ಕುಣಿಯ ತೊಡಗಿತು ಮೇಘಮಯೂರ
ಭವ್ಯಭೀಕರಾ ಬೃಹದಾಕಾರ
ರುದ್ರವಾದರೂ ಶುಭಶ್ರೀಕಾರ
ಕುಣಿಯ ತೊಡಗಿತು ಮೇಘಮಯೂರ |
ಗಗನರಂಗವನು ತುಂಬಿ ಬೆಳೆಯಿತು
ಚಿಕ್ಕೆಗಣ್ಣಿನಾ ಪಿಚ್ಛ ಹರಡಿತು
ಸಿಡಿಲು ಮಾಲೆಯಲಿ ಮುಡಿಯ ಕಟ್ಟಿತು
ಥಕಥೋಂ ಥಕಥೈ ಕಾಲು ಹಾಕಿತು |
ಹೆಜ್ಜೆ ಹೆಜ್ಜೆಯಲಿ ಗೆಜ್ಜೆ ನುಡಿಯಿತು
ಮೃದಂಗ ಬಾನೊಳು ಗುಡುಗು ಮೊಳಗಿತು
ಪದ ಘಟ್ಟನೆಯಲಿ ಭುವನ ನಡುಗಿತು
ಕುಣಿದ ಭಾವದಲಿ ಮಿಂಚು ಮೆರೆಯಿತು |
ಬುವಿಯ ದೇಗುಲದ ಬಾಗಿಲೆದುರಿನಲಿ
ಚಿಕ್ಕೆ ಚಿಗಿತ ಅಂಗಳದ ರಂಗದಲಿ
ದೇವದಾಸಿ ಕುಣಿದಂತೆ ಕುಣಿಯಿತು
ದೇವಲೋಕವೇ ನಿಂತು ನೋಡಿತು |
ಹಾಲು ಜೇನು ಜಲಕುಂಭವೆತ್ತಿತು
ನೀಲಕಂಠನಭಿಷೇಕ ನಡೆಯಿತು
ಜಗ ಮೂಕವಾಗಿ ತಲೆವಾಗಿ ನಿಂತಿತು
ಇಂದ್ರಲೋಕವತಿ ಚಿಕಿತವಾಯಿತು |
ಮುರಿಯ ಬಂದಿತೆನುವಂತೆ ಕುಣಿಯಿತು
ಪ್ರಮತ್ತ ಪ್ರಳಯಾವೇಶ ಬೆಳೆಯಿತು
ಸುಪ್ತ ಸಮೀರಣ ರೊಚ್ಚಿಗೆದ್ದಿತು
ಸಪ್ತ ಸಮುದ್ರದಿ ಹುಚ್ಚು ಕುಣಿಯಿತು |
ಬೆಂದ ನೆಲವು ಎದೆ ತೆರೆದು ಬೇಡಿತು
ಕಮರಿ ಹೋದ ಕಾಡೆಲ್ಲ ಕೆದರಿತು
ಕಣ್ಣು ಹಿಗ್ಗಿಸುತ ಗುಡ್ಡ ನೋಡಿತು
ವಿಶ್ವವೆಲ್ಲ ಹಾತೊರೆದು ನಿಂತಿತು |
ಮರಣ ಬಂದರೂ ಹರಣ ಸೊಕ್ಕಿತು
ಚರಣ ಚರಣದಲಿ ಜೀವ ಚಿಗುರಿತು
ಹಚ್ಚ ಹಸಿರು ಹುಚ್ಚೆದ್ದು ಚಿಮ್ಮಿತು
ಬಣ್ಣ ಬಣ್ಣಗಳ ಬಾಳು ಬೆಳೆಯಿತು |
ಮಣ್ಣನೆತ್ತಿ ಅರಮನೆಯ ಕಟ್ಟಿತು
ಇಂದ್ರ ಚಾಪಗಳ ಚೆಲುವ ತೋರಿತು
ಬೆಂದ ಬಾಳಿನಲಿ ತಂಪನೆರೆಯಿತು
ಬಂದುದೆಲ್ಲ ಬಹು ಚಂದವಾಯಿತು |
ತೊಳೆದು ಹೋಯಿತೆಲೆ ಜಗದ ಮೈಲಿಗೆ
ಇಟ್ಟಿತೆಲ್ಲೆಡೆಗೆ ಧೂಪ ದೀವಿಗೆ
ಮನದಿ ಅರಳಿಸಿತು ಜಾಜಿ ಮಲ್ಲಿಗೆ
ಭಾವ ಭಕುತಿಯಲಿ ದೇವ ಪೂಜೆಗೆ |
ಕುಣಿಯ ತೊಡಗಿತು ಮೇಘಮಯೂರ
ಭವ್ಯ ಭೀಕರ ಬೃಹದಾಕಾರ
ರುದ್ರವಾದರೂ ಶುಭ ಶ್ರೀಕಾರ
ಕುಣಿಯತೊಡಗಿತು ಮೇಘಮಯೂರ.
*****



















