ಹಸಿದ ಕತ್ತಿಗೆ ಕತ್ತುಕೊಡಲಿರುವ
ನಿನಗೇನು ಗೊತ್ತು
ಜೀವಕ್ಕೆ ಬಂದಿರುವ ಕುತ್ತು, ಆಪತ್ತು?
ಗೊತ್ತಾದರೂ ನೀನೇನು ಮಾಡಲಾದೀತು?
ಬಲಿಕೊಟ್ಟು ಬಲಪಡೆಯುವವರ
ಸ್ವಾರ್ಥ ಅರ್ಥವಾಗಲಿಲ್ಲ ನಿನಗೆ
ನಿನಗೆಂತು ಅರ್ಥವಾದೀತು?
ಕಪಟ ನಗೆಯ ಹೊಗೆ ಮುಚ್ಚೀತು ಎಲ್ಲವನು
ಚಪ್ಪರ ಸಿಂಗರಿಸಿದೆ, ಸಪ್ಪಳ ಮೇಳೈಸಿದೆ
ಕಹಳೆ, ಕೊಂಬುಗಳ ನಾದ ಪಸರಿಸಿದೆ
ಬಲಿಗಾರನ ಕೈಯ್ಯ ಖಡ್ಗ ಗುಡುಗಿದೆ
ಬಲಿಗೆ ಸಿದ್ಧವಾಗಿದೆ ಪೀಠ
ಕಂಬಕ್ಕೆ ಕಟ್ಟಿದ ಮಾವಿನ ತೋರಣ
ಆಗಿದೆ ನಿನಗೆ ಅಂತಿಮ ಭೋಜನ
ಎತ್ತಿದ ಮಚ್ಚು, ಬಿದ್ದ ಹೊಡೆತ
ಮರುಕ್ಷಣ ನಿನ್ನ ಪ್ರಾಣ ಹರಣ
ದೇಶಭಕ್ತರ ಬಲಿದಾನಕ್ಕೊಂದು ಗುರಿಯಿದೆ
ನಿನ್ನ ಬಲಿಗೇನಿದೆ ಅರ್ಥ?
ಅಂಧ ಭಕ್ತರ ಪ್ರಪಂಚದಲ್ಲಿ
ಎಲ್ಲವೂ ಅನರ್ಥ, ಅಪಾರ್ಥ
ಬೆಳೆಸಿ, ಬಳಸಿಕೊಳ್ಳುವವರ ಭಕ್ತಿ ಪ್ರದರ್ಶನದ
ಉರುಳಿಗೆ ಕೊರಳು ಕೊಟ್ಟೆಯಾ ನೀನು?
ಮೂಕ ಪ್ರಾಣಿಯ ಪ್ರಾಣ ಭಿಕ್ಷೆಯನ್ನು
ಯಾವ ದೇವತಾನೇ ಕೇಳಿಯಾನು?.
*****


















