ಸೊಸೆ ತಂದ ಸೌಭಾಗ್ಯ. ನಾಗರಹಾವು ಮುಂತಾದ ಸಿನಿಮಾಗಳಲ್ಲಿನ ಅಂಬರೀಷ್- ವಿಷ್ಣುವರ್ಧನ್‍ರ ಕೇಶಶೈಲಿ ಹೋಲುವಂಥ ಉದ್ದನೆ ಕೂದಲಿನ ಈ ಜುಬ್ಬಾವಾಲ ರಾಜಧಾನಿ ಬೆಂಗಳೂರಿನ ಸಾಂಸ್ಕೃತಿಕ ಪರಿಸರದಲ್ಲಿ ಚಿರಪರಿಚಿತರು. ಕನ್ನಡ ಸಾಹಿತ್ಯ ಪರಿಷತ್ತು, ಪುಸ್ತಕ ಪ್ರಾಕಾರ, ಸಾಹಿತ್ಯ ಅಕಾಡೆಮಿ ಮುಂತಾದೆಡೆಗಳಲ್ಲಿ ಕಾಣಿಸಿಕೊಳ್ಳುವ ಹಾಗೂ ಮಾತಿಗೆ ನಿಂತರೆ ಸಾಹಿತ್ಯ, ಪತ್ರಿಕೋದ್ಯಮ, ಸಮಕಾಲೀನ ಸವಾಲುಗಳ ಬಗ್ಗೆ ಚರ್‍ಚಿಸುವ ಈತ ಗೆಳೆಯರ ಗುಂಪಿನಲ್ಲಿ ‘ಆರ್‌ಜಿಹಳ್ಳಿ’ ಎಂದೇ ಪರಿಚಿತರು. ಪೂರಾ ಹೆಸರು ಆರ್.ಜಿ.ಹಳ್ಳಿ ನಾಗರಾಜ್- ಹೆಗಲಲ್ಲೊಂದು ಜೋಳಿಗೆ ಮಾದರಿಯ ಚೀಲವನ್ನು ಸೇರಿಸಿಬಿಟ್ಟರೆ ಆರ್‌ಜಿಹಳ್ಳಿ ವ್ಯಕ್ತಿಚಿತ್ರಕ್ಕೊಂದು ಚೌಕಟ್ಟು ಸಿಕ್ಕಿಬಿಡುತ್ತದೆ. ಆ ಹೆಗಲಚೀಲದಲ್ಲಿ ಹತ್ತಾರು ಪುಸ್ತಕಗಳು. ಮಾತಿಗೆ ಸಿಕ್ಕ ವ್ಯಕ್ತಿಗೆ ಸಾಹಿತ್ಯದ ಗಂಧಗಾಳಿ ಇರುವುದು ಸ್ಪಷ್ಟವಾದರೆ, ಆರ್‌ಜಿಹಳ್ಳಿ ತಮ್ಮ ಚೀಲದಿಂದ ಒಂದು ಪುಸ್ತಕ ತೆಗೆದುಕೊಡುತ್ತಾರೆ; ‘ಓದಿ, ಒಂದು ಸಾಲು ಪ್ರತಿಕ್ರಿಯೆ ಬರೆಯಿರಿ’ ಎನ್ನುವ ಕೋರಿಕೆಯೊಂದಿಗೆ. ಆ ಪುಸ್ತಕ ‘ಅನ್ವೇಷಣೆ’!
