ಶಿವಶಿವಾ ಶಿವಶಿವಾ ಇಂದು ಕಂಡೆನು ಕಂಡೆ
ಬಾಳೆಯಾ ಹೊನ್ನೂರ ಶಿಖರ ಕಂಡೆ
ಗುಡ್ಡ ಗವಿಗಳ ಕಂಡೆ ಹಸಿರು ಮರಗಳ ಕಂಡೆ
ವೀರಸೋಮೇಶ್ವರನ ಬೆಳಕು ಕಂಡೆ
ಮಲಯ ಪರ್ವತ ರಾಣಿ ಮರೆತು ಮಲಗಿಹಳಿಲ್ಲಿ
ರಸದುಂಬಿದಾ ಬಾಳೆ ಬನವ ಕಂಡೆ
ಕಣ್ತುಂಬ ಶಿವಶಿವಾ ಎದೆತುಂಬ ಶಿವಶಿವಾ
ಶಿವಯೋಗದಾನಂದ ಕಂಡುಕೊಂಡೆ
ಇಷ್ಟು ದಿನ ಕಳಕೊಂಡೆ ಬೆಂಕಿಬೇಗೆಯ ಉಂಡೆ
ಇಂದು ನಾ ಉಳಕೊಂಡೆ ಶಿವನ ಕಂಡೆ
ಚರ್ಮ ಚಕ್ಷುವ ಮೀರಿ ಆಚೆಯಾಚೆಯ ಚಲುವು
ಚುಂಬಿಸಿದ ರಂಭಾಪುರಿಯ ಕಂಡೆ
ಆದಿಗುರು ರೇಣುಕರು ಕಂಡು ಸಾರಿದ ಸತ್ಯ
ಜಗದ ಜಗಲಿಯ ಮೇಲೆ ಕೂಗಿಕೊಂಡೆ
ಇಂದು ತಾಯಿಯ ಕಂಡೆ ಇಂದು ತಂದೆಯ ಕಂಡೆ
ಬೆಳಗಿನೊಳಗಣ ಬೆಳಗು ಪಡೆದುಕೊಂಡೆ
*****
(ರಂಭಾಪುರಿ ಬೆಳಗು – ೨೦೦೨)



















