ಅಧ್ಯಾಯ ಹನ್ನೆರಡು
ಇತಿಹಾಸದ ಘಟನೆ ಮತ್ತು ಇತಿಹಾಸ ಪ್ರಸಿದ್ಧ ವ್ಯಕ್ತಿಗಳ ಬದುಕನ್ನು ಆಧರಿಸಿದ ಕಥಾ ಚಿತ್ರಗಳೇ ಐತಿಹಾಸಿಕ ಚಿತ್ರಗಳು. ಕೆಲವು ವಿಮರ್ಶಕರು ಐತಿಹಾಸಿಕ ಚಿತ್ರಗಳನ್ನು ‘ಕಾಸ್ಟ್ಯೂಮ್ ಡ್ರಾಮಾ’ ಅಥವಾ ವೈಭವದ ಕಥಾನಕಗಳು ಎಂದು ಕರೆಯುವುದುಂಟು. ಇಂಥ ಚಿತ್ರಗಳಲ್ಲಿ ಐತಿಹಾಸಿಕ ಘಟನೆಗಳಿಗಿಂತಲೂ ದೃಶ್ಯ ವೈಭವಕ್ಕೆ ಹೆಚ್ಚಿನ ಆದ್ಯತೆ. ವಿಶಾಲವಾದ ಸೆಟ್, ವರ್ಣರಂಜಿತ ವಸ್ತ್ರ ಮತ್ತು ಪ್ರಸಾಧನ, ಅತಿರಂಜಿತ ದೃಶ್ಯಸಂಯೋಜನೆ, ಅತಿರೇಕದ ಅಭಿನಯ, ರೋಮಾಂಚನದ ಕಾಳಗಗಳು, ಚಿತ್ತಾಕರ್ಷಕ ನೃತ್ಯ ಮತ್ತು ಮಧುರವಾದ ಸಂಗೀತಕ್ಕೆ ಇಂಥ ಚಿತ್ರಗಳಲ್ಲಿ ಅವಕಾಶ ಹೆಚ್ಚು. ಹಾಗಾಗಿ ರಂಜನೆಯ ದೃಷ್ಟಿಯಿಂದ ಇತಿಹಾಸವನ್ನು ವೈಭವೀಕರಿಸುವ ‘ಕಾಸ್ಟ್ಯೂಮ್ ಡ್ರಾಮಾ’ಗಳ ಹಾವಳಿ ಸಹ ಹಿಂದೆ ಹೆಚ್ಚಾಗಿತ್ತು. ಹಾಗೆಯೇ ಮಾನವ ಇತಿಹಾಸದಲ್ಲಿ ವಿಶಿಷ್ಟವೆನ್ನಬಹುದಾದ ಕಾಲಘಟ್ಟವನ್ನು ನಿರೂಪಿಸುವ ಕಥಾ ಚಿತ್ರಗಳನ್ನು ‘ಪರ್ವಕಾಲದ ಕೃತಿಗಳು’ (Period Pieces) ಎಂದೂ ಕೆಲವು ವಿಮರ್ಶಕರು ಹೇಳುವುದಿದೆ. ಇಂಥ ಚಿತ್ರಗಳು ಇತಿಹಾಸಕ್ಕೆ ನಿಷ್ಠವಾಗಿರಬಹುದು. ಅಥವಾ ಒಂದು ಕಾಲಘಟ್ಟದ ಮರುಸೃಷ್ಟಿಗೆ ಅಲ್ಲಿ ಇತಿಹಾಸ ಆಧಾರವಾಗಬಹುದು.
ನಿಜ ಹೇಳಬೇಕೆಂದರೆ ಬೇರೆ ಯಾವುದೇ ಪ್ರಕಾರಕ್ಕಿಂತ ಐತಿಹಾಸಿಕ ಚಿತ್ರಗಳನ್ನು ರೂಪಿಸುವುದು ಕಷ್ಟವಾದ ಕಾರ್ಯ. ಮೊದಲನೆಯದು-ಇತಿಹಾಸಕ್ಕೆ ಸಂಬಂಧಿಸಿದಂತೆ ಸರ್ವರಿಗೂ ಪರಿಚಿತವಾದ ಕತೆಯನ್ನು ಆಯ್ಕೆ ಮಾಡುವಲ್ಲಿ ಇರುವ ಕಷ್ಟ. ಭಾರತೀಯರಿಗಂತೂ ಪುರಾಣ-ಜಾನಪದ ಪರಿಚಿತವಿರುವಷ್ಟು ಇತಿಹಾಸದ ಪರಿಚಯವಿಲ್ಲ. ಇದ್ದರು ನಮ್ಮ ಇತಿಹಾಸವು ಪುರಾಣ, ಜನಪದ ಕತೆಗಳಷ್ಟೇ ತರ್ಕಾತೀತವಾಗಿರುತ್ತದೆ. ಹಾಗಾಗಿ ಐತಿಹಾಸಿಕ ಚಿತ್ರಗಳನ್ನು ನಿರ್ಮಿಸಿದರೂ ಅದನ್ನು ರಮ್ಯ ಜಾನಪದ ಕಥಾನಕದಂತೆ ನಿರೂಪಿಸಿ ಪ್ರೇಕ್ಷಕರನ್ನು ಸೆಳೆಯಬೇಕು. ಎರಡನೆಯದು-ಒಂದು ಇತಿಹಾಸದ ಕಾಲಘಟ್ಟವನ್ನು ಅದರ ಎಲ್ಲ ವಾಸ್ತವದೊಂದಿಗೆ ಮರುಸೃಷ್ಟಿಸಲು ಬೇಕಾದ ಸಂಶೋಧನೆ ಮತ್ತು ಹಣಕಾಸಿನ ಕೊರತೆ. ಆಯಾ ಕಾಲಘಟ್ಟದ ಪರಿಸರ, ವಾಸ್ತುಶಿಲ್ಪ, ಪ್ರಸಾಧನ, ಉಡುಗೆ ಇತ್ಯಾದಿಗಳನ್ನು ಸೃಷ್ಟಿಸಲು ಅಗಾಧವಾದ ಶ್ರಮ, ಕಲ್ಪನೆ ಅಗತ್ಯ. ನಮ್ಮ ಚಿತ್ರಗಳಲ್ಲಿ ಕಾಣುವ ಐತಿಹಾಸಿಕ ರಾಜರುಗಳ ಉಡುಗೆ, ಕಿರೀಟಕ್ಕೂ ಪುರಾಣ ಕತೆಗಳ ರಾಜರುಗಳ ಸ್ವರೂಪಕ್ಕೂ ವ್ಯತ್ಯಾಸ ಬಹಳ ಕಡಿಮೆ. ‘ಶ್ರೀಕೃಷ್ಣದೇವರಾಯ’ ಚಿತ್ರದಲ್ಲಿ ವಿಜಯನಗರದ ವಾಸ್ತು ಶಿಲ್ಪದ ಬದಲು ಇಂಡೋ ಸಾರ್ಸೆನಿಕ್ ಶೈಲಿಯ ರಾಜಾಸ್ಥಾನದ ಅರಮನೆಗಳೇ ತುಂಬಿವೆ. ಮೂರನೆಯದು-ಐತಿಹಾಸಿಕ ಚಿತ್ರಗಳು ಇತಿಹಾಸಕ್ಕೆ ನಿಷ್ಠವಾಗಿಲ್ಲ ಎಂಬ ಆಪಾದನೆಯನ್ನು ಉದ್ದಕ್ಕೂ ಎದುರಿಸುತ್ತಾ ಬಂದಿವೆ. ಅನೇಕ ಸಂಸ್ಕೃತಿಗಳ ಬೀಡಾದ ಭಾರತದಲ್ಲಿ ಒಂದು ಜನಾಂಗವು ಚಿತ್ರದ ಸನ್ನಿವೇಶ, ಪಾತ್ರಗಳು ತಮ್ಮ ಸಮುದಾಯದ ಭಾವನೆಗಳಿಗೆ ಘಾಸಿ ಮಾಡುತ್ತವೆ ಎಂದು ಭಾವಿಸಿದರೆ ದಂಗೆಯೇಳುತ್ತದೆ. (’ಜೋಧಾ ಅಕ್ಬರ್’- ಇತ್ತೀಚಿನ ಉದಾಹರಣೆ)
