ಒಂದೇ ಉಸುರಿನಲ್ಲಿ
ಹೇಳಿ ಮೂರು ತಲ್ಲಾಖ್
ಹೊರಟೆ ನೀನು ಎಲ್ಲಿಗೆ?
ಬದುಕಿನ ಏರುಪೇರುಗಳಲಿ
ಬಹಳ ಸಹಿಸಿಹೆನು ಪೀಡನೆ
ಸಾಕು ಹೋಗು ನಿನ್ನ ದಾರಿಗೆ.
ಮೆಹರ್‌ನ ಮೊತ್ತ ಇಟ್ಟು
ಹಸಿರು ನೋಟಿನ ಕಟ್ಟು
ಬಹುಮಾನವೆರಡು ಕೈಗಿಟ್ಟು
ನಿನ್ನ ಕರ್‍ಮ ಕಾಂಡದ ಫಲ
ಬದುಕೆಲ್ಲ ತೊಳೆಯಲೇ ಘಮಟು?
ನಿನ್ನ ಮೆಹರಿನ ಮೊತ್ತ
ಸಾಕಾಗುತ್ತಿಲ್ಲ ವಿಷ ಕೊಳ್ಳಲು ಚುಟುಕು
ಸಿಕ್ಕಾಳು ನಿನಗೊಬ್ಬ ಸಂಗಾತಿ
ನನ್ನ ಮಕ್ಕಳಿಗೊಬ್ಬ ತಂದೆ
ಎಲ್ಲಿಂದ ತರಲಿ ಹೇಳು?
ಕೊಡುವುದೇ ಆದಲ್ಲಿ ಕೊಟ್ಟು ಹೋಗು
ನನ್ನ ಮಕ್ಕಳ ಭವಿಷತ್ತಿಗೆ
ಬದುಕು ಕೊಟ್ಟು ಹೋಗು
ಎಳೆಯ ರಟ್ಟೆಗಳಲಿ ಕಸುವು ತುಂಬಿ,
ನಿನ್ನ ನೆರಳಲ್ಲಿ ಕಳೆದು ಹೋದ
ನನ್ನ ಆತ್ಮವಿಶ್ವಾಸ ಮರಳಿ ಕೊಟ್ಟು ಹೋಗು.
*****