ನಿಂತಲ್ಲಿ ನಿಲ್ಲರಿಯದ ಚಲನಶೀಲ ಎಂದು ಆರ್‌ಜಿಹಳ್ಳಿ ನಾಗರಾಜ್‍ರನ್ನು ಗೆಳೆಯರು ತಮಾಷೆ ಮಾಡುತ್ತಾರೆ. ಈ ಮಾತು ಒಂದರ್ಥದಲ್ಲಿ ನಿಜ ಕೂಡ. ಒಂದೆಡೆ ಸಂಘಟನೆ, ಇನ್ನೂಂದೆಡೆ ಬರಹ, ಮತ್ತೊಂದೆಡೆ ಪ್ರಕಟಣೆ- ಹೀಗೆ ಆರ್‌ಜಿಹಳ್ಳಿ ಪುರುಸೊತ್ತು ಕಳಕೊಂಡ ವ್ಯಕ್ತಿ. ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ಕೆಲಕಾಲ ಕಾರ್ಯ ನಿರ್ವಹಿಸಿರುವ ಆರ್ಜಿಹಳ್ಳಿ ಅಂತರ್ಜಾಲ ಪತ್ರಿಕೋದ್ಯಮದಲ್ಲೂ ನೀರು ಕುಡಿದ ಆನುಭವಿ. ಆರ್‌ಜಿಹಳ್ಳಿ ಸಹಾಯಕ ಸಂಪಾದಕರಾಗಿದ್ದ ಅಂತರ್ಜಾಲ ನಿಯತಕಾಲಿಕೆ ‘ವಿಶ್ವಕನ್ನಡ’ ಅನಿವಾಸಿ ಕನ್ನಡಿಗರ ಮೆಚ್ಚುಗೆಗೆ ವಾತ್ರವಾಗಿತ್ತು. ಅಂತರ್ಜಾಲದಲ್ಲಿ ಕನ್ನಡದ ಅಕ್ಷರಗಳನ್ನು ಮೂಡಿಸುವ ಅರ್ಥಪೂರ್ಣ ಸಾಹಸದಲ್ಲಿ ಯು.ಬಿ.ಪವನಜರೊಂದಿಗೆ ಆರ್‌ಜಿಹಳ್ಳಿ ನಾಗರಾಜ್ ಅವರು ವಹಿಸಿದ ಪಾತ್ರ ಕನ್ನಡದ ಅನೇಕ ಸಾಹಿತಿಗಳನ್ನು ಕಾಡಿಬೇಡಿ ಕಥೆ/ಕವಿತೆ ಪಡೆದು ವಿಶ್ವಕನ್ನಡದ ಪುಟಗಳನ್ನು ಆರ್‌ಜಿಹಳ್ಳಿ ಸಿಂಗರಿಸುತ್ತಿದ್ದರು. ‘ಕನ್ನಡ ಸಾಹಿತ್ಯ ಪರಂಪರೆಯ ವಕ್ತಾರರು’ ಎನ್ನುವ ವಿಶ್ವಕನ್ನಡದಲ್ಲಿನ ಆರ್ಜಿಹಳ್ಳಿಯವರ ಲೇಖನ ಮಾಲಿಕೆಯಿಂದಾಗಿ ಅಂತರ್ಜಾಲದಲ್ಲಿ ಕನ್ನಡದ ಪ್ರಮುಖ ಸಾಹಿತಿಗಳ ಪರಿಚಯ ಮೊದಲ ಬಾರಿಗೆ ದೊರೆಯುವಂತಾಯಿತು.
ಬರಹ ಹಾಗೂ ಸಂಘಟನೆ ಆರ್‌ಜಿಹಳ್ಳಿ ಅವರ ಒಂದು ಮುಖವಾದರೆ, ‘ಅನ್ವೇಷಣೆ’ ಅವರ ಇನ್ನೊಂದು ಮುಖ.
