ಗುಡಿಯಿದಿರ ಮಣಿಗೆಯೇ, ಭೂಮಾವಿನಮ್ರತೆಯೆ,
ದುರ್ಭರಾಹಂಕಾರದಮನವಿಧಿಯೇ,
ಆನಂದವರಣದೊಳು ಸುಖಯಜ್ಞ ಕಲ್ಪವೇ,
ತರ್ಕಧೀಧರಗರಳಶಮನಸುಧೆಯೇ,
ಕೆರೆಯ ನೀರನು ಕೆರೆಗೆ ಚೆಲ್ಲಿ ವರಪಡೆವಂದ
ಭರವಳಿದು ಹಗುರಪ್ಪ ಸಂ-ನ್ಯಾಸವೇ,
ತನಗು ಹಿರಿದುಂಟೆಂಬ ತಿಳಿವ ಹೊಳಪಿನೊಳಿಟ್ಟು
ಆತ್ಮ ಸಿಂಗರಗೊಳುವ ವಿನ್ಯಾಸವೇ,
ನಿನ್ನಿಂದ ನಾನೆನ್ನದೆಲ್ಲವನು ತೆರುವೆ, ಮರಳಿ ಪಡೆವೆ
ಮಲಿನಶೋಣಿತವೆದೆಯ ಹೊಗುತುಸಿರ ಹಾಯ್ದು ಬಹ ತರದಿ ತೇಜವಡೆವೆ.
*****


















