ಮನೆಯ ಹೊರಗಡೆ ನೀಲಾಕಾಶದಲ್ಲಿ
ಗುಡುಗು-ಮಿಂಚಿನ ಆರ್ಭಟ
ಮನದ ಒಳಗಡೆ ಬಾಲ್ಯದಲ್ಲಿ
ಕಳೆದುಕೊಂಡ ಸ್ನೇಹಿತನ ನೆನಪು
‘ಬೊರ್’ ಎಂದು ಸುರಿಯುತ್ತಿದೆ
ಜೋರಾಗಿ ಜಡಿ ಮಳೆ
ಗೆಳೆಯಾ, ಯಾಕಿಂದು ನನ್ನನ್ನು
ಇಷ್ಟು ಕಾಡುತ್ತಿರುವೆ?
ಮಳೆಯು ಹೊತ್ತು ತರುತ್ತಿದೆ
ಮರೆತ ಸಾವಿನ ನೆನಪನ್ನು
ಓ! ಗೆಳೆಯಾ, ನಿನ್ನ ನೆನಪುಗಳು
ಅದೆಷ್ಟು ಮಧುರ!
ಮಳೆಹನಿಗಳು ಬೀಳುತ್ತಿವೆ
ನೆಲದ ಮೇಲೆ ಪಟಪಟನೆ
ಹಳೆಯ ನೆನಪುಗಳು
ಕದಡುತ್ತಿದೆ ಮನವನ್ನ
ಸ್ವಲ್ಪ ದಿನಗಳಲ್ಲೇ ಎಷ್ಟು ಸಂತೋಷ
ನೀಡಿದೆ ಓ! ಗೆಳೆಯಾ
ನೀನಿಲ್ಲದ ಮಳೆ ನೀಡುವುದೇ ಮನಕ್ಕೆ
ಅಂಥ ಸಂತೋಷವನ್ನು?
ತನ್ನ ಕೆಲಸ ಮುಗಿಯಿತೆಂಬಂತೆ
ನಿಂತಿತ್ತು ಮಳೆ
ಗೆಳೆಯಾ ನಿನ್ನ ನೆನಪುಗಳಿಗೆ
ಎಲ್ಲಿಯ ಕೊನೆ?
*****


















