ಅಪ್ಪನೂ ಕುರುಡಾ ಅವ್ವೀನೂ ಕುರುಡ
ಗೋಂಡೀ ನೆಟ್ಟವ್ರೇ ಗೊಂಡೀಗ ನೀರ ಯೆರುದವ್ರೇ
ತಂಗೀ ಕೊಟ್ಟವ್ರೇ ತಂಗಳರಾಜ್ಯ ||೧||
‘ಕೇಳಲ್ಲೋ ಕೇಳೋ ನನ್ನಲು ಮಗುನೇ
ತಂಗೀ ನಾರೂ ಕರುಕಂಡೀ ಬಾರೋ’
ಲಟ್ಟೋಂದು ಮಾತಾ ಕೇಳಿದ ಮಗುನೇ ||೨||
ಮಾಳುಗೀ ವಳುಗೇ ನಡುದಿದ ಮಗುನೇ
ಸೇರಿನ ನ್ಯಾವಳವಾ ಸೊಂಟಿಗೆ ದರುಸೀದಾ
ಸೇರಿನಾ ವಂಟೀ ಕೆಮಿಯಲಿ ದರುಸೀದಾ ||೩||
ತಾನಿಡೂ ವಸ್ತ್ರಾ ಮೈಯಲಿ ದರುಸೀದಾ
‘ಕೇಳಲ್ಲೇ ಕೇಳೇ ನನ್ನಾಲು ತಾಯೇ,
ತಂಗೀಯ ಮನಿಗೇ ಹೋಗೀಲೂ ಬತ್ತೇ ||೪||
ಯೆಂಟೂ ದಿನದಲ್ಲೀ ಬರುತ್ತೇನೆ ತಾಯೇ”
ತಾಯೀಗೇನಾದ್ರೇ ಹೇಳೀದ ಮಗುನೇ
ತಿಂಗಳ ರಾಜ್ಯಾಕೂ ಹೋಗೀದಾ ಮಗುನೇ ||೫||
ತಂಗೀಯ ಮನಿಗೇ ಹೋಗಿ ಮುಟ್ಟೀದಾ
ತಂಗೀನಾದಾರೂ ಲಣ್ಣನ ನೋಡೀತೂ
ಕುಳ್ಳಂದೀ ವಂದಾ ಹಶ್ಯ ಹಾಕುಲಿಲ್ಲಾ ||೬||
ವಂದೂ ಚಂಬುದಿಕಾ ತಂದಿ ಕೊಡಲಿಲ್ಲಾ
ತಂಗೀ ಗಂಡಾಗೇ ದೂರಿನಾ ಕರಿಯಾ
ಹೋಗೀಲೂ ನಿಲುಕೇ ಕುಂತೀದ ಲಣ್ಣಾ ||೭||
“ಕೇಳಲ್ಲೇ ಕೇಳೇ ನನ್ನಾಲು ತಂಗೀ,
ನಿನ್ನಲೂ ಗಂಡಾ ಯೆಲ್ಲೀಗ ಹೋಗನೆಯೇ?”
“ತನು ಗಂಡನ ಸುದ್ದೀ ನಿನಗಾರೂ ಲ್ಯಾಕೋ?” ||೮||
“ಕೇಳಲ್ಲೇ ಕೇಳೇ ನನ್ನಲೂ ತಂಗೀ,
ಲಪ್ಪನೂ ಕುರುಡಾ ಲವ್ವೀನೂ ಕುರುಡೀ
ಗೊಂಡೀ ನೆಟ್ಟವ್ರೆ ಗೊಂಡೀಗ್ ನೀರ್ ಯೆರುದವ್ರೇ ||೯||
ಆದಾದಾ ಹೂಂಗ್ಯಲ್ಲಾ ಪರುರು ಮುಡುದ ಹೋತ್ರೂ
ನಿನ್ನಾ ಕರುವಲ್ಲೀ ಬಂದೀದೇ ತಂಗೀ
ತಾಯೀ ತಂದೀನೂ ನಿನ ಜಾನದಲವ್ರೇ” ||೧೦||
ಅಟ್ಟೊಂದು ಮಾತಾ ಹೇಳಿದಾ ಲಣ್ಣಾ
ತಂಗೀಽನಾದಾರೂ ಮಾತಾನಾಡುಲಿಲ್ಲಾ
ಅಡಗೀನಾದಾರೇ ಮಾಡೀತು ತಂಗೀ ||೧೧||
ಕೋಜ್ಜಕ್ಕೇಲನ್ನಾ ಮಾಡದೇ ತಂಗೀ
ಚಪ್ಪೇ ಮುರ್‍ಗನುಳೀ ಸಾರಾ ಮಾಡದೇ
“ಕೇಳಲ್ಲೋ ಕೇಳೋ ಯೇ ಮನಸಾ ನೀನೂ ||೧೨||
ಊಟಕಾದರೂ ಬರಲೂ ಬೇಕೋ”
ಹಳ್ಳಕಾದರೂ ಲೋಗೀದ ಲಣ್ಣಾ
ಕೈಕಾಲಾ ಮೊಕುವಾ ತೊಳುದೀದ ಲಣ್ಣಾ ||೧೩||
ಊಟಾಕಿನ್ನಾರೊ ಬಂದೀ ಕುಂತೀದಾ
ತಂಗೀ ಲಾದಾರೊ ಯೆನು ಮಾಡೂತದೋ?