‘ಅನ್ವೇಷಣೆ’ ಒಂದು ಸಾಂಸ್ಕೃತಿಕ ಪತ್ರಿಕೆ. ಸಾಕ್ಷಿ, ಸಂಕ್ರಮಣ, ರುಜುವಾತು, ಶೂದ್ರ, ಸಂಚಯಗಳ ಮಾದರಿಯ ನಿಯತಕಾಲಿಕೆ. ತಮ್ಮೊಳಗಿನ ಹುಡುಕಾಟಕ್ಕೆ ಪ್ರತೀಕವಾಗಿ ‘ಆನ್ವೇಷಣೆ’ ಎನ್ನುವ ಅಭಿವ್ಯಕ್ತಿಯನ್ನು ನಾಗರಾಜ್ ಕಂಡುಕೊಂಡರಾ? ಗೊತ್ತಿಲ್ಲ. ಆದರೆ, ಸಾಂಸ್ಕೃತಿಕ ಪರಿಸರದಲ್ಲಿನ ವಾಗ್ವಾದಗಳಿಗೆ ‘ಅನ್ವೇಷಣೆ’ ಆರೋಗ್ಯಕರವಾಗಿ ಪ್ರತಿಕ್ರಿಯಿಸುತ್ತಿರುವುದು ಪತ್ರಿಕೆಯ ಸಂಚಿಕೆಗಳನ್ನು ನೋಡಿದರೆ ಸ್ಪಷ್ಟವಾಗುತ್ತದೆ. ‘ಒಂದು ಸಾಂಸ್ಕೃತಿಕ ಸಂದರ್ಭದಲ್ಲಿ ಯಾವುದೇ ವಿವಾದಕ್ಕೂ ಅನ್ವೇಷಣೆ ಪ್ರತಿಕ್ರಿಯಿಸಿ ತನ್ನ ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸುತ್ತಿದೆ. ನಿರಂತರ ಮೌಲಿಕ ಬರಹಗಳನ್ನು ಹೊತ್ತು ಬರುತ್ತಿರುವ ಪತ್ರಿಕೆಯಿದು’ ಎಂದು ಪ್ರೊ.ಕೆ.ಎಸ್.ಭಗವಾನ್ ‘ಅನ್ವೇಷಣೆ’ ಪತ್ರಿಕೆಯನ್ನು ಸರಿಯಾಗಿಯೇ ಗುರ್ತಿಸಿದ್ದಾರೆ.
‘ಅನ್ವೇಷಣೆ’ಯಂಥ ಸಾಂಸ್ಕೃತಿಕ ಪತ್ರಿಕೆಗಳ ಕುರಿತು ಕವಿ ಸುಮತೀಂದ್ರ ನಾಡಿಗ ಹೇಳುವುದು ಹೀಗೆ: ‘ನಮ್ಮ ಸಾಹಿತ್ಯ ಸಂಸ್ಕೃತಿಯನ್ನು ಮತ್ತು ವಿಚಾರ ಶಕ್ತಿಯನ್ನು ಬರವಣಿಗೆಯ ಶಕ್ತಿಯನ್ನು ಸಣ್ಣ ಪತ್ರಿಕೆಗಳು ಬೆಳಸುವ ಹಾಗೆ ಲಕ್ಷಾಂತರ ಜನರು ಕೊಂಡು ಓದುವ ಪತ್ರಿಕೆಗಳು ಬೆಳಸಲಾರವು. ಇಂತಹ ಸಣ್ಣ ಪತ್ರಿಕೆಗಳು ಹೆಚ್ಚಾಗಬೇಕು. ಅನ್ವೇಷಣೆಯಂತಹ ಸಾಹಿತ್ಯ ಮೌಲ್ಯವುಳ್ಳ ಪತ್ರಿಕೆಗಳು ಸತ್ತುಹೋಗದ ಹಾಗೆ ನೋಡಿ ಕೊಳ್ಳಬೇಕು, ಕಾಪಾಡಿಕೊಳ್ಳಬೇಕು. ಮುಖ್ಯವಾಗಿ ಇಂತಹ ಪತ್ರಿಕೆಗಳು ತರುಣ ವಿದ್ಯಾರ್ಥಿಗಳ ಕೈಗೆ, ಸಾಹಿತ್ಯಾಭ್ಯಾಸಿಗಳಿಗೆ ಸಿಗುವಂತಾಗಬೇಕು. ಇವು ಶಾಲೆ ಕಾಲೇಜುಗಳಲ್ಲಿ ಸಾರ್ವಜನಿಕ ಲೈಬ್ರರಿಗಳಲ್ಲಿ ಕಾಣಸಿಗಬೇಕು’.
