ಪೋಲಿಸು ರಾಜ್ಯದಲಿ
ಸೈನ್ಯದ ಸಮಾವೇಶಗಳು
ಸಂಸ್ಕೃತಿಯ ಹೆಸರಿನಲಿ
ಸಭೆ ಸಮಾರಂಭ, ಘೋಷಣೆಗಳು
ಸರ್ಕಲ್ಲುಗಳಲ್ಲಿ ಹೊಯ್ದ ಮಳೆಯಂತೆ
ಅಬ್ಬರಿಸಿದ ಘೋಷಣೆಗಳು
ತಣ್ಣಗಾಗಿ ಶೈತ್ಯಾಗಾರ ಸೇರಿವೆ.
ಧರ್ಮ, ಜನಾಂಗಗಳ ಪ್ರಶ್ನೆಗಳು
ರೈತ, ಕಾರ್ಮಿಕರ ಸವಾಲುಗಳು
ಸಾಲು ಸಾಲು ರೈತರ ಆತ್ಮಹತ್ಯೆಗಳು
ಕಂಪನಿ ವಶವಾಗಿ ಹೊಲ ಗದ್ದೆಗಳು
ಕಾರ್ಖಾನೆಗಳಿಗೆ ಲಾಕೌಟ್‌ಗಳು
ಮನೆಯ ಗಂಡಸರೆಲ್ಲ ಸಾಮೂಹಿಕ
ನೇಣಿಗೆ ಶರಣಾದರು ಅವರು ಸರ್ಕಾರಿ
ಕಡತಗಳಲ್ಲಿ ಸಮಾಧಿಯಾದರು
ಕೋಮಲೆ ಹೂವಲ್ಲ ಕಿಡಿಯಾಗಿದ್ದಾಳೆ
ಹೆಣ ಭಾರದ ಬದುಕ ಬಂಡಿಯ
ನೊಗ ಹೊತ್ತು ಸಾಗಿದ್ದಾಳೆ ಅವಳು
ಮಕ್ಕಳ, ಮುದುಕರ, ಮನೆಯವರ
ಹಸಿದ ಹೊಟ್ಟೆಗಳ ತುಂಬಿಸಲು
ಅಗ್ಗದ ಕೂಲಿಯಾಗಿದ್ದಾಳೆ ಅವಳು
ನಿರಂತರ ದುಡಿಮೆಯ ಯಂತ್ರವಾಗಿದ್ದಾಳೆ
ಭೂಹೀನ ಕೂಲಿ ಕಾರ್ಮಿಕಳಾಗಿದ್ದಾಳೆ.
*****



