ಭಾರತದಲ್ಲಿ ರಾಷ್ಟ್ರೀಯಪ್ರಜ್ಞೆ ಜಾಗೃತವಾಗಿದ್ದ ವೇಳೆ ಹಾಗೂ ಕಪ್ಪು-ಬಿಳುಪಿನ ಯುಗದಲ್ಲೇ ಅನೇಕ ಐತಿಹಾಸಿಕ ಚಿತ್ರಗಳು ನಿರ್ಮಾಣವಾದವು. ಇತಿಹಾಸ ಚಿತ್ರಗಳ ಪಿತಾಮಹಾರೆನಿಸಿದ ಸೊಹ್ರಾಬ್ ಮೋದಿಯವರು ಅಪಾರ ಯಶಸ್ಸು ಗಳಿಸಿದ ‘ಸಿಕಂದರ್’ (೧೯೪೧), ‘ಪುಕಾರ್’ (೧೯೩೧), ‘ಹುಮಾಯೂನ್’, ‘ಮಿರ್ಜಾ ಗಾಲಿಬ್’, ‘ಝಾನ್ಸಿ ಕೀ ರಾಣಿ’(೧೯೫೨)ಯಂತಹ ಚಿತ್ರಗಳನ್ನು ತೆರೆಗಿತ್ತು ಇತಿಹಾಸ ಚಿತ್ರಗಳ ಶೈಲಿಯೊಂದನ್ನು ರೂಪಿಸಿದ್ದರು. ಮುಂದೆ ಇತಿಹಾಸವನ್ನು ನೆಪವಾಗಿಟ್ಟುಕೊಂಡು ಪ್ರಭುತ್ವದ ಕ್ರೌರ್ಯದಲ್ಲಿ ನಲುಗುವ ಪ್ರೇಮಿಗಳ ಬದುಕಿನ ಕತೆಯ ‘ಮುಘಲ್-ಎ-ಆಜಾಂ’ (೧೯೬೦) ಚಿತ್ರವನ್ನು ಕೆ.ಆಸಿಫ್‌ರವರು ನಿರ್ಮಿಸಿದರು. ಇದಕ್ಕಿಂತ ಹಿಂದಿನ ಚಿತ್ರಗಳಾಗಲಿ ನಂತರ ನಿರ್ಮಿಸಿದ ಐತಿಹಾಸಿಕ ಚಿತ್ರಗಳಾಗಲಿ ‘ಮುಘಲ್-ಎ-ಆಜಾಂ’ನ ದೃಶ್ಯವೈಭವ, ಕಥಾ ನಿರೂಪಣೆ ಮತ್ತು ಪಡೆದ ಜನಪ್ರಿಯತೆಯ ಮಟ್ಟಕ್ಕೆ ಹತ್ತಿರವೂ ಬರಲಿಲ್ಲ. ಇಂದಿಗೂ ಅದೊಂದು ಅಭಿಜಾತ ಕೃತಿ. ಅದೊಂದು ಚಿತ್ರವಲ್ಲ, ಅಧ್ಯಯನ ಸಂಸ್ಥೆ. ಅನಾರ್ಕಲಿಯ ಅಸ್ತಿತ್ವದ ಬಗ್ಗೆ ಸಂದೇಹ ವ್ಯಕ್ತಪಡಿಸಿ, ಸಲೀಂ-ಅನಾರ್ಕಲಿಯ ಪ್ರೇಮದ ಸಂಭವವನ್ನು ಅಲ್ಲಗಳೆದರೂ, ಆ ಒಂದು ಎಳೆಯನ್ನೇ ಇಟ್ಟುಕೊಂಡು ಅಪ್ಪ ಮತ್ತು ಮಗನ ನಡುವಿನ ಸಂಘರ್ಷ, ಪ್ರಭುತ್ವದ ಕ್ರೌರ್ಯ ಹಾಗೂ ಅದಕ್ಕೆ ತಣ್ಣಗೆ ವ್ಯಕ್ತವಾಗುವ ಕಲಾವಿದನೊಬ್ಬನ ಬಂಡಾಯ ಮುಂತಾದವುಗಳನ್ನು ಕೆ.ಆಸಿಫ್ ತಮ್ಮ ಅಭಿಜಾತ ಕೃತಿಯಲ್ಲಿ ಅನನ್ಯವೆಂಬಂತೆ ಕಡೆದಿದ್ದಾರೆ.
ಇಂಥ ಅಮೋಘವಾದ ಭಾರತೀಯ ಚಿತ್ರವೊಂದು ಬಿಡುಗಡೆಯಾದ ವರ್ಷವೇ ಕನ್ನಡದ ‘ರಣಧೀರ ಕಂಠೀರವ’ ಬಿಡುಗಡೆಯಾಯಿತು. ಎರಡೂ ಚಿತ್ರಗಳಿಗೂ ಕೆಲವು ಸಾಮ್ಯಗಳಿವೆ. ಎರಡೂ ಚಿತ್ರಗಳು ತಮ್ಮ ತಮ್ಮ ವಿಧಾನದಲ್ಲಿ ಐತಿಹಾಸಿಕ ವಿವರಗಳಿಗೆ ಸಾಕಷ್ಟು ಒತ್ತು ನೀಡಿವೆ. ಎರಡೂ ಚಿತ್ರಗಳು ಪ್ರಭುತ್ವದ ಕ್ರೌರ್ಯ ಮತ್ತು ಮನುಷ್ಯರ ನಡುವಿನ ಸಂಘರ್ಷವನ್ನು ಹೇಳುತ್ತವೆ. ಎರಡೂ ಚಿತ್ರಗಳಲ್ಲಿ ರಾಜಶಾಸನಗಳಿಗೆ ಬಲಿಯಾಗುವ ಸಾಮಾನ್ಯ ಹೆಣ್ಣುಮಕ್ಕಳ ದುರಂತವಿದೆ. ಯಾಜಮಾನ್ಯರ ಕ್ರೌರ್ಯದಲ್ಲಿ ನಲುಗುವ ಸಾಮಾನ್ಯರ ಬದುಕನ್ನು ಹೇಳಲು ಎರಡೂ ಚಿತ್ರಗಳು ಇತಿಹಾಸವನ್ನು ನೆಪವಾಗಿರಿಸಿಕೊಂಡಿವೆ. ‘ರಣಧೀರ ಕಂಠೀರವ’ ಚಿತ್ರವು ಅದ್ದೂರಿತನದಲ್ಲಿ ‘ಮುಘಲ್-ಎ-ಆಜಾಂ’ ಚಿತ್ರದ ಹತ್ತಿರಕ್ಕೆ ಬರದಿದ್ದರೂ ನಿಜ ಇತಿಹಾಸವನ್ನು ಕಟ್ಟಿಕೊಡಲು ಪ್ರಯತ್ನಿಸಿದ ಮೊದಲ ಕನ್ನಡ ಚಿತ್ರವೆನಿಸಿದೆ. ಇದಕ್ಕೂ ಮುನ್ನ ಕನ್ನಡದಲ್ಲಿ ‘ಪುರಂದರದಾಸ’ (೧೯೩೭), ‘ಮಹಾತ್ಮ ಕಬೀರ್’ (೧೯೪೭), ‘ಮಹಾಕವಿ ಕಾಳಿದಾಸ’ (೧೯೫೫) ಮತ್ತು ‘ಜಗಜ್ಯೋತಿ ಬಸವೇಶ್ವರ’ (೧೯೫೯) ಮುಂತಾದ ಐತಿಹಾಸಿಕ ವ್ಯಕ್ತಿಗಳ ಬದುಕನ್ನು ಆಧರಿಸಿದ ಚಿತ್ರಗಳು ಬಿಡುಗಡೆಯಾಗಿದ್ದವು. ಆದರೆ ಅವು ಹೆಚ್ಚಾಗಿ ಐತಿಹ್ಯ, ಜಾನಪದ ಕತೆ, ಪವಾಡಗಳನ್ನು ಆಧರಿಸಿದ್ದ ಚಿತ್ರಗಳೇ ಹೊರತು, ನಿಜ ಇತಿಹಾಸದ ಚಿತ್ರಗಳಾಗಿರಲಿಲ್ಲ. ‘ಜಗಜ್ಯೋತಿ ಬಸವೇಶ್ವರ’ ಚಿತ್ರದಲ್ಲಿ ಬಿಜ್ಜಳನ ಪಾತ್ರವನ್ನು ಡಾ.