ಕೊನೆ ಕೊನೆಯ ಕವಿತೆಗಳು ಕೊನೆ ಕೊನೆಯ ಕನಸುಗಳು
ಬೆಳಕು ಕಾಯುವುದೆ ಕತ್ತಲು
ಅಟ್ಟದ ಮೇಲೆ ಅಥವಾ ಕೆಳಗೆ
ಇದೀಗ ಇದ್ದವು ಈಗೆಲ್ಲಿ ಹೋದವು ಕಿಟಿಕಿ ಮೂಲಕ
ಅಥವ ಯಾರು ತೆರೆದರು ಬಾಗಿಲ ಚಿಲಕ ಇಷ್ಟು ಬೇಗ
ಮೈಕೈಗೆ ಮಸಿ ಹಿಡಿದವರ ಕೈಗೂ
ವಸಿ ಹಿಡಿದವರ ಮನಸಿಗೂ
ಸಿಗುತವೆ ಈ ಇಂಥ ಭಾವ
ಕೊನೆಯೂ ಇಷ್ಟೊಂದು ಲಘುವಾಗಿರುತ್ತದೆಯೆ
ಆರಂಭ ಕೊನೆತನಕ ಬರುತ್ತದೆಯೆ
ಹಿಡಿದು ಬಿಟ್ಟರೆ ಎಲ್ಲಿ ಹಾರಿಹೋಗುತ್ತವೋ
ನಮಗೂ ಆತಂಕ
ಅಂತೂ ಉಳಿದವು ಬಹಳೊಂದು ಕವಿತೆಗಳು ಬರೆಯದೇ
ಗುಹಾವಾಸಿಗಳ ಗುಹೆಯಲ್ಲಿ
ನೋಡಿದಿರ ಅಜ್ಜನ ಗಡ್ಡ ಎಂಬವುಗಳು ಅರ್ಥಾತ್
ರೇಶಿಮೆ ಹತ್ತಿ ಬೀಜಗಳು
ಗುರುತ್ವಾಕರ್ಷ ವಿನಾ ಅಕ್ಷರ ರೂಪಿಗಳು ಹಾರಿಹೋಗುವುದ
ಗಾಳಿ ಬೀಸಿದ ಕಡೆ ಫೂ ಎಂದರೂ ಸಾಕು
ಹೋಗಿ ಕೂತುಕೊಳ್ಳುತ್ತವೆ ಹೂವಿನ ಮೇಲೆ ಎಂದೇನಿಲ್ಲ
ಮುಳ್ಳಿನ ಮೇಲೆ ಕೂಡ ಬೇಲಿಯಲ್ಲಿ ಅಥವ ಕಲ್ಲಿನಲ್ಲಿ
ಯಾಕೆ ಹೂ ಯಾಕೆ ಮುಳ್ಳು ಯಾಕೆ ಕಲ್ಲು ವಿಧಾತನಿಗೆ ಗೊತ್ತು
ಅವೂ ಯೋಚಿಸುತ್ತವೆ ಕೂತು ಬಹಳ ಹೊತ್ತು
ವಿಷಯ ಅಸ್ಪಷ್ಟ
ಪೆನ್ನು ಹರಿದಲ್ಲಿ ಗೆರೆಗಳು
ಮಸಿ ಮುಗಿದಲ್ಲಿ ಮೇರೆಗಳು
ಅಂತಿಮವಾಗಿ ಏನು
ಘನ ಕಾವ್ಯಗಳೆದುರು ಹೀಗೆ ಸುಳಿಯುವುದಕ್ಕೆ
ಅದೆಂಥ ಧೈರ್ಯ ಅಥವಾ ಮುಗ್ಧತೆ
ಜನ ಕಂಡಿದ್ದಾರೆ ಚಂಡಮಾರುತಗಳಂಥ ಯುದ್ದಗಳ
ಗುಡಿ ಗುಡಾರಗಳನ್ನೆ ಎತ್ತಿಹಾಕಿವೆ ದುರ್ಗ ಅರಮನೆಗಳ
ನೆಲಸಮ ಮಾಡಿವೆ ಇನ್ನು ವಾಡೆಗಳ ಬೀದಿಗಳ ಹಾದಿಗಳ
ಮಾತೇನು
ಆರಂಭಿಸಿದವರಿದ್ದಾರೆ ಎಲ್ಲವನ್ನೂ ಮೊದಲಿಂದ
ಯಾವುದೂ ಮೊದಲಿಂದ ಅಲ್ಲಿ ಖರೆ
ಮೌಲ್ಯ ಕಳಕೊಂಡ ಮೈಲಿಗಲ್ಲುಗಳು ಸ್ವರೂಪವಿಲ್ಲದ ಸೈಜುಗಲ್ಲುಗಳು
ಇತಿಹಾಸ ಪಡೆಯದೆ
ಇತಿ
ಲೆಕ್ಕವಿಲ್ಲದ ಆತ್ಮಗಳ ಕಂಡೆ
ವಿದ್ಯುತ್ ತಂತಿಗಳ ಮೇಲೆ
ಆತ್ಮಗಳೊ ಮಳೆನೀರ ಬಿಂದುಗಳೊ
ಹೊಳೆಯುತ್ತವೆ ಕರಗುತ್ತವೆ ನಿರ್ಭಾವ ನಿರ್ಮಮ
ಮಾತಿಲ್ಲದ ಕವಿತೆಯೇ ನಿನಗಷ್ಟೆ ಗೊತ್ತು
ಅವು ಮಾತಾಡುವುದು ಯಾರ ಜೊತೆ
ನಿರಪೇಕ್ಷ ಜಗತ್ತಿನಲ್ಲಿ ಇರುವೆಗಳಂತೆ ಇವೆ
ತಮಗಿಂತ ಹತ್ತುಪಟ್ಟು ಭಾರವ ಹೊತ್ತು
ಸಾಲುಗಳೆ ಇಲ್ಲ
*****


















