರೆ) ಕಾರ್ಪೋರೇಷನ್ ಸಂಸ್ಥೆಯನ್ನು ಸ್ಥಾಪಿಸಿದರು (೧೯೨೮-೨೯). ಮಲ್ಲೇಶ್ವರಂನಲ್ಲಿ ದೊಡ್ಡ ಬಂಗಲೆಯೊಂದನ್ನು (ತಿಂಗಳಿಗೆ ಆ ಕಾಲಕ್ಕೆ ೧೫೦ ರೂ. ಬಾಡಿಗೆ) ಪಡೆದು ಸ್ಟುಡಿಯೋ ಆಗಿ ಪರಿವರ್ತಿಸಿದರು. ಇದೇ ಅವಧಿಯಲ್ಲಿ ಈಗ ಮೂವಿಲ್ಯಾಂಡ್ ಚಿತ್ರಮಂದಿರವಿರುವ ಪ್ರದೇಶದಲ್ಲಿ ವೀರಣ್ಣನವರು ಹನ್ನೆರಡು ವರ್ಷ ಲೀಸ್‌ಗೆ ಪಡೆದ ನಿವೇಶನದಲ್ಲಿ ಶಿವಾನಂದ ಥಿಯೇಟರ್ ನಿರ್ಮಿಸಿ (೧೯೩೦) ಚಿತ್ರೀಕರಣಕ್ಕೆ ಬಳಸುತ್ತಿದ್ದರು. ಗುಬ್ಬಿ ವೀರಣ್ಣನವರ ಆತ್ಮಕತೆ ಕಲೆಯೇ ಕಾಯಕದಲ್ಲಿ ದಾಖಲಿಸಿರುವಂತೆ ಈ ಸ್ಟುಡಿಯೋ ಸ್ಥಾಪನೆಗಾಗಿ ಮದರಾಸಿನ ವೇಲ್ ಪಿಕ್ಚರ್ಸ್ ಮತ್ತು ಮುಂಬೈನ ಸ್ಟುಡಿಯೋಗಳಿಂದ ಅಗತ್ಯ ಸಲಕರಣೆಗಳನ್ನು ತರಿಸಿಕೊಂಡಿದ್ದರು. ವೀರಣ್ಣನವರು ಆಡಳಿತ ನಿರ್ದೇಶಕರಾಗಿದ್ದ ಕರ್ನಾಟಕ ಪಿಕ್ಚರ್ಸ್ ಕಾರ್ಪೋರೇಷನ್ ಸಂಸ್ಥೆಯು ಹರಿಮಾಯಾ (೧೯೩೦) ಮೂಕಿ ಚಿತ್ರವನ್ನು ತಯಾರಿಸಿತು. ಆಗಲೇ ಮೂರು ಮೂಕಿ ಚಿತ್ರಗಳನ್ನು ನಿರ್ದೇಶಿಸಿ ಅನುಭವವಿದ್ದ ವೈ.ವಿ. ರಾವ್ ಅವರು ಚಿತ್ರದ ನಿರ್ದೇಶನದ ಹೊಣೆಯನ್ನು ಹೊತ್ತರು. ನಾಯಕನಾಗಿಯೂ ಅಭಿನಯಿಸಿದರು. ಜೊತೆಗೆ ವೀರಣ್ಣ, ಬಿ. ಜಯಮ್ಮ, ಸುಂದರಮ್ಮ ಮೊದಲಾದವರು ನಟಿಸಿದ್ದರು. ಬಳಿಕ ದೇವುಡು ಅವರ ಕಳ್ಳರಕೂಟ ಕಾದಂಬರಿಯನ್ನು ಆಧರಿಸಿ ಹಿಸ್ ಲೌ ಅಫೇರ್ ಚಿತ್ರ ನಿರ್ಮಿಸಿದರು. ತಾರಾಗಣದಲ್ಲಿ ನಾಟಕಕಾರ, ನಟ-ನಿರ್ದೇಶಕ, ಎಚ್.ಎಲ್.ಎನ್. ಸಿಂಹ, ಸುಬ್ಬಯ್ಯನಾಯ್ಡು, ಬಿ. ಜಯಮ್ಮ, ಮುಂದೆ ಹಿಂದೀ ಚಿತ್ರರಂಗದ ಪ್ರಸಿದ್ಧ ಖಳನಾಯಕಿ, ಪೋಷಕನಟಿಯಾಗಿ ಮೆರೆದ ಲಲಿತಾಪವಾರ್ ಮೊದಲಾದವರಿದ್ದರು. ಬೆಲ್ಜಿಯಂನಿಂದ ಬಂದಿದ್ದ ಆಲ್‌ಗಾಟ್‌ರವರು ಚಿತ್ರದ ನಿರ್ದೇಶಕರು.
