ಅಧ್ಯಾಯ ಹನ್ನೊಂದು
ಯಥಾಕಾಲದಲ್ಲಿ ಭರತಾಚಾರ್ಯರು ಸಶಿಷ್ಯರೂ, ಸಮಿತ್ರರೂ ಆಗಿಬಂದು ಸುಲ್ತಾನರನ್ನು ಕಂಡರು. ಸುಲ್ತಾನರು ಅವರುಗಳಿಗೆಲ್ಲ ಪರಮಪ್ರೀತಿಯಿಂದ ಬೇಕಾದ ಉಪಚಾರಗಳನ್ನು ಮಾಡಿ ಬರಮಾಡಿಕೊಂಡರು. “ನಾವು ತಮ್ಮ ಖ್ಯಾತಿಯನ್ನು ಕೇಳಿದ್ದೆವು. ತಮ್ಮ ಶಿಷ್ಯಳ ಸಂಗೀತ ಕೇಳಬೇಕೆಂದು ಒಂದೆರಡುಸಲ ನಾನು ವೇಷವನ್ನು ಮರೆಸಿಕೊಂಡು ಬಂದಿದ್ದೆವು. ಆಚಾರ್ಯ, ಈಕೆಯ ಸಂಗೀತವನ್ನು ನಮ್ಮ ದರ್ಬಾರಿನಲ್ಲಿ ಕೇಳಬೇಕೆಂದು ನಾವು ತಮ್ಮ ಚಕ್ರವರ್‍ತಿಗಳೊಡನೆ ರಾಜಿ ಮಾಡಿಕೊಂಡಿದ್ದೇವೆ. ತಾವು ದಯಮಾಡಿಸಿದಿರಿ. ನಮ್ಮ ಆಶೆಯು ಸಫಲವಾಯಿತು. ತಾವು ಇಲ್ಲಿ ಆದಷ್ಟು ಕಾಲ ಇರಬೇಕು. ನಮ್ಮ ಕಿವಿಗಳಿಗೆ ಹಬ್ಬ ಮಾಡಬೇಕು. ಇಲ್ಲಿ ತಮಗೆ ಏನೇನು ಬೇಕೋ ಅದೆಲ್ಲವನ್ನೂ ನಮ್ಮ ದಿವಾನ್‌ಸಾಹೇಬರು ಮಾಡಿಸಿಕೊಡುವರು. ಯಾವ ವಿಚಾರದಲ್ಲೂ ತೊಂದರೆ ಮಾಡಿಕೊಳ್ಳದೆ ಸುಖವಾಗಿರಬೇಕು” ಎಂದು ತಾವೇ ಹೇಳಿದರು.
ಆಚಾರ್ಯರೂ ವಿನಯದಿಂದ ವಿಶ್ವಾಸದಿಂದ ಹೇಳಿದರು. “ಮಹಾಸ್ತಾಮಿ, ಚಕ್ರವರ್ತಿಗಳು ನಮಗೆ ಇಲ್ಲಿ ಒಂದು ತಿಂಗಳು ಬೇಕಾದರೂ ಇದ್ದು ಬನ್ನಿ ಎಂದು ಅಪ್ಪಣೆ ಕೊಟ್ಟಿದ್ದಾರೆ. ಜೊತೆಗೆ ನಾವು ಶ್ರೀಶೈಲಕ್ಕೂ ಹೋಗಿದ್ದು ಬರಬೇಕು ಎಂದುಕೊಂಡಿದ್ದೇವಾಗಿ, ಅದುವರೆಗೂ ಬೇಕಾಗುವ ಸಮಸ್ತವನ್ನೂ ಅಲ್ಲಿಂದಲೇ ಕಳುಹಿಸಿಕೊಟ್ಟಿದ್ದಾರೆ. ನಮಗೆ ಏನೂ ಬೇಕಿಲ್ಲ. ಬೇಕಾಗಿರುವುದು ತಮ್ಮ ಸನ್ನಿಧಾನದ ದಯೆಯೊಂದೇ!” ಎಂದರು.
ಸುಲ್ತಾನರು ಅದನ್ನು ಒಪ್ಪಲಿಲ್ಲ. ದಿವಾನರನ್ನು ಕರೆದು, “ವಿಜಯ ನಗರದ ರಾಯಭಾರಿಗಳಿಗೆ ಭರತಾಚಾರ್ಯರೂ, ಅವರ ಶಿಷ್ಯರೂ, ಮಿತ್ರರೂ, ಯಜಮಾನ್‌ಸೆಟ್ಟರೂ ನಮ್ಮ ಅತಿಥಿಗಳು ಎಂದು ತಿಳಿಸಿ. ಆಚಾರ್ಯರ ಬಿಡಾರದಲ್ಲಿ ದಿನವೂ ನೂರು ಜನರ ಸಂತರ್‍ಪಣೆಯಾಗಲಿ” ಎಂದು ಅಪ್ಪಣೆಮಾಡಿದರು.
ಸುಲ್ತಾನರು ಇನ್ನೂ ಅಷ್ಟು ಹೊತ್ತು ಅತಿಥಿಗಳೊಡನೆ ಮಾತನಾಡು ತ್ತಿದ್ದರು. ಎರಡುದಿನ ಸುಖವಾಗಿದ್ದು ಮಾರ್ಗಾಯಾಸವು ಸರಿಹಾರವಾದ ಮೇಲೆ ದರ್ಬಾರಿನಲ್ಲಿ ಸಂಗೀತವಾಗುವುದೆಂದು ಗೊತ್ತಾಯಿತು.
