ಯೋಗದ ಸಿರಿಯ ತಿಳಿಯಬೇಕು
ಭೋಗದ ಲಾಲಸ ತೊರೆಯಬೇಕು
ತ್ಯಾಗದ ಭಾವ ಉದಯಿಸಲೂಬೇಕು
ನೀಗದ ತೃಷ್ಣೆಗಳಿಗೆ ದೂರಿಸಬೇಕು
ಆತ್ಮ ದೇವರಲಿ ಸೇರುವುದೇ ಯೋಗ
ಅದು ಆನಂದ ಪರಮಾನಂದ
ಕ್ಷಣಿಕ ಸುಖ ಭ್ರಮೆಯೇ ಭೋಗ
ಎಲ್ಲಿಯದು ಅಲ್ಲಿ ಸುಖಾನಂದ
ಆಲೋಚನೆ ಧ್ಯಾನದಿಂದ ಸವೆಯಬೇಕು
ಮನವು ಸ್ಮರಣಿಯಲಿ ಸವೆಯಬೇಕು
ತನವು ಸೇವೆಯಲಿ ಸವೆಯಬೇಕು
ಆತ್ಮವು ಪರಮಾತ್ಮನಲಿ ಸವೆಯಬೇಕು
ಅಕ್ಷಯ ಸುಖವುಂಟು ಯೋಗದಲಿ
ಅಕ್ಷಯ ದುಃಖವುಂಟು ಭೋಗದಲಿ
ಕ್ಷಯವಾಗುವುದು ಪಾಪ ಯೋಗದಲಿ
ಕ್ಷೀಣವಾಗುವುದು ಪುಣ್ಯ ಭೋಗದಲ್ಲಿ
ಭೋಗವಾಗಬೇಕು ಯೋಗಕೆ ಸಾಟಿ
ಯೋಗವಾಗಬೇಕು ಆನಂದಕೆ ಸಾಟಿ
ಆನಂದವಾಗಬೇಕು ಆತ್ಮವ ಮೀಟಿ
ಆತ್ಮದಲಿ ಮಾಣಿಕ್ಯ ವಿಠಲ ಭೇಟಿ
*****
