ಗುಬ್ಬಿ ನಾಟಕ ಕಂಪನಿಯನ್ನು ಮುನ್ನಡೆಸಬೇಕಾದ ಅಗತ್ಯವಿದ್ದ ಕಾರಣ ವೀರಣ್ಣನವರಿಗೆ ಕರ್ನಾಟಕ ಪಿಕ್ಚರ್ಸ್ ಕಾರ್ಪೋರೇಷನ್ ಸಂಸ್ಥೆಯನ್ನು ಸಮರ್ಥವಾಗಿ ನಡೆಸಿಕೊಂಡು ಹೋಗಲಾಗಲಿಲ್ಲ. ಬೇರೆಯವರಿಗೆ ಹೆಚ್ಚಿನ ಜವಾಬ್ದಾರಿ ವಹಿಸಿದರು. ಕಾರಣ ಸಂಸ್ಥೆ ಅಪಾರ ನಷ್ಟ ಅನುಭವಿಸಬೇಕಾಯಿತು. ಸಾಲ ತೀರಿಸಲು ವೀರಣ್ಣನವರು ಪ್ರಯಾಸ ಪಡಬೇಕಾಯಿತು.
ಟಾಕಿ ಯುಗ ಆರಂಭವಾದ ನಂತರ ಚಿತ್ರದ ಬಗೆಗಿನ ಆಸಕ್ತಿ ಮತ್ತೆ ವೀರಣ್ಣನವರಲ್ಲಿ ಚಿಗುರಿತು. ಆಗ ರಂಗಭೂಮಿಯ ಮೇಲೆ ಅಪಾರ ಜನಪ್ರಿಯತೆ ಪಡೆದಿದ್ದ ಸದಾರಮೆ (೧೯೩೫) ನಾಟಕವನ್ನು ತೆರೆಯ ಮೇಲೆ ತರಲು ನಿರ್ಧರಿಸಿದರು. ಕೊಯಮತ್ತೂರಿನ ಷಣ್ಮುಖ ಚೆಟ್ಟಿಯಾರ್‌ರವರ ಶಕುಂತಲಾ ಪಿಕ್ಚರ್ಸ್ ಲಾಂಛನದಡಿ ಪಾಲುದಾರಿಕೆಯಲ್ಲಿ ಅದನ್ನು ಮುಂಬಯಿಯ ಸೆಂಟ್ರಲ್ ಸ್ಟುಡಿಯೋದಲ್ಲಿ ಚಿತ್ರೀಕರಿಸಿದರು. ನಿರ್ದೇಶಕರು ರಾಜಾ ಚಂದ್ರಶೇಖರ್, ಹಾಡುಗಳನ್ನು ವಾದ್ಯಗೋಷ್ಠಿಯವರು ಟ್ರಾಲಿಯ ಮೇಲೆ ಕುಳಿತು ವಾದ್ಯ ನುಡಿಸುತ್ತಿರುವಾಗಲೇ ಚಿತ್ರೀಕರಿಸಿ, ಧ್ವನಿ ಮುದ್ರಿಸುವ ಪದ್ಧತಿಯಲ್ಲಿ ಅದು ತಯಾರಾಯಿತು. ಗೀತೆಗಳನ್ನು ಬೆಳ್ಳಾವೆ ನರಹರಿಶಾಸ್ತ್ರಿಗಳು ಬರೆದಿದ್ದರು. ಕಳ್ಳನ ಪಾತ್ರದಲ್ಲಿ ಗುಬ್ಬಿ ವೀರಣ್ಣನವರು ನಟಿಸಿದರು. ಈ ಮುನ್ನ ರಂಗಭೂಮಿಯಲ್ಲಿ ವೀರಣ್ಣನವರು ಕಳ್ಳನ ಪಾತ್ರದಲ್ಲಿ ಪ್ರೇಕ್ಷಕರನ್ನು ಸೆರೆ ಹಿಡಿದಿದ್ದರು. ಚಿತ್ರದ ಯಶಸ್ಸಿಗೆ ಇದು ಪ್ರಮುಖ ಪಾತ್ರ ವಹಿಸಿತು. ಸದಾರಮೆ ಪಾತ್ರದಲ್ಲಿ ಕೆ. ಅಶ್ವತ್ಥಮ್ಮ, ಸದಾರಮೆಯ ಪ್ರಿಯಕರ ಜಯವೀರನ ಪಾತ್ರದಲ್ಲಿ ಮುರಾರಾಚಾರ್ ಮತ್ತು ಚಂಚುಕುಮಾರಿಯಾಗಿ ಬಿ. ಜಯಮ್ಮ ಅವರು ಅಭಿನಯಿಸಿದ್ದರು. ಇದು ಕನ್ನಡದ ಮೂರನೆಯ ಚಿತ್ರ. ಮುಂಬೈನಲ್ಲಿ ಚಿತ್ರೀಕರಣ ನಡೆಸುತ್ತಿರುವಾಗ ಆರ್ಥಿಕವಾಗಿ ತೊಂದರೆ ಅನುಭವಿಸಿದರೂ ವೀರಣ್ಣನವರು ಚಿತ್ರೀಕರಣ ಪೂರೈಸಿದರು. ಮೊದಲೇ ಜನಪ್ರಿಯವಾಗಿದ್ದ ನಾಟಕದ ಚಿತ್ರರೂಪವನ್ನು ನೋಡಲು ಪ್ರೇಕ್ಷಕರು ಬಂದರು. ಆದರೆ ಗುಬ್ಬಿ ಕಂಪನಿಗೆ ಹೆಚ್ಚು ಲಾಭವಾಗಲಿಲ್ಲ. ಆದರೆ ಇದರ ಯಶಸ್ಸು ಗುಬ್ಬಿ ವೀರಣ್ಣನವರ ಹಿಂದಿನ ನಿರಾಶಾಭಾವವನ್ನು ಅಳಿಸಿತು. ಮುಂದೆ ಚಲನಚಿತ್ರ ತಯಾರಿಸಲು ಸ್ಫೂರ್ತಿ ನೀಡಿತು.

