ಏಕಕಾಂಡದೊಳೆದ್ದು ಮೇಲೆ ಬಾನನು ತಾಗಿ
ಥಟ್ಟನಲ್ಲಿಯೆ ತನ್ನ ಕಟ್ಟ ಕಳೆದ ಬಗೆ
ಆಡುತಿಹ ಗರಿಗಳನು ದೆಸೆದೆಸೆಗೆ ಹರಹುತ್ತ
ನಿಂತ ತೆಂಗಿನ ಮೇಲೆ ಹರಿವುದೆನ್ನ ಬಗೆ
ನಡುವೆ ಗುಡಿಗೋಪುರದೊಲೆಸೆವ ಮಾಮರದೆಲೆಯ
ತುರುಗಲೊಳು ತಂಗುವುದು ತವರ ಕಂಡಂತೆ
ಗಗನದಮೃತದ ಮೊಲೆಯ ಸೀಪುನೆಲೆಗಳ ನಡುವೆ
ಮುದದ ಹನಿಯಾರಿಸುತ ತೇಮಗೊಳುವಂತೆ-
ನುಡಿಗೆ ಬಾರದ ಚೆಲುವಿನೊಳಸೊಗದ ಸಂಗಮವ ಬಿತ್ತರಿಸುತಿದೆ ವೇಣುಗಾನಲಹರೀ
ದೈವಚಿಂತಾಸಕ್ತಮಾದೆನ್ನ ಹೃದಯದೊಳು ಹೊಮ್ಮಲಂತಃ ಶರ್ಮಲಹರಿಲಹರೀ
*****


















