
ಆರು ನೀನೆಲೆ ಹರುಷಮೂರುತಿ?
ಹಕ್ಕಿಯೆಂಬರೆ ನಿನ್ನನು!
ತೋರಿ ದಿವಿಜರು ಸುಳಿವ ಬಳಿ, ಸುಖ
ವುಕ್ಕಿಬಹ ನಿನ್ನೆದೆಯನು
ಹಾರಿ ನೆನೆಯದ ಕಲೆಯ ಕುಶಲದ ಭೂರಿಗಾನದೊಳೆರೆಯುವೆ!
ನೆಲವನೊಲ್ಲದೆ ಚಿಗಿದು ಚಿಮ್ಮುತ
ಮೇಲು ಮೇಲಕ್ಕೋಡುವೆ;
ಒಲೆದು ದಳ್ಳುರಿ ನೆಗೆದು, ಗಗನದ
ನೀಲಿಯಾಳದೊಳಾಡುವೆ;
ನಲಿದು ಹಾಡುತ ಹಾಡುತೇರುವೆ, ಏರುತೇರುತ ಹಾಡುವೆ.
ಬಿಳಿಯ ಮುಗಿಲನು ಬಣ್ಣವೇರಿಸಿ
ಕೆಳಗೆ ಹೊರಳುವ ಹೊತ್ತಿನ
ತಿಳಿಯ ಹೊಂಬಿಸಿಲಲ್ಲಿ ತೇಲುವೆ,
ಮುಳುಗಿ ಏಳುವೆ, ಹರಿಯುವೆ,
ಕಳಚಿ ದೇಹವ ದಿವಕೆ ಹರಿಯುವ ಭೋಗಿಯೋಲಾಟದವೊಲು.
ಹಾರುತಿರುತಲೆ ಸಂಜೆ ಸುತ್ತಲು
ಕರಗುವುದು ನಸುಗೆಂಪನು;
ತಾರೆ ನಡುಹಗಲಲ್ಲಿ ಬಾನೊಳು
ಕುರುಹುದೊರದ ಪರಿಯೊಳು
ತೊರೆಯಾದರು, ಕೇಳುತಿರುವೆನು ನಿನ್ನ ಕೀರುವ ನಲಿವನು.
ಎಳೆಯ ಬೆಳಕನು ಮೊಗೆದು ಹೊತ್ತರೆ
ಬೆಳ್ಳಗೆತ್ತಲು ತುಳುಕಲು,
ಕಳೆಯ ಸೊಡಲನು ಕುಗ್ಗುತಡಗುವ
ಬೆಳ್ಳಿಬಿಂಬದ ಬಗೆಯೊಳು,
ತಿಳಿವುದಿರುವುದು ಮೇಲೆ ಎಲ್ಲಿಯೋ, ಕಣ್ಣು ತಟ್ಟನೆ ಹಿಡಿಯದು.
ಇಳೆಯ, ಗಾಳಿಯ ತರಹನೆಲ್ಲವ
ಕೆಲೆವ ನಿನ್ನುಲಿ ತುಂಬಿತು,
ತೊಳೆದ ಬಾನೊಳಗೊಂಟಿಮೋಡದ
ನೆಲೆಗೆ ನುಸುಳಿದ ತಿಂಗಳು
ಬೆಳಕುಮಳೆಯನು ಕರೆದು ಗಗನದ ಬಯಲ ತುಂಬುವ ತೆರದೊಳು.
ಏನೊ ನೀನದ ನಾವು ಕಾಣೆವು;
ಏನು ಸರಿ ನಿನಗೆಂಬುದು?
ನೀನು ಸನ್ನಿಧಿಯಿಂದ ಬೀರುವ
ಗಾನಧಾರೆಯ ಕಾಂತಿಗೆ
ಸೋನೆ ಸಮನೇ ಬಿಲ್ಲುಮೂಡಿದ ಮೋಡ ಸುರಿಯುತ್ತಿರುವುದು!