ರಾಜ್ ವಹಿಸಿದ್ದರು. ಭೂಲೋಕದಲ್ಲಿ ತಾಂಡವವಾಡುತ್ತಿರುವ ಅನ್ಯಾಯ, ಅಸಮಾನತೆಗಳನ್ನು ತೊಡೆದು ಹಾಕುವ ಸಲುವಾಗಿ ಶಿವನ ಆಣತಿಯಂತೆ ನಂದಿಯು ಬಸವಣ್ಣನ ಅವತಾರ ಎತ್ತುವ ಕತೆಯಿಂದ ಅದು ಆರಂಭವಾಗುತ್ತದೆ. ಹನ್ನೆರಡನೆಯ ಶತಮಾನದ ತಳಮಳ, ವಚನಕಾರರು ತಂದ ಸಂಚಲನ, ಅಲ್ಲಮ, ಅಕ್ಕರಂಥವರು ಹುಟ್ಟುಹಾಕಿದ ಹೊಸ ಬಗೆಯ ಚಿಂತನಾಕಮ, ಶರಣರ ವಿಪ್ಲವ, ಬಿಜ್ಜಳನ ಇಕ್ಕಟ್ಟು ಸ್ಥಿತಿ ಯಾವುದೂ ಅಲ್ಲಿ ಅನುಭವವಾಗಿ ಅಥವಾ ಬಿಂಬಗಳಾಗಿ ಬರುವುದೇ ಇಲ್ಲ. ಬಸವಣ್ಣನವರ ‘ಪವಾಡ’ಗಳನ್ನು ಹೇಳುವುದಕ್ಕಷ್ಟೇ ಅದು ಸೀಮಿತ. (ಬಸವಣ್ಣನವರ ವಚನಗಳನ್ನು ಹೊನ್ನಪ್ಪ ಭಾಗವತರ್ ಅವರ ಕಂಠದಲ್ಲಿ ಕೇಳುವ ಸೊಗಸು ಮಾತ್ರ ಚಿತ್ರ ನೀಡುವ ಬೋನಸ್). ಐತಿಹಾಸಿಕ ಚಿತ್ರಗಳೆನಿಸಿಕೊಂಡ ಉಳಿದ ಕಥಾಚಿತ್ರಗಳೂ ಇತಿಹಾಸದ ಅಂಶಗಳಿಗಿಂತ ಐತಿಹ್ಯಗಳನ್ನೇ ಹೆಚ್ಚು ಆಧರಿಸಿದ್ದವು.
‘ಕಂಠೀರವ’ ಚಿತ್ರವು ಅನೇಕ ಕಾರಣಗಳಿಂದ ಚಾರಿತ್ರಿಕವೆನಿಸಿದೆ. ಇದರ ನಿರ್ಮಾಣದ ಹಿಂದೆ ಅನೇಕ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಒತ್ತಡಗಳಿದ್ದವು. ಮೊದಲನೆಯದಾಗಿ ‘ಬೇಡರ ಕಣ್ಣಪ್ಪ’ ಚಿತ್ರದ ಬಿಡುಗಡೆಯ ನಂತರ ಕನ್ನಡ ಚಿತ್ರೋದ್ಯಮವು ನಿಧಾನವಾಗಿ ಬೇರೂರುತ್ತಿತ್ತು. ಆದರೆ ಇದ್ದಕ್ಕಿದ್ದಂತೆ ಚಿತ್ರ ನಿರ್ಮಾಣ ಇಳಿಮುಖ ಕಾಣತೊಡಗಿತು. ೧೯೫೬ರಲ್ಲಿ ೧೩ ಚಿತ್ರಗಳು, ೧೯೫೭ರಲ್ಲಿ ೧೧, ೧೯೫೮ರಲ್ಲಿ ೭ ಮತ್ತು ೧೯೫೯ರಲ್ಲಿ ೬ ಚಿತ್ರಗಳು ಹೀಗೆ ಚಿತ್ರ ನಿರ್ಮಾಣ ಇಳಿಜಾರಿನಲ್ಲಿ ಸಾಗತೊಡಗಿತು. ಅದೇ ವೇಳೆ ಕಚ್ಛಾಫಿಲಂ ಸಮಸ್ಯೆ ತಲೆದೋರಿತು. ಕುಂಟುತ್ತಿದ್ದ ಚಿತ್ರರಂಗ ಮುಗ್ಗರಿಸಿತು. ಆ ವೇಳೆಗೆ ಚಿತ್ರೋದ್ಯಮವನ್ನೇ ನಂಬಿದ್ದ ಕಲಾವಿದರು ಅಸಹಾಯಕರಾದರು. ಆಗ ಕನ್ನಡದ ಕಲಾವಿದರು ಸಹಕಾರ ಸಂಘವನ್ನು ಸ್ಥಾಪಿಸಿಕೊಂಡು ತಮ್ಮ ಹಳೆಯ ಕ್ಷೇತ್ರವಾದ ನಾಟಕರಂಗಕ್ಕೆ ಮರಳಿಬಂದರು. ರಾಜ್, ನರಸಿಂಹರಾಜು, ಬಾಲಕೃಷ್ಣ, ಜಿ.ವಿ.ಅಯ್ಯರ್ ಮುಂತಾದವರು ಮತ್ತೆ ರಂಗಭೂಮಿಯಲ್ಲಿ ನಟಿಸಲು ಹಿಂಜರಿಯಲಿಲ್ಲ. ಪ್ರೇಕ್ಷಕರೂ ಅವರನ್ನು ರಂಗಭೂಮಿಯಲ್ಲಿ ಪ್ರೋತ್ಸಾಹಿಸಿದರು. ಆದರೆ ಸಿನಿಮಾ ಮಾಧ್ಯಮದ ನಂಟನ್ನು ಬಿಡಬಾರದೆಂದು ಭಾವಿಸಿದ ಅವರು ರಂಗಭೂಮಿಯಲ್ಲಿ ಉಳಿಸಿದ ಹಣವನ್ನು ತೊಡಗಿಸಿ ಚಿತ್ರ ನಿರ್ಮಾಣಕ್ಕೆ ಇಳಿದರು. ‘ಕನ್ನಡ ಕಲಾವಿದರು’ ಲಾಂಛನದಡಿಯಲ್ಲಿ ರಾಜ್‌ಕುಮಾರ್, ಟಿ.ಎನ್.ನರಸಿಂಹರಾಜು, ಟಿ.ಆರ್. ಬಾಲಕೃಷ್ಣ ಮತ್ತು ಜಿ.ವಿ.