ಕತ್ತಲದು ಕಗ್ಗತ್ತಲರಿವಾಳನರಿಯದೆಯೆ
ಮತಮತಗಳಟ್ಟಣೆಯ ಕಟ್ಟಿ ನಿಲುವಿರುಳು
ಸನಿಯನಷ್ಟನೆ ಬೆಳಗಿ ಕೊನೆಗೆ ಶರಣೆಂದೆಯೇ
ಎಲ್ಲ ಮತಿ ಮೈಗರೆವ ನಿಲುಗಡೆಯ ಹುರುಳು
ಉಳಿವುದೆಣಿಸುತ ಚಿತ್ತ ವಿಜ್ಞಾನದೊಳು ತೊಳಲಿ
ಅಳಿವುದೆಣಿಸುತ ಪರದ ಚಿಂತೆಯೊಳು ಬಳಲಿ
ವಿರಮಿಸುವ ಕಾಳವದು, ಶ್ಯಾಮನೆನೆ ಹೆಸರದಕೆ
ಅದರ ಕೈಯೊಳು ಜಗವ ನಾದಿಸುವ ಮುರಳಿ.

ಮನ ನಾದದಿಂ ಕಿವಿಯ ಮುಟ್ಟುತ ಮರಳಿ ಮನದೊಳಳಿಯೆ
ಏನಳಿವುದೇನುಳಿವುದಿಂತೆ ಸೃಷ್ಟಿಪರಿಯೆ?
*****