ಈ ಕವಿತೆಗಳಲ್ಲಿ ಯಾಕೆ ಇಷ್ಟೊಂದು ಏಕಾಂತ
ಪ್ರಾಕೃತದ ಸ್ಮೃತಿಯಂತೆ
ಹೋದಲ್ಲಿ ಬರುವ ತಾಳೆ ಮರವೇ
ದಾರಿಯುದ್ದಕ್ಕೂ
ಜತೆಗಾರ
ಯಾಕಿಲ್ಲ ಅರ್ಥ ಯಾಕಿಲ್ಲ ಉದ್ದೇಶ
ಯಾಕಿಲ್ಲ ಪ್ರಮಾಣ ಹಾಗೂ ವ್ಯಾಕರಣ
ನಿನ್ನ ತಾಡಪತ್ರಗಳ ನಿಗೂಢ ಸಂಜ್ಞೆಗಳಲ್ಲಿ
ಕೇವಲ ಗೆರೆಗಳು ಮಾತ್ರ ಕಾಣಿಸುತ್ತಿವೆ ಯಾಕೆ
ಬಳಕೆಯಲ್ಲಿರದ ದಾರಿಗಳ ಹಾಗೆ
ಹುಲ್ಲು ಕಡ್ಡಿ ನಾಚಿಕೆ ಮುಳ್ಳು ಹಬ್ಬಿ
ಹಾಗೂ ಅವನು ಹೋಗದ ಜಾಗಗಳೇ ಇಲ್ಲ
ಉಗಿಬಂಡಿಯಲ್ಲೂ ಅವನ ಜತೆ ಬಸ್ಸಿನಲ್ಲೂ
ಹೊಸ ಪೇಟೆಯಲ್ಲಿ ಅವನು ಸುತ್ತಾಡಿದಾಗಲೂ
ಜನ ನಿಬಿಡತೆಯಲ್ಲಿ ಮತ್ತು ಜನ ಶೂನ್ಯತೆಯಲ್ಲಿ
ಪಂಪನ ಓದಿದಾಗಲೂ ಶೇಕ್ಸ್‌ಪಿಯರನ ಅನುವಾದಿಸಿದಾಗಲೂ
ನಾಡಿನಲ್ಲೂ ಪರದೇಶದಲ್ಲೂ
ಎಲ್ಲೆಡೆಯಲ್ಲೂ ಮಗುವಿನಂತೆ ಛಲಹಿಡಿದು
ಅದರ ಗಲಗಲ ಸದ್ದು ಇತರೆಲ್ಲ
ಸದ್ದುಗಳಿಗಿಂತ ಅವನಿಗಿಷ್ಟ ಅರ್ಥವಿಲ್ಲದೆ ಅದು ಮಾತಾಡುವ ಕ್ರಮಕ್ಕೆ
ಮನಸೋತ
ಮನುಷ್ಯ ಕಾಣದ್ದನ್ನು ಅದು ಕಾಣುವುದು ಬೆಟ್ಟದಾಚೆಗಿರುವುದನ್ನೂ ನೋಡುವುದು
ಅಷ್ಟೊಂದು ಎತ್ತರ ಅದರ ಶಿರ
ಹವಾಮಾನದ ಸಕಲ ಶಕುನಗಳನ್ನೂ ಮೊದಲು ಹಿಡಿಯುವುದು ಅದು
ಆದರೂ ಎಷ್ಟೊಂದು ಒಂಟಿ
ಕೆಲವು ಸಲ ಅದರಂತೆ ಆಗುವ ವಾಂಛೆ
ನೀಳ ಕಾಯ ಮತ್ತು ಸೂರ್ಯ ಪ್ರಭೆ
ಜಗದ ಹಂಗಿಲ್ಲದೆ ಒಬ್ಬನಾಗುವ ಇಚ್ಛೆ
ಕಾಲದ ಗಣನೆ ಮೈಮನದ ಸುಳಿಯಲ್ಲಿ
ಅಮೃತತ್ವ ಆದರ ಹಣ್ಣಿನಲ್ಲಿ
ಸುದೀರ್ಘ ನೆರಳು ಬಯಲಲ್ಲಿ ಬೆಳೆಯಲ್ಲಿ
ಬಿದ್ದು ತೇಲುವುದು ಅದರಲ್ಲಿ
ಹುಲ್ಲು ಮಲಗುವುದು
ಹಕ್ಕಿಗಳು ಹಾಯುವುವು
ಇಂದು ನಾಳೆಗಳ ಹಿಂದು ಮುಂದಾಗಿ
ಹೀಗಿರಲು
*****

















