ಹೆತ್ತವರಿಗೆ ಹೆಗ್ಗಣವೂ ಮುದ್ದು ಎನ್ನುವಂತೆ ಮಕ್ಕಳು ಕಂಡರೆ ಯಾರಿಗೆ ತಾನೆ ಮುದ್ದು ಅಥವಾ ಪ್ರೀತಿ ಇರುವುದಿಲ್ಲ ಹೇಳಿ? ಪುಟ್ಟಮಕ್ಕಳನ್ನು ನಾವು ಅತಿಯಾಗಿ ಅಲುಗಿಸುತ್ತೇವೆ. ಸಣ್ಣ ಮಕ್ಕಳನ್ನು ಎತ್ತಿ ಹಿಸುಕಿ ತಲೆಸವರಿ, ಮೈದಡವಿ ಎತ್ತಿ ಹಾಸಿಗೆಯ ಮೇಲೆ ಹಾಕುತ್ತೇವೆ. ಅವು ಸೂಕ್ಷ್ಮವೆಂದು ತಿಳಿದರೂ ಹೊಟ್ಟೆಯ ಭಾಗದಿಂದ ಎತ್ತಿಹಾಗೆಯೆ ಮಲಗಿಸಿದಾಗ ತಲೆ ಅಲ್ಲಾಡಿ ಅಪಾಯ ಗ್ಯಾರೆಂಟಿ ಆಗುತ್ತದೆ. ಸಣ್ಣಮಕ್ಕಳ ಒಳಅಂಗಾಂಗಗಳು ಬಹಳ ಮೃದುವಾಗಿರುತ್ತವೆ. ಎಷ್ಟೋ ಸಣ್ಣ ಮಕ್ಕಳಲ್ಲಿ ತಲೆಬುರುಡೆಯು ಪೂರ್ಣವಾಗಿ ಗಡುಸಾಗಿರುವುದಿಲ್ಲ ಎಷ್ಟೋ ಜನ ಕಂದಮ್ಮಗಳನ್ನು ಜೋರಾಗಿ ಅಲ್ಲಾಡಿಸುವುದು ಉಂಟು. ಇಂಥಹ ಚಟುವಟಿಕೆಗಳಿಂದ ಮಗುವಿನ ಮೇಲೆ ಆಗಬಹುದಾದ ಆಘಾತಕರ ಪರಿಣಾಮದ ಬಗ್ಗೆ ಯಾರಿಗೂ ಗೊತ್ತಿರುವುದಿಲ್ಲ. ಅಮೇರಿಕ ಒಂದರಲ್ಲೇ ಇಂಥಹ ಆಘಾತಗಳ ಕಾರಣಗಳಿಂದಾಗಿ ಪ್ರತಿ ವರ್ಷ ೧,೧೦೦ ಮಕ್ಕಳು ಸಾವಿಗೀಡಾಗುತ್ತಾರೆ. ಅಮೇರಿಕೆಯ ಕ್ಯಾಲಿಪೋನಿಯಾದಲ್ಲಿರುವ ಮಕ್ಕಳ ಆಸ್ಪತ್ರೆ ಮತ್ತು ಮಕ್ಕಳ ಆರೋಗ್ಯ ಕೇಂದ್ರದ ರಾಬರ್ಟ್ ಸ್ಟೀಯರ್ ಅಮೇರಿಕೆಯ ಪತ್ರಿಕೆಯೊಂದರಲ್ಲಿ ತಿಳಿಸಿರುವಂತೆ ಆ ದೇಶದಲ್ಲಿ ಒಂದುವರೆ ಲಕ್ಷ ಪುಟ್ಟ ಮಕ್ಕಳು “ಶೆಕನ್ ಬೇಬಿ ಸಿಂಡ್ರೋಮ”ನ ಪರಿಣಾಮವಾಗಿ ಗಂಭೀರ ಸ್ವರೂಪದ ದೈಹಿಕ ಗಾಯಕ್ಕೆ ಒಳಗಾಗುತ್ತಾರೆ. ಇವರಲ್ಲಿ ಎಷ್ಟೋ ಮಕ್ಕಳು ಶಾಶ್ವತವಾಗಿ ಅಂಗವಿಕಲರಾಗುವುದೂ ಸತ್ಯ.