ಗೋಲ್ಕೊಂಡದ ತುಂಬಾ ರಾಜಾತಿಥಿಗಳ ಸುದ್ದಿಯು ಹರಡಿತು. ಎಲ್ಲರಿಗೂ ಆಶ್ಚರ್ಯ. “ವಿಜಯನಗರದ ಅರಮನೆಯನ್ನು ಸೂರೆಹೊಡೆದಿರುವ ಚಿನ್ನಾಸಾನಿ ಬಂದಿರುವಳಂತೆ ; ಅವಳ ಗುರುಗಳು ಭರತಾಚಾರ್ಯರು ನಾಟಕದ ದೊರೆ ಗೋಪಾಲರಾಯ ಬಂದಿರುವರಂತೆ” ಎಂದು ಎಲ್ಲರಿಗೂ ಆಶ್ಚರ್‍ಯ. ಗುರು ವಾರ ದರ್ಬಾರಿನಲ್ಲಿ ಸಂಗೀತ ಎಂದು ಮಹಲಿನಿಂದ ಆಹ್ವಾನ ಬರದೆ ಇದ್ದಿದ್ದರೆ ಆ ಸುದ್ದಿಯನ್ನು ನಂಬುವುದು ಅನೇಕರಿಗೆ ಕಷ್ಟವಾಗುತ್ತಿತ್ತು.
ಗುರುವಾರವು ಬಂತು. ರಾತ್ರಿ ಮೊದಲನೆಯ ಝಾವದ ಕೊನೆಯಲ್ಲಿ ರಾಜಸಭೆಯು ಸೇರಿತು. ಅಂದಿನ ದಿನ ಸ್ವಯಂ ಆಚಾರ್ಯರೇ ಹಾಡುವುದಕ್ಕೆ ಕುಳಿತಿದ್ದಾರೆ. ಚಿನ್ನಾಸಾನಿಯೂ, ಗೋಪಾಲರಾಯರೂ ತಂಬೂರಿ ಹಾಕುತ್ತಿದ್ದಾರೆ ರನ್ನಾಸಾನಿಯು ತಾಳಹಾಕುತ್ತಿದ್ದಾಳೆ. ಎಂದಿನಂತೆ ಪಕ್ಕ ವಾದ್ಯಗಳು. ಬಲಕ್ಕೆ ತಂತೀ ವಾದ್ಯಗಳು; ಎಡಕ್ಕೆ ಮೃದಂಗ.
ಆಚಾರ್ಯರೂ, ಅವರ ಪರಿವಾರವೂ ಭೂಷಣಭೂಷಿತರಾಗಿ ಕುಳಿತಿದ್ದಾರೆ. ಆ ಗುಂಪಿಗೆ ಇಂದು ಅದೇನೋ ವಿಶೇಷ ಕಳೆ ಬಂದಂತಿದೆ. ಯಾರಾದರೂ ಒಳಗಣ್ಣಿನವರು ನೋಡಿದ್ದಾದರೆ. ಯಾರೋ ಗಂಧರ್‍ವರು ಬಂದು ಅಲ್ಲಿ ಕುಳಿ ತಿದ್ದಾರೆ. ಎನ್ನಬೇಕು. ಹಾಗೆ ಇದೆ. ಅದೇನು ಆ ಭೂಷಣಗಳ ಕಾಂತಿಯೋ, ವಸ್ತ್ರಗಳ ಡೌಲೋ, ವಿದ್ಯಾಪ್ರೌಢಿಮೆಯ ವರ್ಚಸ್ಸೋ, ಗಾನದೇವಿಯ ತೇಜಸ್ಸೋ ಏನೂ ಹೇಳುವುದಕ್ಕಾಗುವುದಿಲ್ಲ. ಇದೇಮೊದಲು ಭರತಾಚಾರ್ಯರು ಬೇರೆ ದರ್ಬಾರಿನಲ್ಲಿ ಹಾಡಿರುವುದು. ವಿಜಯನಗರದಲ್ಲಿಯೂ ಆಚಾರ್ಯರ ಸಂಗೀತ ನಿತ್ಯ ನಿತ್ಯದ ಅಂಗಡಿಯ ಸರಕಲ್ಲ. ಅಲ್ಲಿಯೂ ಚಕ್ರವರ್‍ತಿಗಳು ಆಚಾರ್ಯರಿಗೆ ಹೇಳಿಕಳುಹಿಸಿ, ಅವರ ಸಮಯ ನೊಡಿ ತಮ್ಮ ಸಂಗೋತ ಕ್ಷುದೆ ಯನ್ನು ನಿವಾರಿಸಿಕೊಳ್ಳಬೇಕು.
ಸಂಗೀತಕ್ಕೆ ಆರಂಭವಾಯಿತು. ಆಚಾರ್ಯರು ಎಡಬಲಗಳನ್ನು ನೋಡಿ ದರು. ತಂಬೂರಿಗಳ ನುಡಿತ ಮೊದಲಾಯಿತು. ತಂಬೂರಿಗಳು ನುಡಿಯುತ್ತಿದ್ದರೆ ಶಾರದಾದೇವಿಯ ಸಿಂಹಾಸನವನ್ನು ರಚಿಸುವುದಕ್ಕೆ ನಾದ ದೇವಿಯು ಹೊರಟು ಆರಂಭದ ಸೃಷ್ಟಿ ಲಾಸ್ಯವನ್ನು ರಚಿಸುತ್ತಿರುವಳೋ ಎನ್ನುವಂತಿದೆ. ಸುತ್ತಲೂ ಪಸರಿಸಿದ ಆ ಮನೋಹರಿ ಮಂಜುಲನಾದವು ರೇಶಿಮೆಯಹುಳನು ಗೂಡನ್ನು ಕಟ್ಟುವಂತೆ ವ್ಯೂಹವನ್ನು ಕಟ್ಟುತ್ತಿದೆ.