ಆರು ವರ್ಷ ಚಿತ್ರರಂಗದ ಕಡೆ ತಲೆಹಾಕದ ವೀರಣ್ಣನವರು ೧೯೪೧ರಲ್ಲಿ ಮತ್ತೆ ತಮ್ಮ ಕಂಪನಿಯ ಪ್ರಸಿದ್ಧ ಪ್ರಯೋಗ ಬಿ. ಪುಟ್ಟಸ್ವಾಮಯ್ಯನವರ ಸುಭದ್ರಾವನ್ನು ತೆರೆಗಿತ್ತರು. ಕನ್ನಡ ಚಲನಚಿತ್ರರಂಗದ ಇತಿಹಾಸದ ದೃಷ್ಟಿಯಿಂದ ಇದಕ್ಕೆ ಪ್ರಾಮುಖ್ಯವಿದೆ. ೧೯೩೮ರಿಂದ ಮುಂದಿನ ಮೂರು ವರ್ಷಕಾಲ ಕನ್ನಡ ಚಿತ್ರಗಳ ತಯಾರಿಗೆ ಸ್ಥಗಿತಗೊಂಡು ಒಂದು ಚಿತ್ರವೂ ಈ ಅವಧಿಯಲ್ಲಿ ಚಿತ್ರೀಕರಣವಾಗಲಿಲ್ಲ; ಬಿಡುಗಡೆಯಾಗಲಿಲ್ಲ. ಕನ್ನಡ ಚಿತ್ರರಂಗಕ್ಕೆ ಅಂಟಿದ ಈ ಕ್ಷಾಮಕ್ಕೆ ಅಂತ್ಯ ಹಾಡಲು ಗುಬ್ಬಿ ವೀರಣ್ಣನವರೇ ಮುಂದಾದರು. ವೀರಣ್ಣ ಮತ್ತು ಆಚಾರ್ಯ ಲಾಂಛನದಡಿ ಸುಭದ್ರೆಯ ವಿವಾಹದ ಪ್ರಸಂಗವನ್ನು ತೆರೆಗೆ ಅಳವಡಿಸಿದರು. ಪುಣೆಯ ಅರುಣಾಚಲ ಸ್ಟುಡಿಯೋನಲ್ಲಿ ಪ್ರಸಿದ್ಧ ನಟ-ನಿರ್ದೇಶಕ ವಿ. ಶಾಂತಾರಾಂ ಅವರು ಕ್ಯಾಮೆರಾ ಚಾಲನೆ ಮಾಡುವ ಮೂಲಕ ಚಿತ್ರೀಕರಣ ಆರಂಭವಾಯಿತು. ಸುಭದ್ರ ಚಿತ್ರದ ನಿರ್ಮಾಣ ಕಾರ್ಯ ಆರಂಭವಾದರೂ ಮತ್ತೆ ಕಹಿ ಘಟನೆಗಳನ್ನು ವೀರಣ್ಣನವರು ಎದುರಿಸಿದರು. ಚಿತ್ರ ನಿರ್ಮಾಣಕ್ಕೆ ಪಾಲುದಾರರಾಗಿದ್ದ ವೆಂಕಣ್ಣಾಚಾರ್ ಎಂಬುವರು ಹಿಂದೆಗೆದರು. ಚಿತ್ರೀಕರಣ ಆರಂಭಿಸಿದ್ದನ್ನು ನಿಲ್ಲಿಸಲು ಒಪ್ಪದ ಗುಬ್ಬಿ ವೀರಣ್ಣನವರು ಮುಂಬೈನ ಉದ್ಯಮಿಯಿಂದ ಸಾಲ ಪಡೆದು ಪೂರ್ಣಗೊಳಿಸಿದರು. ಧ್ವನಿ ಮುದ್ರಣ ಮತ್ತು ರೀರೆಕಾರ್ಡಿಂಗ್ ಕಾರ್ಯವನ್ನು ಮುಂಬೈನಲ್ಲಿ ಮಾಡಿಸಿದರು.
