ಉದಯಾಸ್ತಗಳ ಜನ್ಮ ಮರಣ ಚಕ್ರದ ಬಾಧೆ
ಇದಕಿಲ್ಲ; ಕುಂದಮೀರಿದೆ; ಗ್ರಹಣ ಹತ್ತದಿದ-
ಕೆಂದಿಗೂ; ಬೇರೆ ಫಲದಾಸೆಯಿದನೊಣಗಿಸದು;
ಅಜ್ಞಾನ ಮುಗ್ಧ ಮಾಧುರ್‍ಯ ಮಧುವಲ್ಲ; ಹೊಸ
ಹರೆಯ ಹುಮ್ಮಸದ ಹುಸಿಬಿಸಿಲುಗುದುರೆಯ ಬಾಯ
ಬುರುಗು ಬೆಳಕಲ್ಲ; ಇದು ಹೊಳೆಯ ದಾಟಿದಮೇಲೆ
ಹೊರಳಿ ನೋಡದ ಮಿಂಡ ಪುಂಡ ಬಗೆಯಲ್ಲ; ಮರು-
ರುಳಿನಲಿ ಮಣ್ಣ ಮುದ್ದಿಡಲು ಬಹ ದಿಗ್ಭ್ರಾಂತ
ನಕ್ಷತ್ರಗಳ ಹುಚ್ಚು ಹೊಳಪಲ್ಲ; ಬುದ್ದಮೂ-
ರ್‍ತಿಯ ಅಮರಹಾಸ-ಶ್ರೀ ಬುದ್ಧದೇವನ ದುಃಖ
ಹಿಮಗಿರಿಯ ಶಿಖರದಲಿ ತಪಮಿದ್ದ ಶಾಂತಿ ತ-
ನ್ನಸಮ ಧ್ಯಾನದ ಗವಿಯ ಗಹನದಲಿ ಗುರುತಿಸಿದ
ಚೆನ್ನ ಕನಸಿನ ಬಿಂಬ. ಆನಂದ ಕಲ್ಪವೃಕ್ಷಕ್ಕೆ ಬಂ-
ದೊಂದೆ ಹೂ. ಮನೆಮನೆಯ ಪ್ರತಿ ಮನುಜ ಮನಮನದೆ
ಪೂಜಿಸುತ್ತಿಹುದಿದರ ಪೂಜ್ಯ ಪಾರ್ಥಿವ ಪ್ರತಿಮೆ-
ಮೇಗಿಲ್ಲದೀ ನಗೆಯ ಬಣ್ಣ ಮೀರಿದೆ ಮಹಿಮೆ.
*****


