ಅದನ್ನು ಕೇಳಿದ ಸಭಿಕರು ಸಂಗೀತಕ್ಕೆ ಹೊಸಬರಲ್ಲವಾದರೂ, ಆ ತಂಬೂರಿಯ ಶ್ರುತಿಯಲ್ಲಿ ಲೀನವಾಗುವ ವಿದ್ಯೆಯನ್ನು ಹೊಸದಾಗಿ ಕಲಿಯುತ್ತಿದ್ದಾರೆ. ಆ ಎರಡು ತಂಬೂರಿಗಳ್ಳು ಚೆನ್ನಾಗಿ ನುರಿತ ಕುದುರೆಗಳ ಜೋಡಿ ಗಾಡಿಗೆ ಕಟ್ಟಿದಾಗ, ಎರಡಕ್ಕೂ ಒಮ್ಮನಸ್ಸೋ ಎಂಬಂತೆ ಒಂದೇ ನಡೆಗೆಯಿಂದ ನಡೆಯು ವಂತೆ, ಒಂದೇ ಮೀಟನಿಂದ ಎರಡೂ ನಡೆಯುತ್ತಿವೆಯೋ, ಅಥವಾ ಬಹುಕಾಲ ಸಂಸಾರವನ್ನು ಸುಖವಾಗಿ ನಿರ್ವಹಿಸಿರುವ ದಂಪತಿಗಳ ಹೃದಯದ ಎರಡು ತುಂಡುಗಳೋ ಎಂಬಂತೆ ಒಟ್ಟಿಗೆ ನುಡಿಯುತ್ತಿದ್ದರೆ, ಆ ನಾದವು ತೂಗುತ್ತಿರು ವಂತೆ ಆ ಉಯ್ಯಾಲೆಯ ಈ ಕೊನೆಯೊಂದು ಆ ಕೊನೆಯೊಂದು ತಂಬೂರಿ ಯಾಗಿರವಂತೆ ಭಾಸವಾಗುತ್ತಿದೆ. ಸಭಿಕರಂತೂ ಆ ನಾದದಿಂದಲೇ, ಆ ಮಂಜುಲ ಶ್ರುತಿಯಿಂದಲೇ ಮುಗ್ಧರಾಗಿ ಹೋಗಿದ್ದಾರೆ.
ಆಚಾರ್ಯರು ಇಷ್ಟದೈವನನ್ನೂ, ಗುರುಪಾದವನ್ನೂ ಸ್ಮರಿಸಿ ರತ್ನ ಖಚಿತವಾದ ಥೋಡಾಗಳಿಂದ ಭೂಸಿತವಾಗಿರುವ ಕೈಗಳನ್ನು ಮುಗಿದು ಎತ್ತಿ ಶಿರೋಭಾಗದಲ್ಲಿ ಜೋಡಿಸಿದರು. ಆ ಕೈಗಳನ್ನೆತ್ತಿ ಮುಗಿಯುವುದರಲ್ಲಿ ಅದೇನು ಭಂಗಿಯೋ ? ಅದೇನು ಭಾವವೋ? ಅದೇನು ಭಕ್ತಿಯ ಭರವೋ ? ಅದೇನು ಆವೇಶವೋ? ರಾಜಸಭೆಯೆಲ್ಲ ಮಂತ್ರಮುಗ್ಧವಾಗಿ ಹೋಯಿತು. ಆಚಾರ್ಯರು ಮಂತ್ರವಾದಿಯಾಗಿ ಮೋಹನ ಮಂತ್ರವನ್ನು ಪ್ರಯೋಗಿಸಿ ಮಂಕುಬೂದಿಯನ್ನು ಚಲ್ಲಿದ್ದರೆ ಸಭೆಯು ಹಾಗೆ ವಶವಾಗುತ್ತಿತ್ತೋ ಇಲ್ಲವೋ ? ಅಂತೂ ಸಭೆಗೆ ಸಭೆಯೇ ಈ ಕೊನೆಯಲ್ಲಿರುವ ಜೋಪ್‌ದಾರನಿಂದ ಹಿಡಿದು ಆ ಕೊನೆ ಯಲ್ಲಿರುವ ಸುಲ್ತಾನರವರೆಗೂ ಸರ್ವರೂ ಪ್ರಸನ್ನರಾಗಿ ಹೋದರು. ಎಲ್ಲರೂ ಸಂತುಷ್ಟರಾದರು.
ಆಚಾರ್ಯರು ಆರಂಭಿಸಿದರು. ದರ್ಬಾರುರಾಗದಲ್ಲಿ ಆದಿತಾಳದಲ್ಲಿ ಸಂಗೀತವು ಮೊದಲಾಯಿತು.