ಆಗ ಖ್ಯಾತ ನಿರ್ದೇಶಕರೆನಿಸಿಕೊಂಡಿದ್ದ ತೆಲುಗಿನ ಪಿ. ಪುಲ್ಲಯ್ಯನವರು ಈ ಚಿತ್ರದ ನಿರ್ದೇಶಕರು. ಅರಮನೆಯ ಆಸ್ಥಾನ ವಿದ್ವಾನ್ ಬಿ. ದೇವೇಂದ್ರಪ್ಪ, ಪದ್ಮನಾಭಶಾಸ್ತ್ರಿ ಮತ್ತು ಆಗಿನ್ನೂ ಯುವಕರಾಗಿದ್ದ ಮಲ್ಲಿಕಾರ್ಜುನ ಬಿ. ಮನ್ಸೂರ್ ಸಂಗೀತ ನಿರ್ದೇಶನ ನೀಡಿದ್ದರು. ಸ್ವತಃ ಮನ್ಸೂರ್ ಸಹ ಈ ಚಿತ್ರಕ್ಕೆ ಹಾಡಿದ್ದರು. ಹೊನ್ನಪ್ಪ ಭಾಗವತರ್ ನಾಯಕ (ಅರ್ಜುನ) ಪಾತ್ರಧಾರಿಯಾಗಿದ್ದರು. ಅವರಿಗೆ ಇದು ಕನ್ನಡದ ಮೊದಲ ಚಿತ್ರ. ಬಿ. ಜಯಮ್ಮ (ಸುಭದ್ರಾ) ವಾಸುದೇವ ಗಿರಿಮಾಜಿ (ಕೃಷ್ಣ) ಬಿ. ದೇವೇಂದ್ರಪ್ಪ (ನಾರದ) ಮೊದಲಾದವರು ನಟಿಸಿದ್ದರು. ಈ ಚಿತ್ರದ ಶ್ರೀ ಹರೇ ನಮೋ ಧುರಿತಾರೆ… ಹಾಡು ಅಂದಿನ ಹಳೇ ಮೈಸೂರು ಪ್ರಾಂತ್ಯದ ಜನರಲ್ಲಿ ಜನಪ್ರಿಯವಾಗಿತ್ತು. ಮತ್ತೊಂದು ವಿಶೇಷವೆಂದರೆ ಗುಬ್ಬಿ ಕಂಪನಿಗೆ ‘ಕುರುಕ್ಷೇತ್ರದಂತಹ ಜನಪ್ರಿಯ ನಾಟಕ ರಚಿಸಿಕೊಟ್ಟಿದ್ದ ಬಿ.ಪುಟ್ಟಸ್ವಾಮಯ್ಯನವರು ಈ ಚಿತ್ರದ ಸಹನಿರ್ದೇಶಕರಾಗಿದ್ದರು. ಚಿತ್ರ ಜನಪ್ರಿಯವಾಗಿ ಮತ್ತೆ ವೀರಣ್ಣನವರಲ್ಲಿ ಚಿತ್ರರಂಗದ ಬಗ್ಗೆ ಆಸಕ್ತಿಯನ್ನು ಮೂಡಿಸಿತು.
ಸುಭದ್ರಾ ಚಿತ್ರದ ನಂತರ ವೀರಣ್ಣನವರು ಮತ್ತೊಂದು ಸಾಹಸಕ್ಕೆ ಕೈಹಾಕಿದರು. ಕನ್ನಡದ ಎರಡನೇ ಸಾಮಾಜಿಕ ಚಿತ್ರವಾಗಿ ಜೀವನ ನಾಟಕ ನಿರ್ಮಿಸಿದರು. ಕಾದಂಬರಿ ಸಾರ್ವಭೌಮ ಅ.ನ. ಕೃಷ್ಣರಾಯರನ್ನು ಚಿತ್ರಕತೆ-ಸಂಭಾಷಣೆ ರಚಿಸಲು ಆಹ್ವಾನಿಸಿದರು. ಕೆಂಪರಾಜ ಅರಸು ಅವರು ನಾಯಕರಾಗಿದ್ದರು. ಇದು ಅವರ ಅಭಿನಯದ ಮೊದಲ ಚಿತ್ರ. ನಾಯಕಿಯ ಪಾತ್ರಕ್ಕೆ ಶಾಂತಾ ಹುಬ್ಳೀಕರ್ ಮುಂಬೈನಿಂದ ಬಂದಿದ್ದರು. ಮರಾಠೀ, ಹಿಂದೀ ಚಿತ್ರಗಳ ಜನಪ್ರಿಯ ತಾರೆ. ಕೊಯಮತ್ತೂರಿನ ಸೆಂಟ್ರಲ್ ಸ್ಟುಡಿಯೋನಲ್ಲಿ ಚಿತ್ರೀಕರಣ ನಡೆಯುತ್ತಿದ್ದಾಗ ಮಾಮೂಲಿ ತಾರೆಯರ ನಖರಾ ಪ್ರದರ್ಶಿಸಿ ಅ.ನ.ಕೃ. ಅವರ ಕೋಪಕ್ಕೆ ತುತ್ತಾಗಿದ್ದರು. ಗುಬ್ಬಿ ವೀರಣ್ಣನವರೂ ಪ್ರಮುಖ ಪಾತ್ರ ನಿರ್ವಹಿಸಿದ್ದರು. ರಾಜ್ ಅವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ಅಭಿನಯಿಸಿದ ಏಕೈಕ ಚಿತ್ರವೆಂಬ ದಾಖಲೆ ಈ ಚಿತ್ರಕ್ಕಿದೆ. ತೆಲುಗಿನಲ್ಲಿಯೂ ಇದೇ ಕತೆಯನ್ನು ಆಧರಿಸಿದ ‘ಸ್ವರ್ಗಸೀಮಾ ಎಂಬ ಚಿತ್ರವು ತಯಾರಾಯಿತು.