ಬಗೆಯ ಹೊಳಪಿನೊಳಡಗಿ ತನ್ನೊಳೆ
ತಡೆಯಲಾರದೆ ಹಾಡುತ,
ಬಗೆಗೆ ತಾರದೆ ಲೋಕ ನೂಕಿದ
ಮಿಡುಕು ಹಂಬಲು ಬಯಕೆಯ
ಹೊಗಿಸಿ ಹೃದಯಕೆ ಮರುಕಗೊಳಿಸುವ ಕವಿಗೆ ಹೋಲಿಸಿ ಹೊಗಳಲೋ!
ಕೆಳದಿ ಸುಳಿಯದ ವೇಳೆ, ಒಬ್ಬಳೆ
ಏರಿ ಅರಮನೆಮಾಡವ
ಒಲುಮೆಹೇರಿದ ಜೀವವಾರಲು,
ತೂರಿ ನೆಲೆಯನು ಕೊಚ್ಚಿಸಿ,
ಒಲುಮೆವೊಲೆ ಸವಿಯಾದ ಗಾನವನುಲಿವ ದೊರೆಮಗಳೆಂಬೆನೋ!
ಬಿಳಿಯ ಮಂಜಿನ ಮುಸುಕು ಬಳಸಿದ
ಮೆಳೆಯ ಪೊದರಲಿ ಪದರುತ,
ಬಳಿಯ ಹೂವಿನ, ಹುಲ್ಲ ತೆರೆಯಲಿ
ಹೊಳಪ ಮೆಯುತ, ಮರಸುತ,
ತೆಳುವು ಬೆಳಕನು ಕೆದರಿ ಮಿನುಕುವ ಮಿಂಚುಹುಳುವೆಂದೆಣಿಸಲೋ!
ಹಸುರ ಹೊರಎಸಳಲ್ಲಿ ಹುದುಗುತ,
ಮುಗುಳ ಸೊಬಗನು ಹೊರೆಯುತ,
ಬಿಸಿಯ ಗಾಳಿಗೆ ಬಳಲಿ ಬಿರಿಯುತ,
ಸೊಗಡುಗಂಪನು ಸುರಿಯುತ,
ಹಸಿದ ಜೇನಿನ ಹೊರೆಯ ಕಳ್ಳರ ಸೊಕ್ಕಿಸಿಡುವ ಗುಲಾಬಿಯೋ!
ಹೊಳೆವ ಗರುಕೆಯ ಮೇಲೆ ಬೀಳುವ
ಮಳೆಯ ಹನಿಗಳ ಸೊಪ್ಪುಳು,
ಮಳೆಗೆ ಕಣ್ಣಿಡುವರಳು, ಮತ್ತೀ
ಇಳೆಯೊಳಾವುದು ನಲಿವುದು,
ಹೊಳಪು, ಹೊಸತವನೆಲ್ಲ ಮೀರಿಸಿ ನಿನ್ನ ಗಾನವೆ ಮೆರೆವುದು.
ದೇವನಾಗಿರು, ಹಕ್ಕಿಯಾಗಿರು,
ಕಲಿಸು ನಮಗೀ ಹರುಷವ,
ಪ್ರೇಮಗಾನವೊ, ಸೋಮಪಾನವೊ,
ಅಲೆವುದಾವುದು ಹೃದಯವ?
ಆವ ಸವಿ ಬಗೆ ತುಳುಕುವುದಿನಿತು ದಿವ್ಯಾನಂದವ?
ಮದುವೆಯೊಸಗೆಯ ಗೀತವಾಗಲಿ,
ಜಯದ ಘೋಷವೆ ಆಗಲಿ,
ಎದಿರೆ ನಿನ್ನೊಂದುಲಿಗೆ, ತೆಗೆ, ಹುಸಿ
ಮಯದ ಹೆಮ್ಮೆಯ ಕೊಸರಿಕೆ!
ಅದರೊಳೆತ್ತಲೋ ಹದುಗಿ ಏನೋ ಕೊರತೆ ಇಹುದೆಂದರಿಯೆವೇ?