ಅಯ್ಯರ್ ಜೊತೆಗೂಡಿ ’ರಣಧೀರ ಕಂಠೀರವ’ ಚಿತ್ರ ನಿರ್ಮಾಣವನ್ನು ಆರಂಭಿಸಿದರು. ಖ್ಯಾತ ಸಂಕಲನಕಾರರಾಗಿದ್ದ ಎನ್.ಸಿ.ರಾಜನ್ ಚಿತ್ರ ನಿರ್ದೇಶಿಸಿದರು. ಕನ್ನಡಿಗ ಬಿ.ಎಸ್.ರಂಗಾ ಅವರು ತಮ್ಮ ವಿಕ್ರಂ ಸ್ಟುಡಿಯೋಸ್‌ನಲ್ಲಿ ಚಿತ್ರೀಕರಣಕ್ಕೆ ಸಹಕಾರ ನೀಡಿದರು. ಚಿತ್ರ ತಯಾರಾಗಿ ಬೆಂಗಳೂರಿನ ಹಿಮಾಲಯ ಟಾಕೀಸ್‌ನಲ್ಲಿ ಬಿಡುಗಡೆಯಾಯಿತು. ಊಹಿಸದಷ್ಟು ಯಶಸ್ಸು ಕಂಡಿತು. ಎಪ್ಪತ್ತರ ದಶಕದಲ್ಲಿ ರೇಡಿಯೋ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ರಾಜ್ ಆ ಚಿತ್ರ ನಿರ್ಮಾಣದ ಸುಖದುಃಖಗಳನ್ನು ಹಂಚಿಕೊಂಡಿದ್ದರು. ತಮಗೆ ಈಗಲೂ ಆ ಚಿತ್ರದ ಪ್ರದರ್ಶನದಿಂದ ಲಾಭಾಂಶದ ಪಾಲು ಸಿಗುತ್ತಿದೆಯೆಂದು ಆ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದರು.
ಇನ್ನು ಈ ಚಿತ್ರದ ವಿಶಿಷ್ಟತೆಯನ್ನು ಲೇಖನದ ಆರಂಭದಲ್ಲಿ ಐತಿಹಾಸಿಕ ಚಿತ್ರಗಳ ಬಗೆಗಿನ ವ್ಯಾಖ್ಯಾನಗಳ ಹಿನ್ನೆಲೆಯಲ್ಲಿ ಪರಿಶೀಲಿಸೋಣ. ಇದು ಹದಿನೇಳನೆಯ ಶತಮಾನದಲ್ಲಿ ಬದುಕಿದ್ದ ಮೈಸೂರು ರಾಜವಂಶದ ಖ್ಯಾತ ದೊರೆ ಕಂಠೀರವ ನರಸರಾಜ ಒಡೆಯರ್ (೧೬೧೫-೧೬೫೯) ಅವರ ಬದುಕನ್ನು ಆಧರಿಸಿದ ಚಿತ್ರ. ಹಳೆಯ ಮೈಸೂರು ಪ್ರಜೆಗಳಿಗೆ ಮೈಸೂರು ರಾಜಮನೆತನದ ಬಗ್ಗೆ ಅಪಾರ ಗೌರವವಿದ್ದ ಕಾಲವದು. ಅನೇಕ ಐತಿಹ್ಯಗಳೂ ಸೇರಿ ಜಾನಪದ ರಮ್ಯ ಕಥಾನಕಗಳಂತೆ ರಾಜವಂಶದ ಚರಿತ್ರೆ ಜನಮಾನಸದಲ್ಲಿ ನೆಲೆಗೊಂಡಿತ್ತು. ಆದರೆ ಇತಿಹಾಸಕಾರರ ಪ್ರಕಾರ ಮೈಸೂರು ರಾಜವಂಶದ ಒಡೆಯರು ಬಾಹ್ಯ ಶತ್ರುಗಳೊಡನೆ ಹೋರಾಡುವುದಕ್ಕಿಂತ ಹೆಚ್ಚಾಗಿ ಅರಮನೆಯೊಳಗಿನ ಶತ್ರುಗಳ ಜೊತೆ ಹೋರಾಡಿದ್ದೇ ಹೆಚ್ಚು. ಜೊತೆಗೆ ಅವರ ವಿಲಾಸಪ್ರಿಯತೆಯೂ ಜಗತ್ಪ್ರಸಿದ್ಧವಾಗಿತ್ತು. ಅರಮನೆಯೆಂಬುದು ಕುಟಿಲತೆ, ಮಾಟಮಂತ್ರ, ವಿಷಪ್ರಾಶನದಂತಹ ಹೀನ ತಂತ್ರಗಳ ಪ್ರಯೋಗಾಲಯವೆನಿಸಿತ್ತು. ಇಂಥ ಹಿನ್ನೆಲೆಯಲ್ಲಿ ಅಪ್ರತಿಮ ಶೂರನೆನಿಸಿದರೂ ಕಂಠೀರವ ಆಂತರಿಕ ಶತ್ರುಗಳನ್ನು ಸಂಹಾರ ಮಾಡಿಯೇ ಸಿಂಹಾಸನಕ್ಕೇರಬೇಕಾಯಿತು. ಸರ್ವಾಧಿಕಾರಿ ದಳವಾಯಿ ವಿಕ್ರಮರಾಯನು ತನ್ನ ಕೈಗೊಂಬೆಯಾಗಿಸಿಕೊಂಡಿದ್ದ ವಿಲಾಸಪ್ರಿಯನಾದ ಇಮ್ಮಡಿರಾಜ ಒಡೆಯನನ್ನು ಮೋಸದಿಂದ ಕೊಲ್ಲಿಸಿದ ನಂತರ ಪ್ರಜೆಗಳ ಸಮಾಧಾನಕ್ಕಾಗಿ ಕಂಠೀರವನನ್ನು ಅಧಿಕಾರಕ್ಕೆ ತಂದ. ರಾಜನನ್ನೂ ಲೆಕ್ಕಕ್ಕಿಡದೆ ಅಧಿಕಾರಮತ್ತನಾಗಿದ್ದ, ದೇಶದ್ರೋಹಿಯೂ ಕೊಲೆಗಾರನೂ ಆಗಿದ್ದ ದಳವಾಯಿ ವಿಕ್ರಮರಾಯನನ್ನು ಕಂಠೀರವ ಮೋಸದಿಂದ ಕೊಲ್ಲಿಸಿದ. ಅನಂತರ ದೇವದಾಸಿಯೊಬ್ಬಳ ಪ್ರೇಮಪಾಶಕ್ಕೆ ಸಿಲುಕಿ ಅವಳನ್ನು ಅರಮನೆಗೆ ಕರೆತರುತ್ತಾನೆ. ವಿಚಿತ್ರ ಸನ್ನಿವೇಶವೊಂದರಲ್ಲಿ ಆಕೆಗೆ ರಾಜದ್ರೋಹದ ಆರೋಪ ಹೊರಿಸಿ ಅರಮನೆಯನ್ನು ತೊರೆಯುವಂತೆ ಆಜ್ಞಾಪಿಸುತ್ತಾನೆ. ದೇವದಾಸಿಯ ಆತ್ಮಹತ್ಯೆ ಮತ್ತು ಕಂಠೀರವ ಆಕೆಗಾಗಿ ಪರಿತಪಿಸುವುದರೊಂದಿಗೆ ಚಿತ್ರ ಮುಕ್ತಾಯವಾಗುತ್ತದೆ.
