ಮನುಷ್ಯರ ಮನುಷ್ಯರ ನಡುವೆ
ಜಾತಿಯ ವಿಷ ಬೀಜ
ಬಿತ್ತಿದವರು ನೀವು
ಜಾತ್ಯಾತೀತತೆಯ ಮಾತು
ನಿಮಗೆ ಶೋಭಿಸದು ಬಿಡಿ.
ಸಮಾನತೆಯ ಮಾತು ಬೇಡ
ನಿಮಗೆ ಇಷ್ಟವಾಗುವುದಿಲ್ಲ
ಹಿಟ್ಲರನ ಸಂತತಿ ಅಧಿಕಾರಿಶಾಹಿಗೆ
ಪ್ರಜಾಪರತೆಯ ಮಾತು ಬಿಡಿ
ಅದು ನಿಮಗೆ ಶೋಭಿಸದು.
ಗುಡಿಸಲ ಬಡವರವರು ನಾವು
ತಳ್ಳು ಬಂಡಿಯ ವ್ಯಾಪಾರಿಗಳು
ಗಲಭೆಗಳಾದಾಗ ನಾವು ಮೊದಲ ಬಲಿಗಳು
ಸೌಹಾರ್ದದ ಮಾತು ಬಿಡಿ
ಅದು ನಿಮಗೆ ಶೋಭಿಸದು.
ನಿಮ್ಮ “ಸಬ್ ಕಾ ವಿಕಾಸ್” ನಲ್ಲಿ
ಮನ್ ಕಿ ಬಾತ್ ಹೇಳುತ್ತಿರಿ.
ನಿಮ್ಮ ಸ್ಮಾರ್ಟ್ ಸಿಟಿಯಲ್ಲಿ
ನಮಗೆಲ್ಲಿದೆ ಜಾಗ?
ಬರೀ ಭರವಸೆಗಳು ಬಿಡಿ
ಅದು ನಿಮಗೆ ಶೋಭಿಸದು.
ಗಾಂಧೀ ಕೈಗೆ ಕಸಬರಿಕೆ ಕೊಟ್ಟಿದ್ದೀರಿ
ಭಾರತ ಸ್ವಚ್ಛ ಗೊಳಿಸಲು ಅವನ ಕನ್ನಡಕ
ನಿಮ್ಮ ಹತ್ತು ಲಕ್ಷದ ಹೊನ್ನಿನ ಸೂಟಿದೆಯಲ್ಲ
ನನ್ನ ಹರಕು ಸೀರೆಯ ಮಾತು ಬಿಡಿ
ಅದು ನಿಮಗೆ ಶೋಭಿಸದು .
ದೇಶ ಬಲಿ ಕೇಳಿದಾಗಲೆಲ್ಲ
ನನ್ನ ಕತ್ತನ್ನೇ ಮೊದಲು ಕೊಟ್ಟೆ
ಓಟಿನ ಬೇಟದಲಿ ನೀವು
ಸೌಹಾರ್ದದ ಬದುಕಿಗೆ ಬೆಂಕಿಯಿಟ್ಟವರು
ದೇಶಭಕ್ತಿಯ ಮಾತು ಬಿಡಿ
ಅದು ನಿಮಗೆ ಶೋಭಿಸದು.
*****

















