ಒಬ್ಬ ಸನ್ಯಾಸಿ ಸಮುದ್ರ ದಂಡೆಯ ಗುಡ್ಡ ಕಲ್ಲ ಮೇಲೆ ಕುಳಿತು ಧ್ಯಾನ ತಪದಲ್ಲಿ ತೊಡಗಿದ್ದ. ಒಂದು ಶಿಷ್ಯರ ಗುಂಪು ಗುರುವನ್ನು ಹುಡುಕಿಕೊಂಡು ಬರುವಾಗ ಈ ಸನ್ಯಾಸಿಯನ್ನು ನೋಡಿ ಆಕರ್ಷಿತರಾಗಿ ಅವರಿಗೆ ಅಡ್ಡ ಬಿದ್ದು ನಮಸ್ಕರಿಸಿದರು.

“ನಮಗೆ ಜ್ಞಾನೋದಯವಾಗಬೇಕಾಗಿದೆ ನಾವು ಏನು ಮಾಡಬೇಕು?” ಎಂದು ಕೇಳಿದರು.

“ನೀವು ಎರಡು ಗುಂಪುಗಳಾಗಿ, ಒಂದು ಗುಂಪು ಈ ದಡದಲ್ಲಿ, ಇನ್ನೊಂದು ಗುಂಪು ಸಮುದ್ರದಾಚೆಯ ದಡದಲ್ಲಿ ಇರಿ. ನೀವು ಮಾಡಬೇಕಾದದು ಇಷ್ಟೆ, ಸಮುದ್ರ ಬೇಸರವಿಲ್ಲದೆ ನೊರೆಯಿಂದ ಸತ್ಯದ ಲಿಪಿ ಬರೆಯುತ್ತಲೇ ಇರುತ್ತದೆ. ಸೂರ್ಯನ ಕಿರಣದಲ್ಲಿ ಒಣಗಿಹೋಗುವ ಮುನ್ನ ಅದನ್ನು ಓದಿಕೊಂಡು ಆಚೆಯ ದಡದ ನಿಮ್ಮ ಸ್ನೇಹಿತರಿಗೆ ಹೇಳಿ, ಇದು ನಿರಂತರ ಸಾಗುತ್ತಿರಲಿ.

ಆಚೆಯ ದಡದ ನಿಮ್ಮ ಸ್ನೇಹಿತರು ಮಾಡಬೇಕಾದುದು ಇಷ್ಟೆ. ಸಮುದ್ರ, ಮರಳು ದಂಡೆಯ ಮೇಲೆ ಅಲೆಯ ನೊರೆ ಹಾಕುವುದರೊಳಗೆ ಮರಳನ್ನು ಎಣಿಸಿ ಅದರ ಮೊತ್ತದ ಗಣಿತವನ್ನು ನಿಮಗೆ ಸಮುದ್ರ ದಾಟಿ ಬಂದು ಹೇಳಲಿ, ನಿಮಗೆ ಈರ್ವರಿಗೂ ಜ್ಞಾನೋದಯವು ಶತಸಿದ್ಧ” ಎಂದ ಸನ್ಯಾಸಿ.

“ಜ್ಞಾನೋದಯ ಇಷ್ಟೇನೇನಾ?” ಎಂದರು ಶಿಷ್ಯರ ಗುಂಪು.

“ನಾವೇಕೆ ಸಮುದ್ರ ದಾಟಿ ಶ್ರಮಪಡಬೇಕು. ಬಂಡೆ ಮೇಲೆ ಅಲೆ ಬರೆದ ನೊರೆ ಲಿಪಿಯಲ್ಲಿ ಏನಿತ್ತು ಎಂಬುದನ್ನು ಅಲೆಯಿಂದ ಮರಳು ಒದ್ದೆಯಾಗುವ ಮುನ್ನ ಎಷ್ಟು ಮರಳಿನ ಹರಳಿತ್ತು ಎಂಬುದನ್ನು ಸೂರ್ಯನನ್ನ ಕೇಳಿದರೆ ನಮಗೆ ಜ್ಞಾನೋದಯವಾಗುವುದಿಲ್ಲವೇ?” ಎಂದರು ಶಿಷ್ಯಕೋಟಿ.

“ನಿಮ್ಮ ದಾರಿ ನಿಮಗಿರುವಾಗ, ನಿಮಗೇಕೆ ಗುರು ಮತ್ತು ಜ್ಞಾನೋದಯ”, ಎಂದರು ಗುಡ್ಡದ ಸನ್ಯಾಸಿ.
*****