ವಿಜ್ಞಾನಿಗಳು ಇಷ್ಟರಲ್ಲಿಯೇ ಮಾನವನ ಜಿನ್ಸ್‌ಗಳನ್ನು ಅಧ್ಯಯನ ಮಾಡಿ ಅವುಗಳ ಒಂದು ಬೃಹತ್ ಸಂಗ್ರಹಾಲಯವನ್ನು ನಿರ್ಮಿಸಬಹುದು. ಈ ಜಿನ್ಸ್ ಸಂಗ್ರಹಾಲಯದಲ್ಲಿ ಪ್ರತಿಯೊಂದು ಜಿನ್ಸ್‌ಗಳ ವಿವರಗಳಿದ್ದು ಯಾವ ಜಿನ್ಸ್ ಯಾವ ಕಾರ್‍ಯಕ್ಕೆ ಯೋಗ್ಯ? ಜೀವಿಗಳಲ್ಲಿ ಕಾಣುವ ನ್ಯೂನ್ಯತೆಗಳಿಗೆ ಕಾರಣವೇನು? ಇದೇ ಮೊದಲಾದ ಪ್ರಶ್ನೆಗಳಿಗೆ ಸಮಂಜಸ ಉತ್ತರವನ್ನು ನೀಡಲು ಸಾಧ್ಯವಾಗಲೂ ಬಹುದು. ಈ ಬೃಹತ್ ಜಿನ್ಸ್ ವಿಶ್ವಕೋಶ ನಿರ್‍ಮಾಣವಾದ ನಂತರ ಕೃತಕ ಮಾನವನ ಸೃಷ್ಟಿ ಸುಲಭ ಸಾಧ್ಯವೆಂದು ವಿಜ್ಞಾನಿಗಳು ಹೇಳುತ್ತಾರೆ.
ಮಾನವನನ್ನು ಪೀಡಿಸುವ ಎಷ್ಟೋ ರೋಗಗಳು ಅನುವಂಶೀಯವಾಗಿ ತಂದೆ ತಾಯಿಗಳಿಂದ, ಅವರ ಸಂತತಿಯಿಂದ ಬರಬಹುದು. ಈ ರೋಗಗಳಿಗೆ ಅವುಗಳಲ್ಲಿರುವ ಜಿನ್ಸ್‌ಗಳಲ್ಲಿನ ನ್ಯೂನ್ಯತೆಗಳೇ ಕಾರಣ. ನ್ಯೂನ್ಯತೆಗಳುಳ್ಳ ರೋಗಕಾರಕ ಜಿನ್ಸ್‌ಗಳನ್ನು ಶರೀರದಿಂದ ಹೊರಹಾಕಲಾಗದಿದ್ದರೂ ಅದರ ಬದಲು ಸುಧಾರಿತ ಜಿನ್ಸ್‌ಗಳನ್ನು ಬಳಸಿ ನ್ಯೂನ್ಯತೆಗಳನ್ನು ಸರಿಪಡಿಸಲು ಸಾಧ್ಯ. ಆದರೆ ಇದು ಇಷ್ಟರಲ್ಲಿಯೇ ಕಾರ್ಯಸಾಧ್ಯವೇನು ಅಲ್ಲ. ವಿಜ್ಞಾನಿಗಳು ಮಾನವನ ಜಿನ್ಸ್‌ಗಳನ್ನು ಶರೀರದೊಳಕ್ಕೆ ಹೇಗೆ ಸೇರಿಸಬಹುದೆಂಬ ವಿಚಾರ ಇನ್ನೂ ತಿಳಿದಿಲ್ಲ ಮತ್ತು ಜೀವಕೋಶದೊಳಗೆ ಮೊದಲೇ ಬಿಡಾರ ಹೂಡಿರುವ ನ್ಯೂನ್ಯತೆ ಇರುವ ಜಿನ್ ಅನ್ನು ಅಲ್ಲಿಂದ ಹೇಗೆ ಉಚ್ಚಾಟನೆ ಮಾಡಬಹುದು ಎಂಬುವುದು ತಿಳಿದಿಲ್ಲ. ಇದೆಲ್ಲದರ ಅರಿವು ವಿಜ್ಞಾನಿಗಳಿಗಾದಾಗ ಜೀನ್ ಚುಚ್ಚು ಮದ್ದಿನಿಂದ ಬಯಸಿದ ಗುಣ ಲಕ್ಷಣಗಳನ್ನು ಸ್ವಭಾವಗಳನ್ನು ಬದಲಿಸಲು ಸಾಧ್ಯವಾಗಬಹುದು. ಕೃತಕ ಜೀನ್ ಸೃಷ್ಟಯಿಂದಾಗಿ ಈ ಕನಸುಗಳು ನನಸಾಗುವ ಕಾಲ ಇಷ್ಟರಲ್ಲಿಯೇ ಬರಬಹುದೆಂದು ಕೆಲವರು ನಿರೀಕ್ಷಿಸಿದ್ದಾರೆ.
*****