ವನದಲ್ಲಿ ಒಂದು ದುಂಬಿ ಹೂವಿನಿಂದ ಹೂವಿಗೆ ಹೋಗಿ ಬಂಡನ್ನು ಉಂಡು ಅತೃಪ್ತವಾಗಿತ್ತು. ದಿನಕ್ಕೆ ಸಾವಿರಾರು ಹೂಗಳನ್ನು ಹೀರಿಯು ಮತ್ತೆ ಮತ್ತೆ ಅತೃಪ್ತವಾಗಿತ್ತು. ಮಧು ಪಾನಕ್ಕಾಗಿ ಕಾತರಿಸುತ್ತಿತ್ತು.
ಒಮ್ಮೆ ಅದು ಒಂದು ಮದ್ಯದ ಅಂಗಡಿ ಮುಂದೆ ಹಾದು ಹೋಯಿತು. ಮದ್ಯದ ವಾಸನೆ ಮನವನ್ನು ಸೆರೆಹಿಡಿಯಿತು. ತುಂಬಿದ ಬಾಟಲ ಮದ್ಯವನ್ನು ಸೇವಿಸುತ್ತಿದ್ದವರನ್ನು ನೋಡಿ ಆಶೆಬುರುಕು ದುಂಬಿ ಅಲ್ಲಿಗೆ ಧಾವಿಸಿ ಬಂತು. ಕಟ್ಟೆಯ ಮೇಲೆ ಮದ್ಯದ ಬಾಟಲನ್ನು ತೆರೆದು ಮದ್ಯಪಾನ ಮಾಡುತ್ತಿದ್ದ ಮನುಷ್ಯನ ಬಳಿಗೆ ಹೋಗಿ ದುಂಬಿ ಕುಳಿತುಕೊಂಡಿತು. ಒಮ್ಮೆ ಗುಂಯ್ ಗುಂಯ್ ಎಂದು ಹಾಡ ಹಾಡುತ್ತಾ, ಅವನ ಕೈಯಲ್ಲಿದ್ದ ಸೀಸೆಯಲ್ಲಿ ಧುಮುಕಿತು. ಆಮಲೇರಿದ ಕುಡುಕ ಸಾಕೆಂದು ಬಾಟಲಿಗೆ ಬಿರುಟೆ ಹಾಕಿ ಕಟ್ಟೆಯ ಮೇಲೆ ಒರಗಿದ. ದುಂಬಿ ಬಾಟಾಲಿನಲ್ಲಿ ಕೆಲವು ಸುಖದ ಕ್ಷಣಗಳನ್ನು ಕಳೆದು ಹೊರಬರಲು ಯತ್ನಿಸಿತು. ಬಾಟಲಿನಲ್ಲಿ ಉಸಿರು ಕಟ್ಟಿ ಗೋಳಾಡಿತು. ಇದು ಸುಖದ ಅರಮನೆಯೇ? ಇಲ್ಲ ಸಾವಿನ ಸೆರೆಮನೆಯೇ?,” ಎಂದು ಮತ್ತೆ ಮತ್ತೆ ಯೋಚಿಸುವುದರಲ್ಲಿ ಸಾವನ್ನಪ್ಪಿತು.
*****


