ಈ ಸಣ್ಣ ಘಟನೆಗಳನ್ನಾಧರಿಸಿದ್ದರೂ ಈ ಚಿತ್ರದ ನಿರ್ಮಾಣದ ಹಿಂದಿನ ಶ್ರಮ ಅಧ್ಯಯನ ಯೋಗ್ಯ. ಈ ಚಿತ್ರದ ಸಹ ನಿರ್ಮಾಪಕರೂ ಆದ ಜಿ.ವಿ.ಅಯ್ಯರ್ ಚಿತ್ರಕತೆ ಮತ್ತು ಸಾಹಿತ್ಯ ಸಿದ್ಧಪಡಿಸಿದ್ದರು. ನಂಜನಗೂಡು ಮೂಲದ ಅಯ್ಯರ್ ಅವರು ಮೈಸೂರು ಅರಮನೆಯ ಇತಿಹಾಸ, ಪರಂಪರೆ, ಸಂಪ್ರದಾಯ ಮತ್ತು ಅವರ ಜೀವನ ವಿಧಾನವನ್ನು ಹತ್ತಿರದಿಂದ ಕಂಡವರು. ಆದರೂ ಅವರು ಈ ಚಿತ್ರದ ಕತೆಯನ್ನು ಸಿದ್ಧಪಡಿಸುವಾಗ ಅದಾಗಲೇ ಮೈಸೂರು ರಾಜರ ಬದುಕನ್ನು ಕುರಿತು ಖ್ಯಾತ ನಾಟಕಕಾರ ‘ಸಂಸ’ರವರು ರಚಿಸಿದ್ದ ‘ಮಂತ್ರಶಕ್ತಿ’, ‘ವಿಗಡವಿಕ್ರಮರಾಯ’ ಮತ್ತು ‘ಬೆಟ್ಟದ ಅರಸು’ ಕೃತಿಗಳನ್ನು ಆಧಾರವಾಗಿಟ್ಟುಕೊಂಡಿದ್ದರು. ಜೊತೆಗೆ ರಾಜ ವಂಶಾವಳಿ, ವಿಲ್ಕ್ಸ್‌ರವರ ಚರಿತ್ರೆ, ಎಪಿಗ್ರಾಫಿಯಾ ಕರ್ನಾಟಕ, ರಾಮಕೃಷ್ಣರಾಯರು ಸಂಪಾದಿಸಿರುವ ಮೈಸೂರು ಮತ್ತು ಕೊಡಗು ಗೆಜೆಟಿಯರ್, ಎಂ.ಶಾಮರಾಯರ ಮೈಸೂರು ಗೆಜೆಟಿಯರ್, ಬಿ.ಎಲ್.ರೈಸ್‌ರವರ ಮೈಸೂರು ಚರಿತ್ರೆ ಹಾಗೂ ಅರಮನೆಯ ಸರಸ್ವತಿ ಭಂಡಾರ ಮತ್ತು ಮೈಸೂರು ಓರಿಯಂಟಲ್ ಲೈಬ್ರರಿಯನ್ನು ಜಾಲಾಡಿಸಿದ್ದರು. ಕಂಠೀರವನ ಕಾಲದ ಕವಿ ಗೋವಿಂದ ವೈದ್ಯರು ಬರೆದ ‘ಕಂಠೀರವ ನರಸರಾಜ ವಿಜಯ’ ಸಾಂಗತ್ಯದಿಂದಲೂ ಮಾಹಿತಿಗಳನ್ನು ಪಡೆದರು. ಆದರೆ ಇಷ್ಟೆಲ್ಲ ಆಕರ ಗ್ರಂಥಗಳು ಮತ್ತು ಸಂಶೋಧನೆಯ ನಂತರವೂ ಈ ಚಿತ್ರದ ಕತೆಯನ್ನು ಇಮ್ಮಡಿರಾಜ ಒಡೆಯನ ವಿಲಾಸೀ ಬದುಕು, ವಿಕ್ರಮರಾಯನ ಒಳಸಂಚುಗಳು, ತಿರುಚನಾಪಳ್ಳಿಯಲ್ಲಿ ಕಂಠೀರವನ ಸಾಹಸ, ‘ಬಂಗಾರದೊಡ್ಡಿ’ ಎಂಬ ಹೆಸರಿನ ದೇವದಾಸಿಯೊಬ್ಬಳೊಡನೆ ಕಂಠೀರವ ಅನುರಕ್ತನಾಗುವುದು, ಕಂಠೀರವನ ಟಂಕಸಾಲೆಯ ಉದ್ಘಾಟನೆ, ಕಂಠೀರವನನ್ನು ಕೊಲ್ಲಿಸಲು ಹೂಡುವ ಸಂಚುಗಳು ಮತ್ತು ದೇವದಾಸಿಯ ಪರಿತ್ಯಾಗಕ್ಕೆ ಮಾತ್ರ ಚಿತ್ರ ಸೀಮಿತಗೊಂಡಿದೆ. ಕಂಠೀರವರಾಯರು ಬಿಜಾಪುರದ ರಣದುಲ್ಲಾಖಾನನ ಸೈನ್ಯವನ್ನು ಎರಡು ಬಾರಿ ಸೋಲಿಸಿದ ಪ್ರಕರಣವಾಗಲೀ ಅಥವಾ ಆತನ ಸಾಮ್ರಾಜ್ಯ ವಿಸ್ತರಣೆ, ಪ್ರಜಾ ಸೇವೆ- ಯಾವುಗಳ ಬಗ್ಗೆಯೂ ಚಿತ್ರ ಏನನ್ನೂ ಹೇಳದು. ಅಲ್ಲದೆ ಚಿತ್ರದ ನಿರೂಪಣೆಯ ದೃಷ್ಟಿಯಿಂದ ಕೆಲವು ಕಾಲ್ಪನಿಕ ಪಾತ್ರಗಳನ್ನೂ ಸೃಷ್ಟಿಸಲಾಗಿದೆ. ಅಂಥ ಪಾತ್ರಗಳಿಗೆ ಯಾವ ಆಧಾರವೂ ಇಲ್ಲವೆಂದು ಚಿತ್ರದ ಆರಂಭದಲ್ಲೇ ಸ್ಪಷ್ಟಪಡಿಸಲಾಗಿದೆ.