ಮಾಳುಗಿ ಮೆನೆ ಕತ್ತೀ ಮಸಿಯೂತಾದೇ ||೧೪||
ಊಟಕೆ ಕುಂತಣ್ಗೀ ಸಬುದಾ ಕೇಳೀತೊ
“ಕೇಳಲ್ಲೇ ಕೇಳೇ ನನ್ನಾಲೂ ತಂಗೀ
ನನ್ನಲೂ ಬಾವಾ, ಯೆಲ್ಲೀ ಹೋಗನೆಯೇ? ||೧೫||
ಅಪ್ಪನೂ ಕುರುಡಾ, ಅವ್ವೀನೂ ಕುರುಡೀ
ತಾಯೀ ತಂದೀಗೂ ನಾನು ವಬ್ಬನೆ ಮಗುನೇ
ಅವರೀಗೇ ಲಿನ್ನೇ ಲೇಗಾರೂ ಗತಿಯೇ” ||೧೬||
ಅಟ್ಟೊಂದು ಮಾತಾ ಹಳಲೂ ತನಕ
ಮಾಳುಗಿ ಕೆಳುಗೀ ಇಳುದೀ ಬಂದೀತೂ
ಕೈಯಲ್ಲಿ ಕತ್ತೀ ಹಿಡುದೀ ಬಂದಾದೇ ||೧೭||
ಅಣ್ಣನಾದಾರೂ ನೋಡೀಕಂಡೀದಾ
“ಕೇಳಲ್ಲೇ ಕೇಳೇ ನನ್ನಲೂ ತಂಗೀ
ನನ್ನ ಜೀವಾವಾ ಕೊಂದಲೂ ಬೇಡಾ” ||೧೮||
ಅಂದೀಲೂ ಅಣ್ಣಾ ಹೇಳೀದಾನೇ
ಹೇಳೇಳೂ ತನುಕೇ ಕುತುಗೀ ಕಡುದೀತೂ
ಕೆಮಿಯಾನಾ ವಂಟೀ ಕಳುಚೀತೂ ಹೆಣ್ಣೂ ||೧೯||
ಸೊಂಟನ ನ್ಯಾವಳವಾ ತೆಗುದೀತೂ ಹೆಣ್ಣೂ
ಅವ್ನಾ ದುಸ್ತಾವಾ ತೆಗುವಾಲು ತನಕೇ
ಗಂಡಾನಾದರೂ ಬಂದೀದಲೀಗೇ ||೨೦||
ಅವ್ನನಾದಾರೂ ಹೊತ್ತೀ ಕಂಡೀತೂ
ಮಾಳುಗೀ ಮೇನೇ ಲಾಕೇ ಬಂದೀತೂ
ಗಂಡಾನುಪಂಚರು ಕೇಲೋಗೀತೂ ಲೆಣ್ಣೂ ||೨೧||
“ಆಗೀತೂ ಲಡುಗೀ ಕಾದಿತು ಬಿಸಿನೀರೂ
ಜಳುಕಕಾದಾರೂ ಹೋಗೀ ಬಾ” ಅಂತು
ಜಳುಕಕಾದಾರೂ ಹೋಗಿದಲಿನ್ನೇ ||೨೨||
ವಂದು ತಾಸಿನ ಜಳುಕಾ ಲರ್ಧತಾಸಿನಲ್ಲಿ ಮಾಡಿದಾ
ಊಟಾಕಾದಾರೂ ಬಂದೀ ಕುಂತೀದಾ
ವಂದೂ ತುತ್ತನ್ನಾ ನೆಗುವಲು ತನಕೇ ||೨೩||
ಅಲ್ಲೀಯ ನೆತ್ರಾ ಕಣ್ಣಗೆ ಬಿದ್ದೀತೂ
“ಕೇಳಲ್ಲೇ ಕೇಳೇ ನನ್ನಲೂ ಮಡದೀ
ಊಟಕೆ ಕುಂತಲ್ಲೀ ಯೆಂತಾ ನೆತ್ತಿರವೇ? ||೨೪||
ನಾನೂ ವಂದಾಲೂ ಬೆಕ್ಕೂ ಸಾರೀದೇ
ಸರುಪನ ಮರಿ ತಂದೀ ಮುರುದೀ ತಿಂದೀತೂ
