ಒಬ್ಬ ಸ್ವಾರ್ಥಿ ಸಾಧಕ, ಅನೇಕ ವರುಷ, ಬೆಟ್ಟತಪ್ಪಲು, ಕಾಡುಮೇಡುಗಳಲ್ಲಿ ತಪಸ್ಸು ಮಾಡಿದ. ಅವನಿಗೆ ಒಂದು ಉತ್ಕಟ ಆಸೆ ಇತ್ತು. ಅವನಲ್ಲಿ ಐದು ಬರಿದಾದ ಮಣ್ಣಿನ ಬಿಂದಿಗೆಗಳು ಇದ್ದವು. ಅವನು ಕಠಿಣ ತಪದಿಂದ ಒಂದು ಬಿಂದಿಗೆಯಲ್ಲಿ ಬೆಳಕನ್ನು, ಎರಡನೇಯದರಲ್ಲಿ ಬೆಳದಿಂಗಳನ್ನು, ಮೂರನೇಯದರಲ್ಲಿ ಗಾಳಿಯನ್ನು, ನಾಲ್ಕನೇಯದರಲ್ಲಿ ಮಳೆಯನ್ನು, ಐದನೇಯದರಲ್ಲಿ ಬಿಸಿಲನ್ನು ತುಂಬಿಟ್ಟ, ಸೂರ್ಯನಿಗೆ ಮೋಡಕವಿದಾಗ, ಬಿಸಿಲ ಬಿಂದಿಗೆ ಬಗ್ಗಿಸಿ, ತಾನು ಮಾತ್ರ ಬಿಸಿಲು ಪಡೆಯುತ್ತಿದ್ದ. ರಾತ್ರಿ ಹೊತ್ತು, ಗಾಢಾಂಧಕಾರವಾದಾಗ ಬೆಳಕಿನ ಬಿಂದಿಗೆ ಬಗ್ಗಿಸಿ ಪ್ರಕಾಶ ಪಡೆಯುತ್ತಿದ್ದ. ಬೇಸಿಗೆ ಸಮಯದಲ್ಲಿ ಗಾಳಿ ಬಿಂದಿಗೆ ಬಗ್ಗಿಸಿ ತಂಪನ್ನು ಪಡೆದು ಸುಖ ಪಡುತ್ತಿದ್ದ, ಇನ್ನು ಕ್ಷಾಮ ಬಂದಾಗ ನೆಲ ಬಿರುಕು ಬಿಟ್ಟಾಗ ಬಿಂದಿಗೆ ಉರುಳಿಸಿ ಮಳೆ ಸುರಿಸಿ ಬೆಳೆ ಬಿತ್ತಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದ. ಇವನ ಸ್ವಾರ್ಥಕ್ಕೆ ಪಾಠಕಲಿಸಲು ಒಮ್ಮ ದೇವರು ದೊಡ್ಡ ಆಲಿಕಲ್ಲು ಮಳೆ ಸುರಿಸಿದ. ಕೊಡಗಳೆಲ್ಲಾ ಒಡೆದು ಚೂರು ಚೂರಾಗಿ ಬೆಳಕು, ಬೆಳದಿಂಗಳು, ಗಾಳಿ, ಮಳೆ, ಬಿಸಿಲು ಎಲ್ಲಾ ಹರಿದು ಹೋಯಿತು. ಸ್ವಾರ್ಥಿ ಸಾಧಕ ಎಲ್ಲಾ ಬಿಂದಿಗೆಗಳಲ್ಲಿ ಬಗ್ಗಿ ನೋಡಿದ. ಅವನಿಗೆ ಬರಿ ಶೂನ್ಯ ಕಂಡು ಅವನ ಕಣ್ಣು ತೆರೆಯಿತು.
*****