ಅಂಗಳದಲ್ಲೊಂದು ಗುಳ್ಳಿತ್ತು ಅಕ್ಕ
ಈಗೆಲ್ಲಿ ಅದು ಮಾಯ್ವಾಯ್ತೊ ಅಕ್ಕ
ಯಾರ್‍ಯಾರ ಕಟ್ಕೊಂಡು ಯಾರ್‍ಯಾರ ಬಿಟ್ಕೊಂಡು
ಯಾರ್‍ಯಾರ ಮುಟ್ಕೊಂಡು ಹೋಯಿತು ಅಕ್ಕ
ಗೋಳ ಗುಂಬಜದಂತೆ ಕೂತಿತ್ತು ಅಕ್ಕ
ಒಳ್ಳೆ ಜಂಬದ ಕೋಳಿಯಂತೆ ಬೆಳೆದಿತ್ತು ಅಕ್ಕ
ಬೆಳ್ಳಿಯ ಹಡಗ ತಾನೆಂದಿತ್ತು ಅಕ್ಕ
ಹಳ್ಳವನೆ ಕಡಲೆಂದು ತಿಳಿದಿತ್ತು ಅಕ್ಕ
ಮೂಜಗವೆ ತನ್ನೊಳಗೆ ಅಂತಿತ್ತು ಅಕ್ಕ
ಈ ಜಗವ ಮರೆತದು ತೇಲಿತ್ತು ಅಕ್ಕ
ಎಲ್ಲಿಂದ ಎನ್ನುವುದ ಯೋಚಿಸದಿತ್ತು ಅಕ್ಕ
ಎಲ್ಲಿಗೆ ಎನ್ನುವುದ ಚಿಂತಿಸದಿತ್ತು ಅಕ್ಕ
ನೀರಲ್ಲಿ ಕೆತ್ತಿದ ನಿಜದಂತೆ ಇತ್ತು ಅಕ್ಕ
ದೇವರು ಕಳಿಸಿದ ಪಲ್ಲಕಿಯಂತಿತ್ತು ಅಕ್ಕ
*****


