“ನೆತ್ತರಲಿನ್ನೇ ಬಿದ್ದಿದೆ” ಲಂದೀತೂ ||೨೫||
ಲಟ್ಟೇ ಮಾತೀಗೇ ಕೈಕುಡುಗ್ ಯೆದ್ದೀದಾ
“ಕೇಳಲ್ಲೇ ಕೇಳಿ ನಮ್ಮಲೂ ಸ್ವಾಮಿ
ಊಟನಾದರೂ ಮಾಡೀಕಂಡ್ ಹೋಗೀ” ||೨೬||
“ಆಬೆಕ್ಕೂಲಿನ್ನೆ ನಮುಗಾಲು ಬೇಡಾ
ಬೆಕ್ಕಲಿಡುದಿನ್ನೇ ಬಿಟ್ಟೇ ಬರುತ್ತೇನೆ”
ಕೈ ಬಾಯಾ ತೊಳುದೀ ವಳುಗೇ ಬಂದೀದಾ ||೨೭||
ದೀಪ ಹಚಿಕಂಡೀ ವಳುಗೆಲ್ಲ ಹುಡುಕೀದಾ
ದೀಪ ಹಚಿಕಂಡ ವಳುಗೇ ಹುಡ್ಕುತಾನಾ
ಚಿನ್ನದುಂಗೀಲಾ ಶಿಕ್ಕೀತೂ ಲವಗೇ ||೨೮||
“ಕೇಳಲ್ಲೇ ಕೇಳೇ ನನ್ನಲೂ ಮಡದೀ
ಚಿನ್ನದುಂಗೀಲಾ ಎಲ್ಲಿದ್ದೀ ಬಂತೇ?”
“ನೀರೀಗಂದೇಳೀ ಲೋಗಿದೇ ಸ್ವಾಮೀ ||೨೯||
ವಂದೂ ಲುಂಗೀಲಾ ಸಿಕ್ಕೀತೂ ನನುಗೇ
ನಿಮಗಾಗುದಂದೀ ತಂದೀ ಲಿಟ್ಟೀದೇ”
ಲಟ್ಟೊಂದೂ ಮಾತಾ ಕೇಳೀದಾ ನೋಡೂ ||೩೦||
ಮಾಳುಗೀ ಇನ್ನೇ ಹತ್ತೀದಾ ಲವನೂ
ಮಾಳೂಗೀಯೆಲ್ಲಾ ಹುಡುಕೂವತನಕೇ
ಮೂಲಿಲಾಕಿನ್ನೇ ಮುಚ್ಚೇಲಿಟ್ಟದೇ ||೩೧||
ಸವ್ವನಾದಾರೂ ನೋಡೀದಾ ಲವನೂ
ಬೂಮಿಗೆ ಮುರುಚಾಗೀ ಬಿದ್ದೀದಾ ನೋಡೂ
ವಂದೂ ತಾಸಾದ್ರೂ ಯೆಚ್ಚರಾಗುಲಿಲ್ಲಾ ||೩೨||
ಮಾಳೂಗಿ ಗಿನ್ನೇ ಹೋಗೀತೂ ಹೆಣ್ಣಾ
ಗಂಡ ವಂದ್ ಬದಿಲಿ ಬಿದ್ದಾನೇ ನೋಡೂ
ಗಂಡನ ಇನ್ನೇ ಯೇಳಿಸೀ ಕುಳ್ಳಿತೂ ||೩೩||
“ಕೇಳಲ್ಲೀ ಕೇಳೇ ಯೇನನ್ನಾ ಸ್ವಾಮೀ,
ಶೇರೂ ಶೇರೀನಾ ನ್ಯೇವಾಳ ಉಂಟೂ
ನಿಮಗಾದ್ತೂ ಲಾದ್ರೇ ಲಾಗೂದೂ ಸ್ವಾಮೀ ||೩೪||
ಬೇಕಾದಾ ವಸ್ತಾ ಉಂಟೂ ಸ್ವಾಮೀ”
ಅಂದಿ ಇನ್ನಾದ್ರೂ ಹೇಳಿತು ಹೆಣ್ಣೂ
“ಕೇಳಲ್ಲೀ ಕೇಳೇ ಏ ಹೆಣ್ಣೇ, ನೀನೂ ||೩೫||
ವಡವೀ ಆಸ್ತೀಗೆ ನನು ಬಾವನ ಜೀಮಾ
ಯಾವಾಗೆ ನೀನೂ ಮೋಸಾ ಮಾಡಿದಿಯೇ?