* * *
ಬೆಂಗಳೂರಿನಲ್ಲಿ ಆರ್‌ಜಿಹಳ್ಳಿ ನಾಗರಾಜ್‍ರ ಕಾಲೇಜು ದಿನಗಳವು. ೧೯೮೪ ನೇ ಇಸವಿ. ಕಾನೂನು ವಿದ್ಯಾರ್ಥಿಯಾಗಿ ಆರ್ಜಿಹಳ್ಳಿಯವರ ಕೊನೆಯ ವರ್ಷವದು. ಆ ವೇಳೆಗಾಗಲೇ ಆರ್ಜಿಹಳ್ಳಿ ಕಥೆ/ಕವಿತೆ ಬರೆದಿದ್ದರು, ಪುಸ್ತಕ ಪ್ರಕಟಿಸಿದ್ದರು. ಈ ಹುಮ್ಮಸ್ಸಿನ ದಿನಗಳಲ್ಲಿ ಆರ್ಜಿಹಳ್ಳಿ ಹಾಗೂ ಸಮಾನ ಆಸಕ್ತಿಯ ಗೆಳೆಯರು ‘ಆರುಣ’ ಎನ್ನುವ ಯುವ ಲೇಖಕರ ಬಳಗ ಕಟ್ಟಿಕೊಂಡರು.
‘ಅನ್ವೇಷಣೆ’ ಬೀಜವಾಗಿ ಮೊಳೆತದ್ದು ಇದೇ ವೇದಿಕೆಯ ಬೆಂಬಲದ ನೀರಿನಲ್ಲಿ. ಸಾಹಿತ್ಯ, ರಂಗಭೂಮಿ, ಸಿನಿಮಾ, ಚಿತ್ರಕಲೆ ಇತ್ಯಾದಿಗಳ ಕುರಿತು ಗಂಭೀರ ಚರ್ಚೆ ನಡೆಸುವ ಹಾಗೂ ಪ್ರಯೋಗಶೀಲ ಬರಹಗಳನ್ನು ಹೆಕ್ಕಿ ತೆಗೆಯುವ ಉದ್ದೇಶದ ‘ಅನ್ವೇಷಣೆ’ ಪತ್ರಿಕೆ ಪ್ರಾರಂಭವಾದದ್ದು ಬಂಡಾಯದ ಸುಗ್ಗಿಯ ಕಾವಿನ ಕಾಲದಲ್ಲಿ.
‘ಅನ್ವೇಷಣೆ’ಗೆ ಆಸರೆಯಾಗಿದ್ದ ‘ಆರುಣ’ ಮಿತ್ರ ಮಂಡಳಿಯ ಹುಮ್ಮಸ್ಸು ದೀರ್ಘಕಾಲ ಉಳಿಯಲಿಲ್ಲ. ಮಿತ್ರರ ಬದುಕಿನ ಆಸಕ್ತಿಗಳು ಬೇರೆಯಾಗಿ ದಾರಿಗಳೂ ದಿಕ್ಕಾಪಾಲಾದಾಗ, ಆರ್ಜಿಹಳ್ಳ ‘ಆನ್ನೇಷಣೆ’ಯ ಪೂರ್ಣ ಜವಾಬ್ದಾರಿ ಹೊತ್ತು ಕೊಂಡರು. ಏಕವ್ಯಕ್ತಿ ಪ್ರದರ್ಶನದಿಂದಾಗಿ ಪತ್ರಿಕೆಯ ನಿರ್ವಹಣೆ ಭಾರ ಅನ್ನಿಸುತ್ತಿರುವಾಗ ಆರ್ಜಿಹಳ್ಳಿಗೆ ಜೊತೆಯಾದವರು ಎಚ್.ಎಲ್.ಪುಷ್ಪ. ಸಂಗಾತಿಯಾಗಿ ಅವರು ಆರ್ಜಿಹಳ್ಳಿಯವರ ಕೈ ಹಿಡಿದುದೂ ಮಾತ್ರವಲ್ಲದೆ ‘ಆನ್ವೇಷಣೆ’ಗೂ ಆಸರೆಯಾದರು.
