ಆ ಮನೆ ಬೇಕೊ ಈ ಮನೆ ಸಾಕೊ
ಎರಡೂ ಮನೆಗಳು ಮನುಷ್ಯನಿಗೆ ಬೇಕೊ

ಭೂತ ಬೇಕೊ ಭವಿಷ್ಯ ಸಾಕೊ
ವರ್‍ತಮಾನಕ್ಕೆ ಎರಡೂ ಬೇಕೊ

ಹಳೆಯಲೆ ಬೇಕೊ ಹೊಸ ಎಲೆ ಸಾಕೊ
ಮರವೊಂದಕ್ಕೆ ಎರಡೂ ಬೇಕೊ

ಮಳೆಯು ಬೇಕೊ ಬಿಸಿಲು ಸಾಕೊ
ಧರೆಗಿವೆರಡೂ ಬೇಕೊ

ಹಳೆ ಹಾಡು ಬೇಕೊ ಹೊಸ ಹಾಡು ಸಾಕೊ
ನುಡಿಗೆ ಇವೆರಡೂ ಬೇಕೊ

ನಂಬಿಕೆ ಬೇಕೊ ಅದ ಮೀರಿದರೆ ಸಾಕೊ
ವ್ಯಕ್ತಿಯೊಬ್ಬನಿಗೆ ಇವೆರಡೂ ಬೇಕೊ

ಕಾಯ ಬೇಕೊ ಒಳಗಿನ ಜೀವವೆ ಸಾಕೊ
ಮನುಷ್ಯನೊಬ್ಬನಿಗೆ ಇವೆರಡೂ ಬೇಕೊ

ಸಂಸ್ಕೃತಿ ಬೇಕೊ ಪುರೋಗತಿ ಸಾಕೊ
ಸಮೂಹ ಗತಿಗೆ ಇವೆರಡೂ ಬೇಕೊ

ಸನಾತನ ಬೇಕೊ ವಿನೂತನ ಸಾಕೊ
ಜನಪದಕೆರಡೂ ಬೇಕೊ

ಪ್ರೀತಿ ಬೇಕೊ ದಯ ಮಾತ್ರ ಸಾಕೊ
ನಿಜವಾದ ಮಮತೆಗಿವೆರಡೂ ಬೇಕೊ

ವೈರುಧ್ಯತೆ ಬೇಕೊ ಪರಿಶುದ್ಧತೆ ಸಾಕೊ
ಸಮೃದ್ಧ ಜೀವನಕೆ ಎರಡೂ ಬೇಕೊ
*****