ತಾಯೀ ತಂದೀನೂ ಲಿಬ್ಬರು ಕುರುಡಾರೂ ||೩೬||
ಅವರಗೇ ಇನ್ನೇ ಯೇನಲು ಗತಿಯೇ?”
ಅಂದೀ ನಾದಾರೇ ಹೇಳೀದ ನೋಡು
ಬಾವಾನಾದರೂ ಹೊತ್ತೀಕಂಡೀದಾ ||೩೭||
ಮಾಳೂಗೀ ಕೆಳುಗೇ ಲಿಳುದೇ ಬಂದೀದಾ
ಮಾಳೂಗೀ ಕೆಳುಗೇ ಮನುಗ್ಸಿದಾ ನೋಡೂ
“ಹರ ಹರ” ನಂದಾ “ಶಿವ ಶಿವ” ನಂದಾ ||೩೮||
“ನನ್ನಾಲೂ ಬಾವಾ ಯಾವಗೆ ಶಿಕ್ಕೂನೋ’
ಮುತ್ತಿನ ಕಣ್ಣೀರಾ ಶಡುದೀದಾ ನೋಡೂ
ಹಿಂಡೂತೀ ಇನ್ನೇ ಕರುದೀದಾ ನೋಡೂ ||೩೯||
“ಕೇಳಲ್ಲೇ ಕೇಳೇ ಯೇ ಹೆಣ್ಣೇ, ನೀನೂ
ನನ್ನಾ ಬಾವಾನಾ ಜೀವಾ ತೆಗುದೀದೇ
ನೀನೂ ಲಾದರೇ ಇರುವಾದು ಯಾಕೇ?” ||೪೦||
ಲಂದೀ ಹೇಳೀದಾ ಕುತುಗೀ ಕಡುದೀದಾ
ಯೆಯ್ದೂ ಸವಗೋಳಾ ವಂದೇ ಕಡೆಗಾಕ್ದಾ
ಮಾಳೂಗೀ ಕದೂವಾ ಜಡುದೀದಾ ನೋಡೂ ||೪೧||
ಮನಿಗಾದ್ರೂ ಬೆಂಕೀ ಹಚ್ಚೀ ಬಿಟ್ಟೇದಾ
ಯೆಯ್ದೂ ಜನ ಸುಟ್ಟೀ ಬೂದೀಲಾಗೀರೂ
ನೆಂಟರ ಮನಿಗೇ ಬಂದವ್ನೇ ಲೀಗೇ? ||೪೨||
ನೆಂಟರ ಮಣಿಗಿನ್ನೀ ಬರುವಾಲೂ ತನಕೇ
ತಾಯೀ ತಂದೀನೂ ಗೋಳ ಗುಡ್ತಿ ಬಿದ್ದಾರೇ
ಊಟಾನೂ ಲೆಲ್ಲಾ ಸಾಸಾನೂ ಲೆಲ್ಲಾ ||೪೩||
“ನನ್ನಲು ಮಗುನೇ ಯೆಂಟು ದಿನುದಲೂ ಬರುತೀದಾ
ಯೆಂಟು ದೀನದಲ್ದೆಲ್ಲಾ ತಿಂಗಳು ಲಾಗೀತೂ
ನನ್ನಲೂ ಮಗುನೇ ಯೆಲ್ಲೀಗ ಹೋಗನೆಯೊ? ||೪೪||
ನಮುಗ್ಯೇನಾ ಗತಿಯೋ?” ಲಂದೀ ಹೇಳುತುರೂ
ಲಟು ಮಾತ ಹೇಳೂವತನುಕೇಲಿನ್ನೇ
ಅಳಿಯನಾದಾರೆ ಬಂದೀ ಮುಟ್ಟವ್ನೇ ||೪೫||
“ಕೇಳಲ್ಲೇ ಕೇಳೇ ಯೇತಾಯೀ ತಂದೇ,
ನಿನ್ನಲೂ ಮಗುನೇ ಬಂದೀ ಮುಟ್ಟೀದೇ
ನೀವಾದರಿನ್ನೇ ತೀಡಲೂ ಬೇಡೀ” ||೪೬||
“ಕೇಳಲ್ಲೋ ಕೇಳೋ ನನ್ನಲೂ ಮಗುನೇ,
ತಂಗೀನಾದಾರೂ ಬರುವುದಿಲ್ಲಂತೂ?”