ಹಾಗಾಗಿ ಇದು ಐತಿಹಾಸಿಕ ಚಿತ್ರವಾದರೂ ಒಂದು ಕಾಲಘಟ್ಟದ ಅರಮನೆಯ ಬದುಕನ್ನು ಮರುವ್ಯಾಖ್ಯಾನಕ್ಕೊಳಪಡಿಸಿರುವ ಚಿತ್ರ. ಅರಮನೆಯ ಸಂಚುಗಳನ್ನು ಈ ಚಿತ್ರ ಬಯಲು ಮಾಡಿರುವುದರ ಜೊತೆಗೆ ಪ್ರಭುತ್ವದ ಕ್ರೌರ್ಯವನ್ನು, ಸಾಮಾನ್ಯ ಜನರೊಡನೆ ಅದು ಆಡುವ ಆಟವನ್ನು ಪರಿಣಾಮಕಾರಿಯಾಗಿ ನಿರೂಪಿಸಿದೆ. ‘ಮುಘಲ್-ಎ-ಆಜಾಂ’ ಚಿತ್ರದಲ್ಲಿಯೂ ಪ್ರಭುತ್ವದ ಕ್ರೌರ್ಯ ಮತ್ತು ಮಾನವ ಸಂಬಂಧಗಳ ಬಗೆಗಿರುವ ಅನಾದರಣೆಯನ್ನು ಪ್ರಶ್ನಿಸುವ, ಪ್ರತಿಭಟಿಸುವ ಕಲಾವಿದನೊಬ್ಬನ ಪಾತ್ರವಿದೆ. ಹಾಗೆಯೇ ಇಲ್ಲಿ ರಾಜನ ಆಸ್ಥಾನ, ಅವನ ಆಶ್ರಯದ ವಿರುದ್ಧ ದನಿಯೆತ್ತುವ ಸಂಗೀತ ಗುರು ವಿಶ್ವನಾಥ ಶಾಸ್ತ್ರೀಯ ಪಾತ್ರವಿದೆ. ತಾನು ಸಂಗೀತ ಕಲಿಸಿದ ದೇವದಾಸಿಯು ರಾಜನ ಮೋಹಪಾಶಕ್ಕೆ ಸಿಲುಕಿದ ಸಂಗತಿ ತಿಳಿದ ನಂತರ ‘ಬೆಂಕಿಯಲ್ಲಿ ಬಿದ್ದುಹೋಯಿತೇ ಮೇಣದ ಬೊಂಬೆ’ ಎಂಬ ಅವನ ಉದ್ಗಾರ ದೇವದಾಸಿ ದೊಡ್ಡಿಯ ದುರಂತಬಾಳಿನ ಮುನ್ನಡಿಯಂತಾಗುತ್ತದೆ. ಹಾಗೆಯೇ ಕಂಠೀರವನ ಕೊಲೆಯ ಯತ್ನದಲ್ಲಿ ದೊಡ್ಡಿಯ ಕೈವಾಡವಿದೆಯೆಂದು ತಪ್ಪಾಗಿ ಭಾವಿಸುವ ಮಂತ್ರಿ ‘ನಾಚಿಕೆಯ ನರಕ, ವಿಷದ ಬಟ್ಟಲು, ಕೊನೆಗಾಣದ ಕಣ್ಣೀರು- ಇವೇ ಅರಮನೆಯಲ್ಲಿ ನಿನಗೆ ಸಿಗುವ ಬಹುಮಾನಗಳು’ ಎಂದು ಅರಮನೆಯ ಪಾಷಂಡಿತನದ ಪರಿಚಯ ಮಾಡಿಕೊಡುತ್ತಾನೆ. ಕೊನೆಗೆ ಅಸಹಾಯಕ ಹೆಣ್ಣು ವಿಷದ ಬಟ್ಟಲಿಗೇ ಮೊರೆ ಹೋಗುತ್ತಾಳೆ. ಇವೆಲ್ಲಕ್ಕಿಂತಲೂ ಮನದಾಳಕ್ಕೆ ಇಳಿಯುವ ಮಾತೊಂದನ್ನು ಕಂಠೀರವ ತನ್ನ ಪ್ರೇಯಸಿಗೆ ಹೇಳುತ್ತಾನೆ “ಯಾರನ್ನೂ ಪ್ರೀತಿಸದಷ್ಟು ನಾನು ನಿನ್ನನ್ನು ಪ್ರೀತಿಸಿದೆ. ನಿನಗೆ ನಾನು ಯಾವ ಶಿಕ್ಷೆಯನ್ನೂ ವಿಧಿಸಲಾರೆ. ಬೆಳಕು ಹರಿಯುವುದರೊಳಗಾಗಿ ನೀನು ಯಾರ ಕಣ್ಣಿಗೂ ಬೀಳದಂತೆ ಹೊರಟು ಹೋಗು”. ಇದು ಪ್ರಭುತ್ವದ ಅಸಹಾಯಕತೆ, ಕ್ರೌರ್ಯ ಮತ್ತು ಮಾನವ ಸಂಬಂಧಗಳ ಬಗ್ಗೆ ಅದಕ್ಕಿರುವ ಅವಜ್ಞೆಯನ್ನು ದಾಖಲಿಸುತ್ತದೆ. ಈ ಸಂಭಾಷಣೆಯನ್ನು ಹೇಳುವ ಕ್ರಮದಲ್ಲಿ ದುಃಖ, ನೋವು, ಚಡಪಡಿಕೆ ಮತ್ತು ಅಸಹಾಯಕತೆಯನ್ನು ರಾಜ್ ವ್ಯಕ್ತಪಡಿಸುವ ರೀತಿಯು ಭಾವದ ಯಾವ ಪದರವನ್ನಾದರೂ ಅವರು ಸ್ಪರ್ಶಿಸಬಲ್ಲರೆಂಬುದಕ್ಕೆ ಋಜುವಾತಾಗಿದೆ.

‘ರಣಧೀರ ಕಂಠೀರವ’ ಇತರೆ ಐತಿಹಾಸಿಕ ಚಿತ್ರಗಳಂತೆ ವೈಭವದ ದೃಶ್ಯಾವಳಿಗಳನ್ನು ಅವಲಂಬಿಸಿಲ್ಲ. ನೋಟಕ್ಕಿಂತ ಇಲ್ಲಿ ಪರಿಣಾಮಕ್ಕೇ ಹೆಚ್ಚು ಒತ್ತು. ಚಿತ್ರದ ಕೊನೆಯಲ್ಲಿ ‘ಒಂದು ಸಿಂಹವನ್ನು ಹಿಡಿಯಲು ಇಪ್ಪತ್ತೈದು ಕುರಿಗಳು’ ಎಂದು ಶತ್ರು ಸೈನ್ಯದ ಮೇಲೆ ಕಂಠೀರವ ಹ್ಞೂಂಕರಿಸಿ ಮುಗಿಬೀಳುವ ದೃಶ್ಯ ಮಾತ್ರ ರೋಮಾಂಚನಕಾರಿಯಾಗಿದೆ. ರಣಧೀರ ಕಂಠೀರವನ ಶೌರ್ಯ-ಸಾಹಸಗಳ ವಿಜೃಂಭಣೆ ಅಲ್ಲಿ ಅನಾವರಣಗೊಳ್ಳುತ್ತದೆ. ಇಂಥ ಸೂಕ್ಷ್ಮಗಳನ್ನು ಚಿತ್ರದುದ್ದಕ್ಕೂ ಕಾಣಬಹುದು. ಇಮ್ಮಡಿರಾಜ ಒಡೆಯನ ವಿಲಾಸೀ ಬದುಕನ್ನು ಬಿಂಬಿಸಲು ಜಯದೇವ ಕವಿಯ ಅಷ್ಟಪದಿಯ ಪಲ್ಲವಿಗಳನ್ನು ಬಳಸಿಕೊಂಡಿರುವ ವಿಧಾನದಲ್ಲಿ ಅದನ್ನು ಕಾಣಬಹುದು. ಹಾಗೆಯೇ ಮೈಸೂರು ರಾಜವಂಶ ಮತ್ತು ಬ್ರಾಹ್ಮಣ ಸಮುದಾಯದ ಸಂಬಂಧಗಳ ವಿವರಣೆಯನ್ನು ಸಂಭಾಷಣೆಯೊಂದೇ ಶ್ರುತಪಡಿಸುತ್ತದೆ. ಅನಾರೋಗ್ಯದಿಂದ ನರಳುತ್ತಿರುವ ಇಮ್ಮಡಿರಾಜನಿಗೆ ಕಂಠೀರವ ತನ್ನ ಗೆಳೆಯ ನಿರೀಶನಿಗೆ ರಾಜನಿಗೆ ನಮಸ್ಕರಿಸಲು ಹೇಳುತ್ತಾನೆ. ರಾಜನಿಗಿಂತಲೂ ಕಿರಿಯನಾದ ನಿರೀಶ ‘ನಾನು ವಂದಿಸುವವನಲ್ಲ ಆಶೀರ್ವದಿಸುವನು’ ಎಂದು ಹಾಸ್ಯ ತುಂಬಿದ ಗರ್ವದ ಮಾತುಗಳನ್ನೆ ಹೇಳುತ್ತಾನೆ.