ಗುಬ್ಬಿ ವೀರಣ್ಣನವರು ಮತ್ತೆ ಗುಬ್ಬಿ ಶ್ರೀ ಚನ್ನಬಸವೇಶ್ವರ ಫಿಲಂಸ್ ಅಡಿಯಲ್ಲಿ ಜನಪ್ರಿಯ ಹೇಮರೆಡ್ಡಿ ಮಲ್ಲಮ್ಮ (೧೯೪೫) ರಂಗಕೃತಿಯನ್ನು ಚಿತ್ರವಾಗಿಸಿದರು. ಅಭಿನವ ಶಿರೋಮಣಿ ಸಿ.ಬಿ. ಮಲ್ಲಪ್ಪನವರು ಹೇಮರೆಡ್ಡಿಯ ಪಾತ್ರ ವಹಿಸಿದರೆ ಬಿ. ಜಯಮ್ಮರವರು ಮಲ್ಲಮ್ಮನ ಪಾತ್ರ ನಿರ್ವಹಿಸಿದರು. ಜೊತೆಗೆ ಹೊನ್ನಪ್ಪ ಭಾಗವತರ್ (ಈಶ್ವರ), ಗುಬ್ಬಿ ವೀರಣ್ಣ (ಭರಮರೆಡ್ಡಿ) ಸಹ ನಟಿಸಿದ್ದರು. ಸಾಹಿತಿ ಕುರಾಸೀ ಅವರು ಪಾತ್ರವೊಂದರಲ್ಲಿ ಅಭಿನಯಿಸಿ ಚಿತ್ರರಂಗಕ್ಕೆ ಪದಾರ್ಪಣ ಮಾಡಿದರು. ಇದು ಸಾಕಷ್ಟು ಜನಪ್ರಿಯಗೊಂಡು ಸಂಸ್ಥೆಗೆ ಒಳ್ಳೆಯ ಲಾಭವನ್ನೇ ತಂದುಕೊಟ್ಟಿತು.

ಗುಬ್ಬಿ ಕರ್ನಾಟಕ ಫಿಲಂಸ್ ಸಂಸ್ಥೆಯನ್ನು ಸ್ಥಾಪಿಸಿ ಚಿತ್ರ ನಿರ್ಮಾಣ ಮುಂದುವರೆಸಿದ ವೀರಣ್ಣನವರು ಎಚ್.ಎಲ್.ಎನ್. ಸಿಂಹ ಅವರ ನಿರ್ದೇಶನದಲ್ಲಿ ಗುಣಸಾಗರಿ (೧೯೫೩) ಎಂಬ ಅಪಾರ ಯಶಸ್ಸುಗಳಿಸಿದ ಜಾನಪದ ಚಿತ್ರವನ್ನು ನಿರ್ಮಿಸಿದರು. ಪಂಡರೀಬಾಯಿಯವರು ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದರು.