“ಇನ್ನೆಂಟು ದಿನುದಲ್ಲೀ ಬರೂವದು ತಾಯೇ” ||೪೭||
ಲಂದೀನಾದಾರೇ ಹೇಳೀದ ಅಳಿಯಾ
ಅವ್ನಲೂ ತಂದೇ ಪರಿಕ್ಸಿ ಮಾಡೀದಾ
“ಯಾರಪ್ಪಾ ನೀನೂ ಯಲ್ಲಾಯ್ತೋ ನಿನುಗೇ? ||೪೮||
ನನ್ನಲೂ ಮಗುನೇ ನೀಯೇನಲ್ಲಾ
ನನ್ನಲೂ ಮಗುನು ತಿಂಗಳ ರಾಜಿಕೋಗಿದಾ
ಯೆಂಟೂ ದಿನುದಲ್ಲೀ ಬರುತೇ ಲಂದೀದಾ ||೪೯||
ತೀಗಳಾದರೂ ಬರಲು ಇಲ್ಲಾ
ನನ್ನಾಲು ಮಗುನಾ ಕಂಡೀದೀಯೇನೋ?”
“ನಿನ್ನ ಮಗನೂ ನಾನೂ, ಮಗೂಳು ನಾನೂ ||೫೦||
ನಿಮ್ಮಾ ಬುಡದಲ್ಲೀ ಉಳಿಯುತ್ತೇ ಮಾವಾ,”
ನಂದೀ ನಾದಾರೇ ಹೇಳೀದಾ ಲಳಿಯಾ
ಯೇನೆನ ಮಾಡಿದರೂ ಕೇಳೂವದೆಲ್ಲಾ ||೫೧||
“ಕೇಳಲ್ಲೊ ಕೇಳೋ ಯೇನನ್ನ ಮಾವಾ
ನಿನ್ನಲೂ ಮಗುನೇ ಕರುವ ಲೋಗೀದಾ
ನಾನೂ ನಾದಾರೇ ಮನಿಲೆಲ್ಗಾದ ಹೊತ್ತೂ ||೫೨||
ನಿನ್ನ ಮಗುಳಿನ್ನೇ ಮೋಸಾ ಮಾಡದಿಯೋ
ಆಬರುಣ್ಣಾಸ್ತೀಗೇ ಮೋಸಾ ಮಾಡೀತೂ
ನಾನಾದರಿನ್ನೇ ಮನಿಗೇ ಬಂದೀದೇ ||೫೩||
ನನ್ನಾ ಬಾವಾನಾ ಮೋಸಾ ಮಾಡಾದೇ
‘ನೀ ಇದ್ದೀ ಯೇನೂ ಫಲವೇ?’ ಅಂದೇ
ಅದ್ರಾ ಕುತುಗೀಯಾ ಕಡುದೀದೇ ನಾನೂ ||೫೪||
ಸುಟ್ಟೀ ಬೂದೀಯಾ ಮಾಡೀ ಬಂದನೆಯೇ
ನನುಗೇಲಾದಾರೇ ತಾಯೀ ತಂದೆಲ್ಲಾ
ತಾಯೀನೂ ನೀವೇ ತಂದೀನೂ ನೀವೇ ||೫೫||
ನಿಮುಗೇ ಲಾದಾರೂ ಮಕ್ಕಳೂ ಯಿಲ್ಲಾ
ಮಗಳೂವಾ ನಾನೇ, ಮಗನೇಯಾ ನಾನೇ
ನಿಮ್ಮಾ ಜೀವಾವಾ ನಾಸಲಗೂವೇ” ||೫೬||
ಲಂದೇಳೀ ಅಳಿಯಾ ಹೇಳೀದಾನೇ
ನೆಂಟರ ಮನಿಲೀ ಉಳಿದೂಽಕಂಡಾ ||೫೭||
*****
ಕಲವು ಪದಗಳ ವಿವರಣೆ
ಪರುರು = ಬೇರೆಯವರು
ಲಾಕೆ = ಹಾಕಿ
ನೆತ್ರ = ರಕ್ತ
ಸವ್ವ = ಶವ
ಪಂಚರು = ಪಂಜಿಯಾದರು
ಜೀಮಾ = ಜೀವ
ಹೇಳಿದವರು: ಸೌ| ಮಾಸ್ತಿ ರಾಮನಾಯ್ಕ, ವಸ್ತಿ: ಹೆಗಡೆ ಊರು.
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.
