ಈ ಚಿತ್ರದ ಸಂಭಾಷಣೆ ಬರೆದಿರುವ ಜಿ.ವಿ.ಅಯ್ಯರ್ ಅರಮನೆಯ ಭಾಷೆ, ನಡವಳಿಕೆಗಳನ್ನು ಯಥಾವತ್ ನಿರೂಪಿಸಿದ್ದಾರೆ. ಹಾಗೆಯೇ ಇಲ್ಲಿನ ವಸ್ತ್ರ ವಿನ್ಯಾಸ ಸಹ ಮೈಸೂರು ಪರಂಪರೆಯನ್ನೇ ಪ್ರತಿಬಿಂಬಿಸುತ್ತದೆ. ಜೊತೆಗೆ ಕಲಾವಿದರು ಪೈಪೋಟಿಗೆ ಬಿದ್ದಂತೆ ಅಭಿನಯಿಸಿರುವುದು ಇಲ್ಲಿನ ವಿಶೇಷ. ಸಾಮಾನ್ಯವಾಗಿ ಐತಿಹಾಸಿಕ ಚಿತ್ರಗಳು ಸಂಭಾಷಣೆಯ ಭಾರದಿಂದ, ನಟರ ಅತಿರೇಕದ ಅಭಿನಯದಿಂದ ಕುಸಿಯುವುದೇ ಹೆಚ್ಚು. ಆದರೆ ರಾಜ್‌ರವರು ಕಂಠೀರವನ ಸಂಕೀರ್ಣತೆಯನ್ನು ಸಂಯಮದಿಂದ ವ್ಯಕ್ತಪಡಿಸಿದರೆ, ದಳವಾಯಿ ವಿಕ್ರಮರಾಯನ ಮೋಸ, ಕಾಪಟ್ಯವನ್ನು ಆರ್. ನಾಗೇಂದ್ರರಾಯರು ಮೈದುಂಬಿಸಿಕೊಂಡವರಂತೆ ಕಾಣುತ್ತಾರೆ.
ಆಗಿನ ಕನ್ನಡ ಚಿತ್ರರಂಗದ ಘಟಾನುಘಟಿಗಳೆಲ್ಲರ- ಕಲ್ಯಾಣ್ ಕುಮಾರ್ ಒಬ್ಬರನ್ನು ಹೊರತುಪಡಿಸಿದರೆ- ಸಂಗಮ ಇಲ್ಲಿದೆ. ಜೊತೆಗೆ ತೆಲುಗಿನ ಕಾಂತಾರಾವ್ ಅವರು ಇಮ್ಮಡಿರಾಜ ಒಡೆಯರ್ ಪಾತ್ರ ನಿರ್ವಹಿಸಿದ್ದಾರೆ. ರಮಾದೇವಿ ಅವರಿಗೆ ವಿಶಿಷ್ಟವಾದ ರಾಜಮಾತೆಯ ಪಾತ್ರವಿದೆ. ಜಿ.ಕೆ.ವೆಂಕಟೇಶ್ ಸಂಗೀತ ನಿರ್ದೇಶನದಲ್ಲಿ ಜಯದೇವನ ಅಷ್ಟಪದಿಗಳು ಮತ್ತು ಅಯ್ಯರ್‌ರವರ ‘ಸಂಚಾರಿ… ನಾ ಮನಸೋತೆ…’ ಹಾಡು ಇಂದಿಗೂ ಮನಸ್ಸನ್ನು ಮುದಗೊಳಿಸುತ್ತವೆ.
***
ಸೈಡ್ ರೀಲ್
* ‘ಮುಘಲ್-ಎ-ಆಜಾಂ’ನಂಥ ವೈಭವದ ಮತ್ತು ಅಪಾರ ವೆಚ್ಚದ ಚಿತ್ರ ಬಿಡುಗಡೆಯಾದ ಕಾಲಘಟ್ಟದಲ್ಲೇ ‘…ಕಂಠೀರವ’ ಬಿಡುಗಡೆಯಾಯಿತು. ‘ರಣಧೀರ ಕಂಠೀರವ’ ನಿಜಕ್ಕೂ ಕನ್ನಡ ಚಿತ್ರರಂಗದ ಒಂದು ಚರಿತ್ರಾರ್ಹ ಚಿತ್ರ. ಕಲಾವಿದರು ಒಗ್ಗೂಡಿ ಸಹಕಾರಿ ತತ್ತ ವನ್ನಾಧರಿಸಿ ತಯಾರಿಸಿದ ಮೊದಲ ಚಿತ್ರ. ಕುಸಿಯುತ್ತಿದ್ದ ಚಿತ್ರ ನಿರ್ಮಾಣವನ್ನು ತಡೆಯಲು ಕಲಾವಿದರು ಕಂಡುಕೊಂಡ ಅಪೂರ್ವ ಮಾರ್ಗವದು. ಜೊತೆಗೆ ಮೈಸೂರು ರಾಜವಂಶದ ಚರಿತ್ರೆಯ ತುಣುಕೊಂದನ್ನು ಅಧಿಕೃತವೆನ್ನುವ ರೀತಿಯಲ್ಲಿ ದಾಖಲಿಸಿದ ಚಿತ್ರವಿದು. ಆದರೆ ಈ ಚಿತ್ರ ಬಿಡುಗಡೆಯಾಗಲು ಸಿದ್ಧವಾದಾಗ ಈಗಿನ ಮೆಜಿಸ್ಟಿಕ್ ಪ್ರದೇಶದಲ್ಲಿ ಅದಕ್ಕೆ ಉತ್ತಮ ಚಿತ್ರಮಂದಿರಗಳು ದೊರೆಯದ ಕಾರಣ ಹಿಮಾಲಯ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಬೇಕಾಯಿತು.
* ಈ ಚಿತ್ರದ ಯಶಸ್ಸಿನ ನಂತರ ಮತ್ತಷ್ಟು ಕನ್ನಡ ಚಿತ್ರಗಳನ್ನು ‘ಕನ್ನಡ ಕಲಾವಿದರು’ ನಿರ್ಮಿಸಬಹುದೆಂಬ ನಿರೀಕ್ಷೆಯಿತ್ತು. ಆದರೆ ಅದು ಮತ್ತೆ ಸಾಧ್ಯವಾಗಲಿಲ್ಲ. ನಿರ್ಮಾಪಕರಾಗಿ ರಾಜ್ ನಿರ್ಮಿಸಿದ ಚಿತ್ರ ಇದೊಂದೆ. ಮುಂದೆ ಜಿ.ವಿ.ಅಯ್ಯರ್, ನರಸಿಂಹರಾಜು, ಬಾಲಕೃಷ್ಣ ಪ್ರತ್ಯೇಕವಾಗಿ ಚಿತ್ರ ನಿರ್ಮಿಸಿದರು. ಆದರೆ ರಾಜ್ ಮಾತ್ರ ಅಧಿಕೃತ ನಿರ್ಮಾಪಕರಾಗಲೇ ಇಲ್ಲ.