ಮಾರಮಣ ಶ್ರೀಚರಣ ಸುರುಚಿರನಲಿನ ಮನಿಶಂ
ಮಂಗಳಮಾತನೋತು ನಃ ॥
ಆವರು ಹಾಡುತ್ತಿದ್ದರೆ ಸಭೆಗೆ ಸಭೆಯೇ ಆ ಗಾನದಲ್ಲಿ ಲೀನವಾಗಿ ಹೋಗಿದೆ. ಸಭೆಯಲ್ಲಿ ಅಷ್ಟು ಜನರಿರುವುದಕ್ಕೆ ಪ್ರತಿಯಾಗಿ, ಅವರೆಲ್ಲರೂ ಸೇರಿ ಒಬ್ಬನಾಗಿದ್ದರೆ, ಆ ಒಬ್ಬನು ತನ್ನ ಮನಸ್ಸನ್ನು ಆಚಾರ್ಯರ
ವಶಪಡಿಸಿದ್ದರೆ, ಅವರು ಅದನ್ನು ಆ ಗಾನದಲ್ಲಿ ನಿಯೋಜಿಸಿದ್ದರೆ, ಅದೆಂತು ಆರೋಹಣದಲ್ಲಿ ಹತ್ತಿ ಅವರೋಹಣದಲ್ಲಿ ಇಳಿದು ಸಂಚಾರವಶವಾಗಿ ತಾನೂ ಸಂಚಾರ ಮಾಡಬೇಕೋ ಹಾಗೆ ಆಗುತ್ತಿದೆ.
ರಾಗಗಳು ಬೇರೆಬೇರೆಯಾದುವು. ಅವುಗಳ ಜೊತೆಯಲ್ಲಿ ತಾಳವೂ ಬೇರೆಯಾಯಿತು. ಒಂದೇ ಸಾಹಿತ್ಯವನ್ನು ಆಚಾರ್ಯರು ಏಳು ರಾಗ, ಏಳು ತಾಳಗಳಲ್ಲಿ ಹಾಡಿದರು. ಒಂದಕ್ಕಿಂತಲೂ ಒಂದು ಆದ್ಭುತವಾಗಿತ್ತು. ಸಭಿಕರು ಸುಳಿಗಾಳಿಯಲ್ಲಿ ತಿಳಿಯಾದ ಕೊಳದ ನೀರಿನ ಮೇಲೆ ಸುಖವಾಗಿ ನರ್ತನ ಮಾಡುವ ಮುಂಝಾವದ ಅರಳುತ್ತಿರುವ ತಾವರೆಯಂತೆ ಹಿಂದಕ್ಕೂ ಮುಂದಕ್ಕೂ ಒಲೆಯುತ್ತ, ಗಾನರಸಪಾನದಿಂದ ಮತ್ತರಾದವರಂತೆ ಅಥವಾ ಮೈಮರೆತು ತಾವು ರಾಜಸಭೆಯಲ್ಲಿ ಇರುವೆವೆಂಬುದು ಮರೆತರೂ, ತಾವು ಗಟ್ಟಿಯಾಗಿ ಉಸಿರು ಬಿಟ್ಟರೆ ಮೇಲೆ ಮೇಲೆ ತರಂಗತರಂಗವಾಗಿ ಬರುತ್ತಿರುವ ಗಾನ ಪ್ರವಾಹಕ್ಕೆ ಏನು ಅಡ್ಡಿ ಯಾಗುವುದೋ ಎಂದು ಹೆದರಿಕೊಂಡವರಂತೆ ಅಥವಾ ಆಚಾರ್ಯರ ಸಂಗೀತವನ್ನು ಕೇಳಿ ಸಂಯಮವನ್ನು ಕಲಿಯುತ್ತಿರುವವರಂತೆ, ಶ್ವಾಸನಿಯಮನನ್ನು ಆಚರಿಸುತ್ತಿರುವವರಂತೆ, ನಿಯಮಿತಪ್ರಾಣರಾಗಿ ಕೇಳಿದರು.
ಸುಲ್ತಾನರು ಆನಂದದಲ್ಲಿ ಪರವಶರಾಗಿ ತಾವು ಭದ್ರಾಸನದಲ್ಲಿ ಕುಳಿತಿರು ವುದನ್ನು ಮರೆತು, ಪದ್ಮಾಸನವನ್ನು ಬಿಟ್ಟು ಸುಖಾಸನದಲ್ಲಿ ಕುಳಿತರು. ಅನೇಕ ವೇಳೆ ಸಂತೋಷದಲ್ಲಿ ಕೈ ಚಪ್ಪಾಳೆ ಇಡಬೇಕು ಎನ್ನಿಸುತ್ತದೆ. ಆದರೆ ಅದು ಎಷ್ಟು ಸೂಕ್ಷ್ಮವಾಗಿದ್ದರೂ ಗದ್ದಲಮಾಡುವುದು ; ಸಂಗೀತಕ್ಕೆ ವಿರೋಧವಾಗು ವುದು ಎಂದು ಮನಸ್ಸು ಹೆದರಿ ಸುಮ್ಮನಾಗುತ್ತಾರೆ. ಕೈಯಲ್ಲಿದ್ದ ಕರವಸ್ತ್ರ ವಂತೂ ತೊಯ್ದುಹೋಗಿದೆ. ಮುಖವು ಗಾನಸುಧಾಪಾನದಿಂದ ರಂಗೇರಿದೆ.