ಶೇಕನ್ ಬೇಬಿಸಿಂಡ್ರೋಮ್’ಗೆ ಗುರಿಯಾದ ಮಗುವಿನ ಚಿತ್ರ ಬಹಳ ಭಯಾನಕವಾದುದು. ಮಿದುಳಿನ ಒಳಗೆ ಆಘಾತದ ಪರಿಣಾಮವಾಗಿ ರಕ್ತ ಸ್ರಾವವುಂಟಾಗುತ್ತದೆ. ಕೆಲವೊಮ್ಮೆ ಕಣ್ಣುಗಳಿಂದ ರಕ್ತಬರುವುದೂ ಇರುತ್ತದೆ. ಆದರೆ ತಲೆಯ ಹೊರಗೆ ಯಾವುದೇ ಬಗೆಯ ಗಾಯವಾಗಿರುವ ಸೂಚನೆ ಇರುವುದಿಲ್ಲ ಇಂಥಹ ಸಂದರ್ಭಗಳಲ್ಲಿ ಮಕ್ಕಳು ತೀವ್ರ ಅಪಾಯಕ್ಕೆ ಗುರಿಯಾಗುತ್ತಾರೆ. ಸಾವೂ ಕೂಡ ಸಂಭವಿಸುವುದಿದೆ. ಅಮೇರಿಕೆಯ ಮಿಚಿಗನ್ ವಿಶ್ವದ್ಯಾಲಯದ ತಜ್ಞರ ತಂಡವೊಂದು ಸೇಕನ್‌ಬೇಬಿ ಸಿಂಡ್ರೋಮ್‌ಗೆ ಗುರಿಯಾದ ಮಕ್ಕಳ ಬಗೆಗೆ ವ್ಯಾಪಕ ಅಧ್ಯಯನ ನಡೆಸಿದೆ. ಇವರ ಅಧ್ಯಯನದ ಪ್ರಕಾರ ಆಘಾತಕ್ಕೆ ಒಳಗಾದ ಮಕ್ಕಳ ಕಣ್ಣುಗಳ ಪರಿಶೀಲನೆಯಿಂದ ಅಪಾಯದ ಪ್ರಮಾಣದಲ್ಲಿ ಅಂದಾಜಿಸಬಹುದು. ಕಣ್ಣುಗಳ ಒಳಗೆ ಆಗಿರುವ ಹಾನಿಯಂತೆ ಮಿದುಳೊಳಗೂ ಕೂಡ ಆಗಿರುತ್ತದೆ. ಅಮೇರಿಕೆಯಲ್ಲಿ ಹೀಗೆಯೇ ಪ್ರೀತಿಗಾಗಿ ಮ್ಯಥ್ಯೂನ್ ಎಂಬ ಮಗುವನ್ನು ಒಬ್ಬ ವ್ಯಕ್ತಿ ಪ್ರೀತಿಯಿಂದ ಮೇಲಕ್ಕೆ ಎತ್ತಿ ಅಲ್ಲಾಡಿಸುತ್ತ ಹಾಸಿಗೆಯ ಮೇಲೆ ಮಲಗಿಸಿದ ಅದಕ್ಕೆ ಕೂಡಲೆ ಶೇಕನ್‌ಬೇಬಿ ಸಿಂಡ್ರೋಮ್ ಆಗಿಯೇ ಬಿಟ್ಟಿತು. ಆ ಮಗುವನ್ನು ಆಸ್ಪತ್ರೆಗೆ ಹಾಕಲಾಯಿತು. ಆ ಮಗುವಿನ ತಲೆಯ ಬುರುಡೆ ಬಿರುಕು ಬಿಟ್ಟಿತು. ಆಂತರೀಕ ರಕ್ತ ಸ್ರಾವದಿಂದ ಮಿದುಳು ಎಷ್ಟು ಊದಿಕೊಂಡಿತ್ತೆಂದರೆ ಶಸ್ತ್ರ ಕ್ರಿಯೆಯ ಸಂದರ್ಭದಲ್ಲಿ ಮಿದುಳಿನಲ್ಲಿ ಚಿಮ್ಮಿದ ರಕ್ತ ಆಸ್ಪತ್ರೆಯ ನೆಲದಲ್ಲಿ ಮಡುಗಟ್ಟಿ ನಿಂತಿತು! ಕೊನೆಗೆ ಆ ಮಗುವಿಗೆ ಸಾವು ಸಂಭವಿಸಿತು. ಈ ಕಾರಣಕ್ಕಾಗಿ ಮಗುವನ್ನು ಎತ್ತಿಮುದ್ದಾಡಿದ ವ್ಯಕ್ತಿ ಅಪರಾಧಿ ಎಂದು ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು.
ಅದಕ್ಕಾಗಿ ನೆನಪಿರಲಿ ಪುಟ್ಟ ಮಕ್ಕಳನ್ನು ಎಚ್ಚಿರಿಕೆಯಿಂದ ನೋಡಿಕೊಳ್ಳಬೇಕಿದೆ. ಅದು ಮಲಗಿದಲ್ಲೇ ನೋಡುವುದು ಒಳ್ಳೆಯದು. ಮುದ್ದಿಸಲು ಕೈಗೆತ್ತಿಕೊಳ್ಳಬೇಕೆನಿಸಿದರೆ ಒಂದು ಹೊದಿಕೆಯ ಸಂಗಡ ಮೃದುವಾಗಿ ಎತ್ತಿಕೊಳ್ಳಬೇಕು. ಎಷ್ಟೇ ಜನ ಮಕ್ಕಳನ್ನು ಬಿಗಿಯಾಗಿ ಅಪ್ಪಿ ಹಿಡಿದುಕೊಳ್ಳುವುದು ಮೇಲಕ್ಕೆತ್ತುವುದು, ಎಸೆದು ಹಿಡಿಯುವುದು ಇಂಥಹ ಭಯಾನಕ ಹಿಂಸೆಯನ್ನು ಮಕ್ಕಳಿಗೆಂದಿಗೂ ಮಾಡಬಾರದು.
*****



