* ‘ರಣಧೀರ ಕಂಠೀರವ’ ತಯಾರಾದ ನಂತರ ‘ಕಿತ್ತೂರು ಚೆನ್ನಮ್ಮ’, ‘ಇಮ್ಮಡಿ ಪುಲಿಕೇಶಿ’, ‘ಶ್ರೀಕೃಷ್ಣದೇವರಾಯ’, ‘ಮಯೂರ’ ಮತ್ತು ಸಂತರ ಬದುಕುಗಳನ್ನು ಆಧರಿಸಿದ ಚಿತ್ರಗಳು ಹಾಗೂ ಇತ್ತೀಚಿನ ‘ಕುಮಾರರಾಮ’ದವರೆಗೆ ಅನೇಕ ಐತಿಹಾಸಿಕ ಚಿತ್ರಗಳು ನಿರ್ಮಾಣವಾಗಿವೆ. ಅವು ಯಾವುವೂ ಸಹ ನಿರೂಪಣೆಯ ದೃಷ್ಟಿಯಿಂದ ‘ರಣಧೀರ ಕಂಠೀರವ’ ಚಿತ್ರದ ಮಟ್ಟಕ್ಕೆ ಏರಲಿಲ್ಲ. ‘ಇಮ್ಮಡಿ ಪುಲಿಕೇಶಿ’ ಮಾತ್ರ ಚಾಲುಕ್ಯಯುಗದ ವಸ್ತ್ರಾಭರಣಗಳ ವಿನ್ಯಾಸದಿಂದ ಭಿನ್ನವೆನಿಸಿತ್ತು.
* ಕನ್ನಡ ಚಿತ್ರರಂಗದ ಆರಂಭದಲ್ಲಿ ಉದಯಿಸಿ ದೀರ್ಘ ಕಾಲ ಜನಪ್ರಿಯತೆ ಉಳಿಸಿಕೊಂಡ ನಾಯಕ-ನಾಯಕಿ ಜೋಡಿಯೆಂದರೆ, ರಾಜ್ ಮತ್ತು ಲೀಲಾವತಿ ಜೋಡಿ. ಈ ಜೋಡಿಯನ್ನು ಉದ್ಘಾಟಿಸಿದ ಚಿತ್ರ- ’ರಣಧೀರ ಕಂಠೀರವ’.ಇದಕ್ಕೂ ಮೊದಲು ಲೀಲಾವತಿ ಅವರು ರಾಜ್ ಅಭಿನಯಿಸಿದ ಎರಡು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದರು, ಜೋಡಿಯಾಗಿ ಅಲ್ಲ. ’ಜಗಜ್ಯೋತಿ ಬಸವೇಶ್ವರ’ ಚಿತ್ರದಲ್ಲಿ ಅಕ್ಕಮಹಾದೇವಿಯಾಗಿ ಮತ್ತು ‘ಧರ್ಮವಿಜಯ’ ಚಿತ್ರದ ಪುಟ್ಟಪಾತ್ರದಲ್ಲಿ. ರಾಜ್ ಅವರೊಡನೆ ಒಟ್ಟು ೪೫ ಚಿತ್ರಗಳಲ್ಲಿ ಅಭಿನಯಿಸಿದರೂ ಲೀಲಾವತಿ ಅವರು ಪ್ರೇಯಸಿ, ಹೆಂಡತಿಯಾಗಿ ಅಭಿನಯಿಸಿದ್ದು ೨೯ ಚಿತ್ರಗಳಲ್ಲಿ. ಅರವತ್ತರ ದಶಕದ ಜನಪ್ರಿಯ ಜೋಡಿಯಾದರೂ ಲೀಲಾವತಿ ಅವರು ಇಮೇಜಿಗೆ ಅಂಟಿಕೂರಲಿಲ್ಲ. ರಾಜ್‌ರವರಿಗೆ ಮಗಳಾಗಿ (ಭೂದಾನ-೧೯೬೨), ಸೋದರಿಯಾಗಿ (ವಾತ್ಸಲ್ಯ-೧೯೬೫), ಅತ್ತ್ತಿಗೆಯಾಗಿ (ಪ್ರೇಮಮಯಿ-೧೯೬೬), ಅತ್ತೆಯಾಗಿ (ನಾ ನಿನ್ನ ಮರೆಯಲಾರೆ, ವಸಂತಗೀತ,) ಲೀಲಾವತಿ ಅವರು ಅಭಿನಯಿಸಿದ್ದಾರೆ. ರಾಜ್ ಅವರು ನಾಯಕರಾಗಿದ್ದ ’ಕಿತ್ತೂರು ಚನ್ನಮ್ಮ’ ಮತ್ತು ’ಮಲ್ಲಿ ಮದುವೆ’ ಚಿತ್ರಗಳಲ್ಲಿ ರಾಜಾಶಂಕರ್ ಅವರಿಗೆ, ’ಮಹಾಸತಿ ಅನಸೂಯ’ ಮತ್ತು ’ದೂರದ ಬೆಟ್ಟ’ ಚಿತ್ರದಲ್ಲಿ ಬಾಲಣ್ಣರವರಿಗೆ ಜೋಡಿಯಾಗಿ ಲೀಲಾವತಿ ಅಭಿನಯಿಸಿದ್ದರು. ಅವರು ರಾಜ್‌ರವರ ಜೋಡಿಯಾಗಿ ಅಭಿನಯಿಸಿದ ಕೊನೆಯ ಚಿತ್ರ ’ಭಕ್ತ ಕುಂಬಾರ’(೧೯೭೪). ರಾಜ್ ಚಿತ್ರದಲ್ಲಿ ನಟಿಸಿದ ಕೊನೆಯ ಚಿತ್ರ ’ಶ್ರಾವಣ ಬಂತು’ (೧೯೮೪). ಒಟ್ಟು ಹದಿನಾಲ್ಕು ವರ್ಷ ರಾಜ್ ರವರಿಗೆ ಜೋಡಿಯಾಗಿ ನಟಿಸಿದ ಹೆಗ್ಗಳಿಕೆ ಲೀಲಾವತಿಯವರದ್ದು. ಅದು ಬಿಟ್ಟರೆ ಜಯಂತಿ (೧೨ ವರ್ಷ) ಮತ್ತು ಭಾರತಿ (ಏಳು ವರ್ಷ) ರಾಜ್ ಜೊತೆ ದೀರ್ಘ ಕಾಲ ಜೋಡಿಯಾಗಿ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಕಲಾವಿದೆಯರು. ರಾಜ್ ಜೊತೆ ೩೯ ಚಿತ್ರಗಳಲ್ಲಿ ನಟಿಸಿ ೩೬ ಚಿತ್ರಗಳಲ್ಲಿ ಜೋಡಿಯಾಗಿದ್ದ ಜಯಂತಿ ಅವರಿಗೆ ರಾಜ್ ಜೊತೆ ಅತಿ ಹೆಚ್ಚು ನಾಯಕಿಯಾಗಿದ್ದ ಅಗ್ರ ಪಟ್ಟ. ತಾನು ರಾಜ್ ಜೊತೆ ನಟಿಸಿದ ೨೬ ಚಿತ್ರಗಳಲ್ಲಿಯೂ ಜೋಡಿಯಾಗಿಯೇ ನಟಿಸಿದ ವಿಶಿಷ್ಟತೆ ಭಾರತಿಯವರದ್ದು.
*****



