ಏಳು ರಾಗಗಳೂ ಮುಗಿಯಿತು. ಆಚಾರ್ಯರು ಒಂದು ಶ್ವಾಸಬಿಡುವಷ್ಟು ಹೊತ್ತು ಅವಕಾಶಕೊಟ್ಟು ಕರವಸ್ತ್ರದಿಂದ ಮುಖವನ್ನು ಒರೆಸಿಕೊಂಡರು. ಆ ವೇಳೆಗೆ ಸರಿಯಾಗಿ ಎರಡನೆಯ ರಭಾವವು ಮುಗಿಯಿತು ಎಂದು ಅರಮನೆಯ ಬಾಗಿಲ ಗಂಟೆಯು ಎಚ್ಚರಿಸಿತು. ಸಂಗೀತದಲ್ಲಿ ಮಗ್ನನಾಗಿ, ತಾನು ಹಿಡಿದಿದ್ದ ಸೋಠಾವನ್ನೇ ಅವಲಂಬಿಸಿ ನಿಂತು, ಮೈಮರೆತಿದ್ದ ಚೋಪ್‌ದಾರನು ಎಚ್ಚೆತ್ತು, ರಾಜಸಭೆಯು ಮುಕ್ತಾಯವಾಯಿತೆಂದು ತನ್ನ ಸಿಂಹಧ್ವನಿಯಿಂದ ಸಭೆಯನ್ನೆಚ್ಚರಿಸಿದನು. ಸುಲ್ತಾನರು ಅತೃಸ್ತರಾಗಿದ್ದರೂ ಯತ್ನವಿಲ್ಲದೆ ಎದ್ದರು. ಎಲ್ಲರೂ ಎದ್ದರು.
ಆಚಾರ್ಯರಿಗೆ ಸುಲ್ತಾನರ ಕರೆಯು ಬಂತು. ದರ್ಬಾರು ಮಂಟಪದ ಹಿಂದೆ ಇದ್ದ ಮತ್ತೊಂದು ಮಂಟಪದಲ್ಲಿ ಸುಲ್ತಾನರು ಸುಖಾಸನದಲ್ಲಿ ಕುಳಿತಿದ್ದಾರೆ. ಆಚಾರ್ಯರು ರಾಜಾಜ್ಞೆಯಂತೆ ಬಂದು ಕಾಣಿಸಿಕೊಂಡರು. ಸುಲ್ತಾನರು ಎದ್ದು ಮುಂದೆ ಬಂದು ಅವರ ಕೈಹಿಡಿದು ಕರಿದುಕೊಂಡುಹೋಗಿ ಮಗ್ಗುಲಲ್ಲಿ ಕುಳ್ಳಿರಿಸಿಕೊಂಡರು. ಸಂತೋಷದಿಂದ ಕಣ್ಣುಗಳಲ್ಲಿ ಸೋನೆಯು ಉದುರುತ್ತಿರಲು ಮಾತನಾಡಿಸಿದರು. “ಆಚಾರ್ಯ, ತಾವು ಸಂಗೀತಗಾರರಲ್ಲ. ಸಂಗೀತ ಎನ್ನುತ್ತ ಯಾವುದೋ ಮಂತ್ರಶಾಸ್ತ್ರ ಅಭ್ಯಾಸಮಾದಿದ್ದೀರಿ. ಈಗ ನಾವು ಕೇಳಿದ್ದು ಸಂಗೀತವಲ್ಲ. ಇಲ್ಲಿಂದ ಇನ್ನು ಯಾವುದೋ ಲೋಕಕ್ಕೆ ಕರಿ ದುಕೊಂಡುಹೋಗ ಮತ್ತೆ ಸುಖವಾಗಿ ಕರೆತಂದು ಇಲ್ಲಿಯೇ ಇಳಿಸಿದ ಗಾನ ವಿಮಾನ. ನಾವು ಇಷ್ಟು ದಿನ ಬದುಕಿದ್ದುದು ಸಾರ್ಥಕವಾಯಿತು” ಎಂದು ತುಂಬಿದ ಕಂಠದಿಂದ ಹೇಳಿದರು. ಅವರು ಹೇಳಿದುದು ಅಕ್ಷರಶಃ ನಿಜ ವೆಂಬುದನ್ನು ಅವರ ದೇಹ, ಅವರ ಸರ್ವಸ್ವವೂ ಹೇಳುತ್ತಿತ್ತು.
ಆಚಾರ್ಯರು ಆ ಸ್ತುತಿಯನ್ನೊಪ್ಪಿಕೊಳ್ಳುತ್ತಾ, “ಮಹಾಪ್ರಭು, ನಮ್ಮಲ್ಲಿ ಒಂದು ಶಾಸ್ತ್ರವಿದೆ. ನಾವು ಯಾರ ಅನ್ನವನ್ನು ತಿನ್ನುತ್ತೇನೆಯೋ ಅವರ ಬುದ್ಧಿಯಂತೆಯೇ ನಮ್ಮ ಬುದ್ಧಿಯೂ ಆಗುತ್ತದೆಯೆಂದು. ಈಗ ಅದು ನಿಜವಾಯಿತು. ವಿಜಯನಗರದ ಅನ್ನದಿಂದ ಬೆಳೆದಿದ್ದ ಬುದ್ಧಿ ಇಂದು ಗೋಲ್ಕೊಂಡದ ಅನ್ನವನ್ನು ತಿಂದು ಪಲ್ಲವಿಸಿತು. ನಮ್ಮ ಮಹಾಸ್ವಾಮಿಯವರು ಕೃಪೆಯಿಂದ ವರ್ಧಿಸಿದ ಸಂಗೀತವಲ್ಲರಿ ಇಂದು ಈ ಆಸ್ಥಾನದಲ್ಲಿ ರಸಫಲವನ್ನು ತೋರಿದರೆ, ಅದು ತಮ್ಮಿಬ್ಬರ ಆಶ್ರಯದ ಪ್ರಭಾವ. ಮಹಾಸ್ವಾಮಿ, ಬಳ್ಳಿಗಳು ಆಶ್ರಯ ಸಿಕ್ಕಿದರೆ ಆಕಾಶಕ್ಕೂ ಹತ್ತುವುವು; ಇಲ್ಲದಿದ್ದರೆ ನೆಲದಲ್ಲಿ ಕಾಲು ತುಳಿತಕ್ಕೆ ಸಿಕ್ಕುವುವು. ಅದರಿಂದ ಆಶ್ರಯ ದೊಡ್ಡದು. ಎಲ್ಲವೂ ತಮಗೆ ಸೇರಿದ್ದು. ತಮ್ಮ ಕೃಪೆ ಎಂದು ವಿನಯವಾಗಿ, ವಿಶ್ವಾಸವಾಗಿ ನುಡಿದರು.
