ಭಾಗ ೧
ಕೂಗಬೇಕೆಂದರೆ ಹಾಳಾದ್ದು
ಧ್ವನಿಯೇ ಹೊರಡುತ್ತಲಿಲ್ಲ
ಧ್ವನಿಪೆಟ್ಟಿಗೆ ಸ್ಟ್ರಕ್ ಆಯಿತೇ?
ಒಡಲಾಳದಲ್ಲಿ ಹುಗಿದಿಟ್ಟ
ಅದೆಷ್ಟೋ ಇತಿಹಾಸದ ಪುಟಗಳು
ತೊಟ್ಟ ದಾಗೀನ ಆಭರಣ ಸಹಿತ
ಸಂಸ್ಕೃತಿಯ ಗೋರಿಯೊಳಕ್ಕೆ
ತನ್ನ ತಾನೇ ಹುಗಿದುಕೊಂಡು
ಮುಳ್ಳುಬೇಲಿಯ ಬಿಗಿದುಕೊಂಡು
ಆಳಕ್ಕಿಳಿದು ಬೇರುಬಿಟ್ಟ ಆಲ
ಹರಡಬಹುದೆ ಒಂದೊಂದೆ ಬಿಳಲುಗಳ?
ಮಿಥಿಲೆಯ ಸೀತೆಯರಿಗೆ
ಹಸಿರು ಹಂದರದ ಬಿಳಲು
ನೇಣಿಗೇರಲು ಕುಣಿಕೆಯಾದೀತೆ?
ನೂರು ಕನಸಿನ ಕೌದಿ ಹೊದ್ದು
ಒಳಗೆ ಮಿಡುಕಿದ ಸಂಕಟ,
ಚಿತ್ಕಾರಗಳಿಗೆ ಧ್ವನಿಯಾದೀತೇ?
ಬೊಡ್ಡೆ ಗಂಟು ಚಿಗುರೋಡೆದು
ಹೊಸಕಿದ ಕನಸಿನ ಹಂದರದಲ್ಲಿ
ವಸಂತ ಮರುಕಳಿಸೀತೇ?
ಭಾಗ ೨
ಕೊರಳಿಗೆ ಉರುಳಾದ ಬಿಳಲುಗಳ
ಒಂದೊಂದೇ ಸಿಕ್ಕು ಬಿಡಿಸಿ
ದುಃಶ್ಯಾಸನರ ಕೈಗೆ ಸಿಕ್ಕರೂ
ಬೆತ್ತಲಾಗದ ದ್ರೌಪದಿಯರು.
ಹೆಬ್ಬೆರಳಿನಿಂದ ನಡುನೆತ್ತಿಯವರೆಗೆ
ಶಕ್ತಿ ಕ್ರೂಢೀಕರಿಸಿ, ಮುಷ್ಟಿಬಿಗಿಮಾಡಿ
ಅಡ್ಡಲಾದ ಗೋಡೆಗಳ ಪುಡಿಮಾಡಿ
ಸಮುದ್ರದಲ್ಲಿ ಮುಳುಗಿ
ಆತ್ಮಹತ್ಯೆಗೆ ಯತ್ನಿಸಿದ ಸೂರ್‍ಯನ
ಮತ್ತೆ ಮತ್ತೆ ಹುಟ್ಟಿ ಬರುವಂತೆ ಮಾಡಿದ
ಮಿಥಿಲೆಯ ಸೀತೆಯರ ದಂಡು
ಬೀಳಲುಗಳ ಜೋಕಾಲಿ ಹೊಸೆದು
ಆ ದಿಗಂತದಿಂದ ಈ ದಿಗಂತದವರೆಗೆ
ಆಕಾಶ ಭೂಮಿ ಒಂದಾಗುವಂತೆ
ಜೀಕುತ್ತಿದ್ದಾರೆ ಜೋಕಾಲಿ,
*****



















