ನೀಲಿ ಬಣ್ಣದ ಸ್ವಚ್ಛ ಈಜು ಕೊಳದಲ್ಲಿ ಈಜುವ ಸ್ಪರ್ಧೆ ನಡೆದಿತ್ತು. ಮಕ್ಕಳು ಹುರುಪಿನಲ್ಲಿ ಈಜುತ್ತಿದ್ದರು. ಅಷ್ಟರಲ್ಲಿ ಗಿಡದ ಮೇಲಿಂದ ಒಂದು ಹಳದಿ ಬಣ್ಣದ ಮುದಿ ಎಲೆ, ನೀರಿನಲ್ಲಿ ಬಿತ್ತು. ಮಕ್ಕಳು ಈಜುವ ರಭಸಕ್ಕೆ ಎಲೆ, ನೀರಿನಲ್ಲಿ ಮುಂದೆ ಮುಂದೆ ತೇಲಿತು.
“ಮಕ್ಕಳಿಗಿಂತ ನಾನೇ ಮುಂದು. ನನಗೆ ಇಂದು ಸ್ಪರ್ಧೆಯಲ್ಲಿ ಜಯ” ಎಂದು ಎದೆ ಬಿರಿದು ಹಿಗ್ಗಿತು.
ಮೇಲಿಂದ ವೃಕ್ಷ ಕೂಗಿ ಹೇಳಿತು- ‘ಎಲೆ! ಮುದಿ ಎಲೆ! ನಿನ್ನ ಒಣ ಜಂಭ ಬಿಡು. ಈಜುತ್ತಿರುವುದು ನೀನಲ್ಲ. ಮಕ್ಕಳು ಈಜುತ್ತಿರುವಾಗ, ಆ ನೀರಿನ ಚಲನೆಯಲ್ಲಿ ನೀ ತೇಲುತ್ತಿರುವೆ.”
“ನಮ್ಮ ನಿಜ ಶಕ್ತಿಯ ಅರಿವು ನಮಗಿರಬೇಕು- ತಿಳಿದಿಕೋ” ಎಂದಿತು.
*****


















