ಹರಿಗಡೆದ ಕೆರೆಯ ಕೊಳೆಗೊಂಡು ನಾರುವ ನೀರು
ರಸವ ಹೀರುವ ಕಸದ ತವರು ಮನೆಯು.
ಸಾವ-ಕುದುರೆಯ ದಂಡಿನೊಲು ಬರುವ ಸೊಳ್ಳೆಗಳ
ಮೇವು-ಮೀಸಲಕಾಗಿ ಕಾದ ಬನವು.
ಮೀಂಬುಲಿಗ ಬೆಳ್ಳಕ್ಕಿ ಬೇಟೆಯಾಡಲು ಅಡವಿ;
ಮೀನಗಳ ಹುಟ್ಟು ಮನೆ; ಸುಡುವ ಕಡೆಯು;
ಮೀನಬಲೆಗಾರರಾಡುಂಬೊಲವು; ಹಕ್ಕಿಗಳ
ಜೀವಕ್ಕೆ ಗುರಿಯಿಡುವರಾಟದೆಡೆಯ.
ಜೀವನವು ವಿಷವಾದ ವಿಷಮಲೀಲೆ,
ಜೀವಕಲಹದ ಪ್ರಥಮ ಪಾಠಶಾಲೆ.
ಜೀವಜೀವಕೆ ಹರಣ, ಜೀವಮರಣ;
ಪ್ರಾಣಿಜೀವನವೊಂದು ಪ್ರಾಣಹರಣ.
*****