ಸಾಂಸ್ಕೃತಿಕ ಪತ್ರಿಕೆಯಾಗಿ ಮಾತ್ರವಲ್ಲದೇ ಪ್ರಕಾಶನ ಸಂಸ್ಥೆಯಾಗಿಯೂ ‘ಅನ್ವೇಷಣೆ’ ಕೆಲವು ಮಹತ್ವದ ಕೃತಿಗಳನ್ನು ಪ್ರಕಟಿಸಿದೆ. ಬರಗೂರು ರಾಮಚಂದ್ರಪ್ಪ ಅವರ ‘ಬಂಡಾಯ ಸಾಹಿತ್ಯ ಮೀಮಾಂಸೆ’, ಪ್ರೊ.ಎಸ್.ಜಿ.ಸಿದ್ದರಾಮಯ್ಯನವರ ‘ಯಡೆಟುಂಟೆ ಗೆಣೆಸಾಲು’, ಡಾ.ಕೇಶವಶರ್ಮ ಅವರ ‘ಕ್ರಿಯೆ ಪ್ರತಿಕ್ರಿಯ’, ಎಚ್.ಎಲ್.ಪುಷ್ಪ ಅವರ ‘ಅಮೃತಮತಿ ಸ್ವಗತ’, ಸಂದ್ಯಾ ರವೀಂದ್ರನಾಥ್‍ರ ‘ಮರಳಿ ಬರುವೆ ನಾ ಮತ್ತು ಇತರ ಕಥಗಳು’ ಅನ್ವೇಷಣೆ ಪ್ರಕಾಶನದ ಕೆಲವು ಪ್ರಕಟಣೆಗಳು. ಸತ್ಯನಾರಾಯಣರಾವ್ ಅಣತಿ ಅವರು ರಂಗರೂಪಕ್ಕೆ ತಂದಿರುವ ‘ಸೂರ್ಯನ ಕುದುರೆ’ (ಅನಂತಮೂರ್ತೀ ಯವರ ‘ಸೂರ್ಯನ ಕುದುರೆ’ ಕಥಯ ರಂಗರೂಪ) ಕೃತಿಯನ್ನು ‘ಅನ್ವೇಷಣೆ’ ಪ್ರಕಟಿಸುತ್ತಿದೆ.
ಲೇಖಕನಾಗಿ ಆರ್ಜಿಹಳ್ಳಿಯವರ ಬರಹದ ಬೀಸು ದೊಡ್ಡದು. ‘ಸಂಕರ’, ‘ಕಡೆಗೋಲು’ (ಕವನ ಸಂಕಲನ), ‘ಸಿಡಿದವರು’ (ಕಥಾಸಂಕಲನ), ‘ಸಮೂಹಪ್ರಜ್ಞೆ’ (ವಿಮರ್‍ಶೆ)- ಆರ್ಜಿಹಳ್ಳಿಯವರ ಪ್ರಕಟಿತ ಕೃತಿಗಳು. ‘ಬಂಡಾಯ ಹತ್ತು ವರ್ಷ’ ಹಾಗೂ ‘ಮಂದಿರ, ಮಸೀದಿ, ಕೋಮುವಾದ’ ಎನ್ನುವ ಕೃತಿ ಸಂಪಾದನೆಯೂ ಅವರ ಅಕ್ಷರಕೃಷಿಯ ಪಟ್ಟಿಯಲ್ಲಿದೆ.
ಇಪ್ಪತ್ತರ ಹುಟ್ಟುಹಬ್ಬದ ಹೊಸ್ತಿಲಲ್ಲಿರುವ ‘ಅನ್ವೇಷಣೆ’ಯ ಮುಂದಿನ ಸವಾಲುಗಳು ಸಾಲುಸಾಲು. ಪ್ರತಿಯೊಂದಕ್ಕೂ ದೂಡ್ಡಿನ ವಾಸನೆ ಅಮರಿಕೊಂಡ ಸನ್ನಿವೇಶದಲ್ಲಿ ‘ಅನ್ವೇಷಣೆ’ ತನ್ನ ಸಾಂಸ್ಕೃತಿಕ ಸೊಗಡಿನೊಂದಿಗೆ ಮುಂದುವರಿಯ ಬೇಕಾಗಿದೆ. ಜಾಗತೀಕರಣದ ಸಂದರ್ಭದಲ್ಲಿ ಕನ್ನಡದಂಥ ಪ್ರಾದೇಶಿಕ ನುಡಿಗಳಿಗೆ ‘ಅನ್ವೇಷಣೆ’ ಯಂಥ ಪತ್ರಿಕೆಗಳು ದಿಕ್ಕುನೆಲೆಗಳ ಸೂಚಿಗಳಾಗಬಲ್ಲವು.
*****



















