ಬೆರಳು ಬೆರಳುಗಳಲ್ಲಿ, ಕೊರಳು ಕೊರಳಿನಲಿರಿಸಿ,
ಸುರುಳುರುಳಿ, ಸುತ್ತಿರುವ ಬಳ್ಳಿಗಳ ಹಾಗಾಗಿ,
ಅರಳಿಸುತಲೊಂದೊಂದೆ ಅವಳಿ ಹೂ, ದಿವ್ಯತರ
ದೃಷ್ಟಿಯನು ಪಡೆಯುವಂತೆ,
ಭರದಿ ಮೈಮೇಲೆಲ್ಲ ಕಣ್ಣಾಗೆ, ಆಗ ಮೈ-
ಮರೆತು ನೋಡುತ್ತ ನಿಲ್ಲೋಣ ಸ್ವರ್ಲೋಕವನು,
ಹರಸುತ್ತ ಹುಡುಕಿ ಕಂಡಂತೆ ನಮ್ಮಂತಿರುವ
ಈ ನಕ್ಷತ್ರದ್ವಂದ್ವಗಳನು.
ಕೈಗೆ ಕೈ, ಮೈಗೆ ಮೈ, ಬಾಯ್ಗೆ ಬಾಯ್ಗೂಡಿಸೇ !
ಸಾಗಿ, ಬಿಗಿತಾಗಿ, ಒಂದಾಗಿ, ಹನಿಹನಿ ಗೂಡಿ,
ಮಾಗಿ, ಗಡನೊಂದೆರಸವಾಗಿ, ಜೀವೈಕ್ಯದೊಳು
ಸಂಗಮಿತ ಹೊಳೆಗಳಂತೆ
ಆಗಿ, ಹರಿಯೋಣ ಬಾ, ಕೂಗುತೊಂದೇ ಮಾತ,
ನೂಗುತೊಂದೇ ದುಃಖ, ತೂಗುತೊಂದೇ ಸುಖವ,
ಬಾಗು ಬಾಗಿದ ಹಾಗೆ ಮುಗಿಸಿಕೊಡಲೊಳಗಿರಿಸಿ
ಸಾಗೋಣ ಕೂಡಿ ಕೂಡಿ.
*****