ಮರುವರ್ಷ ಗುಬ್ಬಿ ಕರ್ನಾಟಕ ಫಿಲ್ಮ್ಸ್ ತಯಾರಿಸಿದ ಬೇಡರ ಕಣ್ಣಪ್ಪ ಕನ್ನಡ ಚಿತ್ರರಂಗದ ಗತಿಯನ್ನೇ ಬದಲಿಸಿತು. (ಅದರ ವಿವರಗಳನ್ನು ಮುಂದಿನ ಅಧ್ಯಾಯದಲ್ಲಿ ನೋಡಬಹುದು) ಮುಂದೆ ವೀರಣ್ಣನವರು ಸಿ.ಆರ್. ಬಸವರಾಜ್ ಅವರೊಡಗೂಡಿ ಮುರಿಯದ ಮನೆ (೧೯೬೪) ಚಿತ್ರವನ್ನು ನಿರ್ಮಿಸಿದರು. ಇದು ತಮಿಳಿನಲ್ಲಿ ಭಾಗ ಪಿರಿವಿನೈ ಹೆಸರಿನಲ್ಲಿ ಅತ್ಯಂತ ಯಶಸ್ವಿಯಾಗಿದ್ದ ಚಿತ್ರದ ರೀಮೇಕು. ಹಿಂದಿಯಲ್ಲೂ ನೂತನ್-ಸುನಿಲ್‌ದತ್ ಜೋಡಿಯಲ್ಲಿ ಖಾಂದಾನ್ ಹೆಸರಿನಲ್ಲಿ ರೀಮೇಕ್ ಆಗಿತ್ತು. ಮುರಿಯದ ಮನೆ ಸಹ ಆ ಕಾಲಕ್ಕೆ ಸಾಮಾಜಿಕ ಚಿತ್ರಗಳಲ್ಲಿ ಸಹಜವಾಗಿದ್ದ ಕೌಟುಂಬಿಕ ವಿಘಟನೆ, ಅಣ್ಣ-ತಮ್ಮಂದಿರ ನಡುವಣ ಬಿರುಕು, ವಿರಸ ಮತ್ತು ಅಂತಿಮದಲ್ಲಿ ಕುಟುಂಬ ಒಗ್ಗೂಡುವ ಕಥಾ ಹಂದರವನ್ನೇ ಆಧರಿಸಿತ್ತು. ರಾಜ್‌ರವರು ವಿದ್ಯುತ್ ಷಾಕ್‌ಗೆ ಒಳಗಾಗಿ ಅಂಗ ಊನಗೊಂಡ ನಾಯಕನ ಪಾತ್ರದಲ್ಲಿ ಪ್ರೇಕ್ಷಕರನ್ನು ತನ್ಮಯಗೊಳಿಸುವಂತೆ ನಟಿಸಿದ್ದರು. ಬಾಲಕೃಷ್ಣ ಅವರ ಇಂಗ್ಲಿಷ್ ಮಿಶ್ರಿತ ಕನ್ನಡ ಸಂಭಾಷಣೆ ಹೇಳುತ್ತಾ ಮನೆ ಮುರುಕನ ಪಾತ್ರದಲ್ಲಿ ರಾರಾಜಿಸಿದ್ದರು. ಕೇದಗೆಯ ಹೂ ಮುಡಿದು ಆದರದ ನಗೆ ಮಿಡಿದು ಮತ್ತು ಮತಿ ಹೀನ ನಾನಾಗೆ ತಂದೆ, ಮಗುವಾಗಿ ನೀನೇಕೆ ಬಂದೆ ಹಾಡುಗಳು (ರಚನೆ ಕುರಾಸೀ) ಇಂದಿಗೂ ನೆನಪಾಗುತ್ತವೆ. ಮುಂದೆ ವೀರಣ್ಣನವರು ಮುರಿಯದ ಮನೆ (೧೯೬೪) ನಿರ್ಮಿಸಿದರು.
ಗುಬ್ಬಿ ಸಂಸ್ಥೆಯು ವಿತರಕ ಸಂಸ್ಥೆಯಾಗಿಯೂ ಕಾರ್ಯ ನಿರ್ವಹಿಸಿತು. ಇದಲ್ಲದೆ ಅದಕ್ಕೆ ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿ ಗೀತಾ, ಮೂವಿಲ್ಯಾಂಡ್ ಮತ್ತು ಸಾಗರ್ ಥಿಯೇಟರ್‌ಗಳ ಒಡೆತನವಿತ್ತು. ಹೀಗೆ ಗುಬ್ಬಿ ಕಂಪನಿ ನಿರ್ಮಾಣ ಮತ್ತು ವಿತರಣೆ ಮತ್ತು ಪ್ರದರ್ಶನ ಕ್ಷೇತ್ರಗಳಲ್ಲಿ ಚಲನಚಿತ್ರರಂಗಕ್ಕೆ ಸೇವೆ ಸಲ್ಲಿಸಿತು. ಮುಂದೆ ಗುಬ್ಬಿ ವೀರಣ್ಣನವರ ಮೂಲಕವೇ ಶ್ರೀ ಕಂಠೀರವ ಸ್ಟುಡಿಯೊ ಸ್ಥಾಪನೆಯಾದದ್ದು ಮತ್ತೊಂದು ಇತಿಹಾಸ.