ಆವ ಸಿರಿನೋಟಗಳು ಮಡುಗಳೊ
ತೀವಿದೀ ಸುಖಗಾನಕೆ?
ಆವ ತೆರೆಗಳೋ, ಬಯಲೋ, ಬೆಟ್ಟವೊ ,
ಆವ ಗಗನವಿಚಿತ್ರವೋ?
ಆವ ಜಾತಿ ಪ್ರೇಮವೋ? ನೋವೇನೂ ಕಾಣದ ಜನ್ಮವೋ?
ಗೆಲವು ಹಿಗ್ಗುವ ನಿನ್ನ ಬಗೆಯೊಳು
ಸೊರಗು ಸಂಕಟವಿಳಿಯದು;
ಕಲಕಿ ಚಿತ್ತವ ಕವಿವ ಚಿಂತೆಯ
ನೆರಳು ಬಳಿಯೊಳು ಸುಳಿಯದು.
ಒಲಿವೆ, ಒಲಿವರ ದಣಿವು ಬೇಸರವೇನೋ ನಿನಗದೆ ತಿಳಿಯದು.
ಜಡರು ಮರ್ತ್ಯರು ನಾವು, ತರ್ಕಿಸಿ
ಮರಣಮರ್ಮವನರಿವೆವೆ?
ಹಿಡಿದು ಕನಸಿನೊಳಾಳವೆಲ್ಲವ,
ಪರಮಶಾಂತಿಯ ಪಡೆದಿಹೆ;
ಪಡೆಯದಿರಲಿಂತೆಂತು ಹರಿವುದು ರಾಗ ತಿಳಿಹೊಳೆಯಂದದೆ?
ಹಿಂದುಮುಂದನು ನೋಡಿ ನಮೆವೆವು
ನೆನೆಯುತಿಲ್ಲದ ಸುಖವನು,
ಕುಂದು ಸೋಕದ ನಮ್ಮ ನಗೆಯೊಳು
ಕೊನೆಗೆ ನೋವಿನಿಸಿರುವುದು,
ನೊಂದ ಗೋಳನು ಹೇಳಿ ಕೊರೆವುವೆ ಇನಿಯ ಕವನಗಳೆಮ್ಮೊಳು.
ಹೋಗಲದು: – ಹಗೆ, ಕೊಬ್ಬು, ಕಳವಳ
ದೆಡೆಗೆ ಲೆಕ್ಕಿಸದಿದ್ದೆವು;
ಹೀಗೆ ಕಂಬನಿಬಿಡದ ಹುಟ್ಟನು
ಪಡೆದೆ ಭೂಮಿಗೆ ಬಂದೆವು;
ಆಗಲಾಯಿತು, ನಿನ್ನ ನಲಿವಿನ ಹದಕ್ಕೆ ಬರುವೆವೆ? ಕಾಣೆನು.
ಕಿವಿಗೆ ಸವಿಯನು ಕರೆವ ವೃತ್ತಗ
ಳಿರಲಿ ಹೆಣೆಯುವೆವೆಲ್ಲರು ,
ಕವನಕೋಶದೊಳಿರುವ ರತ್ನಗ
ಳಿರಲಿ ಕದಿಯಲು ಬಲ್ಲೆವು,
ಕವಿಗೆ ಬೇಡವೆ ನಿನ್ನ ಕೌಶಲ – ನೆಲವ ಜರೆಯುವ ಜೀವವೇ!
ಭೋಗನಿಧಿ, ನೀನರಿತ ಹರುಷದಿ
ಕಲಿಸಿಕೊಂಡು ನನಗರೆಯನು;
ರಾಗಮಧುರಾವೇಶವೆನ್ನಲಿ
ತುಳುಕಿ ಬರುತಿರೆ ತುಟಿಯಲಿ,
ಈಗ ಕೇಳುವೆ ನಾನು, ಲೋಕವೆ ಆಗ ಕೇಳುವುದೆನ್ನನು.
*****
SHELLEY (1792-1822) : Skylark