ಸುಲ್ತಾನರು ಮಾತು ಮುಗಿಯಗೊಡದೆ, “ಆಚಾರ್ಯ, ತಮ್ಮ ಸಂಗೀತ ಕೇಳಿ ಇಂದು ನಮಗೆ ತಲೆಯು ಕೆಟ್ಟುಹೋಯಿತು. ನಮ್ಮ ಕಿವಿ ನಮ್ಮ ಮನಸ್ಸು, ಎಳೆದುಕೊಂಡು ಬಿಟ್ಟಿರಿ. ಇನ್ನೂ ಎರಡು ಮೂರು ದಿನನಾದರೂ ತಮಗೆ ಆಯಾಸವಾಗುವವರೆಗೂ ತಮ್ಮ ಕಚೇರಿ ನಡೆಯಲಿ. ನಮಗೆ ತಮ್ಮ ಸಂಗೀತ ಬೆಳಗಿಂದ ಸಂಜೆಯವರೆಗೂ ಕೇಳಿದರೂ ಬೇಡ ಎನ್ನಿಸುವುದಿಲ್ಲ. ತೃಪ್ತಿಯಾಗುವುವಿಲ್ಲ” ಎಂದು ಹೇಳಿಕೊಂಡರು.
ಆಚಾರ್ಯರು ಸುಲ್ತಾನರು ಹಿಡಿದಿರುವ ಕೈಯನ್ನು ಜೋಡಿಸಿಕೊಂಡು “ಖಾವಂದ್‌ರು ನಮ್ಮ ಶಿಷ್ಯಳ ಸಂಗೀತವನ್ನು ಒಮ್ಮೆ ಕೇಳಬೇಕು. ದೇವರು ನಮಗಿಂತಲೂ ಆಕೆಗೆ ಚೆನ್ನಾಗಿ ಒಲಿದಿದ್ದಾನೆ * ಎಂದರು.
ಸುಲ್ತಾನರು ನಗುತ್ತಾ “ಆಗಬಹುದು. ಆದರೆ ಮೊದಲು ಗುರುಗಳು, ಆಮೇಲೆ ಶಿಷ್ಯರು. ನಾಳೆ ನಾಳಿದ್ದು ತಮ್ಮ ಕೃಪೆ ನಮ್ಮ ಮೇಲೆ ಆಗಲಿ. ನಾಳೆ ಇನ್ನೂ ಅಷ್ಟು ಹೊತ್ತು ಮುಂಚಿತವಾಗಿ ಆರಂಭವಾಗಿ, ಇನ್ನೂ ಅಷ್ಟು ಹೊತ್ತು ಆದಮೇಲೆ ಕಚೇರಿ ಮುಗಿಯಬಹುದಷ್ಟೆ ?“ಎಂದರು.
ಆಚಾರ್ಯರು ನಗುತ್ತಾ, “ಖಾವಂದ್‌ರಿಗೆ ಅಷ್ಟು ಸಂತೋಷವಾದರೆ, ಕಚೇರಿಯು ಎರಡು ಝಾವದ ಹೊತ್ತು ಆಗಬಹುದು” ಎಂದರು. ಸುಲ್ತಾನರು ಆಶ್ರರ್ಯಪಡುತ್ತಾ ಹೇಳಿದರು. “ಹಾಗೆ ಆಗುವುದಾದರೆ ನಮಗೂ ಸಂತೋಷ.ಆದರೆ ತಮ್ಮ ವಯಸ್ಸು ನೋಡಿ ಹೆದರಿದೆವು.?