ಗುಬ್ಬಿ ಕಂಪನಿಯೆಂಬುದೊಂದು ದೊಡ್ಡ ಕರ್ಮಭೂಮಿ. ಅದರ ಕುಲುಮೆಯಿಂದ ರೂಪುಗೊಂಡು ಬಂದ ಅನೇಕ ಕಲಾವಿದರು ಮತ್ತು ತಂತ್ರಜ್ಞರು ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಕನ್ನಡದ ಮೊದಲ ಸಾಮಾಜಿಕ ಚಿತ್ರ ನಿರ್ದೇಶಿಸಿ ನಂತರ ‘ಬೇಡರ ಕಣ್ಣಪ್ಪ ಚಿತ್ರದ ಮೂಲಕ ಕನ್ನಡ ಚಲನಚಿತ್ರರಂಗಕ್ಕೆ ತಿರುವು ನೀಡಿದ ನಿರ್ದೇಶಕ ಎಚ್.ಎಲ್.ಎನ್.ಸಿಂಹ ಗುಬ್ಬಿ ಕಂಪನಿಯ ನಂಟು ಹೊಂದಿದ್ದರು. ಸಾಹಿತಿ ಕು.ರಾ. ಸೀತಾರಾಮಶಾಸ್ತ್ರಿ, ಬೆಳ್ಳಾವೆ ನರಹರಿಶಾಸ್ತ್ರಿ, ನಿರ್ಮಾಪಕ- ನಿರ್ದೇಶಕರಾಗಿ ದಕ್ಷಿಣ ಭಾರತದಲ್ಲಿ ದೊಡ್ಡ ಹೆಸರು ಮಾಡಿದ ಬಿ.ಆರ್.ಪಂತುಲು, ಆರ್. ನಾಗೇಂದ್ರರಾಯರು ಹಾಗೂ ಮತ್ತೊಂದು ಸಂಸ್ಥೆಯನ್ನು ಕಟ್ಟಿದ ಎಂ.ವಿ. ಸುಬ್ಬಯ್ಯನಾಯ್ಡು ಅವರೂ ಗುಬ್ಬಿ ಕಂಪನಿಯಲ್ಲಿದ್ದವರೇ. ಮುಂದೆ ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದಲ್ಲಿ ಪ್ರಯೋಗ ನಡೆಸಿದ ಬಿ.ವಿ.ಕಾರಂತರ ವೃತ್ತಿ ಬದುಕು ಆರಂಭಗೊಂಡಿದ್ದು ಗುಬ್ಬಿ ಕಂಪನಿಯಲ್ಲಿ. ಸಾಹಿತಿ ದೇವುಡು ನರಸಿಂಹಶಾಸ್ತ್ರಿಯಂಥವರ ಚಲನಚಿತ್ರಾಸಕ್ತಿಗೆ ವೇದಿಕೆಯೊದಗಿಸಿದ್ದೇ ಗುಬ್ಬಿ ಕಂಪನಿ. ರಾಜ್‌ರವರ ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು ನಟಿಸಿದ ಏಕೈಕ ಚಿತ್ರ ಗುಬ್ಬಿ ಕಂಪನಿಯ ತಯಾರಿಕೆಯೇ ಆಗಿದೆ.

‘ಬೇಡರ ಕಣ್ಣಪ್ಪ ಚಿತ್ರ ನಿರ್ಮಾಣಕ್ಕೆ ಮುನ್ನ ಹೊನ್ನಪ್ಪ ಭಾಗವತರ್, ಡಿ.ಕೆಂಪರಾಜ ಅರಸು ಅಂಥ ಅಪ್ರತಿಮ ಕಲಾವಿದರಿಗೆ ಕನ್ನಡದಲ್ಲಿ ಅವಕಾಶ ಕಲ್ಪಿಸಿದವರು ವೀರಣ್ಣನವರು. ‘ಬೇಡರ ಕಣ್ಣಪ್ಪ ಚಿತ್ರವಂತೂ ಕನ್ನಡ ಚಿತ್ರರಂಗ ತೀವ್ರ ವೇಗವನ್ನು ಕಂಡಕೊಳ್ಳಲು ಕಾರಣವಾಯಿತು. ಆ ಚಿತ್ರದ ಮೂಲಕ ರಾಜ್‌ಕುಮಾರ್, ಟಿ.ಆರ್.ನರಸಿಂಹರಾಜು ಮತ್ತು ಜಿ.ವಿ. ಅಯ್ಯರ್ ಚಲನಚಿತ್ರ ರಂಗಕ್ಕೆ ದೊಡ್ಡ ರೀತಿಯಲ್ಲಿ ಪದಾರ್ಪಣೆ ಮಾಡಿದರು. ಅಷ್ಟೆ ಅಲ್ಲ, ಉದಯಕುಮಾರ್, ಬಾಲಕೃಷ್ಣ, ಬಿ.ಆರ್.ರಾಘವೇಂದ್ರ ರಾವ್, ಈಶ್ವರಪ್ಪ, ಮಹಾಬಲ ರಾಯರು, ಸಿ.ಬಿ.