ನಾನೂ ಕನಸು ಕಾಣುತ್ತೇನೆ
ನನಸು ಮಾಡಿಕೊಳ್ಳುವ ಆಸೆಯಿಂದ
ಆದರೆ, ನನ್ನದು ಹಗಲುಗನಸಲ್ಲ
ರಾತ್ರಿಯ ಸುಂದರ, ಸುಮಧುರ ಸ್ವಪ್ನ
ದಿನಾ ಒಂದೊಂದು ಕನಸು
ಆಶಾಗೋಪುರವ ಹತ್ತಿ,
ವಾಸ್ತವ ಲೋಕದಿಂದ ಮೇಲೇರಿ
ವಿಹರಿಸಿದ ಅನುಭವ
ಮುಚ್ಚಿದ ಕಣ್ಣುಗಳೊಳಗೆ ಕಾಣುವ
ನಿಜ ಜೀವನದ ಪ್ರತಿಬಿಂಬ
ಕಣ್ಣು ತೆರೆದಾಗ ಕಳೆದುಹೋಗುವ
ವಿಚಿತ್ರವಾದ; ವಿಶೇಷವಾದ ಲೋಕ
ಕೆಲವು ರಾತ್ರಿಗಳಲ್ಲಿ ಕನಸೇ ಇಲ್ಲ
ಆ ರಾತ್ರಿ ನಿರಾಶವಾಗುತ್ತದೆ ಮನಸ್ಸು
ಕಳೆದುಕೊಂಡ ಆನಂದಕ್ಕಾಗಿ;
ಶೂನ್ಯ ನಿದಿರೆಗಾಗಿ
ನಾನು ಕನಸಿನಲ್ಲಿ ರಾಜನಾಗುತ್ತೇನೆ
ಇನ್ನೊಮ್ಮೆ ಭಿಕ್ಷಕುನಾಗುತ್ತೇನೆ
ಕೆಲವೊಮ್ಮೆ ಸುಂದರ ತರುಣಿಯ
ಮನಸೆಳೆದ, ಬರಸೆಳೆದ ಪ್ರಿಯಕರನಾಗುತ್ತೇನೆ
ಮಿತಿಯಿಲ್ಲ ಈ ಹುಚ್ಚು ಕನಸುಗಳಿಗೆ;
ಕನಸು ಕಾಣುವ ಕಣ್ಣುಗಳಿಗೆ
ಮನದ ಪರಿಧಿಯನ್ನು ದಾಟಿ
ಸೀಮೋಲ್ಲಂಘನ ಮಾಡುತ್ತವೆ ಅದೆಷ್ಟೋ ಬಾರಿ
ಆದರೂ ಕನಸುಗಳು ಬೇಕು
ಒಂದು ಮಧುರ ಅನುಭವಕ್ಕಾಗಿ;
ನಿಜಜೀವನದಲ್ಲಿ ದೊರಕದ
ಅಭಿಲಾಷೆಗಳ ಅನಾವರಣಕ್ಕಾಗಿ
*****


