“ಮಹಾಸ್ವಾಮಿ, ವಯಸ್ಸು ದೇಹಕ್ಕೆ, ಉತ್ಸಾಹ ಮನಸ್ಸಿಗೆ. ಸಂಗೀತ ಕೇಳಿದವರಿಗೆ ಸಂತೋಷವಾಗುವ ಹಾಗಿದ್ದರೆ ಆದನ್ನು ಹಾಡಿದವರಿಗೂ ಸಂತೋಷ ಆಗಬೇಕಲ್ಲವೆ? ಮಹಾಸ್ವಾಮಿ ನಮಗೆ ಗುರುವಿನ ಕೃಪೆ ಹಾಡುತ್ತ ಹಾಡುತ್ತ ನಮ್ಮ ಶಕ್ತಿ ಉತ್ಸಾಹ ಬೆಳೆಯುತ್ತವೆ. ಅಲ್ಲದೆ ನಮ್ಮ ಉತ್ಸಾಹ ರಾಗಗಳೂ ಅಷ್ಟೆ. ಮನಸ್ಸಿನಗುಣನನ್ನು ಬೆಳಸುತ್ತವೆಯಂತಲೇ ಅವಕ್ಕೆ ರಾಗ ಎಂದು ಹೆಸರು. ಜಂಭದಿಂದ ನಾನು ಹಾಡುತ್ತೀನೆಯೆಂದಾಗ ತಪ್ಪದೆ ಆಯಾಸ ವಾಗುತ್ತದೆ; ಆದರೆ ಒಳಗಿಂದ ಬರುವ ಸಂಗೀತ ನಾನೂ ಕೇಳುತ್ತಿದ್ದೇನೆ ಎಂಬ ಭಾವದಲ್ಲಿ ಕುಳಿತರೆ ನಮಗೆ ಎಳ್ಳಷ್ಟೂ ಆಯಾಸವಾಗುವುದಿಲ್ಲ. ಒಂದು ರಾತ್ರಿ ಪೂರ್ಣವಾಗಿ ಹಾಡಿ ನೋಡಿದ್ದೇನೆ. ಮಹಾಸ್ವಾಮಿಯವರಿಗೆ ಗೊತ್ತಿರಬೇಕು. ನಮ್ಮಲ್ಲಿ ಏಕಾದಶಿ ಮಾಡುತ್ತೇವೆ. ಆದಿನ ಶುದ್ಧವಾಗಿ ಉಪವಾಸಮಾಡಿ ರಾತ್ರಿಯೆಲ್ಲ ಭಜನೆಮಾಡುವುದು ನಮ್ಮ ಸಂಪ್ರದಾಯ. ಅದು ಅಭ್ಯಾಸ ವಾಗಿರುವುದರಿಂದ ಸನ್ನಿಧಾನವು ಚಿಂತಿಸಬೇಕಾಗಿಲ್ಲ.”
“ಹಾಗಾದರೆ ಇವೊತ್ತು ಆರಂಭವಾದ ಹೊತ್ತಿಗೆ ಆರಂಭವಾಗಿ ಮೂರು ಝಾವದವರೆಗೆ ನಡೆಯಬಹುದೆ?
“ಆಗಬಹುದು.”
ಸುಲ್ತಾನರಿಗೆ ಆಶ್ಚರ್ಯವಾಗಿಹೋಯಿತು. ಭಕ್ಷಿಯವರ ಮುಖವನ್ನು ನೋಡಿದರು. ಅದೇ ಅಪ್ಪಣೆಯಾಯಿತು.
ಇನ್ನೂ ಎರಡುದಿನ. ಆಚಾರ್ಯರ ಕಚೇರಿಯಾಯಿತು. ಸುಲ್ತಾನರು ಆನಂದಪರವಶವಾಗುವುದಿರಲಿ, ದರ್ಬಾರಿಗಳಂತೂ ಇಂತಹ ಸಂಗೀತ ಕೇಳಿ ತಮ್ಮ ಜನ್ಮ ಸಾರ್ಥಕವಾಯಿತು ಎನ್ನುತ್ತಿದ್ದಾರೆ. ಗೋಲ್ಗೊಂಡದ ತುಂಬ ಆಚಾರ್‍ಯರ ಅದ್ಭುತ ಸಂಗೀತದ ಮಾತೇ ಮಾತು.
ಮೂರನೆಯ ದಿನದ ರಾತ್ರಿ ಒಂದು ವಿಶೇಷವಾಯಿತು. ಆಚಾರ್‍ಯರು ಅರ್ಧರಾತ್ರಿಯಾದಮೇಲೆ ಹಾಡುತ್ತಿದ್ದಾರೆ. ಭೂಪಾಳಿರಾಗದ ಆಲಾಪನ ನಡೆದಿದೆ. ರಾಗದ ಮೂರ್ಛನಗಳು ಒಂದರಮೇಲೊಂದು ಬಂದಹಾಗೆಲ್ಲಾ ಸಭಿಕರಿಗೆ ನಿದ್ದೆಯ ಝೋಂಪು ಹಿಡಿಯುತ್ತಿದೆ. ಬಹು ಕಷ್ಟದಿಂದ ನಿದ್ದೆಯನ್ನು ತಡೆಯುತ್ತಿದ್ದಾರೆ. ಗವಾಯ್ ಭಾಜಿಯುದ್ದೀನರಂತೂ ಸಂಪೂರ್ಣವಾಗಿ ರಾಗಭಾರಕ್ಕೆ ಮನಸೋತು ಪರವಶರಾಗಿದ್ದವರು. ಅವರಿಗೆ ಅರಿವೇ ಇಲ್ಲದೆ ನಿದ್ದೆಯು ಬಂದುಬಿಟ್ಟಿದೆ. ಕೈಯು ತಾಳವನ್ನು ಹಾಕುತ್ತಿದೆ. ಸುಲ್ತಾನರಿಗೆ ನಿದ್ದೆಯೂ ಬಂದು ಒಂದು ಸುಖಸ್ವಪ್ನವೂ ಆಗಿದೆ.