ಮಲ್ಲಪ್ಪ, ಡಿಕ್ಕಿ ಮಾಧವರಾವ್, ತಮಾಷಾ ಮಾಧವರಾವ್ ಗುಬ್ಬಿ ಕಂಪನಿಯ ಉತ್ಪನ್ನಗಳೇ! ಕನ್ನಡಕ್ಕೆ ಮೊಟ್ಟ ಮೊದಲ ಬಾರಿಗೆ ನಟನೆಗಾಗಿ ರಾಷ್ಟ್ರೀಯ ಪ್ರಶಸ್ತಿ ಪಡೆದ ಎಂ.ವಿ. ವಾಸುದೇವರಾವ್ ಗುಬ್ಬಿ ಕಂಪನಿಯಲ್ಲಿ ಬಾಲನಟರಾಗಿ ಪ್ರವರ್ಧಮಾನಕ್ಕೆ ಬಂದವರು. ‘ಕಾಡು ಚಿತ್ರದ ಕಿಟ್ಟಿ ಪಾತ್ರಕ್ಕಾಗಿ ಅತ್ಯುತ್ತಮ ಬಾಲನಟ ರಾಜ್ಯ-ರಾಷ್ಟ್ರ ಪ್ರಶಸ್ತಿ ಗಳಿಸಿದ ಮಾಸ್ಟರ್ ನಟರಾಜ್ ವೀರಣ್ಣನವರ ಮೊಮ್ಮಗ. ಪ್ರಥಮ ವಾಕ್ಚಿತ್ರದ ನಾಯಕಿ ತ್ರಿಪುರಾಂಬ, ಕಂಠಶ್ರೀಗೆ ಹೆಸರಾಗಿದ್ದ ಕೆ.ಅಶ್ವಥಮ್ಮ, ಸ್ವರ್ಣಮ್ಮ ಮುಂತಾದವರು ರಂಗಭೂಮಿಯಲ್ಲೂ ರಸಿಕರನ್ನು ರಂಜಿಸಿದವರು.
ಗುಬ್ಬಿ ಕಂಪನಿಯ ಕುಟುಂಬಕ್ಕೆ ಸೇರಿದ ಹಲವಾರು ಸದಸ್ಯರು ಚಲನಚಿತ್ರರಂಗಕ್ಕೆ ಸಾಕಷ್ಟು ದುಡಿದಿದ್ದಾರೆ. ಬಸವರಾಜ್, ಜಿ.ವಿ.ಶಿವಾನಂದ್, ಅವರ ಮಗ ನಟರಾಜ್, ಪದ್ಮಶ್ರೀ, ಬಿ.ಜಯಶ್ರೀ, ಲತಾದೇವಿ ಮುಂತಾದವರು ಕನ್ನಡ ಚಿತ್ರರಂಗದ ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿದಿದ್ದಾರೆ. ‘ಕಾಡು ಚಿತ್ರದ ಕಿಟ್ಟಿಯ ಪಾತ್ರ ನಿರ್ವಹಿಸಿದ ಮಾಸ್ಟರ್ ನಟರಾಜ್ ಕನ್ನಡಕ್ಕೆ ಮೊದಲ ಅತ್ಯುತ್ತಮ ಬಾಲನಟ ರಾಷ್ಟ್ರ ಪ್ರಶಸ್ತಿಯನ್ನು ಗಳಿಸಿಕೊಟ್ಟರು. ಈಗಲೂ ಗುಬ್ಬಿ ಕಂಪನಿಯ ಒಡೆಯರ ವಂಶವೃಕ್ಷವನ್ನು ಅರಸಿ ಹೋದರೆ ಕನ್ನಡ ಚಿತ್ರರಂಗ ಮತ್ತು ಟಿವಿ ರಂಗಗಳಲ್ಲಿ ಅದರ ಶಾಖೋಪಶಾಖೆಗಳು ಹರಡಿ ಹೋಗಿರುವುದು ಅರಿವಾಗುತ್ತದೆ.
ಹೀಗೆ ಗುಬ್ಬಿ ಕಂಪನಿ ಪ್ರತಿಭಾವಂತರಿಗೊಂದು ಕರ್ಮಭೂಮಿಯಾಗಿತ್ತು. ಅದರ ಫಲ ಕನ್ನಡ ಚಿತ್ರರಂಗಕ್ಕಾಯಿತು. ಕನ್ನಡ ಚಿತ್ರರಂಗಕ್ಕೆ ಕಲಾವಿದರು ಮತ್ತು ತಂತ್ರಜ್ಞರನ್ನು ತಯಾರಿಸುವ ಕೇಂದ್ರವಾಗಿದ್ದ ಅದು ಚಿತ್ರ ನಿರ್ಮಾಣ ಮತ್ತು ವಿತರಣೆಯಲ್ಲೂ ಸಾಕಷ್ಟು ಕಾಣಿಕೆ ಸಲ್ಲಿಸಿತು. ಜೊತೆಗೆ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರಗಳನ್ನು ಸಮಾನವಾಗಿ ಪೋಷಿಸಿದ ಅಪರೂಪದಲ್ಲಿ ಅಪರೂಪವಾದ ಸಂಸ್ಥೆಯಾಗಿರುವುದು ಕನ್ನಡಿಗರಿಗೆ ಕೋಡು ಮೂಡಿಸಬಲ್ಲ ಸಂಗತಿ.
*****



















