ಎಲ್ಲೆಲ್ಲ ಸುತ್ತಿ ಇನ್ನೆಲ್ಲಿಗೆ ಬಂದೆವೊ
ಎಲ್ಲಿಗೆ ಬಂದೆವೊ ಮಾದೇವ
ಇಲ್ಯಾಕೆ ಬಂದೆವೊ ಮಾದೇವ
ಹೊಲ ಮನೆ ತೊರೆದೇವೊ
ಹುಟ್ಟೂರ ಬಿಟ್ಟೇವೊ
ಘಟ್ಟವ ಹತ್ಯೇವೊ
ಪಟ್ಟಣಕೆ ಮನ ಸೋತೇವೊ
ಹೆತ್ತವರ ಮರೆತೇವೊ
ಹೊತ್ತವರ ಮರೆತೇವೊ
ಊರುಕೇರಿಗಳ ಸುದ್ದಿ
ತೆಗೆದೇವೊ
ಭಾಷೆ ಬಿಟ್ಟೇವೊ
ಮಾತು ಕೆಟ್ಟೇವೊ
ಏನ ಮಾಡಲು ಹೊರಟು
ಏನ ಮಾಡ್ಯೇವೊ
ಇರುಳೆಲ್ಲ ಹೊರಳಾಡ್ಯೇವೊ
ಬೇಗುದಿಯಲಿ ನಾವೆದ್ದುಕುಳಿತೇವೊ
ಕನಸಿನಲಿ ಬೆಚ್ಚಿಬಿದ್ದೇವೊ
ಆಕಾಶ ನೋಡದೆ ಹೋದೇವೊ
ತಾಯ ಪದವೆಲ್ಲೊ
ಜನಪದವೆಲ್ಲೊ
ಜೋಗುಳವೆಲ್ಲೊ
ಹಬ್ಬಹರಿದಿನಗಳಲ್ಲೊ
ಹೆಸರುಗಳು ಹೋದುವಲ್ಲೊ
ಚಹರೆಗಳು ಬದಲಾದುವಲ್ಲೊ
ರೀತಿ ಬೇರಾದುವಲ್ಲೊ ನಮ್ಮ
ನೀತಿಗಳು ಮರೆಯಾದುವಲ್ಲೊ
ಇನ್ನು ಮರಳುವುದುಂಟೆ
ಹೊರಟಲ್ಲಿಗೆ
ಮಮ್ಮಲ ಮರುಗುವ
ನಮ್ಮೂರಿಗೆ
*****


