ಆಚಾರ್ಯರು ಭೂಪಾಳಿಯ ಕೀರ್ತನನನ್ನು ಸಣ್ಣ ದನಿಯಲ್ಲಿ ಹಾಡಿದರು. ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ಆದಕ್ಕೆ ಬಂದಿರುವ ಸಣ್ಣ ನಿದ್ದೆಯು ಗಾಢವಾಗಲೆಂದು ತಾಯಿಯುಹಾಡುವ ಜೋಗುಳದಂತೆ ವ್ಯಕ್ತಾವ್ಯಕ್ತವಾಗಿರುವ ಸೂಕ್ಷ್ಮ ಕಂಠದಲ್ಲಿ ಹಾಡಿದರು. ಪಕ್ಕವಾದ್ಯಗಳವರು ಅದಕ್ಕೆ ತಕ್ಕಂತೆ ಅಡಗಿಸಿ ಬಾರಿಸಿದರು. ಸಭಿಕರಿಗೆ ಬಂದಿದ್ದ ನಿದ್ರಾಭಾವವು ಬಲಿಯಿತು; ಸುಖಸಮಾಧಿಯಾಯಿತು.
ಮತ್ತೆ ಆಚಾರ್ಯರು ಬಿಲಹರಿಯನ್ನು ಹಾಡಿದರು. ಒಬ್ಬೊಬ್ಬರಾಗಿ ಸುಖವಾಗಿ ಕಣ್ಣು ತೆರೆದರು. ಎಲ್ಲರಿಗೂ ಹೊಸತನ ಬಂದಿದೆ. ರಾತ್ರಿಯ ಜಾಗರಣದ ಆಯಾಸವೆಲ್ಲ ಕಳೆದಿದೆ. ಗಾಢನಿದ್ರೆಯಿಂದೆದ್ದು ಮೈಮುರಿದಂತೆ ಆಗಿದೆ. ಆ ರಾಗದ ಕೃತಿಯು ಮುಗಿಯಿತು. ಧನ್ಯಾಸಿಯ ಕೃತಿಯು ಬಂತು. ಧನ್ಯಾಸಿಯನ್ನು ಹಾಡುತ್ತಿದ್ದರೆ ಸಭಿಕರಿಗೆ ಮೈಯಲ್ಲಿರುವ ನಾಡಿಗಳೆಲ್ಲ ಸೂರ್ಯೋದಯದ ವೇಳೆಯಲ್ಲಿ ಅರಳುವ ಕಮಲಗಳಂತೆ ಅರಳುತ್ತಿವೆ. ಆಗ ಗವಾಯ್ ಸಾಹೇಬರು ಕಣ್ಣು ಬಿಟ್ಟರು.
ಅಂದಿನ ಕಚೇರಿಯಂತೂ ಅದ್ಳುತ ಎನಿಸಿಕೊಂಡಿತು. ಸುಲ್ತಾನರು ಆಚಾರ್ಯರನ್ನು ಕರೆಸಿಕೊಂಡು ಅವರನ್ನು ಆದರಿಸಿ ಆಸನದಮೇಲೆ ಕುಳ್ಳಿರಿಸಿ ತಾವು ನೀಂತುಕೊಂಡು ಕೈಮುಗಿದುಕೊಂಡು, “ಆಚಾರ್ಯ, ತಮ್ಮ ಚಕ್ರವರ್ತಿ ಗಳು ತಮಗೆ ಕೊಟ್ಟಿರುವ ಬಿರುದು ಸರ್ವಥಾ ಮಾನ್ಯವಾದುದು. ಅದಕ್ಕಿಂತ ಹೆಚ್ಚಾಗಿ ನಾವು ಏನೂ ಮಾಡಲಾರೆವು. ತಾವು ಮನುಷ್ಯಮಾತ್ರದವರಲ್ಲ. ತಮ್ಮ ಶಾಸ್ತ್ರಗಳು ಹೇಳುವಂತೆ ತಾವು ದಿವ್ಯಾಂಶ ಪುರುಷರು. ಬಹಳ ವಿಶೇಷ ವಾಗಿ ದೇವಪೂಜೆಯನ್ನು ಮಾಡಿದವರು. ತಮ್ಮಂತಹ ಸಂಗೀತಗಾರರನ್ನು ಇಟ್ಟುಕೊಂಡಿರುವ ಚಕ್ರವರ್ತಿಗಳೇ ಧನ್ಯರು. ಇಂದು ತಮ್ಮನ್ನು ಬಹಳ ಆಯಾಸಸಡಿಸಿದ್ದೇವೆ. ನಮ್ಮನ್ನು ಕ್ಷಮಿಸಬೇಕು” ಎಂದರು.
ಆಚಾರ್ಯರು ಸಮಯಕ್ಕೆ ತಕ್ಕಂತೆ ಎರಡು ಒಳ್ಳೆಯ ಮಾತಾಡಿ ಉಪಚಾರ ದಿಂದ ಎಲ್ಲವನ್ನೂ ಸಮಾರೋಪ ಮಾಡಿದರು. ಮರುದಿನ ಏಕಾದಶಿ. ಆಚಾರ್ಯರಿಗೆ ಜಾಗರಣ. ರಾತ್ರಿಯೆಲ್ಲ ಭಜನ. ಅದರಿಂದ ಆದಿನ ಅರಮನೆ ಯಲ್ಲಿ ಸಂಗೀತವಿಲ್ಲ. ಅದರ ಮರುದಿನ ಚಿನ್ನಾಸಾನಿಯ ಸಂಗೀತ ಎಂದಾಯಿತು.
*****
ಮುಂದುವರೆಯುವುದು


















